ಹುಬ್ಬಳ್ಳಿ ನೆನಪು ಗಳು 5
ಹುಬ್ಬಳ್ಳಿಯಲ್ಲಿ ನನಗೆ ಉತ್ತರ ಕರ್ನಾಟಕದ ಆಹಾರ ಕ್ರಮಗಳ ಪರಿಚಯ ಆಯಿತು . ಮೊದಲನೆದಾಗಿ ಅದು ವರೆಗೆ ಕಾಫಿ ಕುಡಿಯುತ್ತಿದ್ದ ನಾನು ಚಹಾದ ದಾಸನಾದೆ .ಇದಕ್ಕೆ ಕಾರಣ ಮೆಸ್ಸ್ ನಲ್ಲಿ ಕಾಫಿ ಕೊಡುತ್ತಿರಲಿಲ್ಲ ;ಮತ್ತು ಖಾನಾವಳಿಗಳಲ್ಲಿ ಒಳ್ಳೆಯ ಕಾಫಿ ಸಿಗದು ,ಚಹಾ ಮಾತ್ರ ಎಲ್ಲೆಡೆ ಖಡಕ್ . ಬೇಂದ್ರೆಯವರು ಇನ್ನೂ ಯಾಕೆ ಬರಲಿಲ್ಲಾವ ಹುಬ್ಬಳ್ಳಿಯಾಂವ ದಲ್ಲಿ ಚಹಾದ ಕೂಡಾ ಚೂಡಾ(ಚಿವುಡ ,ಹುರಿದ ಅವಲಕ್ಕಿ ಮಿಶ್ರಣ ) ದಾಂಗ ಎಂದು ಬರೆದಿದ್ದಾರೆ .(ಕಾಫಿ ಕೂಡ ಎಂದು ಬರೆದರೆ ಸೇರದು ).
ಇನ್ನು ಅವರ ಊಟ ನಮ್ಮ ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ ಹೆಚ್ಚು ಸಮತೋಲ .ರೊಟ್ಟಿ ,ಸ್ವಲ್ಪ ಅನ್ನ ,ಸಾರು .ಮೊಸರು , ಕಾಳು ಪಲ್ಯ (ಮಡಿಕಿ ಕಾಳು ,ಅಲಸಂದಿ ,ಕಡಲೆ ಮತ್ತು ಹೆಸರು ),ಸೊಪ್ಪಿನ ಪಲ್ಯ .ಶೇಂಗಾ ಪುಟಾಣಿ ಅಥವಾ ಗುರೆಳ್ಳು ಚಟ್ನಿ . ಅದರ ಜೊತೆ ಹಸಿ ಮೆಣಸಿನ ಕಾಯಿ .(ಇದು ಅಷ್ಟು ಒಳ್ಳೆಯದಲ್ಲ ).
ನಮ್ಮ ಹಾಸ್ಟೆಲ್ ನಲ್ಲಿ ಜೋಳದ ರೊಟ್ಟಿ ಮಾಡುತ್ತಿದ್ದುದು ಕಡಿಮೆ ,ಚಪಾತಿ ಕೊಡುತ್ತಿದ್ದರು .ಹಬ್ಬ ಹುಣ್ಣಿಮೆಗೆ ವಿಶೇಷವಾಗಿ ರೊಟ್ಟಿ ಮಾಡುವ ಅಕ್ಕನವರನ್ನು ಕರೆಸುತ್ತಿದ್ದರು .ಅವರು ರೊಟ್ಟಿ ತಟ್ಟುವ ಲಯ ಪೂರ್ಣ ಶಬ್ದ ಕಿವಿಯಲ್ಲಿದೆ .ಹೊರಗಡೆ ಮೆಸ್ಸ್ ಗಳಲ್ಲಿ ಒಂದು ಹೊತ್ತು ರೊಟ್ಟಿ ,ಇನ್ನೊಂದು ಹೊತ್ತು ಚಪಾತಿ ಕೊಡುತ್ತಿದ್ದರು .
ಹಬ್ಬದ ದಿನ ಮತ್ತು ಕೆಲವು ಭಾನುವಾರ ಕಡಲೆ ಝುಣಕ ಬದನೆಕಾಯಿ ಎಣ್ಣೆ ಗಾಯಿ ,ಮತ್ತು ಶೇಂಗಾ ಹೋಳಿಗೆ ಇರುತ್ತಿತ್ತು .
ಹುಬ್ಬಳ್ಳಿಯ ಹೋಟೆಲ್ ಮತ್ತು ಹಾಸ್ಟೆಲ್ ಗಳಲ್ಲಿ ಆಗ ಜನಪ್ರಿಯ ಆಗಿದ್ದ ತಿಂಡಿಗಳು ನಮ್ಮಲ್ಲಿ ಅಪರೂಪವಾದ ಬ್ರೆಡ್ ಒಗ್ಗರಣೆ ,ಬ್ರೆಡ್ ಬೋಂಡಾ ,ಅವಲಕ್ಕಿ ಒಗ್ಗರಣೆ ..
ನಾವು ಕಾಲೇಜಿಗೆ ಸೇರುವಾಗ ಪ್ರಸಿದ್ದ ಕಾಮತ್ ಹೋಟೆಲ್ ನವರು ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದು ಆಮೇಲೆ ಶಾಸ್ತ್ರೀ ಗ್ರೂಪ್ ನವರು ಏಲಂ ಪಡೆದರು . ಕ್ಯಾಂಪಸ್ ನ ಹಿಂಭಾಗದಲ್ಲಿ ಇದ್ದ ಪೈ ಹೋಟೆಲ್ ,ಎದುರು ಗಡೆ ಕಾಮರ್ಸ್ ಕಾಲೇಜು ಮುಂದೆ ಸಂಗೀತಾ ಹೋಟೆಲ್ ವಿದ್ಯಾರ್ಥಿ ವೃಂದದಲ್ಲಿ ಜನ ಪ್ರಿಯ ಆಗಿದ್ದುವು . ಪಕ್ಕದಲ್ಲೇ ಇದ್ದ ಅಂಬೇಶ್ ಹೋಟೆಲ್ ,ಎದುರು ಗಡೆ ಇದ್ದ ಗುರುದತ್ತ ಭವನ ಹೊಗ್ಗುತ್ತಿದ್ದೆವು . ಗುರುದತ್ತ ಭವನದ ಶ್ರೀ ಜಯಂತ ಶೆಟ್ಟಿ ಉತ್ತಮ ಕ್ರಿಕೆಟ್ ಆಟಗಾರ ಆಗಿದ್ದು ರಣಜಿ ಟೀಮ್ ವರೆಗೆ ಹೋಗಿದ್ದ ನೆನಪು .ಮುಂದೆ ಅವರು ಪೊಲೀಸ್ ಇಲಾಖೆ ಸೇರಿದರು ಎಂದು ಕೇಳಿದ್ದೇನೆ .ಹೆಚ್ಚಿನ ಹೋಟೆಲ್ ನವರೂ ಮಂಗಳೂರು ಕಡೆಯವರು ಆಗಿದ್ದರೂ ನಮ್ಮೊಡನೆ ಹೆಚ್ಚು ಸಲಿಗೆ ಇರಲಿಲ್ಲ .ಯಾರಾದರೂ ದುರುಪಯೋಗ ಗೊಳಿಸಿದರೆ ಎಂಬ ಭಯ ಇದ್ದಿರ ಬಹುದು .
ಇನ್ನು ಮಾಂಸಾಹಾರ ಇಷ್ಟ ವಿದ್ದವರು ಹೆಚ್ಚಾಗಿ ಅವಲಂಬಿಸಿದ್ದ ಹೋಟೆಲ್ ಅಭಿಮಾನ್ ಕ್ಯಾಂಪಸ್ ನೇರ ಎದುರುಗಡೆ ಇತ್ತು . ಇನ್ನೊಂದು ಹೋಟೆಲ್ ಹೈ ವೇ ; ಅದರ ಯಜಮಾನರು ನನ್ನ ಸಹಪಾಠಿ ಹರೀಶ್ ಕುಮಾರ್ ಎಂಬುವರ ಬಂಧುಗಳು ಆದ ಕಾರಣ ನನಗೂ ಮಿತ್ರರಾದರು
ಇನ್ನು ನಮ್ಮ ಮಿತ್ರರು ಊರಿಂದ ಬರುವಾಗ ಕರದಂಟು (ಗೋಕಾಕ ) ,ಕುಂದಾ (ಬೆಳಗಾವಿ ),ಮತ್ತು ಪೇಡಾ (ಧಾರವಾಡ )ತರುವರು .ಇವುಗಳ ಪೈಕಿ ಕರದಂಟು ನನಗೆ ಬಲು ಇಷ್ಟ ವಾಯಿತು .ನನ್ನ ಸಹಪಾಠಿ ಗೋಕಾಕದ ಡಾ ಮಹೇಶ್ ಹೂಲಿ ಯಾವಾಗಲೂ ತಂದು ಕೊಡುತ್ತಿದ್ದರು .
ನಾವು ಊರಿಗೆ ಹೋಗುವಾಗ ಧಾರವಾಡ ಪೇಡಾ ಮತ್ತು ವಿದ್ಯಾನಗರದಲ್ಲಿ ಇದ್ದ ಶಿರೂರ್ ಗಾರ್ಡನ್ ದ್ರಾಕ್ಷಿ ತೋಟದಿಂದ ಹಣ್ಣು ಕೊಂಡು ಹೋಗುತ್ತಿದ್ದೆವು . ಧಾರವಾಡ ದ ಲೈನ್ ಬಜಾರ್ ಠಾಕೂರ್ ಪೇಡಾ ಬಹಳ ಪ್ರಸಿದ್ಧ ..ಈಗ ದ್ರಾಕ್ಷಿ ತೋಟ ಹೋಗಿ ಅದೇ ಹೆಸರಿನ ಬಡಾವಣೆ ಬಂದಿದೆ .
ಇಂದಿಗೂ ನನಗೆ ಉತ್ತರ ಕರ್ನಾಟಕದ ಊಟ ಬಹಳ ಇಷ್ಟ . ದುರದೃಷ್ಟ ವಶಾತ್ ಉತ್ತರ ಕರ್ನಾಟಕದಲ್ಲಿಯೂ ಸಮಾರಂಭ ಗಳಲ್ಲಿ ಇತ್ತೀಚಿಗೆ ಉತ್ತರ ಭಾರತದ ಊಟ ಮತ್ತು ತಿನಸುಗಳು ಸ್ಥಳೀಯ ಆಹಾರದ ಸ್ಥಾನ ಆಕ್ರಮಿಸಿವೆ . ನಾನು ಎರಡು ವರ್ಷಗಳ ಹಿಂದೆ ಕಾನ್ಫರೆನ್ಸ್ ಗಾಗಿ ಬೆಳಗಾವಿಗೆ ಹೋದವನು ಒಳ್ಳೆಯ ರೊಟ್ಟಿ ಊಟಕ್ಕೆ ತುಂಬಾ ಹುಡುಕಾಡ ಬೇಕಾಯಿತು . (ಕೊನೆಗೆ ಅನ್ನಪೂರ್ಣ ಎಂಬ ಒಳ್ಳೆಯ ಖಾನಾವಳಿ ಸಿಕ್ಕಿತು ಅನ್ನಿ ).
ಈಗಲೂ ನಾನು ಆನ್ಲೈನ್ ಮೂಲಕ ಬಿಜಾಪುರ ದಿಂದ ಶೇಂಗಾ ಚಟ್ನಿ ,ಶೇಂಗಾ ಹೋಳಿಗೆ ಮತ್ತು ರೊಟ್ಟಿ ತರಿಸಿ ತಿನ್ನುವೆನು . ಹಲಸಿನ ಹಣ್ಣಿನ ಕಡುಬು ತಿನ್ನುವಾಗ ಅಜ್ಜ ಅಜ್ಜಿ ಯ ನೆನಪಾದಂತೆ ಇವುಗಳನ್ನು ಸವಿಯುವಾಗ ನನ್ನ ಕೆ ಎಂ ಸಿ ದಿನಗಳು ಮತ್ತು ಮಿತ್ರರ ನೆನಪು ಆಗುವದು . ರೊಟ್ಟಿ ,ಚಟ್ನಿ ಮತ್ತು ಹೋಳಿಗೆ ಬಿಜಾಪುರದ ಉಮದಿ ಫುಡ್ಸ್ ( https://umadifoods.com/ ) ಮತ್ತು ಕರದಂಟು ಸದಾನಂದ ಸ್ವೀಟ್ಸ್ ( https://gokakkaradant.com/ ) ಆನ್ಲೈನ್ ಅಂಗಡಿಗಳಲ್ಲಿ ಸಿಗುವದು.ಅಲ್ಲದೆ ನನ್ನ ಮಿತ್ರ ಡಾ ವೈ ಬಿ ಭಜಂತ್ರಿ ಹುಬ್ಬಳ್ಳಿಯಿಂದ ನಾನು ಕೇಳಿದಾಗಲೆಲ್ಲ ಪಾರ್ಸೆಲ್ ಮಾಡಿ ಕಳುಹಿಸುವರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ