ಶ್ರೀಮತಿ ಕಾವೇರಿ ಅಮ್ಮ ಬಿ ಎಸ್
ಇವರು ಪುತ್ತೂರಿನಲ್ಲಿ ಪ್ರಸಿದ್ದ ವೈದ್ಯರಾಗಿದ್ದ ಡಾ ಬಡೆಕ್ಕಿಲ ಶಿವರಾಮ ಭಟ್ಟರ ಪತ್ನಿ . (ಈಗ ಇಬ್ಬರೂ ಇಲ್ಲ ) ತಂದೆ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ರಾಗಿ ಇದ್ದ ಖ್ಯಾತ ವಿದ್ವಾಂಸ ಮುಂಗ್ಲಿ ಮನೆ ಮರಿಯಪ್ಪ ಭಟ್ ಅವರು .ಶಿವರಾಮ ಭಟ್ ಡಾಕ್ಟರರ ಹಿರಿ ಮಗ ಡಾ ಶ್ಯಾಮ್ ಕೆ ಎಂ ಸಿ ಹುಬ್ಬಳ್ಳಿಯಲ್ಲಿ ನನ್ನ ಸೀನಿಯರ್ ಆಗಿದ್ದು ಆತ್ಮೀಯ ಮಿತ್ರರು . ನಾನು ಪುತ್ತೂರು ಮೂಲಕ ಹಾದು ಹೋಗುವಾಗ ತಂದೆ ಜೊತೆ ಪ್ರಾಕ್ಟೀಸ್ ಮಾಡುತ್ತಿದ್ದ ಅವರನ್ನು ಮಾತನಾಡಿಸಿ ಹೋಗುತ್ತಿದ್ದೆ . ಹಲವು ಬಾರಿ ನನ್ನನ್ನು ಮನೆಗೆ ಊಟಕ್ಕೆ ಕರೆದಿದ್ದರು . ಮಗನ ಫ್ರೆಂಡ್ ಎಂದು ಆ ತಾಯಿ ಬಹಳ ಸಡಗರದಿಂದ ಮತ್ತು ಪ್ರೀತಿಯಿಂದ ಉಪಚರಿಸುವರು . ಹಿರಿಯರ ಸಂಸ್ಕಾರ ಮಕ್ಕಳಲ್ಲಿ ನೋಡು ಎಂಬಂತೆ ಸೌಜನ್ಯ ಮೈವೆತ್ತು ಬಂದ ಮೂರ್ತಿ . ಮಕ್ಕಳಲ್ಲೂ ಅದನ್ನು ಕಾಣ ಬಹುದು . ಮುಂದೆ ನಾನು ರೈಲ್ವೆ ವೈದ್ಯಾಧಿಕಾರಿ ಆಗಿ ಪುತ್ತೂರಿನಲ್ಲಿ ಇದ್ದಷ್ಟು ವರ್ಷ ಅವರ ಮನೆಯ ಕಾರ್ಯಕ್ರಮಗಳಿಗೆ ನಾನು ಮತ್ತು ನನ್ನ ಕುಟುಂಬ ಖಾಯಂ ಅತಿಥಿ.
ಅವರ ಚಿಕ್ಕಪ್ಪ ಮುಂಗ್ಲಿ ಮನೆ ರಾಮ ಭಟ್ ಪುತ್ತೂರಿನಲ್ಲಿ ದಂತ ವೈದ್ಯರಾಗಿ ಇದ್ದರು . ಅವರು ನಿವೃತ್ತರಾದ ಮೇಲೆ ಕಲ್ಲಿಕೋಟೆಯಲ್ಲಿ ಮಗ ಗೋವಿಂದ ಭಟ್ ಅವರ ಮನೆಯಲ್ಲಿ ಪುನಃ ಪರಿಚಯ ವಾಗಿ ಹಲವು ವರ್ಷ ಪೋಸ್ಟ್ ಕಾರ್ಡ್ ನಲ್ಲಿ ಹಬ್ಬಗಳ ಶುಭಾಶಯ ಕೋರುತ್ತಿದ್ದರು . ರಾಮ ಭಟ್ಟರ ಮೊಮ್ಮಗ ಡಾ ಸಿ ಆರ್ ಭಟ್ ಕರೆಯಲ್ಪಡುವ ಎಂದು ಸುಳ್ಯದ ಜನಪ್ರಿಯ ವೈದ್ಯರು .
ಕಾವೇರಿ ಅಮ್ಮ ಅಡುಗೆಯ ಸೌಭಾಗ್ಯ ಎಂಬ ಕೃತಿ ರಚಿಸಿದ್ದು ಅದನ್ನು ಪುತ್ತೂರು ಕರ್ನಾಟಕ ಸಂಘದವರು ಪ್ರಕಟಿಸಿದ್ದರು . ಮಂಗಳೂರಿನಲ್ಲಿರುವ ಅವರ ಇನ್ನೊಬ್ಬ ವೈದ್ಯ ಪುತ್ರ ಡಾ ಹರಿಶ್ಚಂದ್ರ ಅವರ ಮನೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಇದರ ಪ್ರತಿ ನನಗೆ ಕೊಟ್ಟು ಆಶೀರ್ವದಿಸಿದ್ದರು .
ತಿಂಗಳ ಹಿಂದೆ ಪುತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಡಾ ಶ್ಯಾಮ ಅವರನ್ನು ವೈದ್ಯಕೀಯ ಸೇವೆ ಗಾಗಿ ಸನ್ಮಾನಿಸಿದರು . ಪರೋಕ್ಷವಾಗಿ ಅದು ಮರಿಯಪ್ಪ ಭಟ್ ಮತ್ತು ಕಾವೇರಿಯಮ್ಮ ನವರಿಗೆ ಕೂಡಾ ಸಲ್ಲುವುದು ಎಂದು ತಿಳಿದಿದ್ದೇನೆ .
1995 ರಲ್ಲಿ ನಾನು ಚೆನ್ನೈ ನಲ್ಲಿ ಇದ್ದಾಗ ಮರಿಯಪ್ಪ ಭಟ್ ಅವರ ಸಂಸ್ಮರಣ ಗ್ರಂಥ 'ಸಾರ್ಥಕ ' ದ ಲೋಕಾರ್ಪಣೆ ಬಹಳ ಆತ್ಮೀಯ ಮತ್ತು ಅದ್ದೂರಿಯಾದ ಕಾರ್ಯಕ್ರಮದಲ್ಲಿ ನಡೆದಿತ್ತು .ಅವರ ಬಗ್ಗೆ ಮುಂದೆ ಬರೆಯುವೆನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ