ಹುಬ್ಬಳ್ಳಿ ನೆನಪುಗಳು 2
ರಾವ್ ಬಹಾದ್ದೂರ್ ,ಕೃಷ್ಣ ಮೂರ್ತಿ ಪುರಾಣಿಕ ,ಬೇಂದ್ರೆ ಯವರನ್ನು ಓದಿ ಕೊಂಡಿದ್ದ ನನಗೆ ಉತ್ತರ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಅರಿಯಲು ಅಲ್ಲಿ ನಾನು ಇದ್ದ ಆರು ವರ್ಷಗಳು ಸಹಾಯಕ ಆದವು . ಒಟ್ಟಿನ ಲ್ಲಿ ಮುಂಬೈ ಕರ್ನಾಟಕ ದ ಜನರು ಒರಟರಂತೆ ಕಂಡರೂ ಸ್ನೇಹ ಜೀವಿಗಳು ಮತ್ತು ಗೆಳೆತನಕ್ಕಾಗಿ ಪ್ರಾಣ ಕೊಡಲೂ ಸಿದ್ದರು . ಅವರ ಆಡು ನುಡಿಯಲ್ಲಿ ಉರ್ದು ಮತ್ತು ಮರಾಠಿ ಶಬ್ದಗಳು ಹೇರಳ .
ಈರುಳ್ಳಿ ಉಳ್ಳಾಗಡ್ಡಿ ,ಹೋಟೆಲ್ ಖಾನಾವಳಿ ,ರಜೆ ಸೂಟಿ,ಬೇಗನೆ ಲಗೂ ,ಅಂಗಡಿ ದುಕಾನ ,ಆಸ್ಪತ್ರೆ ದವಾಖಾನೆ , ಸ್ನಾನ ಝಳಕ ,ಮೂರು ಮುಕ್ಕಾಲು ಪೌನೇ ಚಾರ್ ಆಗುತ್ತವೆ . ನೀವು ಚೆನ್ನಾಗಿ ಇದ್ದೀರಾ ಎನ್ನಲು ಛಲೋ ಇದ್ದೀರೇನ್ರಿ ? ಬಹಳ ಆಯಿತು ಎನ್ನಲು ರಗಡ್ ಆತ್ರಿ ಎನ್ನುವರು .
ಕೆಲವು ಶಬ್ದ ಮತ್ತು ನುಡಿಗಟ್ಟುಗಳು ನನ್ನಲ್ಲಿ ಮೊದಲು ಕುತೂಹಲ ಉಂಟು ಮಾಡುತ್ತಿದ್ದವು .ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರು ಎನ್ನುವುದಕ್ಕೆ ಟೋಕ ಮತ್ತು ಕಿರುಕುಳ ವ್ಯಾಪರಿಗಳು ಎಂದು ನಾಮಫಲಕ .ಯಾರಿಗೆ ಕಿರುಕುಳ?
ಆಮೇಲೆ ಎನ್ನುವುದಕ್ಕೆ ಹಿಂದಾ ಗಡೆ ಹಾಯಿಸಿ ಎನ್ನುವರು .ಉದಾ ಹಣ ಕಡ ಕೇಳುವಾಗ ,ಎರಡು ರೂಪಾಯಿ ರೊಕ್ಕ ಉದ್ರಿ ಕೊಡ್ರಿ ಹಿಂದಾ ಗಡೆ ಆಯಿಸಿ ಕೊಡ್ತೀನ್ರಿ ಎನ್ನುವರು .ಇವನು ಹಿಂದುಗಡೆಯಿಂದ ಯಾಕೆ ಕೊಡುವನು ,ಎದುರಿನಿಂದ ಕೊಡಬಾರದೇ ? ಅಂಗಡಿಯವನು ಕೇಳಿದ ವಸ್ತು ಇಲ್ಲದಿದ್ರೆ ಈಗ ಇಲ್ರಿ ಹಿಂದಾ ಗಡೆ ಹಾಯಿಸಿ ಬರ್ರಿ ಎಂದರೆ ನೀವು ಅಂಗಡಿ ಹಿಂದೆ ಹೋದ್ರಿ ಮತ್ತೆ .ಅದೇ ರೀತಿ ಹೊಟೇಲ್ ಹೊಟೇಲ ,ಕಾಲೇಜ್ ಕೋಲೇಜ ಆಗುವುದು .
ಸ್ನೇಹಿತರಲ್ಲಿ ವಾಚ್ಯವಾಗಿ ಉಪಯೋಗಿಸುವ ಸಂಬೋಧನೆ ಶಬ್ದಗಳು ಅಕ್ಷರ ರೂಪದಲ್ಲಿ ಮಡಿವಂತರಿಗೆ ಹೀಗೂ ಉಂಟೇ ಎಂದು ತೋರ ಬಹುದು .ಭಾರೀ ಗಳಸ್ಯ ಕಂಠಸ್ಯ ಇರುವ ಮಿತ್ರರು ಸ್ನೇಹಿತನಿಗೆ ಸೂಳೆ ಮಗನೇ ,ಇನ್ನೂ ಹೆಚ್ಚು ಪ್ರೀತಿ ತೋರಿದರೆ ಹುಚ್ ಸೂಳೇ ಮಗನೇ ಎಂದು ಕರೆಯುವರು .
ಆಸ್ಪತ್ರೆಗೆ ಬರುವ ರೋಗಿಗಳ ಮಾತಿನಲ್ಲಿಯೂ ಹೊಸ ಶಬ್ದಗಳು ಸಿಗುವುವು .ಮೈಯೆಲ್ಲಾ ತಿಂಡಿ ಎಂದರೆ ಮೈಯಿಡೀ ತುರಿಕೆ ,ಕಾಲ್ಮಡಿ ಎಂದರೆ ಮೂತ್ರ ,ಬೈಲಕಡೆ ಎಂದರೆ ಮಲ ಎಂಬ ಅರ್ಥ . ನಮ್ಮ ಸರ್ಜರಿ ಪ್ರಾಧ್ಯಾಪಕರು (ಬೆಂಗಳೂರು ಕಡೆಯವರು)ಒಬ್ಬ ರೋಗಿಗೆ ನಿನ್ನ ಉದ್ಯೋಗ ಏನಪ್ಪಾ ಎಂದು ಕೇಳಿದ್ದಕ್ಕೆ ನಮ್ದು ಕಷ್ಟದ ಕೆಲಸರೀ ಎಂದ .ಅದಕ್ಕೆ ನಮ್ಮ ಅಧ್ಯಾಪಕರು ನಮ್ಮ ಕೆಲಸಕ್ಕಿಂತಲೂ ಕಷ್ಟವೇನ್ರಿ ಎಂದರು .(ನಾಪಿತನ ಕೆಲಸಕ್ಕೆ ಅಲ್ಲಿ ಕಷ್ಟದ ಕೆಲಸ ಎನ್ನುವರು ).
ನಿಮಗೆಲ್ಲ ತಿಳಿದಿರುವಂತೆ ಆರಂಭ ಮಾಡಿದ್ದೇನೆ ಎನ್ನುವುದಕ್ಕೆ ಹತ್ತಿದ್ದೀನ್ರಿ ಎನ್ನುವರು .ಮಾಡಕ್ ಹತ್ತಿದೀನ್ರೀ ,ಚಲೋ ಓದಾಕ್ ಹತ್ತಿದಿಯೇನಪ್ಪಾ ?ಇದನ್ನೇ ಬಸ್ಸಿನಿಂದ ಇಳಿಯಾಕ್ ಹತ್ತಿದೀನ್ರೀ ಎಂದು ತಮಾಷೆ ಮಾಡುವರು
ಇಲ್ಲಿಯ ಹೆಸರುಗಳಲ್ಲಿ ತರಕಾರಿ ಹೆಸರುಗಳು ಹೇರಳವಾಗಿ ಬರುವವು . .ಉಳ್ಳಾಗಡ್ಡಿಮಠ್ ,ಮೆಣಸಿನಕಾಯಿ ,ಬದನಿ ಕಾಯಿ ,ಸೊಪ್ಪಿನ ಮಠ ,ಇತ್ಯಾದಿ ಹೆಸರುಗಳು ಸಾಮಾನ್ಯ . ಇನ್ನು ತಹಸೀಲ್ದಾರ್ ,ಬೆಲ್ಲದ ,ಗುಡ್ಡಕಾಯು ,ಹೊಸ ಮನಿ ,ಹಳೇ ಮನಿ ,ಇತ್ಯಾದಿ ಸರ್ ನೇಮ್ ಗಳೂ . ಪಾಟೀಲ್ ರಲ್ಲಿ ಮಾಲಿಪಾಟೀಲ್ .,ಪೋಲಿಸ್ ಪಾಟೀಲ್ ಇತ್ಯಾದಿ . ಸ್ಥಳ ನಾಮವನ್ನು ಹೆಸರಿಗೆ ಸೇರಿಸಿದ ಗೋಕಾಕ ,ಹುಯಿಲಗೋಳ ,ಮಂಟೂರು ಇತ್ಯಾದಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ