ಬಿರುದು ಬಾವಲಿಗಳು
ಹಲ ವರುಷಗಳ ಹಿಂದೆ ನನಗೊಂದು ಪತ್ರ ಬಂದಿತು .ಅದರಲ್ಲಿ " ನಿಮ್ಮ ವಿಶೇಷ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಉಪಾಧಿ ಕೊಡಲು ನಿರ್ಧರಿಸಿದ್ದು ,ನ ಮ್ಮಿಂದ ಗೌರವಿಸಲ್ಪಟ್ಟ ಹಿಲ್ಲರಿ ಕ್ಲಿಂಟನ್ ,ಬಿಲ್ ಗೇಟ್ಸ್ (ಮತ್ತು ಕೆಲವು ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖ ) ಅಂತಹವರ ಸಾಲಿನಲ್ಲಿ ನೀವೂ ಸೇರಿದ್ದೀರಿ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ . ನಿಮ್ಮ ಬಯೋ ಡೇಟಾ ಮತ್ತು ಇತ್ತೀಚೆಗಿನ ಭಾವ ಚಿತ್ರ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡುವುದು ."ಎಂದು ಬರೆದಿತ್ತು .ಜತೆಗೆ ಅವರ ಹಿಂದಿನ ಘಟಿಕೋತ್ಸವದ ಚಿತ್ರ ,ಅದರಲ್ಲಿ ಮಾಜೀ ರಾಜ್ಯಪಾಲರು ಮುಖ್ಯ ಅತಿಥಿ ಮತ್ತು ಇನ್ನಿತರ ಗಣ್ಯ ವ್ಯಕ್ತಿಗಳು . (ನನ್ನ ಬಯೋ ಡೇಟಾ ಗೊತ್ತಿಲ್ಲದವರು ನನಗೆ ಗೌರವ ಪದವಿ ನೀಡುವರು !)
ನಾನು ಒಂದು ವೇಳೆ ಉತ್ತರಿಸಿದರೆ ನನಗೆ ಘಟಿಕೋತ್ಸವ ವೆಚ್ಚ ವೆಂದು ಇಷ್ಟು ಮೊತ್ತ ಕಳುಹಿಸಿರಿ ಎಂದು ಬರುವುದು . ಯಾವುದಾದರೂ ಒಂದು ಮಹಾನಗರದ ಹೋಟೆಲ್ ಸಭಾಂಗಣದಲ್ಲಿ ನನಗೆ ಗೌ ಡಾ ಕೊಡಲ್ಪಟ್ಟು ಪತ್ರಿಕೆಗಳಲ್ಲಿ ನನ್ನ ಭಾವ ಚಿತ್ರ ಬರುವುದಲ್ಲದೆ ನನ್ನ ಹಿತೈಷಿಗಳು ಡಾ ಎ ಪಿ ಭಟ್ ಅವರಿಗೆ ಅಭಿನಂದನೆಗಳು ಎಂದು ಹಾಕುವರು .. ಇದು ಒಂದು ಗೌರವ ಡಾಕ್ಟರೇಟ್ ದಂಧೆ .
ಮಾಧ್ಯಮಗಳಿಗೆ ಇದು ಒಂದು ಜಾಹಿರಾತಿನ ದಾರಿ ಯಾದುದರಿಂದ ಅದರ ಮೂಲಕ್ಕೆ ಅವು ಹೋಗವು .ಇದೇ ರೀತಿಯ ಬಹು ವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರ ಬಿರುದು ದಾಹಿಗಳಿಗೆ ನೀಡುವವರು ಹುಟ್ಟಿಕೊಂಡಿದ್ದಾರೆ
ಇನ್ನು ನಮ್ಮ ಅಧಿಕೃತ (ಯು ಜಿ ಸಿ ಅಂಗೀಕೃತ )ವಿಶ್ವ ವಿದ್ಯಾಲಯಗಳ ಸ್ಥಿತಿ ಉತ್ತಮ ಏನೂ ಇದ್ದಂತಿಲ್ಲ . ಡಾಕ್ಟರೇಟ್ ಪದವಿಗಳು ಮಾರಾಟವಾಗುತ್ತಿವೆ ಮತ್ತು ವಶೀಲಿ ಬಾಜಿ ನಡೆಯುವದು ಎಂದು ತಿಳಿದವರು ಹೇಳುವರು . ಅನಧಿಕೃತ ಪದವಿ ದಾನಿಗಳು ಕೆಲವರಾದರೂ ಅರ್ಹರಿಗೆ ಗೌ ಡಾ ಮಾರುತ್ತಿರಬಹುದು .
ಇನ್ನು ಸಂಘ ಸಂಸ್ಥೆ ಮತ್ತು ಸರಕಾರೀ ಇಲಾಖೆಗಳಲ್ಲಿ ಉತ್ತಮ ಸಾಧನೆಗಾಗಿ ಕೊಡಲ್ಪಡುವ ಬಿರುದು ಬಾವಲಿಗಳು ಬಹುತೇಕ ಅರ್ಹರು ಮತ್ತು ಪ್ರಾಮಾಣಿಕರಿಗೆ ಸಿಗುವುದಿಲ್ಲ .ಇದು ನನ್ನ ಸುಧೀರ್ಘ ವೃತ್ತಿ ಜೀವನದ ಅನುಭವ . ಛತ್ರ ಚಾಮರ ಸೇವೆ ಮಾಡಿದವರು ಗುರುತಿಸಲ್ಪಡುವರು . ಎಲೆಯ ಮರೆಯ ಕಾಯಿಗಳು ಅಲ್ಲಿಯೇ ಹಣ್ಣು ಆಗುವರು .
ಇನ್ನು ಕೆಲವು ಇಲಾಖೆಗಲ್ಲಿ ಬಿರುದು ಯಾಂತ್ರಿಕವಾಗಿ ಕೊಡಲ್ಪಡುವದು .ಇತ್ತೀಚಿಗೆ ನಿಧನರಾದ ಕರ್ನಾಟಕದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಎ ಪಿ ದುರೈ ತಮ್ಮ ಆತ್ಮ ಚರಿತ್ರೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಯನ್ನು ಉಲ್ಲೇಖಿಸಿ "ನಮ್ಮ ಸೇವೆಯಲ್ಲಿ ದಡಾರ ಮತ್ತು ಕೋಟ್ಲೆ (ಮೀ ಸಲ್ಸ್ ಮತ್ತು ಚಿಕನ್ ಪೋಕ್ಸ್)ಬರುವಂತೆ ಸೇವಾ ಅವಧಿಯಲ್ಲಿ ಎಲ್ಲರಿಗೂ ಸೇವಾ ಪದಕ ಬರುವುದು "ಎಂದು ತಮಗೆ ಪದಕ ಬಂದುದ ನನ್ನು ನೆನಪಿಸಿ ಕೊಂಡಿರುವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ