ಬೆಂಬಲಿಗರು

ಸೋಮವಾರ, ಏಪ್ರಿಲ್ 26, 2021

ಹುಬ್ಬಳ್ಳಿಯ ದಿನಗಳು 8

   ಹುಬ್ಬಳ್ಳಿಯ ದಿನಗಳು 8

ಕೆ ಎಂ ಸಿ ಯ ಸುವರ್ಣ ದಿನಗಳು ನಾವು ಅಲ್ಲಿಗೆ ಸೇರುವಾಗ ಮುಗಿದು ಕೊಂಡು ಬಂದು ಅವನತಿಯ ಪರ್ವ ಆರಂಭ ಆಗಿತ್ತು . ರಾಜ್ಯದ ನಾಲ್ಕು ಮೆಡಿಕಲ್ ಕಾಲೇಜ್ ನ ಅಧ್ಯಾಪಕರಿಗೆ ವರ್ಗಾವಣೆ ಇದ್ದು ಹುಬ್ಬಳ್ಳಿ ಗೆ ಬರಲು ಹಳೆ ಮೈಸೂರು ಕಡೆಯವರು ಹಿಂದೇಟು ಹಾಕುತ್ತಿದ್ದರು . ತಮ್ಮ ಪ್ರಭಾವ ಉಪಯೋಗಿಸಿ ಅಲ್ಲೇ ಉಳಿದು ಕೊಳ್ಳುತ್ತಿದ್ದರು .ಇಲ್ಲಿಗೆ ವರ್ಗ ಅದವರು ರಜೆ ಹಾಕಿ ಹುಣ್ಣಿಮೆಗೊ ಅಮಾವಾಸ್ಯೆಗೋ ಒಮ್ಮೆ ಬರುವರು.ಹೆಚ್ಕಿನವರು ಅಲ್ಲಿ ಪ್ರೈವೇಟ್ ಪ್ರಾಕ್ಟೀಸ್ ಇಟ್ಟುಕೊಂಡಿದ್ದು ,ನರ್ಸಿಂಗ್ ಹೋಮ್ ನಡೆಸುವವರೂ ಇದ್ದರು . ಕಾಲೇಜಿಗೆ ಖಾಯಂ ಪ್ರಿನ್ಸಿಪಾಲ್ ,ಇಲ್ಲದೆ ಹೊಟೇಲ್ ನಲ್ಲಿ ಇಂದಿನ ವಿಶೇಷ ಏನು ಎಂದು ಕೇಳುವಂತೆ ಇಂದಿನ ಪ್ರಿನ್ಸಿಪಾಲ್ ಯಾರು ಎಂದು ಕೇಳುವ ಸ್ಥಿತಿ ಬಂದಿತ್ತು . ಹಿಂದಿನವರ ಪುಣ್ಯದ ಪ್ರಭಾವದಿಂದ ಆಸ್ಪತ್ರೆ ಮತ್ತು ಕಾಲೇಜ್ ನಡೆಯುತ್ತಿದ್ದವು .

ನಮ್ಮ ಅದೃಷ್ಟಕ್ಕೆ ಸರ್ಜರಿ ಯಲ್ಲಿ ಒಳ್ಳೆಯ ಅಧ್ಯಾಪಕರು ಇದ್ದರು .ಡಾ ಎಸ್ ಆರ್ ಕೌಲ್ಗುಡ್ ,ಡಾ ವಿಜಯಕಾಂತ್ ,ಡಾ ಕೆ ಜಿ ನಾಯಕ್ ,ಡಾ ಬೂದಿಹಾಳ್ ,ಡಾ ಗಿರಿಗೌಡ ,ಮತ್ತು ಡಾ ಲಕ್ಷ್ಮೀಕಾಂತ್ ನೆನಪಿಗೆ ಬರುವರು . ನಾನು ವಿದ್ಯಾರ್ಥಿ ಯಾಗಿ ಮತ್ತು ಹೌಸ್ ಸರ್ಜನ್ ಆಗಿ ಡಾ ಕೌಲ್ಗುಡ್ ,ಡಾ ನಾಯಕ್ ,ಗಿರಿಗೌಡ ಮತ್ತು ಲಕ್ಷ್ಮೀಕಾಂತ್ ಯೂನಿಟ್ ನಲ್ಲಿ ಇರುವ ಸೌಭಾಗ್ಯ ದೊರಕಿತ್ತು .

ಸ್ತ್ರೀ ರೋಗ ವಿಭಾಗದಲ್ಲಿ ಡಾ ಎಸ್ ಏನ್ ಕೌಲ್ ಗುಡ್ ಮುಖ್ಯಸ್ಥರು ,ಡಾ ಪದ್ಮಾ ರಾವ್(ಹಿರಿಯ ಐ ಎ ಎಸ ಅಧಿಕಾರಿ ಆಗಿದ್ದು ಜೈತ್ರ ಯಾತ್ರೆ ಎಂಬ ಆತ್ಮ ಚರಿತ್ರೆ ಬರೆದ ಕೆ ಜೈರಾಜ್ ಇವರ ಪುತ್ರ ) ಮತ್ತು ಇಂದುಮತಿ ವಿಶಾಲಾಕ್ಷಿ ಪ್ರಾಧ್ಯಾಪಕರು .ನಾನು ಡಾ ಕೌಲ್ ಗುಡ್ ಯೂನಿಟ್ ನಲ್ಲಿ ಇದ್ದು ಡಾ ಸುನಂದಾ ಕುಲಕರ್ಣಿ(ಸುಧಾ ಮೂರ್ತಿ ಸಹೋದರಿ ) ,ಡಾ ದಮಯಂತಿ ಇದ್ದರು . 

ಕೌಲ್ ಗುಡ್ ಸಹೋದರರು ಪ್ರಾಮಾಣಿಕರೂ ,ವಿದ್ವಜ್ಜನರೂ ಆಗಿದ್ದು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು . ಸರ್ಜರಿ ಕೌಲ್ ಗುಡ್ ಸ್ಥಿತ ಪ್ರಜ್ಞ ,ಮೃದು ಭಾಷಿ ಯಾಗಿದ್ದರೆ  ಸ್ತ್ರೀ ರೋಗ ದವರು ಭಾವ ಜೀವಿ ಮತ್ತು  ಗಟ್ಟಿ ಧ್ವನಿಯವರು . ಎಸ ಏನ್ ಕೌಲ್ಗುಡ್ ಪತ್ನಿಗೆ ರಕ್ತ ಕೊಡಲು ಹಿಂಜರಿಯುವ ಗಂಡಂದಿರಿಗೆ ಗದರಿಸುವರು ,ಕೆಲವೊಮ್ಮೆ ಏಟು ಹಾಕಿದ್ದೂ  ಇದೆ ಎಂದು ಪ್ರತೀತಿ .ಆಮೇಲೆ  ತಾವೇ ರಕ್ತ ಕೊಡುವರು . ಅವರು ನೂರಾರು ಭಾರಿ ರಕ್ತ ದಾನ ಮಾಡಿರಬಹುದು .ಅವರ ಓ ಪಿ ಡಿ ಯಲ್ಲಿ  ಯಾವಾಗಲೂ  ಜನ ಗಂಗುಳಿ ,ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾದದ್ದು ಮುಗಿಯುವಾಗ ಸಂಜೆ ಆಗುತ್ತಿತ್ತು .ಆಮೇಲೆ ಮನೆಗೆ ಹೋಗಿ ಊಟದ ಶಾಸ್ತ್ರ  ಮುಗಿಸಿ ರೌಂಡ್ಸ್ ಗೆ ಬರುವರು .ಸಣ್ಣ ಸಣ್ಣ ತಪ್ಪಿಗೆ ರೇಗುವರು .ದೊಡ್ಡ ತಪ್ಪನ್ನು ಸಮಾಧಾನದಿಂದ ಪರಿಹಾರ ಮಾಡುವರು . ನಾನು ಹೌಸ್ ಸರ್ಜನ್ ಆಗಿದ್ದ ವೇಳೆ ಕುಮಟಾ ದ  ಡಾ ಟಿ ಏನ್ ಹೆಗ್ಡೆ ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದು ,ಈಗ ಜನಪ್ರಿಯ ಸ್ತ್ರೀ ರೋಗ ತಜ್ಞರು ಮತ್ತು ಈಗಲೂ ನನ್ನ ಸ್ನೇಹಿತರು . 

ಎಸ ಏನ್ ಕೌಲ್ಗುಡ್ ನಿಯಮಿತವಾಗಿ  ಮತ್ತು ಪರೀಕ್ಷಾ ಸಮಯ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವರು .ತರಗತಿಯ ಕೊನೆಗೆ I may not be that good but i am Koulgud  ಎನ್ನುವರು . ಎರಡು ಮಂದಿ  ಕೌಲ್ಗುಡ್ ಇದ್ದ ಕಾರಣ ಒಂದು ಬೆರಳಿನ ವರು ಮತ್ತು ಎರಡು ಬೆರಳಿನವರು ಎಂದೂ ತಮಾಷೆಗೆ ಗುರುತಿಸುತ್ತಿದ್ದರು . ಸರ್ಜನ್ ದೊಡ್ಡಕರುಳು ,ಗುದ ದ್ವಾರ ಪರೀಕ್ಷೆಗೆ ಒಂದು ಬೆರಳು ಉಪಯೋಗಿದರೆ ಸ್ತ್ರೀ ರೋಗ ತಜ್ಞರು  ಜನನಾಂಗ ,ಗರ್ಭಕೋಶ ಪರೀಕ್ಷೆಗೆ ಎರಡು ಬೆರಳು ಉಪಯೋಗಿಸುವರು . 

  ಇವರು ಮತ್ತು ಸರ್ಜರಿಯಲ್ಲಿ ಡಾ ಕೆ ಜಿ ನಾಯಕ್ ಮತ್ತು ಡಾ ಗಿರಿ ಗೌಡ ಯಾವುದೇ  ಹೆಚ್ಚಿನ  ಆರ್ಥಿಕ ಲಾಭ ಇಲ್ಲದಿದ್ದರೂ ತಪ್ಪದೆ  ಸ್ಪೆಷಲ್ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು . ಅವರಿಗೆಲ್ಲಾ ನಾವು ಎಷ್ಟು ಋಣಿ ಗಳು ಆದರೂ ಸಾಲದು 

 ಇನ್ನೊಂದು ಮುಖ್ಯ ವಿಷಯ ಮೆಡಿಸಿನ್ ವಿಭಾಗ .ಇದು ಸ್ವಲ್ಪ ಲಾಚಾರ  ಸ್ಥಿತಿಯಲ್ಲಿ ಇತ್ತು ಇಲಾಖಾ ಮುಖ್ಯಸ್ಥರೇ ಸರಿಯಾಗಿ ಇರಲಿಲ್ಲ .ಫೋರೆನ್ಸಿಕ್ ಮೆಡಿಸಿನ್ ನಲ್ಲಿ ಆದಂತೆ ಹೊರಗಿನಿಂದ ಬಂದ  ಪರೀಕ್ಷಕರು ನಿರ್ದಾಕ್ಷಿಣ್ಯವಾಗಿ ನಮ್ಮ ಬ್ಯಾಚ್ ನ ಮೇಲೆ  ವಿನಾ ಕಾರಣ  ಪ್ರಹಾರ ಮಾಡಿದರು . 

ಕೆ ಜಿ ನಾಯಕ್ ಮತ್ತು ಗಿರಿ ಗೌಡ ಬಗ್ಗೆ ಮುಂದೆ ಬರೆಯುವೆನು 

ಬಾಲಂಗೋಚಿ : ಕಲ್ಲಿಕೋಟೆ ಮೆಡಿಕಲ್ ಕಾಲೇಜ್ ನಲ್ಲಿ ಕಾಸರಗೋಡು ಮೂಲದ ಇಬ್ಬರು ಭಟ್ ಡಾಕ್ಟರ್ ಗಳು ಇದ್ದರು.(ಸಹೋದರರಲ್ಲ ).ಒಬ್ಬರು  ಕಣ್ಣಿನ ,ಮತ್ತೊಬ್ಬರು ಮುತ್ರಾಂಗ ಶಸ್ತ್ರಕ್ರಿಯ ತಜ್ನರು .ಅಲ್ಲಿ ರೋಗಿಗಳು ಭಟ್ ಡಾಕ್ಟರರು ಇದ್ದಾರೆಯೇ ಎಂದು ಕೇಳಿದಾದ "ನಿ0ಙಳುಕ್ಕು ನೇತ್ರ ಡಾಕ್ಟ್ರು ವೇಣೋ ಮೂತ್ರ ಡಾಕ್ಟ್ರುವೇಣೋ' ಎಂದು ಕೇಳುತ್ತಿದ್ದರಂತೆ

2 ಕಾಮೆಂಟ್‌ಗಳು: