ಬೆಂಬಲಿಗರು

ಸೋಮವಾರ, ಜುಲೈ 5, 2021

ಶ್ರೀ ಡಿ ಪಿ ಶೆಟ್ಟರು


    ಶ್ರೀ ಡಿ ಪಿ ಶೆಟ್ಟರು (ಜವುಳಿ ಶೆಟ್ಟರು )

ಕನ್ಯಾನದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಂಗಗಳಲ್ಲಿ ಛಾಪು ಮೂಡಿಸಿ ಹಠಾತ್ ನಿರ್ಗಮಿಸಿದವರಲ್ಲಿ  ಶ್ರೀ ಡಿ ಪಿ ಶೆಟ್ಟರು ಒಬ್ಬರು . ಇವರ ಪೂರ್ಣ ಹೆಸರು ದಯ್ಯೆಂದ್ರೆ ಫಕೀರಪ್ಪ ಶೆಟ್ಟಿ .ದಯ್ಯೆಂದ್ರೆ ಪೆರ್ಲ ಉಕ್ಕಿನಡ್ಕ ಸಮೀಪದ ಊರು . ಡಿ ಪಿ ಶೆಟ್ಟರಿಗೆ ಮದುವೆ ಆದುದು ನಮ್ಮ ಮನೆಯ ಸಮೀಪದ ಕೇಕಣಾಜೆಯಿಂದ . ಉಕ್ಕಿನಡ್ಕ ಸಮೀಪ  ಗುರುವಾರೆ ನನ್ನ ಅಜ್ಜಿ ಮನೆ . ಆದ ಕಾರಣ ಇರಬೇಕು ನಮ್ಮ ಮೇಲೆ ಅವರಿಗೆ ಸ್ವಲ್ಪ ಹೆಚ್ಛೇ  ಎನ್ನ ಬಹುದಾದ ಪ್ರೀತಿ ಮತ್ತು ಅಭಿಮಾನ ಇತ್ತು . ಉಕ್ಕಿನಡ್ಕ ಆಗ ಯಕ್ಷಗಾನದ ಕಾಶಿ ಆಗಿದ್ದು ವಶಿಷ್ಠಾಶ್ರಮ ಶಾಲೆ ಯಕ್ಷ ದಿಗ್ಗಜಗಳಿಗೆ ತಾಲೀಮು ತಾಣ . ಪಕ್ಕದ ಬಳ್ಳಂಬೆಟ್ಟು ವೇಷಧಾರಿ ,ಮೇಳದ ಯಜಮಾನ ಶೀನಪ್ಪ ಭಂಡಾರಿ ಹುಟ್ಟಿ ಬೆಳೆದ ಊರು . ಆದುದರಿಂದಲೇ ಅವರಿಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಬಂದಿರ ಬೇಕು . ಕನ್ಯಾನದಲ್ಲಿ ಇವರ ಏಕ ಮಾತ್ರ ಬಟ್ಟೆ ಅಂಗಡಿ ಇತ್ತು .ಆದುದರಿಂದ ಅವರನ್ನು ಜವುಳಿ ಶೆಟ್ಟರು ಎಂದು ಕರೆಯುತ್ತಿದ್ದರು .ಇವರ ಕುಟುಂಬದ ಸಮೀಪದ ಸಂಬಂಧಿ ಒರ್ವರು ಮಂಗಳೂರಿನಲ್ಲಿ ರೈಲ್ವೇ ಪೆರ್ಮನೆಂಟ್ ವೇ ಇನ್ಸ್ಪೆಕ್ಟರ್ ಆಗಿ ನನ್ನ ಸಹೋದ್ಯೋಗಿ ಇದ್ದರು.

ಕನ್ಯಾನ ಶಾಲೆಯ ಎದುರು ರಾಜ ರಸ್ತೆ  ದಾಟಿದರೆ ಇವರ ಅಂಗಡಿ .ಪಕ್ಕದಲ್ಲಿ ಡಾ ಮಹಾದೇವ ಶಾಸ್ತ್ರಿಗಳ ಶಾಪ್ .ಮಹಾದೇವ ಶಾಸ್ತ್ರಿಗಳೂ ಮೂಲತಃ ವಳಕ್ಕುಂಜದವರು . ಬಟ್ಟೆ ಅಂಗಡಿ ಎದುರು ಒಂದು ಪಕ್ಕದಲ್ಲಿ ಟೈಲರ್ ಶಾಸ್ತ್ರಿಗಳು ,ಇನ್ನೊಂದು ಪಕ್ಕ ಟೈಲರ್  ಸಾಹೇಬರು .ಇಬ್ಬರೂ ಕಿವಿಯಲ್ಲಿ ಒಂದು ಪೆನ್ಸಿಲ್ ,ಕೊರಳಲ್ಲಿ ಅಳತೆಯ ಟೇಪು ಧರಿಸಿ ಇರುವರು .ಈ ಸಾಹೇಬರು ವಿಟ್ಲ ದಿಂದ ದಿನಾ ಬರುತ್ತಿದ್ದು ಸ್ವಲ್ಪ ಮಹಾತ್ಮಾ ಗಾಂಧಿಯವರಂತೆ ಕಾಣುತ್ತಿದ್ದ ನೆನಪು . ನಾವು ಬಟ್ಟೆ ಹೊಲಿಯಲು ಅವರಿಗೇ ಕೊಡುತ್ತಿದ್ದೆವು.ನಮ್ಮನ್ನು ಮೊದಲು ಅಳೆದ ಶ್ರೇಯ ಅವರಿಗೆ . ಅಂಗಡಿ ಮೇಲೆ ಒಂದು ರೂಮಿನಲ್ಲಿ ನಮ್ಮ ಹೆಡ್ ಮಾಸ್ಟ್ರು ವಾಸ .ಇನ್ನೊಂದು ಪಕ್ಕ ಪಂಚಾಯತ್ ಆಫೀಸ್ . ಕಟ್ಟಡ ಪ್ರಾಯಶ ಕಮ್ಮಜೆ ಕೃಷ್ಣ ಭಟ್ಟರದು ಎಂದು ನೆನಪು . ಅಂಗಡಿಯ ಬಲ ಬದಿಯ ಕಟ್ಟಡದಲ್ಲಿ ಕೋಡಿ ಭಟ್ಟರ ಹೋಟೆಲ್ .ಅಲ್ಲಿಂದ ನಮಗೆಲ್ಲಾ ಧರ್ಮಕ್ಕೆ (ಉಚಿತವಾಗಿ )ನೀರುಳ್ಳಿ ಬಜೆಯ ಗಮ ಗಮ ಪರಿಮಳ ಬರುವದು .. 
ಜವುಳಿ ಶೆಟ್ಟರ ಅಂಗಡಿಯಿಂದ ನಾವು ವರ್ಷಕ್ಕೆ ಒಮ್ಮೆ (ಸಾಲಕ್ಕೆ )ಒಂದು ರೀಮು ಬಟ್ಟೆ ಖರೀದಿಸಿ ಎಲ್ಲಾ ಅಣ್ಣ ತಮ್ಮಂದಿರು ಎರಡು ಎರಡು ಪ್ರತಿ ಅಂಗಿ ಚಡ್ಡಿ ಹೊಲಿಸಿ ಕೊಳ್ಳುತ್ತಿದ್ದೆವು ; ಅದು ಅಂಗ್ರಿ ಮಕ್ಕಳ ಯುನಿಫಾರ್ಮ್ .ಶಾಲೆಯಲ್ಲಿ ಸಮ ವಸ್ತ್ರ ಇರಲಿಲ್ಲ . ದೀಪಾವಳಿ ಅಂಗಡಿ ಪೂಜೆಗೆ ಸಾಲ ತೀರಿಸಿ ಹೊಸ ಲೆಕ್ಕ ಆರಂಭ .ಈ ಕಾರಣದಿಂದಲೇ ನಮಗೆ ಒಂದೆರಡು ಅಂಗಡಿ ಪೂಜೆಗಳ ಆಮಂತ್ರಣ ಬರುತ್ತಿತ್ತು . 
ಇನ್ನು ಈ ಅಂಗಡಿಯಲ್ಲಿ  ನಮಗೆ ಪುಸ್ತಕ ,ಸ್ಲೇಟು ,ಕಡ್ಡಿ ಇತ್ಯಾದಿ ಮಾರುತ್ತಿದ್ದು ನಾವು ಅಲ್ಲಿಂದ ಕೊಳ್ಳುತ್ತಿದ್ದೆವು . ಎಲ್ಲಕ್ಕೂ ಮಿಗಿಲಾಗಿ ಪೆನ್ ನಲ್ಲಿ ಶಾಯಿ ಮುಗಿದಾಗ ಅವರ ಅಂಗಡಿಗೆ ಹೋಗಿ ಹಾಕಿಸಿಕೊಳ್ಳುವುದು . ಅವರು ಒಂದು ಫಿಲ್ಲರ್ ನಲ್ಲಿ ಶಾಯಿ ಹಾಕಿ ನಿಬ್ ಸಿಕ್ಕಿಸಿ ಬಟ್ಟೆಯಲ್ಲಿ ಒರಸಿಕೊಡುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಇದೆ . 

ಡಿಸೆಂಬರ್ ತಿಂಗಳಿನಲ್ಲಿ ಅವರ ಅಂಗಡಿಗೆ ಹೋಗಿ ಹೊಸ ವರ್ಷದ ಕ್ಯಾಲೆಂಡರ್ ಗೆ ದುಂಬಾಲು ಬೀಳುತ್ತಿದ್ದೆವು . ಜಯಂತಿಲಾಲ್ ಬ್ರದರ್ಸ್ ಅವರ ದೇವರ ಚಿತ್ರ ಇರುವ ಹೊಸಾ ಕ್ಯಾಲೆಂಡರ್ ಸಿಕ್ಕಿದಾಗ ಸ್ವರ್ಗಕ್ಕೆ ಮೂರೇ ಗೇಣು . ಪಕ್ಕದ ಡಾಕ್ಟ್ರ ಶಾಪ್ ನಿಂದ ಬ್ಲೋಟಿಂಗ್ ಪೇಪರ್ ಸಂಗ್ರಹಿಸುತ್ತಿದ್ದೆವು . ಇವರ ಅಂಗಡಿ ಎದುರು ವರ್ಷಕ್ಕೆ ಒಮ್ಮೆ ಜತ್ತಿ ಭಾಗವತರು (ಮೇಸ್ಟ್ರು?)ಎಂಬವರು ಪುಸ್ತಕ ಮತ್ತು ಚಿತ್ರಗಳ ಅಂಗಡಿ ಇಡುತ್ತಿದ್ದು , ಮಕ್ಕಳು ದೇವರ ಚಿತ್ರಗಳನ್ನು ಕೊಳ್ಳುತ್ತಿದ್ದರು . 
 
ಜವುಳಿ ಶೆಟ್ಟರದು ತುಂಬು ಸಂಸಾರ ;ನಮ್ಮ ಹಾಗೆ .ಆದುದರಿಂದ ನಮ್ಮ ಅಣ್ಣ ತಮ್ಮಂದಿರ ಅಕ್ಕನ ಕ್ಲಾಸಿನಲ್ಲಿ ಅವರ ಮನೆಯ ಮಕ್ಕಳೂ ಇರುತ್ತಿದ್ದು ರಘುರಾಮ ಶೆಟ್ಟರು ನನ್ನ ಸಹಪಾಠಿ . ಸುರೇಶ್ ಶೆಟ್ಟಿ ಎಂಬುವರು ಮುಂದೆ ಕ್ಷೇಮಾ ದಲ್ಲಿ ನನ್ನ ಸಹೋದ್ಯೋಗಿ . ಅವರ ಪತ್ನಿಯ ಸಹೋದರ ಸಂಜೀವ ಪಕ್ಕಳರು ನನ್ನ ಹೈ ಸ್ಕೂಲ್ ಅಧ್ಯಾಪಕ ,ಮುಂದೆ ಮಾಣಿಲ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆಗಿ ನಿವೃತ್ತರಾದರು . ಅವರ ಮನೆ ನಮ್ಮ ಮನೆಗೆ ಸಮೀಪ ಇದ್ದುದರಿಂದ ಶಾಲೆಗೆ ಹೋಗುವಾಗ ಹಲವು ಬಾರಿ ಜತೆಗೆ ಹೋದದ್ದಿದೆ . ಜವುಳಿ ಶೆಟ್ಟರು ತಾಳ ಮದ್ದಳೆಗೆ ಅರ್ಥ ಹೇಳುತ್ತಿದ್ದರು ಎಂದು ನೆನಪು ,ಅಲ್ಲದೆ ಆಸಕ್ತರು ಬಂದಾಗ ಅದರ ಬಗ್ಗೆ ವಿಮರ್ಶೆ ಮಾಡುವದುದನ್ನು ನೋಡಿದ್ದೇನೆ . 
ಮಕ್ಕಳೆಲ್ಲಾ  ಇನ್ನೂ ಚಿಕ್ಕವರಿರುವಾಗ ಶೆಟ್ಟರು ತೀರಿ ಕೊಂಡರು. ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಮಕ್ಕಳೆಲ್ಲಾ ತಮ್ಮ ಕಾಲ ಮೇಲೆ ನಿಂತಿರುವುದು ಸಂತೋಷ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ