ಹುಬ್ಬಳ್ಳಿ ದಿನಗಳು10
ನಾನು ಕಾಲೇಜ್ ಸೇರುವಾಗ ತುರ್ತು ಪರಿಸ್ಥಿತಿ ಜ್ಯಾರಿಯಲ್ಲಿ ಇದ್ದು ಯಾವುದೇ ವಿದ್ಯಾರ್ಥಿ ಸಂಘಗಳಿಗೆ ಅವಕಾಶ ಇರಲಿಲ್ಲ .1977 ರ ನಂತರ ಅವುಗಳಿಗೆ ಅವಕಾಶ ಮಾಡಿಕೊಡಲಾಯಿತು .ಶ್ರೀ ಬೆಲ್ಲದ ಎಂಬವರು ಕಾರ್ಯ ದರ್ಶಿ ಅದರೆಂದು ನೆನಪು .ಸಂಘದ ಉದ್ಘಾಟನೆಗೆ ಬೆಳ್ಳಾರಿ ಮೆಡಿಕಲ್ ಕಾಲೇಜ್ ನಲ್ಲಿ ಪ್ರಿನ್ಸಿಪಲ್ ಆಗಿದ್ದ ಪ್ರಸಿದ್ದ ಸರ್ಜನ್ ಪ್ರಾಧ್ಯಾಪಕ ಡಾ ಆರ್ ಎಚ್ ಎನ್ ಶೆಣಯ್ ಅವರು ಮುಖ್ಯ ಅತಿಥಿ ಯಾಗಿದ್ದರು .ಕಾಲೇಜ್ ಡೇ ಗೆ ಆಗ ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಜಿ ಕೆ ಗೋವಿಂದ ಭಟ್ ಮತ್ತು ಅವರ ಸಹೋದ್ಯೋಗಿ ಸಭಾಹಿತ (ಸೀನಿಯರ್ )ಮುಖ್ಯ ಅತಿಥಿ ಯನ್ನಾಗಿ ಕರೆಸಿದ್ದರು .ಆಗಿನ್ನೂ ಸರಕಾರಿ ಕಾಲೇಜ್ ಗಳಲ್ಲಿ ಜನ ಪ್ರತಿನಿಧಿಗಳನ್ನು ಖಡ್ಡಾಯವಾಗಿ ಕರೆಯಬೇಕು ಎಂಬ ಈಗಿನ ಪ್ರೋಟೋಕಾಲ್ ಇದ್ದಂತಿಲ್ಲ .ಈ ಅವಧಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಯಾಗಿ ಶ್ರೀ ಶಿವಾನಂದ ಕುಬಸದ್ ಎಂಬ ಸೀನಿಯರ್ ಇದ್ದರು.ಅವರು ಬಹುಮುಖ ಪ್ರತಿಭೆಯವರಾಗಿದ್ದು ಈಗ ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ಒಳ್ಳೆಯ ಲೇಖನಗಳನ್ನು ಬರೆಯುತ್ತಿರುತ್ತಾರೆ .
ನಂತರದ ಅವಧಿಗೆ ಶ್ರೀ ಮಾಲಿ ಪಾಟೀಲ್ ಎಂಬ ನನ್ನ ಸಹಪಾಠಿ ಕಾರ್ಯದರ್ಶಿ ಆದರು ಮತ್ತು ಮತ್ತೊಬ್ಬ ಪ್ರತಿಭಾವಂತ ಮಿತ್ರ ಶ್ರೀ ವಿವೇಕ ವಾಣಿ
ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಆದರು .ಮುಂದಿನ ಕಾಲೇಜ್ ಡೇ ಗೆ ಆಗ ಕೇಂದ್ರ ರಾಸಾಯನಿಕ ಖಾತೆ ಸಚಿವರಾಗಿದ್ದ ಶ್ರೀ ವೀರೇಂದ್ರ ಪಾಟೀಲ್ ಮತ್ತು ಗುಲ್ಬರ್ಗಾ ಮೆಡಿಕಲ್ ಕಾಲೇಜ್ ಮುಖ್ಯಸ್ಥ ಶ್ರೀ ಜವಳಿ ಯವರು ಅತಿಥಿಗಳು .
ಕಾಲೇಜ್ ನಲ್ಲಿ ಬಹುಮುಖ ಪ್ರತಿಭೆಯ ಅನೇಕ ವಿದ್ಯಾರ್ಥಿಗಳು ಇದ್ದರು .ನಮ್ಮದೇ ಒಂದು ಆರ್ಕೇಸ್ತ್ರಾ ಇತ್ತು .ನನ್ನ ತರಗತಿಯ ಸುನೀಲಾ ಜೋತಾಡಿ ಮತ್ತು ಪರಿಮಳ ಒಳ್ಳೆಯ ಹಾಡುಗಾರ್ತಿ ಗಳಾಗಿ ಹೆಸರು ಪಡೆದಿದ್ದರು . ಮಿತ್ರ ಹರೀಶ್ ಕುಮಾರ್ ಶೆಟ್ಟಿ ಇಂಗ್ಲಿಷ್ ನಲ್ಲಿ ಚೆನ್ನಾಗಿ ಭಾಷಣ ಮಾಡುತ್ತಿದ್ದು ,ಅವರು ಉಪಯೋಗಿಸಿದ ಶಬ್ದಗಳ ಅರ್ಥ ನಾವು ನಿಘಂಟುವಿನಲ್ಲಿ ನೋಡಿ ತಿಳಿಯುತ್ತಿದ್ದೆವು .
ನಮ್ಮ ನಾಟಕಗಳು ಉತ್ತಮ ಮಟ್ಟದ್ದಾಗಿ ಇರುತ್ತಿದ್ದು ,ವಿವೇಕ ವಾಣಿ ಸ್ವತಃ ಒಂದನ್ನು ಯಶಸ್ವಿಯಾಗಿ ನಿರ್ದೇಶಿಸಿದ ನೆನಪು .ಪ್ರದೀಪ್ ಹನುಮಸಾಗರ್ ಎಂಬ ನಮ್ಮ ಸೀನಿಯರ್ ನಾಟಕ ,ಸಂಗೀತ ಮತ್ತು ಕಲೆ ಎಲ್ಲಾ ರಂಗಗಳಲ್ಲಿ ಮಿಂಚುತ್ತಿದ್ದ ವಿಶೇಷ ಪ್ರತಿಭೆ .ಇಕ್ಬಾಲ್ ಮಣಿಯಾರ್ ಎಂಬ ಜೂನಿಯರ್ ಹಾರ್ಮೋನಿಯಂ ನುಡಿಸುತ್ತಿದ್ದು ,ಪಿ ಗಣೇಶ್ ಒಳ್ಳೆಯಗಾಯಕ .ಧಾರವಾಡದಲ್ಲಿ ಈಗ ಪ್ರಸಿದ್ದ ಸ್ತ್ರೀ ರೋಗ ತಜ್ನರೂ ,ಚಿಂತಕರೂ ,ಬರಹಗಾರರೂ ಆಗಿ ಅಸಾಂಪ್ರದಾಯಿಕ ಮಕ್ಕಳ ಶಾಲೆ ನಡೆಸುತ್ತಿರುವ ಸಂಜೀವ ಕುಲಕರ್ಣಿ ನಮ್ಮ ಜೂನಿಯರ್ ಮತ್ತು ಸಂಮಿತ್ರರು ;ಆಗಲೇ ಕವನಗಳನ್ನು ಬರೆಯುತ್ತಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು .
ನನ್ನ ಮಿತ್ರ ಡಾ ಮಂಟೂರ್ (ಈಗ ಪ್ರಸಿದ್ದ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ನ )ಅವರು ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದು ಅವರೊಡನೆ ವಾರಾಂತ್ಯದಲ್ಲಿ ಒಂದು ಹಲ್ಲಿಗೆ ಸೈಕಲ್ ನಲ್ಲಿ ತೆರಳಿ ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಉಚಿತ ಔಷಧಿ ವಿತರಣೆ ಮಾಡುತ್ತಿದ್ದ ನೆನಪು .
ಮಕ್ಕಳ ವಾರ್ಡ್ ನಲ್ಲಿ ಕೆಲವು ಬಾಲ್ಯ ಸಕ್ಕರೆ ಕಾಯಿಲೆ ಮತ್ತು ದಿನವೂ ಔಷಧ ಬೇಡುವ ಕಾಯಿಲೆಯ ಕೆಲವು ಬಡ ಮಕ್ಕಳನ್ನು ಮಾನವೀಯ ನೆಲೆಯಲ್ಲಿ ಖಾಯಂ ಆಗಿ ಅಡ್ಮಿಟ್ ಮಾಡಿದ್ದರು .ಇವರು ವಾರ್ಡ್ ಸಿಸ್ಟರ್ ಗಳಿಗೆ ಸಹಾಯ ಮಾಡುವರು .ಅನಕ್ಷರಸ್ಥ ರಾಗಿದ್ದ ಈ ಮಕ್ಕಳಿಗೆ ನಾವು ಕೆಲವು ವಿದ್ಯಾರ್ಥಿಗಳು ಸೇರಿ ಸಂಜೆ ಹೊತ್ತು ಅಕ್ಷರಾಭ್ಯಾಸ ಮಾಡಿಸಿದೆವು .ಮತ್ತು ಬಹಳ ಚೆನ್ನಾಗಿ ಹಾಡುತ್ತಿದ್ದ ಅವರಿಗೆ ತರಬೇತು ನೀಡಿ ಮಕ್ಕಳ ದಿನಾಚರಣೆ ಯಂದು ಒಳ್ಳೆಯ ಕಾರ್ಯಕ್ರಮ ಏರ್ಪಡಿಸಿದ್ದು ಧಾರವಾಡ ಆಕಾಶವಾಣಿಯವರು ಅದನ್ನು ಪ್ರಸಾರ ಮಾಡಿದರು .ಈ ಕಾರ್ಯದಲ್ಲಿ ಸಂಜೀವ ಕುಲಕರ್ಣಿ ಮತ್ತು ಇಕ್ಬಾಲ್ ಮಣಿಯಾರ್ ಸಹಕಾರ ನೀಡಿದ ನೆನಪು .ಮಕ್ಕಳ ವಿಭಾಗದ ಮುಖ್ಯಸ್ಥ ರಾಗಿದ್ದ ಡಾ ಮಾಲತಿ ಯಶವಂತ್ ನನಗೊಂದು ಸರ್ಟಿಫಿಕೇಟ್ ದಯಪಾಲಿಸಿದರು .ಅದೇ ರೀತಿ ಹೆರಿಗೆ ವಿಭಾಗದಲ್ಲಿ ಹೆತ್ತವರಿಂದ ನಾನಾ ಕಾರಣಕ್ಕೆ ತ್ಯಕ್ತರಾದ ಕಂದಮ್ಮಗಳು ಇದ್ದು ಅವರನ್ನು ವಾರ್ಡ್ ಸಿಸ್ಟರ್ಸ್ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು . ಅಂತಹ ಒಂದು ಮಗು ಪ್ರೀತಿ ;ನನ್ನನ್ನು ತುಂಬಾ ಹಚ್ಚಿ ಕೊಂಡಿತ್ತು.ಆಗ ದತ್ತು ತೆಗೆದು ಕೊಳ್ಳುವ ಕಾನೂನುಗಳು ಸರಳ ಮತ್ತು ಸುಲಭ ಇದ್ದುದರಿಂದ ಈ ಮಕ್ಕಳು ತುಂಬಾ ಕಾಲ ಇರ ಬೇಕಾಗಿ ಬರುತ್ತಿರಲಿಲ್ಲ .
ಕ್ರೀಡಾ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶಗಳು ಇದ್ದವು .ಹಾಸ್ಟಲ್ ನಲ್ಲಿ ಟೇಬಲ್ ಟೆನ್ನಿಸ್ ಟೇಬಲ್ ಕಾಮನ್ ಹಾಲ್ ನಲ್ಲಿ ಇತ್ತು.ವಾಲಿ ಬಾಲ್ ಕೂಡಾ ಆಡುತ್ತಿದ್ದರು .ಕಾಲೇಜ್ ನಲ್ಲಿ ಟೆನ್ನಿಸ್ ಕೋರ್ಟ್ , ಮತ್ತು ದೊಡ್ಡ ಕ್ರೀಡಾಂಗಣ ಇದ್ದು ನಮ್ಮಲ್ಲಿ ಒಳ್ಳೆಯ ಫೂಟ್ ಬಾಲ್ ಮತ್ತು ಕ್ರಿಕೆಟ್ ಆಟಗಾರರು ಇದ್ದರು .ನನ್ನ ಕ್ಲಾಸ್ ನಲ್ಲಿ ಮೋಹನ್ .ಉದಯ್ ಸಾಂಭ್ರಾಣಿ ,ಸಂದೀಪ್ ಒಳ್ಳೆಯ ಕ್ರಿಕೆಟ್ ಆಟಗಾರರು ಆಗಿದ್ದು ,ರಾಮನಾಥನ್ ಟೆನ್ನಿಸ್ ಮತ್ತು ಫೂಟ್ ಬಾಲ್ ಆಟಗಾರರಾಗಿದ್ದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ