ಅವೈದ್ಯಕೀಯ ರಜೆ
ಸಂಘಟಿತ ವಲಯದ ಉದ್ಯೋಗಿಗಳಿಗೆ ವೈದ್ಯಕೀಯ ರಜೆ ಎಂದು ಇರುತ್ತದೆ .ಕಾಯಿಲೆ ಬಿದ್ದರೆ ಸಂಬಳ ಇಲ್ಲದೆ ಕುಟುಂಬ ಉಪವಾಸ ಬೀಳ ಬಾರದು ಎಂಬ ಸದುದ್ದೇಶ .
ನಮ್ಮ ದೇಶದಲ್ಲಿ ಸರಕಾರಿ ,ಅರೆ ಸರಕಾರಿ ಕೆಲಸ ಸಿಗಲು ಭಾರೀ ಪೈಪೋಟಿ ಇದೆ . ಪ್ರತಿಭೆ ,ಲಂಚ ,ಪ್ರಭಾವ ಇತ್ಯಾದಿ ಪ್ರತ್ಯೇಕ ಮತ್ತು ಒಟ್ಟಾಗಿ ಒಳಸೇರಿಕೊಳ್ಳ ಬೇಕಾಗುತ್ತದೆ . ಒಬ್ಬನು ಒಳ ಸೇರಿ ಕೊಂಡರೆ ನೂರು ಜನ ಹೊರಗೆ ಪರಿತಪಿಸಿ ಕೊಂಡು ಇರುತ್ತಾರೆ . ಇಷ್ಟು ಇದ್ದರೂ ನೌಕರರರು ಬಹಳ ಸಾರಿ ವೈದ್ಯರ ಬಳಿಗೆ ಇಲ್ಲದ ಕಾಯಿಲೆಗೆ ನಕಲಿ ವೈದ್ಯಕೀಯ ಸರ್ಟಿಫಿಕೇಟ್ ಗೆ ಎಂದು ಬರುತ್ತಾರೆ . ಇಂತಹ ಸಂದರ್ಭ ಅತೀವ ಕಿರಿ ಕಿರಿ ಉಂಟು ಮಾಡುತ್ತದೆ .
ನಾನು ರೈಲ್ವೆ ವೈದ್ಯಾಧಿಕಾರಿ ಆಗಿದ್ದಾಗ ಇಂತಹ ಉಭಯ ಸಂಕಟ ಬಹಳ ಅನುಭವಿಸಿದ್ದೇನೆ . ಒಬ್ಬ ನೌಕರ ಯಾವುದೋ ವೈಯುಕ್ತಿಕ ಕೆಲಸಕ್ಕೆ ಮೇಲಾಧಿಕಾರಿಯ ಬಳಿ ರಜೆ ಕೇಳುತ್ತಾನೆ .' ಈಗಾಗಲೇ ಕೆಲಸ ಗಾರರ ಕೊರತೆ ಇದೆ ,ನಾನು ಹೇಗೆ ರಜೆ ಕೊಡಲಿ ?ಏನಾದರೂ ಕಾರ್ಯ ವ್ಯತ್ಯಯ ಆದರೆ ಮೇಲಧಿಕಾರಿ ನನ್ನನ್ನು ಕೇಳುವರು . ನೀನು ಒಂದು ಕೆಲಸ ಮಾಡು ನಾನು ಸಿಕ್ ಮೆಮೊ ಕೊಡುತ್ತೇನೆ .ಡಾಕ್ಟರ್ ಅವರ ಬಳಿ ವೈದ್ಯಕೀಯ ರಜೆ ತೆಗೋ "ಎಂದು ನನ್ನಲ್ಲಿ ಕಳುಹಿಸುವರು .(ಕ್ಲಾಸ್ ಟೀಚರ್ ತಪ್ಪು ಮಾಡಿದ ವಿದ್ಯಾರ್ಥಿಯನ್ನು ನೀನು ನನ್ನೆದುರು ನಿಲ್ಲಲು ಅಯೋಗ್ಯ ನಡಿ ಹೆಡ್ ಮಾಸ್ತರರ ಬಳಿಗೆ ಎಂದು ಸಾಗ ಹಾಕಿದಂತೆ ) ಕೆಲವೊಮ್ಮೆ ನೌಕರನೇ ತನಗೆ ಸೌಖ್ಯ ಇಲ್ಲಾ ಎಂದು ಸುಳ್ಳು ಹೇಳಿ ಮೆಮೋ ತೆಗೆದುಕೊಂಡು ಬರುವನು .ಇದರಲ್ಲಿ ಕೆಲವರು ಅಲ್ಪ ಪ್ರಾಮಾಣಿಕ ರು .ನನ್ನಲ್ಲಿ ಮೊದಲೇ ಸತ್ಯ ಹೇಳುವರು .ಇನ್ನು ಕೆಲವರು ಇಲ್ಲದ ಕಾಯಿಲೆ ಹೇಳಿ ನಮ್ಮ ಸಮಯ ಮತ್ತು ತಾಳ್ಮೆ ಪರೀಕ್ಷೆ ಮಾಡುವರು .,ಟ್ರೈನಿಂಗ್ ,ವಿಶೇಷ ಕರ್ತವ್ಯ ,ವರ್ಗಾವಣೆ ಇತ್ಯಾದಿ ತಪ್ಪಿಸಲು ಅಥವಾ ಮುಂದೆ ಹಾಕಲು ಈ ಮಾರ್ಗ ಉಪಯೋಗಿಸುವರು .
ಒಂದು ವಿಷಯ ನಾನು ಗಮನಿಸಿದ್ದೇನೆ ,ಬೆರಳಿಕೆ ಬಿಟ್ಟು ಉಳಿದವರು ಇಲ್ಲಿ ಅಪ್ರಾಮಾಣಿಕ ಇರುವವರು ತಮ್ಮ ಮನೆ ಮತ್ತು ಕುಟುಂಬಕ್ಕೂ ವಿಧೇಯರಾಗಿ ಇರುವುದಿಲ್ಲ .ಇಲ್ಲಿ ಸಲ್ಲುವವರು ಮಾತ್ರ ಅಲ್ಲಿಯೂ ಸಲ್ಲುವರು .
ಇನ್ನು ಕೆಲವರು ಸರಿಯಾದ ರಜೆ ತೆಗೆದುಕೊಂಡು ಊರಿಗೆ ಬರುತ್ತಾರೆ . ರಜೆ ಮುಗಿದು ಹೊರಡುವ ದಿನ ಮನೆಯವರು ಹಲಸಿನ ಕಾಯಿ ಎರಡು ದಿನದಲ್ಲಿ ಹಣ್ಣು ಆದೀತು , ಅಡ್ಯೆ ತಿಂದು ಕೊಂಡೇ ಹೋಗು ,ಇಲ್ಲವಾದರೆ ನಿನ್ನ ನೆನಪಾಗುವುದು ಎಂದು ಒತ್ತಾಯ ಮಾಡುವರು .ಸರಿ ರಜೆ ವಿಸ್ತರಿಸಲು ಒಂದೇ ದಾರಿ ವೈದ್ಯಕೀಯ ರಜೆ ಹಾಕುವುದು .ದೂರದ ಊರಿನಲ್ಲಿ ಮತ್ತು ವಿದೇಶಗಳಲ್ಲಿ ಕೆಲಸದಲ್ಲಿ ಇರುವವರಲ್ಲಿ ಇದು ಸಾಮಾನ್ಯ .ದುಬಾಯಿಯಿಂದ ವರ್ಷಕ್ಕೊಮ್ಮೆ ಮನೆಗೆ ಬರುವವರು ವಾಪಾಸು ಹೋಗುವ ದಿನ ಸಮೀಪಿಸಿದಂತೆ ತಲೆನೋವು ,ನಿದ್ದೆ ಬಾರದಿರುವುದು ಇತ್ಯಾದಿ ತೊಂದರೆಗಳು ಬಂದಂತೆ ಭಾಸ ಆಗುವುದು ಸಾಮಾನ್ಯ .ಆದರೆ ಕೆಲಸ ಗ್ಯಾರಂಟಿ ಇದ್ದರೆ ರಜೆ ಹಾಕ ಬಹುದು .
ನಾನು ರೈಲ್ವೇ ವೈದ್ಯಾಧಿಕಾರಿ ಆಗಿದ್ದಾಗ ಒಬ್ಬ ಯುವಕ ಸ್ಟೇಷನ್ ಮಾಸ್ಟೆರ್ ರಜೆ ಬೇಕಾದಾಗ ಲೆಲ್ಲಾ ತಿಂಗಳಿಗೆ ಎರಡು ಮೂರು ಭಾರಿ ಸಿಕ್ ಮೆಮೊ ಹಿಡಿದುಕೊಂಡು ಬರುತ್ತಿದ್ದು ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಅನೇಕ ಕಪೋಲ ಕಲ್ಪಿತ ಆರೋಪಗಳನ್ನು ಮೇಲಧಿಕಾರಿಗಳಿಗೆ ಮಾಡಿದನು .ನಾನು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ,ಸರಿ ಪರೀಕ್ಷೆ ಮಾಡುವುದಿಲ್ಲ ಇತ್ಯಾದಿ .ಅದಕ್ಕೆ ತನ್ನಂತೆ ಇರುವ ಕೆಲವು ನೌಕರರ ಸಹಿಯೂ ಹಾಕಿಸಿಕೊಂಡಿದ್ದ . ಹೀಗೆ ಸಹಿ ಮಾಡಿದವರಲ್ಲಿ ನನ್ನಿಂದ ನಿಜವಾದ ವೃತ್ತಿಪರ ಸೇವೆ ಪಡೆದು ಕೊಂಡವರೂ ಇದ್ದರು. ಅದು ಕಸದ ಬುಟ್ಟಿಗೆ ಹೋಗಿರಬೇಕು .
ಈ ತರಹ ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟು ಹಣ ಮಾಡಿದವರಿಗೆ ಕೊರತೆ ಇಲ್ಲ .ಅವರು ಜನಪ್ರಿಯರೂ ಆಗಿರುತ್ತಾರೆ .
ಮತ್ತೊಂದು ವರ್ಗ ವಿದ್ಯಾರ್ಥಿಗಳದು . ಪಿ ಯು ಸಿ ,ವೃತ್ತಿಪರ ವಿದ್ಯಾಭ್ಯಾಸ ಮಾಡುವ ಮಕ್ಕಳು ಪ್ರಾಜೆಕ್ಟ್ ಮಾಡಿಲ್ಲ ,ಹೋಮ್ ವರ್ಕ್ ಆಗಿಲ್ಲ ಎಂದು ಕ್ಲಾಸ್ ತಪ್ಪಿಸುವರು .ತಾಯಂದಿರು 'ಸಾರ್ ಒಂದು ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟು ಬಿಡಿ .ಕಾಲೇಜ್ ನಲ್ಲಿ ಜೋರು ಮಾಡುತ್ತಾರೆ "ಎಂದು ಮಕ್ಕಳ ಜತೆ ಬರುತ್ತಾರೆ .( ನಮ್ಮ ಕಾಲದಲ್ಲಿ ಹೆತ್ತವರು 'ನಾಲು ಬುಡ್ಲೆ ಮಾಸ್ತ್ರೆ ,ಇದ್ಯಂಡ ಸರಿ ಅಪೂಜ್ಜೆ "ಎಂದು ಅಧ್ಯಾಪಕರ ಬಳಿಯೇ ಹೋಗುತ್ತಿದ್ದರು) .ನಾನು ಅಂತಹ ಹೆತ್ತವರಿಗೆ 'ನೀವು ಶಾಲೆಗೆ ಅವನ ಜತೆ ಹೋಗಿ ಅಧ್ಯಾಪಕರ ಬಳಿ ಸತ್ಯ ಅರುಹುವುದೇ ಒಳ್ಳೆಯದು'ಎಂದು ಹೇಳಿ ಸಾಗ ಹಾಕುವೆನು .ಮಕ್ಕಳ ಅಪ್ರಾಮಾಣಿಕತೆ ಪೋಷಿಸ ಬಾರದು .
(ಇನ್ನು ಕೆಲವರು ತಮ್ಮ ಕಾಯಿಲೆಗಳನ್ನು ಅಡಗಿಸಿ ಆರೋಗ್ಯವಂತರೆಂದು ಸರ್ಟಿಫಿಕೇಟ್ ಬಯಸುತ್ತಾರೆ .ಅದೂ ಕಷ್ಟವೇ ;ಉದಾಹರಣೆಗೆ ತೀವ್ರ ದೃಷ್ಟಿ ದೋಷ ಇರುವವರಿಗೆ ವಾಹನ ಚಾಲನೆಗೆ ಅನುಮತಿ ಕೊಟ್ಟ ಹಾಗೆ .ಅಪಾಯಕರ ಕೆಲಸಗಳಲ್ಲಿ ಆರೋಗ್ಯ ಮಟ್ಟ ಸರಿ ಇಲ್ಲದಿದ್ದರೆ ಅವರಿಗೂ ಅವರ ಜತೆ ಕೆಲಸ ಮಾಡುವವರಿಗೂ ಆಪತ್ತು .)
ಒಂದು ಮಲಯಾಳಂ ಸಿನೆಮಾದಲ್ಲಿ ನಿರುದ್ಯೋಗಿ ಯಾಗಿ ಉದ್ಯೋಗಕ್ಕೆ ಅಲೆದಾಡುತ್ತಿದ್ದ ಮೋಹನ್ ಲಾಲ್ ಒಂದು ದಿನ ಬೆಳಿಗ್ಗೆ ನಿದ್ರಾಲಸ್ಯ ದಲ್ಲಿಯೇ ಏಳುತ್ತಾ "ಛೇ ಒಂದು ಸರಕಾರಿ ಉದ್ಯೋಗ ಸರಿಯಾಗಿದ್ದರೆ ಎರಡು ದಿನ ಸಿ ಎಲ್ ಹಾಕಿ ಆರಾಮವಾಗಿ ಮನೆಯಲ್ಲಿ ಇರಬಹುದಿತ್ತು ಎಂದು ಕೊಳ್ಳುತ್ತಾನೆ'. ಯಾವುದೇ ಸರಕಾರಿ ,ಅರೆ ಸರ್ಕಾರಿ ಕೆಲಸಕ್ಕೆ ಸೇರುವವರು ಇ ಎಲ್ ,ಸಿ ಎಲ್ , ಸಿಕ್ ಲೀವ್ ಎಸ್ಟಿದೆ ,ಅದನ್ನು ಹೇಗೆ ಮುಗಿಸುವುದು ಎಂಬ ಬಗ್ಗೆ ಆಲೋಚಿಸುವಷ್ಟು ,ತಮ್ಮ ಹುದ್ದೆಗೆ ಎಷ್ಟು ನ್ಯಾಯ ಒದಗಿಸ ಬಹುದು ಎಂಬುದರ ಬಗ್ಗೆ ಗಮನ ಹರಿಸಿದರೆ ,ಸಹಸ್ರಾರು ಉದ್ಯೋಗಾರ್ಥಿಗಳ ನಡುವೆ ತಮ್ಮನ್ನು ಆಯ್ಕೆ ಮಾಡಿದ್ದುದಕ್ಕೆ ಸಾರ್ಥಕತೆ ಒದಗಿಸ ಬಹುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ