ಆಂಗ್ಲ ಭಾಷೆಯಲ್ಲಿ ಮೂರು ಮುಖ್ಯ 'P' ಗಳು Polyuria (ಹೆಚ್ಚು ಮೂತ್ರ ಶಂಕೆ ),Polydipsia (ಅರದ ದಾಹ )Polyphagia (ತಣಿಯದ ಹಸಿವು ) ಮಧು ಮೇಹದ ಮುಖ್ಯ ಲಕ್ಷಗಳು ಎಂದು ವರ್ಣಿಸುತ್ತಾರೆ .
ಅತೀ ಮೂತ್ರ ಮತ್ತು ದಾಹ ಏಕೆ ?
ಮೂತ್ರ ಪಿಂಡಗಳು ಅನಪೇಕ್ಷಿತ ವಸ್ತುಗಳನ್ನು ಫಿಲ್ಟರ್ ಮಾಡಿ ಹೊರ ಹಾಕುವಾಗ ಜತೆಗೆ ಹೋದ ಗ್ಲುಕೊಸನ್ನು ಪುನಃ ವಾಪಸು ಹೀರಿಕೊಳ್ಳುತ್ತವೆ . ಆದರೆ ಇದಕ್ಕೆ ಒಂದು ಪರಿಮಿತಿ ಇದೆ . ರಕ್ತದ ಗ್ಲುಕೊಸ ಪ್ರಮಾಣ 180 mg /dl ಗಿಂತ ಜಾಸ್ತಿ ಇದ್ದರೆ ಅದು ಮೂತ್ರದಲ್ಲಿ ವಿಸರ್ಜನೆ ಆಗಿ ಹೋಗುತ್ತದೆ . ಸರ್ಪದಲ್ಲಿ ಯಾಗ ದಲ್ಲಿ ತಕ್ಷಕನ ಜತೆ ಇಂದ್ರನು ಬಂದಂತೆ glucose ಜತೆ ನೀರೂ ಹೋಗುತ್ತದೆ . ಇದರಿಂದ ಉಂಟಾದ ನಿರ್ಜಲತೆ ಮತ್ತು ರಕ್ತದಲ್ಲಿ ಏರಿದ ಸಕ್ಕರೆ ಪ್ರಮಾಣ ಇವೆರಡು ಸೇರಿ ರಕ್ತದ ಸಾಂದ್ರತೆ ಯನ್ನು ಏರಿಸುತ್ತವೆ . ನಮ್ಮ ಮೇದುಳಿನಲ್ಲಿ ದಾಹದ ಕೇಂದ್ರ ಎಂದು ಇದೆ . ರಕ್ತದ ಸಾಂದ್ರತೆ ಏರಿದೊಡನೆ ಅದು ನೀರು ಕುಡಿಯಲು ಪ್ರೇರೇಪಿಸುತ್ತದೆ . ಅದೇ ಬಾಯಾರಿಕೆ .
ತಣಿಯದ ಹಸಿವು
ಕವಿಯೊಬ್ಬ ಸಮುದ್ರದ ನಡುವೆ "water water everywhere nor any drop to drink' ಎಂದು ಹೇಳಿದಂತೆ ಮಧುಮೇಹ ದಲ್ಲಿ ಇನ್ಸುಲಿನ್ ಕೊರತೆ ಮತ್ತು ಪ್ರತಿರೋಧ ದಿಂದ ರಕ್ತದಲ್ಲಿ ಯಥೇಚ್ಛ ಸಕ್ಕರೆ ಇದ್ದರೂ ಜೀವಕೋಶ ಗಳಿಗೆ ಪ್ರವೇಶ ಇಲ್ಲದ ಕಾರಣ ,ಮೇದುಳಿನಲ್ಲಿ ಇರುವ ಹಸಿವಿನ ಕೇಂದ್ರ ನಮ್ಮನ್ನು ಹೆಚ್ಚು ಹೆಚ್ಚು ಆಹಾರ ಸೇವಿಸಲು ಪ್ರೇರೇಪಿಸುವುದು .
ಇವಲ್ಲದೆ ಇನ್ನೂ ಕೆಲವು ರೋಗ ಲಕ್ಷಣಗಳು ಇವೆ .
ಶರೀರ ಬಚ್ಚುವುದು ಅಥವಾ ತೂಕ ಇಳಿಕೆ .
ಜೀವಕೋಶಗಳಿಗೆ ಗ್ಲುಕೊಸ ಸರಬರಾಜು ಆಗದ ಕಾರಣ ಶಕ್ತಿಯ ಉರುವಲು ಆಗಿ ಅನ್ಯ ಮಾರ್ಗಗಳನ್ನು ಹುಡುಕ ಬೇಕಾಗುತ್ತದೆ .(ಈಗಿನ ಎಲ್ ಪಿ ಜಿ ಸಮಸ್ಯೆ ಯಂತೆ ). ಅದಕ್ಕಾಗಿ ಶರೀರ ಶೇಖರಿತ ಕೊಬ್ಬು ಮತ್ತು ಮಾಂಸ ಖಂಡಗಳನ್ನು ಜೀರ್ಣಿಸಿ ಶಕ್ತಿ ಉತ್ಪಾದನೆಗೆ ಪ್ರಯತ್ನಿಸುವುದು . ಇದರಿಂದ ಮತ್ತು ಮೇಲೆ ವಿವರಿಸಿದ ನಿರ್ಜಲತೆ ಯೂ ಸೇರಿ ಶರೀರ ಬಡವಾಗುವುದು .
ಜನನಾಂಗಗಳ ಫಂಗಸ್ ಸೋಂಕು , ಗುಣವಾಗದ ಗಾಯಗಳು (ರೋಗ ನಿರೋಧಕ ಶಕ್ತಿ ಕುಂದುವಿಕೆ ಯಿಂದ )ದೃಷ್ಟಿ ಮಂಜು ಕೂಡಾ ಮಧು ಮೇಹದ ಆರಂಭ ಸೂಚನೆ ಇರ ಬಹುದು .
