ಬೆಂಬಲಿಗರು

ಬುಧವಾರ, ಏಪ್ರಿಲ್ 28, 2021

ಹುಬ್ಬಳ್ಳಿ ನೆನಪುಗಳು 9

                  ಹುಬ್ಬಳ್ಳಿ ನೆನಪುಗಳು 9

          

 
ಅಜ್ಞಾನ ತಿಮಿರಾಂಧಸ್ಯ  ಜ್ನಾನಾಂಜನ ಶಲಾಕಾಯ
ಚಾಕ್ಷುರುನ್ಮಿಲೀತಮ್  ಯೇನ ತಸ್ಮೈ ಶ್ರೀ ಗುರುವೇ ನಮಃ
 
 ನಮಗೆ  ಸರ್ಜರಿ ವಿಭಾಗದಲ್ಲಿ ಕೆ ಜಿ ನಾಯಕ್ ಎಂಬ ಪ್ರಾಧ್ಯಾಪಕರು ಇದ್ದರು.ಅವರ ಪತ್ನಿ ಶೀಲಾ ನಾಯಕ್ ಅನಾಟಮಿ ಪ್ರೊಫೆಸರ್ .ಇಬ್ಬರೂ ನಿವೃತ್ತಿ ನಂತರ ಸುಳ್ಯ ದ ಕೆ ವಿ ಜಿ‌ ಮೆಡಿಕಲ್ ಕಾಲೇಜ್ ನಲ್ಲಿ  ಕೆಲಸ ಮಾಡುತ್ತಿದ್ದರು.ಕೆ  ಜಿ‌ ನಾಯಕ್ ಅವರ ಒಂದು ಪಾದ ಸ್ವಲ್ಪ ಊನ ಆಗಿದ್ದರೂ ಬಹಳ ಕ್ರಿಯಾಶೀಲ .ಟೆನ್ನಿಸ್ ಕೂಡಾ ಆಡುತ್ತಿದ್ದರು . ನಾನು ವಿದ್ಯಾರ್ಥಿಯಾಗಿ ಮತ್ತು ಇಂಟರ್ನ್ ಆಗಿ ಅವರ (ಪ್ರೊ ಕೌಲ್ಗುಡ್ ಯೂನಿಟ್ )ಯೂನಿಟ್ ನಲ್ಲಿಯೇ ಇದ್ದೆ.ಅವರಿಗೆ ಕಲಿಸುವುದು ಅಚ್ಚು ಮೆಚ್ಚು .ಮಂಗಳೂರು ಕನ್ನಡದಲ್ಲಿ ಬೈಯ್ಯುವರು (ಪ್ರೀತಿಯಿಂದ ).ನನ್ನ ಉತ್ತರ ಅವರಿಗೆ ಸಮಾಧಾನ ಆಗದಿದ್ದರೆ 'ಏನಾ ಭಟ್ ಬಾಯಿಗೆ ಬಂದ ಹಾಗೆ ಏನಾದರೂ ಹೇಳುತ್ತಿ ,ಸರಿಯಾಗಿ ಓದುವುದಿಲ್ಲ," ನಮ್ಮ ಬ್ಯಾಚ್ ನಲ್ಲಿ ಇದ್ದ ಭಗವಾನ್ ಸಿಂಗ್ ಎಂಬ ಸರ್ದಾರ್ ನನ್ನು ಅವರು ಸಿಂಗು ಎಂದು ಕರೆಯುವರು .ವಾಟ್ ಸಿಂಗು ವಾಟ್ ಈಸ್ ಯುವರ್ ಫೈಂಡಿಂಗ್ ?ಇತ್ಯಾದಿ .ಪರೀಕ್ಷೆ ಗೆ ಮೊದಲು ಒಂದು ಸ್ಪೆಷಲ್ ಕ್ಲಾಸ್ ಸರಣಿ ತೆಗೆದು ಕೊಳ್ಳುವರು .ಅವರ ಹಿಂದಿನ ಶಿಷ್ಯ ಮತ್ತು ಈಗಿನ ಸಹೋದ್ಯೋಗಿ ಡಾ ಗಿರಿ ಗೌಡ ಕೂಡಾ ತೆಗೆದುಕೊಳ್ಳುವರು .ಹಾಗೆ ಶಸ್ತ್ರ ಚಿಕಿತ್ಸಾ ವಿಷಯ ನಮಗೆ ಸುಲಿದ ಬಾಳೆಯ ಹಣ್ಣಿನಂದದಿ ,ಕಳೆದ ಚಿಗುರಿನ ಕಬ್ಬಿನಂದದಿ ಆಗಿ ಹೋಯಿತು .




. ಗಿರಿ ಗೌಡರು ಅತೀ ಸರಳ ಆದರೆ ಜನಪ್ರಿಯ ಮತ್ತು ಅಧ್ಯಯನ ಶೀಲ ಗುರುಗಳು ಅವರು ತರಗತಿ ಆರಂಭಿಸುವ ಮೊದಲು ಕಣ್ಣು ಮುಚ್ಚಿ  ತಮ್ಮ ಗುರುಗಳಾದ ಡಾ ಅರ್ ಎಚ್ ಏನ್ ಶೆಣಯ್ ಮತ್ತು ,ಡಾ ಕೆ ಜಿ ನಾಯಕ್  ರವನ್ನು  ವಂದಿಸಿ  ತರಗತಿ ಆರಂಭಿಸುತ್ತಿದ್ದರು . ಅವರ ಬೆಡ್ ಸೈಡ್ ಕ್ಲಿನಿಕ್ಸ್ ಮತ್ತು ಪರೀಕ್ಷಾ ಕಾಲದ ವಿಶೇಷ ತರಬೇತಿ ಯು ಜಿ ಮತ್ತು ಪಿ ಜಿ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಆಗಿತ್ತು .ಅವರೂ ಕೆ ಜಿ ನಾಯಕ ಅವರ ಶಿಷ್ಯರು .

ಗಿರಿ ಗೌಡರು ಉತ್ತಮ ಅಧ್ಯಾಪಕ ರಾದರೂ  ಒಳ್ಳೆಯ ಶಸ್ತ್ರ ಚಿಕಿತ್ಸಾ ನಿಪುಣರಾಗಿರಲಿಲ್ಲ ,ಅವರಿಗೆ ಅನಾರೋಗ್ಯದಿಂದ ಸ್ವಲ್ಪ ಕೈ ನಡುಕ ಇತ್ತು .
ಸ್ತನದ ಗಡ್ಡೆಗಳ ಬಗ್ಗೆ  ಪಾಠ ಆರಂಭಿಸುವಾಗ ಅವರು  'ಈ ಅಂಗವು ಶಿಶು , ಕವಿ ಪ್ರೇಮಿಗಳಿಗೆ ಅಪ್ಯಾಯಮಾನವಾಗಿ ಇರುವಂತೆ ಕ್ಯಾನ್ಸರ್ ರೋಗಕ್ಕೂ 'ಎನ್ನುತ್ತಿದ್ದರು .  ಫೈನಲ್ ಪರೀಕ್ಷೆಯಲ್ಲಿ ಯಾವುದೊ  ಒಂದು  ವಿಷಯ ರೋಗಿಯನ್ನು ಪರೀಕ್ಷಿಸುವಾಗ ಮರೆತು ಹೋದರೆ ಏನಾಗುವುದು ? ಎಂದು ಕೇಳುವರು ,ನಾವು 
ಹೆದರಿ ಉತ್ತರ ನಿರೀಕ್ಷಿಸುತ್ತಿರುವಾಗ  ನಿರುಮ್ಮಳವಾಗಿ   ಏನೂ ಸಂಭವಿಸದು  ಎನ್ನುವರು .ಅದು ಅವರು ವಿಶ್ವಾಸ ಹುಟ್ಟಿಸುತ್ತಿದ್ದ ರೀತಿ .

   ಅಲ್ಪಾಯುವಿನಲ್ಲಿ  ತೀರಿ ಕೊಂಡರೂ  ವಿದ್ಯಾರ್ಥಿಗಳ ಹೃದಯ ದಲ್ಲಿ  ಜ್ಞಾನ ರೂಪಿಯಾಗಿ ನೆಲೆಸಿದ್ದಾರೆ .ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ ಜ್ಞಾನ ವಾಹಿನಿ  ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ  ದಾರಿ ತೋರಿ ಕಾಪಾಡುತ್ತಿದೆ .


ಸರ್ಕಾರೀ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡು ತರದ ವೈದ್ಯರು ಇರುತ್ತಾರೆ . ಒಂದು ಅಸಿಸ್ಟೆಂಟ್ ಸರ್ಜನ್ ಕ್ಯಾಟಗೊರಿ  ,ಇವರು ಕ್ಯಾಶುಯಾಲಿಟಿ ,ಓ ಪಿ ಡಿ ವಾರ್ಡ್ ಗಳಲ್ಲಿ ಇರುವರು . ಟೀಚಿಂಗ್ ವಿಭಾಗದವರು ಇನ್ನೊಂದು . ಲೆಕ್ಚರರ್ ,ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಪ್ರೊಫೆ ಸರ್  ಇತ್ಯಾದಿ . ಈಗ ಪ್ರಸಿದ್ಧ ಮಕ್ಕಳ ಹೃದ್ರೋಗ ತಜ್ಞೆಯಾಗಿರುವ  ವಿಜಯ ಲಕ್ಷ್ಮಿ ಬಾಳೇಕುಂದ್ರಿ  ಅಸಿಸ್ಟೆಂಟ್ ಸರ್ಜನ್ ಆಗಿದ್ದು ಮೆಡಿಸಿನ್ ವಿಭಾಗದಲ್ಲಿ ಇದ್ದರು .ಬಹಳ ಪ್ರತಿಭಾವಂತೆ ,ಉತ್ಸಾಹಿ ಆಗಿದ್ದ ಇವರು ಕೆಲವೊಮ್ಮೆ ನಮಗೆ ಕ್ಲಾಸ್ ತೆಗೆದು ಕೊಳ್ಳುವರು .ಹಾಗೆಯೇ ಡಾ ಹೊಸ್ಮಟ್ಟ್ ಎಂಬುವರು ಕೂಡ ನಮಗೆ ಪಾಠ ಮಾಡುತ್ತಿದ್ದರು . 

ಇನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಮೂರು ತಿಂಗಳು ಪೋಸ್ಟಿಂಗ್ಸ್ ಇದ್ದಾಗ ಅಲ್ಲಿ ಡಾ ಗಜಾನನ ಗುಡಿಗಾರ ಎಂಬ ಪ್ರತಿಭಾವಂತ ಫಿಸಿಷಿಯನ್ ಇದ್ದು ಅವರಿಂದ ನಾನು ಹಲವು ವಿಷಯಗಳನ್ನು ಕಲಿತೆನು . ಸೂಕ್ಷ್ಮ ಮತಿಯಾಗಿದ್ದ ಅವರದು ರೋಗ ನಿಧಾನದಲ್ಲಿ ಎತ್ತಿದ ಕೈ . ಅವರ ಪತ್ನಿ ಸ್ತ್ರೀ ರೋಗ ತಜ್ಞೆ .ನಾನು ಧಾರವಾಡದಲ್ಲಿ ಇದ್ದಷ್ಟು ದಿನ ಅವರ ಮನೆಯವನೇ ಆಗಿದ್ದು ನನ್ನ ಬಹುಪಾಲು ಊಟೋಪಚಾರ ಅವರಲ್ಲಿ ಆಗುತ್ತಿತ್ತು . ನಿವೃತ್ತರಾದ ಮೇಲೆ ಹುಬ್ಬಳ್ಳ್ಳಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದು ಶಿರೂರ್ ಪಾರ್ಕ್ ನಲ್ಲಿ ನೆಲಸಿದ್ದರು .ಅವರ ಕೈ ಬರಹ ಮತ್ತು ವೈದ್ಯಕೀಯ ನೋಟ್ಸ್ ಬಹಳ ಚಂದ . ಸರಕಾರಿ ಸೇವೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನೆಲ್ಲಾ  ಆಗಾಗ ಸ್ಮರಿಸಿ ಕೊಳ್ಳು ವೆನು . 

  ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದ ಮೂರು ತಿಂಗಳು ನಾನು ಆಸ್ಪತ್ರೆಯಲ್ಲಿಯೇ ನೆಲಸಿ ೨೪ ಗಂಟೆ ಕೆಲಸ ಮಾಡುತ್ತಿದ್ದೆ .ಹೆರಿಗೆ ,ಮಕ್ಕಳ ವಿಭಾಗ ಮತ್ತು ತುರ್ತು ಚಿಕಿತ್ಸೆಯಲ್ಲಿ ತುಂಬಾ ಅನುಭವ ದೊರೆಯಿತು . ಮೆಡಿಕಲ್ ಕಾಲೇಜು ನಲ್ಲಿ ಪಿ ಜಿ ಗಳು ಇದ್ದ ಕಾರಣ  ನಮಗೆ ಸ್ವತಂತ್ರವಾಗಿ ನಿರ್ಧಾರ ತೆಗೆದು ಕೊಳ್ಳುವ ಅವಕಾಶಗಳು ಕಡಿಮೆ ಇದ್ದವು . 

ಸಿವಿಲ್ ಆಸ್ಪತ್ರೆಯಲ್ಲಿ  ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದ (ಗೌರವ ಉಪನ್ಯಾಸಕ )ಕಾರಣ ನನ್ನ ಅನುಭವದ ಪರಿಧಿ ವಿಸ್ತರಿಸಿ ಕೊಂಡಿತು . 

ಲೇಖಕ ಬಸವರಾಜ ಕಟ್ಟಿಮನಿ (MLC ಆಗಿದ್ದರು )ಸಿವಿಲ್ ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿದ್ದರು .ಅವರನ್ನು ಉಪಚರಿಸುವ ಭಾಗ್ಯ ಸಿಕ್ಕಿತ್ತು . ಧಾರವಾಡ ವಿಶ್ವವಿದ್ಯಾಲಯ ಉಪಕುಲಪತಿ ಯಾಗಿದ್ದ  ಖ್ಯಾತ ಅರ್ಥ ಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ ಕೂಡಾ ವೈದ್ಯಕೀಯ ಸಲಹೆಗಾಗಲಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದರು . 

ಸಿವಿಲ್ ಆಸ್ಪತ್ರೆಯ ನವ ಶಿಶು ವಿಭಾಗದಲ್ಲಿ ಹೀಟರ್ ಇಲ್ಲದಿದ್ದುದರಿಂದ ನನ್ನ ಸ್ಟೈಪೆಂಡ್ ಹಣದಲ್ಲಿ ಒಂದನ್ನು ಕೊಡುಗೆಯಾಗಿ ನೀಡಿ ನನ್ನ ಋಣ ಅಲ್ಪ ಸಂದಾಯ ಮಾಡಿದೆನು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ