ಒಂದು ವಾಚಿನ ಕತೆ
ಹಿಂದೆ ಕೈ ಗಡಿಯಾರ ಸುಲಭವಾಗಿ ಸಿಗುತ್ತಿರಲಿಲ್ಲ .ಎಚ್ ಎಂ ಟಿ ವಾಚ್ ಗೆ ಬುಕ್ ಮಾಡಿ ಕಾಯಬೇಕಿತ್ತು .ಆಮದು ವಾಚ್ ಗಳು ದುರ್ಲಭ ವಾಗಿದ್ದು ತುಂಬಾ ತುಟ್ಟಿ ಯಾಗಿದ್ದವು . ಬ್ಲಾಕ್ ಮಾರ್ಕೆಟ್ ನಲ್ಲಿ ಸ್ವಲ್ಪ ಕಡಿಮೆಗೆ ಸಿಗುತ್ತಿದ್ದವು . (ನಾವು ಎಷ್ಟು ದೇಶ ಭಕ್ತರು ಎಂದು ಹೇಳಿ ಕೊಂಡರೂ ಬ್ಲ್ಯಾಕ್ ನಲ್ಲಿ ಏನಾದರೂ ಕಡಿಮೆಗೆ ಸಿಗುವುದಾದರೆ ಮುಗಿ ಬೀಳುವೆವು )
ಆದುದರಿಂದ ಹೈ ಸ್ಕೂಲ್ ಮತ್ತು ಪಿ ಯು ಸಿ ಯಲ್ಲಿ ನಮ್ಮ ಬಳಿ ಕೈಗಡಿಯಾರ ಇರುತ್ತಿರಲಿಲ್ಲ ,ಪಬ್ಲಿಕ್ ಪರೀಕ್ಷೆಗೆ ಹಿರಿಯರ ವಾಚ್ ಕಟ್ಟಿಕೊಂಡು ಕೆಲವು ಅನುಕೂಲಸ್ಥ ಮನೆಯ ವಿದ್ಯಾರ್ಥಿಗಳು ಬರುವರು .ಶಾಲೆಯ ಬೀಳ್ಕೊಡುಗೆ ಸಮಾರಂಭದ ಗ್ರೂಪ್ ಫೋಟೋದಲ್ಲಿ ಹುಡುಗಿಯರು ಒಂದು ಜಡೆ ಮುಂದೆ ,ಇನ್ನೊಂದು ಹಿಂದೆ ಮತ್ತು ಕೈಯಲ್ಲಿ (ಹಿರಿಯರ ) ಗಡಿಯಾರದ ಡಯಲ್ ಕಾಣುವಂತೆ ನಿಂತಿರುವ ಚಿತ್ರ ಕಾಣಬಹುದು .
ಅಂತಿರುವಾಗ ನನಗೆ ಎಂ ಬಿ ಬಿ ಎಸ ಸೇರುವಾಗ ನನ್ನ ದೊಡ್ಡಣ್ಣ ಜನತಾ ಬಜಾರ್ ನಲ್ಲಿ ಕ್ಯೂ ನಿಂತು ,(ಕಸ್ಟಮ್ಸ್ ನವರು ವಶ ಪಡಿಸಿ ಕೊಂಡ ಕಳ್ಳ ಮಾಲು ,ಅಲ್ಲಿ ಸಾಮಾನ್ಯ ಜನತೆಗೆ ತಲೆಗೆ ಒಂದರಂತೆ ಕೊಡುತ್ತಿದ್ದರು ) ಒಂದು ಬ್ಲೂ ಡಯಲ್ ಹೊಳೆಯುವ ಹೆನ್ರಿ ಸ್ಯಾಂಡೋಜ್ ವಾಚ್ ತಂದು ಕೊಟ್ಟರು .ಅದು ನನ್ನ ಬೆಲೆ ಬಾಳುವ ಪೊಸೆಶನ್ ಆಯಿತು . ಮುಂದೆ ಸುಮಾರು ೨೫ ವರ್ಷ ನನ್ನಲ್ಲಿ ಇತ್ತು .
ಒಂದು ಬಾರಿ ಬೆಂಗಳೂರಿಗೆ ಹೋಗಿದ್ದವನು ಆಡುಗೋಡಿ ಬಳಿ ಫುಟ್ ಪಾತ್ ನಲ್ಲಿ ನಡೆಯುತ್ತಿದ್ದಾಗ ಈ ವಾಚ್ ಹೇಗೋ ಜಾರಿ ಕೆಳಗೆ ಬಿತ್ತು . ಬಿದ್ದದ್ದು ಫುಟ್ ಪಾತ್ ನ ಸ್ಲಾಬ್ ನಲ್ಲಿ ಒಂದು ಸಣ್ಣ ರಂಧ್ರದ ಮೂಲಕ ಚರಂಡಿ ಪಾಲಾಯಿತು .ನನ್ನ ನಿರಾಶೆ ಹೇಳ ತೀರದು .ಇನ್ನು ಸದ್ಯಕ್ಕಂತೂ ಕೈಗಡಿಯಾರ ಕೊಳ್ಳುವ ಸಾಧ್ಯತೆ ಇಲ್ಲ .ಆ ರಂಧ್ರದಲ್ಲಿ ಬಗ್ಗಿ ನೋಡಿದೆ ..ಚರಂಡಿಯಲ್ಲಿ ನೀರು ಕೊಳಚೆ ಇರಲಿಲ್ಲ . ಒಳಗೆ ಸ್ವಲ್ಪ ಕತ್ತಲು . ನನ್ನ ಚಡಪಡಿಕೆ ಕಂಡು ಅಲ್ಲಿ ದಾರಿ ನಡೆಯುತ್ತಿದ್ದ ಒಬ್ಬ ಹುಡುಗ ಏನು ಸರ್ ಎಂದು ವಿಚಾರಿಸಿದ . ನಾನು ನನ್ನ ಗೋಳು ಹೇಳಿದೆ .ಆತ "ನೀವು ಚಿಂತೆ ಮಾಡ ಬೇಡಿ ನೋಡುವಾ ' ಎಂದು ಪಕ್ಕದ ಗ್ಯಾರೇಜು ನಿಂದ ಒಂದು ಸರಳಿನಂತಹ ಕಬ್ಬಿಣದ ರಾಡ್ ತಂದು ಅದರ ತುದಿಗೆ ರಸ್ತೆಯ ಪಕ್ಕದಲ್ಲಿ ಇದ್ದ ಡಾಮರಿನ ಉಂಡೆ ಅಂಟಿಸಿ ಅದಕ್ಕೆ ಬೆಂಕಿ ಕೊಟ್ಟ .ಅದರ ಬೆಳಕಿನಲ್ಲಿ ರಂಧ್ರದ ಮೂಲಕ ಸರಳು ಒಳಗೆ ಇಳಿಸಲು ನನ್ನ ವಾಚ್ ಕಂಡಿತು .ಡಾಮರಿನಲ್ಲಿ ಅದರ ಬೆಲ್ಟ್ ಒತ್ತಲು ಅದು ಅಂಟಿ ಕೊಂಡಿತು ,ಅದನ್ನು ಮೆಲ್ಲನೆ ಮೇಲಕ್ಕೆ ರಂಧ್ರದ ಮೂಲಕ ಮೇಲೆ ತಂದು ನನಗೆ ಕೊಟ್ಟನು .ನನಗೆ ಹೋದ ಜೀವ ಬಂದಂತಾಯಿತು . ಮತ್ತು ಆತನಿಗೆ ಸೂಕ್ತ ಬಹುಮಾನ ನೀಡಿದೆನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ