ವೆಂಕಟಪ್ಪ ಡೋಗ್ರ
ಕರ್ನಾಟಕ ಸಂಗೀತದಲ್ಲಿ ವಿದೇಶಿ ವಾದ್ಯಗಳ ಅಳವಡಿಸುವಿಕೆ ಹಿಂದಿನಿಂದಲೂ ನಡೆದು ಬಂದಿದೆ .ವಡಿವೇಲು ಪಿಳ್ಳೈ ಮತ್ತು ಬಾಲು ಸ್ವಾಮಿ ದೀಕ್ಷಿತರು ವಯಲಿನ್ ನನ್ನ ಕರ್ನಾಟಕ ಸಂಗೀತಕ್ಕೆ ಅಳವಡಿಸಿದರು ಮತ್ತು ಸ್ವಾತಿ ತಿರುನಾಳ್ ಮಹಾರಾಜರು ಇದಕ್ಕೆ ಪ್ರೋತ್ಸಾಹ ಕೊಟ್ಟವರು ಎಂದು ಚರಿತ್ರಕಾರರು ಹೇಳುತ್ತಾರೆ .ಇಂದು ಪಿಟೀಲು ಪಕ್ಕ ವಾದ್ಯ ಮತ್ತು ಸೋಲೋ ಆಗಿ ಕಚೇರಿಗಳಿಗೆ ಅನಿವಾರ್ಯ ಅಂಗವಾಗಿದೆ ..
ಹಿಂದೆ ನಮ್ಮಲ್ಲಿ ಮಂಗಳ ವಾದ್ಯವಾಗಿ ನಾದಸ್ವರ ಬಳಕೆಯಲ್ಲಿ ಇತ್ತು .ಆಮೇಲೆ ಕ್ಲಾರಿಯೋನೆಟ್ ಬಂತು . ಈಗ ಜನಪ್ರಿಯ ವಾಗಿರುವ ಸ್ಯಾಕ್ಸೋಫೋನನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಕೀರ್ತಿ ನಮ್ಮ ಊರಿನವರೇ ಆದ ದಿ .ವೆಂಕಟಪ್ಪ ಡೋಗ್ರ ಅವರಿಗೆ ಸಲ್ಲ ಬೇಕು . ಇವರ ಜನ್ಮ ನಾಮ ವೆಂಕಟಪ್ಪ ದೇವಾಡಿಗ ;ಆದರೆ ಬಳಕೆಯ ಹೆಸರು ಡೋಗ್ರ ಎಂದೇ ಪ್ರಸಿದ್ದರು.ಶ್ರೀ ಅಣ್ಣಿ ಶೇರಿಗಾರ್ ಅವರಿಂದ ನಾಗಸ್ವರ ಮತ್ತು ಮಂಜುನಾಥ್ ಶೇರಿಗಾರ್ ಅವರಿಂದ ಕ್ಲಾರಿಯೋನೆಟ್ ವಾದನಕಲೆ ಅಧ್ಯಯನ ಮಾಡಿದರು .ತಮಿಳು ಚಿತ್ರವೊಂದರಲ್ಲಿ ಸ್ಯಾಕ್ಸೋಫೋನ್ ವಾದನ ಕಂಡು ಕೇಳಿದ ಇವರು ಕಲಾ ಪೋಷಕ ಶ್ರೀ ನೇಮಿರಾಜ್ ಅವರ ಸಹಾಯದೊಡನೆ ಇಂಗ್ಲೆಂಡ್ ದೇಶದಿಂದ ಇದನ್ನು ತರಿಸಿ ದಕ್ಷಿಣಾದಿ ಸಂಗೀತಕ್ಕೆ ಅಳವಡಿಸಿ ಕೊಂಡರು . ಮುಂದೆ ಕದ್ರಿ ಗೋಪಾಲನಾಥ ಅವರು ಇದನ್ನು ಜಗತ್ತಿನಾದ್ಯಂತ ಪ್ರಚುರ ಪಡಿಸಿದರು .
ಡೋಗ್ರ ಅವರು ನಮ್ಮ ಊರಿನಲ್ಲಿ ಬಹಳ ಪ್ರಸಿದ್ದಿ ಪಡೆದಿದ್ದರು . ಅವರ ವಾದನ ಇದ್ದರೆ ಕಾರ್ಯಕ್ರಮ ವಿಜೃಂಭಣೆ ಎಂದು ಅರ್ಥ . ತಾವು ಸ್ವಯಂ ಕಲಿತ ವಿದ್ಯೆಯನ್ನು ಹಲವು ತರುಣರಿಗೆ ಹಂಚಿದರು .ಅವರ ಮಗ ಹರಿದಾಸ್ ಡೋಗ್ರ ,ಉಪ್ಪಿನಂಗಡಿ ನಾಗೇಶ್ ಹೀಗೆ ದೊಡ್ಡ ಪಟ್ಟಿಯೇ ಇದೆ .ಇಂದು ಸಮಾರಂಭಗಳಲ್ಲಿ ಸ್ಯಾಕ್ಸೋಫೋನ್ ವಾದನ ಆಲಿಸುವಾಗ ಡೋಗ್ರ ಅವರ ನೆನಪಾಗುವುದು . ಮಹಿಳಾ ವಾದಕಿಯರೂ ಬಹಳ ಮಂದಿ ರೂಪು ಗೊಂಡಿದ್ದಾರೆ ..
ವರ್ಷಗಳ ಹಿಂದೆ ಸುಬ್ರಹ್ಮಣ್ಯ ದಲ್ಲಿ ಮಿತ್ರರ ಮಗನ ಮದುವೆಯಲ್ಲಿ ಒಂದು ಸ್ಯಾಕ್ಸೋಫೋನ್ ಕಚೇರಿ ಇತ್ತು .ನಾನು ಮುಂದಿನ ಸಾಲಿನಲ್ಲಿ ಕುಳಿತವನು ಮಂಗಳ ನುಡಿಸುವಲ್ಲಿಯ ವರೆಗೆ ಕುಳಿತವನು ಏಳಲಿಲ್ಲ .ಬಹಳ ಚೆನ್ನಾಗಿ ಬಂತು . ವಿವಾಹ ಇತ್ಯಾದಿ ಸಮಾರಂಭಗಳಲ್ಲಿ ಒಳ್ಳೆಯ ಸಂಗೀತ ಅರಣ್ಯ ರೋದನ ಆಗುವುದು ;ಮತ್ತು ಕಲಾವಿದರು ಏಕಾಗ್ರತೆಯಿಂದ ಗಾನ ಪರವಶರಾಗಿ ನುಡಿಸುವ ವೇಳೆ ಹಠಾತ್ ವಾಲಗ ನಿಲ್ಲಿಸಿ ಎಂದು ಹೇಳುವಾಗ ಯಾರೋ ಬಂದರೆಂದು ತಾಯಿಯ ಮೊಲೆ ಹಾಲು ತಪ್ಪಿಸಿದ ಶಿಶುವಿನಂತೆ ಸಂಗೀತಾಸಕ್ತ ಕೇಳುಗನ ಸ್ಥಿತಿ ಆಗುವುದು. ಆದರೆ ವಾದ್ಯ ಸಂಗೀತ ಗಾರರಿಗೆ ಮಂಗಳ ಕಾರ್ಯಗಳು ,ದೇವಾಲಯಗಳು ಸಾಂಪತ್ತಿಕವಾಗಿ ಪೋಷಕರು ಎಂಬುದೂ ನಿಜ .
https://youtu.be/qc8HRcEa99w
https://youtu.be/2f8sr7OMYSM