ಬೆಂಬಲಿಗರು

ಭಾನುವಾರ, ಏಪ್ರಿಲ್ 18, 2021

ಅಗಲಿದ ವೈದ್ಯ ಮಿತ್ರ ಅಮೈ ಕೃಷ್ಣ ಮೂರ್ತಿ

                       ಅಗಲಿದ ವೈದ್ಯ ಮಿತ್ರ ಅಮೈ ಕೃಷ್ಣ ಮೂರ್ತಿ 

                          



ನಿನ್ನೆ ನಾನು ಅಮೈ ನಾರಾಯಣ ಭಟ್ಟರ ಬಗ್ಗೆ ಬರೆದಿದ್ದೆ .ಅವರ ಪತ್ನಿಯ ಸಹೋದರ ವೇ ಮೂ ವಡ್ಯ ಗಣಪತಿ ಭಟ್ ; ನಾನು ಕಂಡ ಸಜ್ಜನರಲ್ಲಿ ಸಜ್ಜನರು .ಒಬ್ಬ ತಂದೆಗೆ ಬರಬಾರದ ಕ್ರೂರ ಸಂಭವ ತನ್ನ ಜೀವನದಲ್ಲಿ ನಡೆದರೂ ಎಲ್ಲವೂ ದೈವ ಚಿತ್ತ ಎಂದು ತಾಳಿ ಬಾಳಿ ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು . ಇತ್ತೀಚಿಗೆ ನಿಧನರಾದ ಶ್ರೀ ಅಮೈ ಸುಬ್ಬಣ್ಣ ಭಟ್ (ಈಚಣ್ಣ ಭಟ್ ) ಅವರದು ಮೇರು ವ್ಯಕ್ತಿತ್ವ .ಮೆಲು ಆದರೆ ಗಂಭೀರ ನುಡಿ ,ನೋಡಿದ ಯಾರಿಗೂ ಗೌರವ ತೋರುವುದು .ಅವರ ಒಬ್ಬ ಮಗ ಡಾ ಕುಮಾರ ಸುಬ್ರಹ್ಮಣ್ಯ  ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ನಲ್ಲಿ ಸಂಸ್ಕೃತ ಪ್ರಾಧ್ಯಾಪಕ ,ಸೊಸೆ ಶ್ರೀಮತಿ ಅರುಣಾ ಲೇಖಕಿ ಗಂಗಾ ಪಾದೇಕಲ್ ಅವರ ಪುತ್ರಿ ಮತ್ತು ಸಂಗೀತ ವಿದುಷಿ .(ಸಂಗೀತ ಶಾಲೆ ನಡೆಸುತ್ತಿರುವರು ). ಮೊಮ್ಮಗ ಉದಯೋನ್ಮುಖ ಮೃದಂಗ ಕಲಾವಿದ . ಇನ್ನೊಬ್ಬರು ಮಗ ಸುರತ್ಕಲ್ ಏನ್ ಐ ಟಿ ಕೆ ಯಲ್ಲಿ ಪ್ರಾಧ್ಯಾಪಕ ,ಯುವ ವಿಜ್ಞಾನಿ  ಪ್ರಶಸ್ತಿ ವಿಜೇತ ಡಾ ಮಹೇಶ .ಮಹೇಶ ಅವರ ಪತ್ನಿ ನನ್ನ ಗುರು ಕಮ್ಮಜೆ ಸುಬ್ಬಣ್ಣ ಭಟ್ಟರ ಪುತ್ರಿ . ಪ್ರಸಿದ್ಧ ಲೇಖಕ ಬಲ್ನಾಡು ಸುಬ್ಬಣ್ಣ ಭಟ್ಟರ  ಪತ್ನಿ  ಯ  ತವರುಮನೆ ಅಮೈ . ಇನ್ನೂ ಅನೇಕರು ಬೇರೆ ಬೇರೆ ಕಡೆ ಹರಡಿ ಹೋಗಿರುವರು . 

ಇವರ ಕುಟುಂಬದವರೇ  ನಾನು ಇಂದು ನೆನಪಿಸಿ ಕೊಳ್ಳುವ ಡಾ ಕೃಷ್ಣ ಮೂರ್ತಿ . ಇವರು ಅಮೈ ದಿ  (ಹಿರಿಯ )  ಸುಬ್ಬಣ್ಣ ಭಟ್ಟರ ಪುತ್ರ . ಪ್ರತಿಭಾವಂತ ರಾಗಿದ್ದ  ಇವರು  ಆ ಕಾಲದಲ್ಲಿಯೇ  ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜು ನಲ್ಲಿ ಎಂ ಬಿ ಬಿ ಎಸ ಗೆ ಪ್ರವೇಶ ಪಡೆದರು .ನನಗಿಂತ ಕೆಲ ವರ್ಷ ಕಿರಿಯರು . ಬಳ್ಳಾರಿ ಮೆಡಿಕಲ್ ಕಾಲೇಜು ನಲ್ಲಿ  ದಂತ ಕತೆ ಯಾಗಿರುವ ಡಾ ಆರ್ ಎಚ್ ಏನ್ ಸಿ ಶೆಣೋಯ್ ಅಂತಹವರು ಇದ್ದ ಕಾಲ . 

ಅಲ್ಲಿ ಸುಗಮವಾಗಿ ಅಧ್ಯಯನ ಪೂರೈಸಿ ,ಸ್ವಲ್ಪ ಸಮಯ ಉಪ್ಪಳ ಕೆ ಏನ್ ಎಚ್ ಆಸ್ಪತ್ರೆಯಲ್ಲಿ  ರೆಸಿಡೆಂಟ್ ಡಾಕ್ಟರ್ ಆಗಿ ಅನುಭವ ಪಡೆದು  ,ಅಲ್ಲಿಗೆ ಸಮೀಪ ಬಾಯಾರು ಎಂಬಲ್ಲಿ ಪ್ರಾಕ್ಟೀಸ್ ಆರಂಭಸಿದರು .ಬಾಯಾರು ಎಂಬುದು ಗ್ರಾಮೀಣ ಪ್ರದೇಶ . ಹಳ್ಳಿಗಳಿಗೆ ಎಂ ಬಿ ಬಿ ಎಸ  ವೈದ್ಯರು ಹೋಗುವುದಿಲ್ಲ ಎಂಬ  ಆರೋಪ ಇದೆ .ಅದಕ್ಕೆ ವ್ಯತಿರಿಕ್ತವಾಗಿ ಯಾವುದೇ ನಾಗರೀಕ ಸೌಲಭ್ಯ ಇದ್ದಿರದ ಸ್ಥಳದಲ್ಲಿ ಸೇವೆ ಆರಂಭಿಸಿದ್ದು ಗಮನಾರ್ಹ .ಅಲ್ಲಿಯ ಕ್ಯಾಂಪ್ಕೋ ಆವರಣದಲ್ಲಿ ಅವರ ಕ್ಲಿನಿಕ್ ಇದ್ದುದರಿಂದ  ಅವರು ಕ್ಯಾಂಪ್ಕೋ ಡಾಕ್ಟರ್ ಎಂದೇ ಜನಪ್ರಿಯ ಆಗಿದ್ದರು . ಕೆಲವು ವರ್ಷ ನಾನು ಮಂಗಳೂರಿನಲ್ಲಿ ಇದ್ದು ಉಪ್ಪಳ ಕ್ಕೆ  ವೈದ್ಯಕೀಯ ಸಂದರ್ಶನ ಕೊಡುತ್ತಿದ್ದೆ . ಅಲ್ಲಿ ಅವರ ಭೇಟಿ ಆಗುತ್ತಿತ್ತು ,ಅವರ ಕೆಲವು ರೋಗಿಗಳನ್ನು ನನ್ನ ಸಲಹೆಗೆ ಕಳುಹಿಸುವರು . 

ಮೃದು  ಮತ್ತು ಮಿತ ಭಾಷಿ . ಸರಳ ವ್ಯಕ್ತಿತ್ವ  . ಮುಂದೆ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು . ಗ್ರಾಮೀಣ ಭಾಗದ ಜನತೆಗೆ ಒಳ್ಳೆಯ ವೈದ್ಯಕೀಯ ಸೇವೆ ,

ಕಳೆದ ವರ್ಷ ಕೊರೋನಾ ಆರಂಭ ಸಮಯದಲ್ಲಿ ಇವರ ಕುಟುಂಬ ಬಂಧುಗಳ ಮನೆಗೆ ಶುಭ ಕಾರ್ಯಕ್ಕೆ  ಹೋಗಿದ್ದು ಇವರು ಒಬ್ಬರೇ ಇದ್ದರು . ಆಗ ವಿಷ ಜಂತು ಏನೋ ಕಚ್ಚಿ  ಮನೆಯಲ್ಲಿ ಪ್ರಜ್ಞಾಹೀನರಾಗಿ ಇದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮಾಡಿದರು . ಅಲ್ಲಿಯ ವೈದ್ಯರ ಪರಿಶ್ರಮ ದಿಂದ ಜೀವ ಉಳಿಯಿತು  ಆದರೂ ಪ್ರಜ್ಞೆ ಬರಲಿಲ್ಲ (ಅವರನ್ನು ನೋಡಿಕೊಂಡ ಆದಿತ್ಯ ಭರದ್ವಾಜ ನನ್ನ  ಶಿಷ್ಯನೇ ಆಗಿದ್ದು ಜಾಣ ಮತ್ತು  ನುರಿತ ವೈದ್ಯ ). ಅಲ್ಲಿಂದ ಸ್ವಲ್ಪ ಸಮಯ  ಫಿಸಿಯೋ ತೆರಪಿ ಗಾಗಿ ನಮ್ಮ ಆಸ್ಪತ್ರೆಯಲ್ಲಿ ಇದ್ದು ,ಕೆಲ ದಿನಗಳ ನಂತರ  ಮನೆಯಲ್ಲಿ  ನಿಧನರಾದರು . 

ಇವರ ಮಿತ್ರರಿಗೆ ,ಬಂಧುಗಳಿಗೆ ಮತ್ತು ಮುಖ್ಯವಾಗಿ ರೋಗಿಗಳಿಗೆ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟ . ವೈಯುಕ್ತಿಕವಾಗಿ ನನಗೆ ಕಿರಿಯ ಸಹೋದರನನ್ನು ಕಳೆದು ಕೊಂಡಂತೆ ಆಯಿತು .

ಬಾಲಂಗೋಚಿ : ಇವರನ್ನು ಮಂಗಳೂರಿಗೆ ಒಯ್ದ ಕೆಲವೇ ದಿನಗಳಲ್ಲಿ ಕೇರಳ ಗಡಿಯನ್ನು  ನಮ್ಮ ಜಿಲ್ಲಾಡಳಿತ ಬಂದ್ ಮಾಡಿತು .ಇಂತಹ ಎಷ್ಟು ರೋಗಿಗಳಿಗೆ ಕಷ್ಟ ವಾಗಿದೆಯೋ ದೇವರೇ ಬಲ್ಲ .ಕಾಸರಗೋಡಿವರು ನಮ್ಮವರು ,ಅಲ್ಲಿ ನಮ್ಮ ಅನೇಕ ಬಂಧು ಮಿತ್ರರು ಇದ್ದಾರೆ .ಮಂಗಳೂರಿನ ವಾಣಿಜ್ಯ ಅಭಿವೃದ್ಧಿಗೆ ಅವರು ಬೇಕು ,ನಮ್ಮ ಕಾಲೇಜು ಗಳಿಗೆ ಅಲ್ಲಿಯ ವಿದ್ಯಾರ್ಥಿಗಳು ಬೇಕು .ಕಷ್ಟದ ಸಮಯದಲ್ಲಿ ಎಕಾ ಏಕಿ ಅವರು ಅಸ್ಪೃಶ್ಯರಾದರು ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ