ಹುಬ್ಬಳ್ಳಿ ನೆನಪುಗಳು 1
ನನಗೆ ಹುಬ್ಬಳ್ಳಿ ಕೆ ಎಂ ಸಿ ಯಲ್ಲಿ ಪ್ರಥಮ ಎಂ ಬಿ ಬಿ ಎಸ ಪ್ರವೇಶ ದೊರೆತು ನಾನು ಒಂದು ಟ್ರಂಕ್ ಮತ್ತು ಹಾಸಿಗೆ ಸಹಿತ ಅಲ್ಲಿಗೆ ತೆರಳಿ ಲ್ಯಾಮಿಂಗ್ಟನ ರಸ್ತೆಯ ಅಶೋಕ ಹೋಟೆಲ್ ನಲ್ಲಿ ಖೋಲಿ ಹಿಡಿದೆ .ಇದು ನಗರದ ಪ್ರಸಿದ್ಧ ನೆಹರು ಮೈದಾನ್ ಪಕ್ಕದಲ್ಲಿಯೇ ಇದ್ದು ಈಗ ಎರಡೋ ಮೂರೋ ಬೇರೆ ಬೇರೆ ಹೋಟೆಲ್ಲುಗಳಾಗಿ ಮಾರ್ಪಟ್ಟಿದೆ . ಹೋಟೆಲ್ ಎದುರು ಸಿಟಿ ಬಸ್ ಸ್ಟಾಪ್ ಇದ್ದು ಬಸ್ಸಿನಲ್ಲಿ ಕೆ ಎಂ ಸಿ ಗೆ ಹೋದೆ . ಹುಬ್ಬಳ್ಳಿ ಕೆ ಎಂ ಸಿ ಕ್ಯಾಂಪಸ್ ಸುಯೋಜಿತ ,ಸುಂದರ ಮತ್ತು ಅದನ್ನು ನಿರ್ಮಿಸಿದವರ ದೂರ ದೃಷ್ಟಿ ಮತ್ತು ಪ್ರಾಮಾಣಿಕತೆಯ ಸಂಕೇತ . ಕಾಲೇಜಿನ ಮುಖ್ಯ ಕಟ್ಟಡ ಭವ್ಯ ಮತ್ತು ಸುದೃಢ ,ಅದರ ಹೆಬ್ಬಾಗಿಲು ಮೊದಲ ಬಾರಿ ಒಳ ಹೊಗ್ಗುವ ವಿದ್ಯಾರ್ಥಿಗೆ ರೋಮಾಂಚನ ಆಗುವದು .ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರು ರಸ್ತೆ ನಡೆದರೆ ಇದು ಸಿಗುವದು . ರಸ್ತೆಯ ಎಡ ಬದಿ ಹಾಸ್ಟೆಲುಗಳು ,ಆನಂದ ,ವಿವೇಕ ,ಚೇತನ ಮತ್ತು ಶುಶ್ರುತ (ಈಗ ಕೆಲವು ಸೇರ್ಪಡೆ ಆಗಿದೆ ),ಬಲ ಬದಿಯಲ್ಲಿ ಅಧ್ಯಾಪಕರ ವಸತಿ ಗೃಹಗಳು . ರಸ್ತೆ ಬದಿಯಲ್ಲಿ ಗುಲ್ ಮೊಹರ್ ,ಮತ್ತು ಮೇ ಫ್ಲವರ್ ಮರಗಳು ಸರತಿಯಲ್ಲಿ ಹೂ ಬಿಟ್ಟು ಸದಾ ವರ್ಣ ಮಯ .ದ್ವಿಪಥ ರಸ್ತೆಯ ವಿಭಾಜಕದಲ್ಲಿಯೂ ಬಣ್ಣ ಬಣ್ಣದ ಹೂ ಬಿಡುವ ಗಿಡಗಳು . ಮುಖ್ಯ ಕಟ್ಟಡದ ಮುಂಭಾಗ ಎರಡು ವೃತ್ತಾಕಾರದ ಹೂ ತೋಟಗಳು . ಕಾಲೇಜಿಗೆ ಪುಷ್ಪ ಪ್ರದರ್ಶನದಲ್ಲಿ ಹಲವು ಭಾರಿ ಪ್ರಥಮ ಬಹುಮಾನ ಬಂದಿದೆ .ಕಾಲೇಜಿನ ಹಿಂಭಾಗದಲ್ಲಿ ಸುಸಜ್ಜಿತ ಆಡಿಟೋರಿಯಂ ಇದ್ದು ಹುಬ್ಬಳ್ಳಿ ಧಾರವಾಡದಲ್ಲಿ ಆ ಕಾಲಕ್ಕೆ ಅತ್ಯಂತ ಉತ್ತಮ ಸಭಾಗೃಹ ಆಗಿತ್ತು . ಇಲ್ಲಿ ಶ್ರೇಷ್ಠ ಮಟ್ಟದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದುವು . ಅದರ ಹಿಂದೆ ನೌಕರರ ವಸತಿ ಗೃಹಗಳು .ಸಂಜೆ ಹೊತ್ತು ಮನೆಗಳಿಂದ ಸುಶ್ರಾವ್ಯ ಭಜನೆ ಕೇಳಿ ಬರುತ್ತಿತ್ತು . ಹಿಂದೆ ಸಂಪರ್ಕ ರಸ್ತೆ ದೇಶಪಾಂಡೆ ನಗರ ,ಉಣಕಲ್ ಗುಡ್ಡ ಕಡೆಗೆ . ಕಾಲೇಜು ಎದುರು ನಿಂತರೆ ಬಲಬದಿ ಯಲ್ಲಿ ಆಸ್ಪತ್ರೆ ,ತುರ್ತು ವಿಭಾಗ ಮತ್ತು ಹೊರ ರೋಗಿ ವಿಭಾಗ .ನಡುವೆ ಒಂದು ರಸ್ತೆ ಉಳ್ಳಾಗಡ್ಡ್ಡಿ ಮಾರ್ಕೆಟ್ ಕಡೆಗೆ ,ಅದರ ಬದಿಯಲ್ಲಿ ಸಾಕಷ್ಟು ದೊಡ್ಡದಾದ ಕ್ರೀಡಾಂಗಣ . ಆಫೀಸ್ ನಲ್ಲಿ ಮಿಣ ಚಿಗಿ ಎಂಬವರು ದಾಖಲಾತಿ ವಿಭಾಗದ ಗುಮಾಸ್ತರು . ಹುಬ್ಬಳ್ಳಿ ಮುಂಬೈ ಕರ್ನಾಟಕಕ್ಕೆ ಸೇರಿದ್ದು ಅಲ್ಲಿ ಶಾಲೆಗಳಲ್ಲಿ ಹೆಸರು ಬರೆಯುವ ಪದ್ಧತಿ ಬೇರೆ .ಮೊದಲು ಸರ್ ನೇಮ್ ,ಆಮೇಲೆ ಹೆಸರು ,ಕೊನೆಗೆ ತಂದೆಯ ಹೆಸರು . ಅಂತೆಯೇ ಎ (ಅಂಗ್ರಿ )ಪದ್ಮನಾಭ ಭಟ್ ಆಗಿದ್ದ ನಾನು ಭಟ್ ಪದ್ಮನಾಭ ಸುಬ್ಬಣ್ಣ ಆಗಿ ಮಾರ್ಪಟ್ಟೆ . ಪ್ರದೇಶ ಸಮಾಚಾರದಲ್ಲಿ ಪುರುಷೋತ್ತಮ್ ಚುನಾವಣಾ ಫಲಿತಾಂಶ ಓದುವಾಗ ಬೊಮ್ಮಾಯಿ ಸೋಮಪ್ಪ ರಾಯಪ್ಪ ಅವರು , ತಹಸೀಲದಾರ್ ಶರಣಪ್ಪ ಬಸಪ್ಪ ಇತ್ಯಾದಿ ಓದುತ್ತಿದುದು ನಿಮಗೆ ಜ್ಞಾಪಕ ಇರಬಹುದು .
ನಾನು ಸೇರುವಾಗ ಸ್ವಲ್ಪ ತಡವಾಗಿದ್ದರಿಂದ ಹಾಸ್ಟೆಲ್ ನಲ್ಲಿ ರೂಮ್ ಸಿಕ್ಕಲಿಲ್ಲ ,ಪಕ್ಕದಲ್ಲಿ ಒಂದು ರೂಮ್ ಮಾಡಿಖಾಸಗಿ ಮೆಸ್ಸ್ ನಲ್ಲಿ ಹಚ್ಚಿದೆ . ಕೆ ಎಂ ಸಿ ಹುಬ್ಬಳ್ಳಿ ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ವಿದ್ಯಾನಗರ ವಿಸ್ತರಣೆ ಯ ಆರಂಭ ದಲ್ಲಿ ಇದ್ದು ,ಕಾಮರ್ಸ್ ಕಾಲೇಜು ,ಕೋತಂಬರಿ ಆರ್ಟ್ಸ್ ಕಾಲೇಜು ,ಪಿ ಸಿ ಜಾಬಿನ ಸೈನ್ಸ್ ಕಾಲೇಜು ಮತ್ತು ಭೂಮ ರೆಡ್ಡಿ ಇಂಜಿನಿಯರಿಂಗ್ ಕಾಲೇಜು ಕ್ರಮವಾಗಿ ಬರುತ್ತವೆ . ವಿದ್ಯಾರ್ಥಿಗಳಿಗಾಗಿ ರೂಮುಗಳು ಮೆಸ್ಸ್ ಗಳು ಅನೇಕ ಇದ್ದುವು .ಈಗಿನ ಕಟ್ಟಡ ಮತ್ತು ಜನ ಜಂಗುಳಿ ಅಗ ಇರಲಿಲ್ಲ .
ಕಾಲೇಜು ಹಿಂದುಗಡೆ ರೈಲ್ವೆ ಟ್ರ್ಯಾಕ್ ದಾಟಿದರೆ ವಿಶ್ವೇಶ್ವರ ನಗರ . ಅದರ ಬಸ್ ಸ್ಟಾಪ್ ನ ಪಕ್ಕವೇ ಪಾಟೀಲ್ ಪುಟ್ಟಪ್ಪನವರ ಮನೆ ಪ್ರಪಂಚ .ಮುಂದೆ ಹೋದರೆ ಸಂಸದರಾಗಿದ್ದ ಎಂ ಎಫ್ ಮೊಹಸಿನ್ ಮನೆ ,ಹುಬ್ಬಳ್ಳಿ ಸಬ್ ಜೈಲ್ ಮತ್ತು ಎಡಕ್ಕೆ ಹೋದರೆ ನೃಪತುಂಗ (ಉಣಕಲ್ )ಬೆಟ್ಟ . ಸುಧಾ ಮೂರ್ತಿ ಯವರ ಮನೆ ಕೂಡಾ ನಮ್ಮ ಕಾಲೇಜು ಹಿಂದು ಗಡೆ ಇದ್ದು ಅವರ ಅಕ್ಕ ಸುನಂದಾ ಕುಲಕರ್ಣಿ ನಮ್ಮ ಗುರುಗಳು ಆಗಿದ್ದರು . ಸಂಜೆ ವಿಹಾರಕ್ಕೆ ಉಣಕಲ್ ಗುಡ್ಡಕ್ಕೆ ನಾವು ಮತ್ತು ನಮ್ಮ ಗುರುಗಳು ಹೋಗುತಿದ್ದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ