ಅಪತ್ಭಾಂಧವರು
ನಾನು ನಿನ್ನೆ ನೆಹರು ನಗರದ ಬಾಲಕೃಷ್ಣ ಅವರ ಬಗ್ಗೆ ಬರೆದುದನ್ನು ಬಹಳ ಸಹೃದಯರು ಮೆಚ್ಚಿದ್ದಾರೆ ಎಂಬುದು ಸಮಾಧಾನ .ಇಂದು ಮುಂಜಾನೆ ವಾಕಿಂಗ್ ಹೋಗುವಾಗ ಯಥಾ ಪ್ರಕಾರ ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಗುಡಿಸುತ್ತಿದ್ದರು . ಅವರಿಗೆ ನಾನು ಫೇಸ್ಬುಕ್ ನಲ್ಲಿ ಅವರ ಬಗ್ಗೆ ಭಾವ ಚಿತ್ರ ಸಹಿತ ಬರೆದುದು ,ಜನ ಅದನ್ನು ಮೆಚ್ಚಿದ್ದು ಹೇಳಿ ಸಾಂಕೇತಿಕವಾಗಿ ಒಂದು ಸಣ್ಣ ಸಿಹಿ ತಿಂಡಿ ಪೊಟ್ಟಣ ಕೊಟ್ಟೆ . ನಿರ್ವಿಕಾರ ಮನೋಭಾವ ದಿಂದ ಅವರು ಸ್ವೀಕರಿಸಿ ಮಹಾಲಿಂಗೇಶ್ವರ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ತಮ್ಮ ಸ್ವಚ್ಚತಾ ಕೆಲಸದಲ್ಲಿ ಪುನಃ ತೊಡಗಿಸಿ ಕೊಂಡರು .
ಇಂದು ಇನ್ನೊಬ್ಬರ ಬಗ್ಗೆ ಬರೆಯುವೆನು .
ನಾನು ಬೆಂಗಳೂರಿಗೆ ಹೋಗುವುದಿದ್ದರೆ ಬಸ್ ಅಥವಾ ಟ್ರೈನ್ ನಲ್ಲಿ . ಆದರೆ ಕೋವಿಡ್ ಹಾವಳಿ ಇದ್ದುದರಿಂದ ಕೆಲವು ತಿಂಗಳ ಹಿಂದೆ ಕಾರ್ ನಲ್ಲಿಯೇ ಹೊರಟೆ . ನನ್ನ ಸಹೋದರಿ ಕೂಡಾ ತುರ್ತು ಕೆಲಸದಲ್ಲಿ ಬೆಂಗಳೂರಿಗೆ ಹೊರಟವರು ನನ್ನೊಡನೆ ಇದ್ದರು . ಉಪ್ಪಿನಂಗಡಿ ಶಿರಾಡಿ ರಸ್ತೆ ತುಂಬಾ ಹೊಂಡ ಗುಂಡಿಗಳು ಇದ್ದವು .ನೆಲ್ಯಾಡಿ ದಾಟಿ ಸ್ವಲ್ಪ ದೂರ ಹೋಗುವಾಗ ಒಂದು ರಸ್ತೆ ಹೊಂಡದಲ್ಲಿ ಇಳಿದ ಕಾರನ್ನು ಪುನಃ ಏರಿಸಲು ನೋಡಿದಾಗ ಕ್ಲಚ್ ಕೇಬಲ್ ತುಂಡಾಗಿದ್ದುದರಿಂದ ಗಾಡಿ ನಡೆಸುವುದು ಅಸಾಧ್ಯ ಆಯಿತು .ಮುಂಜಾನೆ ಹತ್ತೂವರೆ ಸಮಯ ,ಚಳಿಗಾಲದ ಬಿಸಿಲು .ರಸ್ತೆ ತುಂಬಾ ಧೂಳು .
ಅದು ಭಾನುವಾರ ವಾದುದರಿಂದ ಕಂಪನಿ ಸರ್ವಿಸ್ ಸೆಂಟರ್ ಗೆ ರಜೆ . ನಿಂತ ಸ್ಥಳದಲ್ಲಿ ಮೊಬೈಲ್ ಸಿಗ್ನಲ್ ಕೂಡಾ ಸರಿ ಇರಲಿಲ್ಲ .ರೋಡ್ ಸೈಡ್ ಅಸ್ಸಿಸ್ಟನ್ಸ್ ಗೆ ಫೋನ್ ಮಾಡಿದರೆ ಒಂದು ಒತ್ತಿರಿ ,ಎರಡು ಒತ್ತಿರಿ ಇತ್ಯಾದಿ ,ನಡುವೆ ಸಿಗ್ನಲ್ ಕಟ್ .
ಆಗ ಇಬ್ಬರು ಯುವಕರು ನಮ್ಮನ್ನು ಕಂಡು ಏನು ತೊಂದರೆ ಸರ್ ಎಂದು ಕೇಳಿ "ನೀವು ಚಿಂತೆ ಮಾಡ ಬೇಡಿ ,ನೆಲ್ಯಾಡಿಯಲ್ಲಿ ಒಬ್ಬರು ಮೆಕ್ಯಾನಿಕ್ ಇದ್ದಾರೆ .ಅವರನ್ನು ಕರೆಸುತ್ತೇವೆ . "ಎಂದು ನನ್ನ ಗಾಡಿಯನ್ನು ದೂಡಿ ರಸ್ತೆ ಬದಿಯಲ್ಲಿ ನಿಲ್ಲಿಸಿ "ನೀವು ಕಾರಿನ ಒಳಗೆ ಕುಳಿತು ಕೊಳ್ಳಿ "ಎಂದರು . ನನ್ನ ಕಾರ್ ನಲ್ಲಿ ಸಿಟಿ ಆಸ್ಪತ್ರೆ ವೈದ್ಯರು ಎಂದು ಕೋವಿಡ್ ಪರ್ಮಿಟ್ ಅಂಟಿಸಿತ್ತು .(ನಾನು ಇತರ ಸಮಯದಲ್ಲಿ ವೈದ್ಯರು ಎಂಬ ಸ್ಟಿಕರ್ ಅಂಟಿಸುವುದಿಲ್ಲ )ಸಾರ್ ನಾವು ನಿಮ್ಮ ಆಸ್ಪತ್ರಗೆ ಹಲವು ಭಾರಿ ಬಂದಿದ್ದೇವೆ ,ನಿಮ್ಮ ಉದ್ಯೋಗಿ ಜಲೀಲ್ ನಮ್ಮ ಮಿತ್ರ ಎಂದು ಸಾಂತ್ವನದ ಮಾತು ಹೇಳಿದರು .
ಸ್ವಲ್ಪ ಹೊತ್ತಿನಲ್ಲಿ ಒಬ್ಬರು ಮೆಕ್ಯಾನಿಕ್ ಬಂದು ಕೇಬಲ್ ಇಲ್ಲಿ ಸಿಗದು ,ಭಾನುವಾರ ಆದ ಕಾರಣ ಪುತ್ತೂರಿನಿಂದ ತರಿಸುವ ಹಾಗೂ ಇಲ್ಲ ಎಂದರು . ಅವರ ಹಿಂದೆಯೇ ಬಂದ ಶ್ರೀ ಟಿಪ್ಪು ಸುಲ್ತಾನ್ ಎಂಬ ಸಜ್ಜನರು 'ಸಾರ್ ನಿಮ್ಮ ಗಾಡಿಯನ್ನು ಟೋ ಮಾಡಿ ಹತ್ತಿರದ ಗ್ಯಾರೇಜು ಗೆ ತಲುಪಿಸುತ್ತೇನೆ "ಎಂದಾಗ ನನ್ನ ಒಂದು ಸಮಸ್ಯೆ ಪರಿಹಾರ ಆದರೂ ಬೆಂಗಳೂರಿಗೆ ಹೋಗುವ ಬಗೆ ಹೇಗೆ ? ಜತೆಗೆ ತಂಗಿಯೂ ಇರುವಳು .ಅದಕ್ಕೆ ಅವರು ನನ್ನ ಗಾಡಿ ಕೊಡುವೆನು ನೀವು ಹೋಗಿ ಬನ್ನಿ ಎಂದರು .ಗೊತ್ತು ಪರಿಚಯ ಇಲ್ಲದ ಟಿಪ್ಪು ಸುಲ್ತಾನ್ ಅವರಿಗೆ ನನ್ನ ಕಾರಿನ ಕೀ ಒಪ್ಪಿಸಿ ಬದಲಿ ಕಾರ್ ನಲ್ಲಿ ಬೆಂಗಳೂರರಿಗೆ ತೆರಳಿದೆ . ಹಾಸನಕ್ಕೆ ತಲುಪುವಾಗ ಸುಲ್ತಾನ್ ಫೋನ್ ಮಾಡಿ "ಸಾರ್ ನಿಮ್ಮ ಕಾರಿನ ಸರ್ವಿಸ್ ಬೆಳ್ತಂಗಡಿ ಶಾಖೆ ತೆರೆದಿದೆ .ಅಲ್ಲಿ ಕೊಂಡು ಹೋಗಿ ರಿಪೇರ್ ಮಾಡಿಸಿ ತರುವೆನು "ಎಂದರು .
ನಾನು ನನ್ನ ಬೆಂಗಳೂರು ಕೆಲಸ ನಿಶ್ಚಿಂತೆಯಿಂದ ನೆರವೇರಿಸಿ ಮರುದಿನ ಸಾಯಂಕಾಲ ನೆಲ್ಯಾಡಿಗೆ ತಲುಪಿದಾಗ ಗಾಡಿ ರೆಡಿ ಯಾಗಿತ್ತು .ಅವರ ಸೇವೆಗೆ ಸೂಕ್ತ ಸಂಭಾವನೆ ನೀಡಿದೆ . ಟಿಪ್ಪು ಸುಲ್ತಾನ್ ಇನ್ನೊಂದು ಕಡೆ ಘಾಟ್ ಸೆಕ್ಷನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ ವಾಹನಕ್ಕೆ ಸಹಾಯ ಮಾಡಲು ಹೋಗಿದ್ದರಿಂದ ಫೋನ್ ನಲ್ಲಿಯೇ ಕೃತಜ್ಞತೆ ಸಲ್ಲಿಸಿದೆ .
ಇದನ್ನು ಬರೆಯಲು ಕಾರಣ ಏನೆಂದರೆ ಈ ದಾರಿಯಲ್ಲಿ ,ಮುಖ್ಯವಾಗಿ ಶಿರಾಡಿ ,ಬಿಸಲೆ ಘಾಟ್ ನಲ್ಲಿ ಯಾವುದಾದರೂ ತೊಂದರೆ ಆದರೆ ಇವರನ್ನು ಸಂಪರ್ಕಿಸ ಬಹುದು . ಇವರ ದೂರವಾಣಿ ಸಂಖ್ಯೆ 8105300131. ಅವರ ಬಳಿ ಟೋಯಿಂಗ್ ಕ್ರೇನ್ ಇದೆ ,ಎಲ್ಲಾ ಗ್ಯಾರೇಜು ಗಳ ಮಾಹಿತಿ ಕೂಡಾ . ಸೇವೆ ಉಚಿತ ಅಲ್ಲ ಆದರೆ ಸಮಯೋಚಿತ .
ಟಿಪ್ಪು ಸುಲ್ತಾನ್ ಮತ್ತು ಅವರ ತಂಡಕ್ಕೆ ನನ್ನ ಕೃತಜ್ಞತೆ ಈ ಮೂಲಕ ಸಲ್ಲಿಸುತ್ತೇನೆ ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ