ಬೆಂಬಲಿಗರು

ಶುಕ್ರವಾರ, ಜುಲೈ 23, 2021

ಅತಿ ರಸ

                                              ಅತಿರಸ 



                         

                       ನಮ್ಮ ಬಾಲ್ಯದಲ್ಲಿ ಈ ಸಿಹಿ ತಿಂಡಿ ವರ್ಷಕ್ಕೊಮ್ಮೆ ಮಾಡುತ್ತಿದ್ದರು . ಈಗ ನಮ್ಮ ಊರಿನಲ್ಲಿ ಅಪರೂಪ .ಮಂಗಳೂರಿನಲ್ಲಿ ಇದ್ದಾಗ ಕೊಮಲ್ಸ್ ಸ್ವೀಟ್ಸ್ ನಲ್ಲಿ ಸಿಗುತ್ತಿದ್ದು ತಂದು ತಿನ್ನುತ್ತಿದ್ದೆವು . ಇಲ್ಲಿ ತಿಂಡಿಯ ಕ್ಷಣಿಕ ರುಚಿ ಆಸ್ವಾದ ಮಾತ್ರ ಮುಖ್ಯವಲ್ಲ . ಅದರೊಡನೆ ಬರುವ ಅಜ್ಜ ಅಜ್ಜಿ ಹಿರಿಯರ ನೆನಪುಗಳೂ ಕೂಡಾ ಮೆದುಳಿನ ಟೆಂಪೊರಲ್ ಲೋಬ್ ಎಂಬ ಭಾಗದಿಂದ  ಪುನಃ ಜಾಗೃತವಾಗುತ್ತವೆ ..ಹಲಸಿನ ಹಣ್ಣಿನ ಕಡುಬು ಬೇಯುವಾಗ ಬರುವ ಪರಿಮಳ ಕೂಡಾ ಇದೇ ತರಹದ ಸಹ ನೆನಪುಗಳನ್ನು  ಹೊರ ತರುತ್ತದೆ ;ಮೆದುಳು ಸಜೀವ ಕಂಪ್ಯೂಟರ್ ಅಲ್ಲವೇ .ಹೋದ ವಾರ ಅಡ್ಯಾರ್ ಗ್ರಾಂಡ್ ಸ್ವೀಟ್ಸ್ ಅವರ ಅತಿರಸ ತರಿಸಿ ತಿಂದಿರುವೆನು .

                     ಅತಿ ರಸ ಮಾಡುವ ವಿಧಾನ 

ಬೇಕಾಗುವ ಸಾಮಾನುಗಳು :೧/೨ ಕೆ ಜಿ ಅಕ್ಕಿ ಹುಡಿ ,೧/೨ತೆಂಗಿನ ಕಾಯಿ ,೧/೨ ಕೆ ಜಿ ಬೆಲ್ಲ ,೩ ಕಪ್ ಎಣ್ಣೆ ಅಥವಾ ತುಪ್ಪ 

ಮಾಡುವ ವಿಧಾನ :ಬೆಳ್ತಿಗೆ ಅಕ್ಕಿಯ ಸಣ್ಣ ಪುಡಿ ಇಟ್ಟುಕೊಳ್ಳಬೇಕು .ಬೆಲ್ಲವನ್ನು ಸ್ವಲ್ಪ ನೀರು ಸೇರಿಸಿ ಪಾಕಕ್ಕೆ ಒಲೆಯ ಮೇಲೆ ಇಡಬೇಕು .ತೆಂಗಿನ ಕಾಯಿಯನ್ನು ನೀರು ಸೇರಿಸದೆ ರುಬ್ಬಿ ಕೊಳ್ಳ ಬೇಕು .ಬೆಲ್ಲ ಎಳೆ ಪಾಕ ಬರುವಾಗ ಕೆಳಗಿಟ್ಟು ಅಕ್ಕಿ ಹುಡಿ ,ರುಬ್ಬಿದ ತೆಂಗಿನ ಕಾಯಿ ಹಾಕಿ ಕಲಸಿ ಕೊಳ್ಳ ಬೇಕು .ಅನಂತರ ಇದನ್ನು ಸಣ್ಣ ಉಂಡೆಗಳಾಗಿ ಮಾಡಿ ಕೈಯ್ಯಲ್ಲಿ ಚಪ್ಪಟೆ ಮಾಡಿ ವಡೆಯ ಹಾಗೆ ಎಣ್ಣೆ ಅಥವಾ ತುಪ್ಪದಲ್ಲಿ ಕರಿಯ ಬೇಕು .ಆಂಧ್ರ ಪ್ರದೇಶದಲ್ಲಿ ಹಿಟ್ಟಿಗೆ ಎಳ್ಳು ಸೇರಿಸುವರು ಮತ್ತು ಅರಿಸೆಳ್ಳು ಎಂದು ಕರೆಯುವರು . 

ಬಾಲಂಗೋಚಿ :ನಾಡಿಗೇರ ಕೃಷ್ಣ ರಾಯರು ಸಂಪಾದಕ ರಾಗಿ ಇದ್ದ ನಿಯತ ಕಾಲಿಕೆಯ ಅಡಿಗೆ ಕಾಲಮ್ ಜನಪ್ರಿಯ ಆಗಿತ್ತು .ಒಂದು ಬಾರಿ ಅದನ್ನು ಬರೆಯುತ್ತಿದ್ದ ವರು  ಅನಾರೋಗ್ಯ ಕಾರಣ ಲೇಖನ ಬರಲಿಲ್ಲ . ದೃತಿ ಕೆಡದೆ ಅವರೇ ಒಂದು ಹೊಸ ಅಡಿಗೆ ಬರೆದರು .ಅದು ನೆಲ್ಲಿಕಾಯಿ ಹಲ್ವಾ ಮಾಡುವ ವಿಧಾನ . 

ದೊಡ್ಡ ಅಡಿಕೆ ಗಾತ್ರದ ಹತ್ತು ನೆಲ್ಲಿಕಾಯಿ ಆಯ್ದು ಕೊಳ್ಳಿ .ಅದನ್ನು ಸಣ್ಣ ಸಣ್ಣ ಹೋಳುಗಳಾಗಿ ಮಾಡಿ ಬದಿಗೆ ಇಡಿ .ಆಮೇಲೆ ಒಂದು ಉರುಳಿಯಲ್ಲಿ ಸಕ್ಕರೆ ನೀರು ಹಾಕಿ  ಬಿಸಿ ಮಾಡಿ ಎಳೆ ಪಾಕ ಆಗುವಾಗ ತುಪ್ಪವನ್ನು ಹಾಕಿ ಮಗುಚುತ್ತಾ ,ಗೋದಿ ಹಿಟ್ಟನ್ನು ಸೇರಿಸಿ ಕಲಸುವುದನ್ನು ಮುಂದುವರಿಸಿ .ಹಲ್ವ ಗಟ್ಟಿಯಾಗುವಾಗ ತುಪ್ಪ ಬಿಡಲಿಕ್ಕೆ ಶುರುವಾಗುವುದು .ಏಲಕ್ಕಿ ಗೋಡಂಬಿ ಹಾಕಿ ಒಂದು ಬಟ್ಟಲಲ್ಲಿ ಹಾಕಿ ಆರಲು ಬಿಡಿ .ಬದಿಯಲ್ಲಿ ತೆಗೆದಿಟ್ಟ ನೆಲ್ಲಿಕಾಯಿ ತುಂಡುಗಳನ್ನು ಕಿಟಿಕಿಯಿಂದ ಹೊರಗೆ ಎಸೆಯಿರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ