ಮೂಸೆ ಬ್ಯಾರಿಯೂ ವಿಷು ಹಬ್ಬವೂ
ಕನ್ನಡದಲ್ಲಿ ಒಂದು ಗಾದೆ ಇದೆ ಗೋಕುಲಾಷ್ಟಮಿಗೂ ಇಮಾಮ್ ಸಾಹೇಬರಿಗೂ ಏನು ಸಂಬಂಧ ?ಮೇಲ್ನೋಟಕ್ಕೆ ಇದು ಸರಿ ಎನಿಸಿದರೂ ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳ ಆಚರಣೆ ಹಬ್ಬಗಳಲ್ಲಿಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಧರ್ಮದವರ ಕೊಡುಗೆ ಇದ್ದೇ ಇದೆ . ಗೊರೂರು ರಾಮ ಸ್ವಾಮಿ ಅಯ್ಯಂಗಾರ್ ಅವರ ಹಳ್ಳಿಯ ಚಿತ್ರಣಗಳಲ್ಲಿ ಇದನ್ನು ಕಾಣ ಬಹುದು .
ನನ್ನ ಬಾಲ್ಯದಲ್ಲಿ ನಮ್ಮ ಅಂಗ್ರಿ ಮನೆಯಲ್ಲಿ ಮೂಸೆ ಬ್ಯಾರಿ ಎಂಬ ಒಕ್ಕಲು ಇದ್ದರು ,ನಮ್ಮ ಆಸ್ತಿಯ ಒಂದು ತುದಿ ,ಅದಕ್ಕೆ ನೇರಳೆ ಕೋಡಿ ಎಂದು ಕರೆಯುವರು .ನಮ್ಮ ಮನೆಯಿಂದ ಅಲ್ಲಿಗೆ ಒಂದು ಮೈಲು ಇರಬಹುದು .ಮೊದಲು ಒಬ್ಬರೇ ಒಕ್ಕಲು ಇದ್ದು ,ಆ ಮೇಲೆ ಅನಂತ ಮೂಲ್ಯ ಮತ್ತು ಪಕ್ರು ಮೂಲ್ಯ ಎಂಬುವರು ಬಂದರು . ಇವರು ಒಕ್ಕಲು ಎಂದರೆ ವಾಸಕ್ಕೆ ಮನೆ ಮಾತ್ರ ನಮ್ಮ ಜಾಗದಲ್ಲಿ .ಗೇಣಿ ಬೇಸಾಯ ಇಲ್ಲ .ಅವರ ಮನೆಯವರು ನಮ್ಮ ಮನೆಗೆ ಕೆಲಸಕ್ಕೆ ಬರುವರು .
ಮೂಸೆ ಬ್ಯಾರಿ ಅವರು ನಮ್ಮ ಗುಡ್ಡದ ಗೇರು ಬೀಜದ ಮರಗಳ ಫಸಲನ್ನು ಕೆಲವು ವರ್ಷ ಗೇಣಿಗೆ ತೆಗೆದು ಕೊಳ್ಳುವರು .ಅದರಿಂದ ಅವರಿಗೆ ಹೆಚ್ಚು ಆದಾಯ ಬಂದಂತೆ ಇಲ್ಲ ,ಆದರೂ ಬೀಡಿ ಖರ್ಚು ಬಂದಿರಬಹುದು . ನಮ್ಮ ಒಕ್ಕಲುಗಳು ,ಕೆಲಸಕ್ಕೆ ಬರುವ ಇತರರು ವಿಷು ಹಬ್ಬದ ದಿನ ಹಣ್ಣು ತರಕಾರಿ ಕಾಣಿಕೆ ತಂದು ನಮ್ಮ ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡುವರು . ಅವರಿಗೆ ಹಬ್ಬದ ಸಣ್ಣ ಕೊಡುಗೆ ಮತ್ತು ಪಲಹಾರ ಕೊಟ್ಟು ಕಳುಹಿಸುವರು . ಮೂಸೆ ಬ್ಯಾರಿ ಪ್ರತಿ ವರ್ಷ ವಿಷುವಿಗೆ ಹಸಿ (ಗೇರು )ಬೀಜ ತಂದು ಕೊಡುವರು ಮತ್ತು ಅದರ ಪಾಯಸ ವಿಶುವಿಗೆ ವಿಶೇಷ . ಆದುದರಿಂದ ಒಮ್ಮೊಮ್ಮೆ ವಿಷುವಿನ ದಿನ ಮೂಸೆ ಬ್ಯಾರಿಯವರ ನೆನಪು ಆಗುವುದು .
ಮೂಸೆ ಬ್ಯಾರಿ ಅವರಿಗೆ ಮೂರೋ ನಾಲ್ಕೋ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಮಗ .ಅವನು ನನ್ನ ಅಣ್ಣನ ಸರೀಕ ,ಆಟಕ್ಕೆ ಜತೆಗಾರ .ಮುಂದೆ ಮುಂಬಯಿ ,ಆಮೇಲೆ ವಾಣಿಜ್ಯ ಹಡಗಿನಲ್ಲಿ ಕೆಲಸಕ್ಕೆ ಹೋಗಿ ಸಂಪಾದಿಸಿ ಮಂಜೇಶ್ವರ ದಲ್ಲಿ ಮನೆ ಮಾಡಿ ಕುಟುಂಬದವರನ್ನು ಅಲ್ಲಿಗೆ ಕರೆಸಿಕೊಂಡನು .
ಮೂಸೆ ಬ್ಯಾರಿಯವರ ಒಬ್ಬರು ಮಗಳು ಕೈಜಮ್ಮ .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ನಾನು ತುಂಬಾ ಸಣ್ಣವನಿದ್ದಾಗ ಅಂಗೈ ಸುಟ್ಟು ಗಾಯ ಮಾಡಿಕೊಂಡಾಗ ನನ್ನ ಆರೈಕೆ ಮುತುವರ್ಜಿ ವಹಿಸಿ ಮಾಡಿದ್ದರು ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದರು . ಮುಂದೆ ಅವರನ್ನು ಮದುವೆ ಮಾಡಿ ನಮ್ಮದೇ ಗ್ರಾಮದ ಪೊಡಿಯ ಬ್ಯಾರಿ ಅವರಿಗೆ ಕೊಟ್ಟರು .ಪೊಡಿಯ ಬ್ಯಾರಿ ಸಮಾರಂಭ ಗಳಿಗೆ ಅಡುಗೆ ಕೆಲಸ ಮಾಡುತ್ತಿದ್ದು ,ಅವರ ನೈ ಚೋರ್ ಪ್ರಸಿದ್ದ ಆಗಿತ್ತು . ನಾವು ಶಾಲೆಗೆ ಹೋಗುವಾಗ ಕೆಲವೊಮ್ಮೆ ಅವರ ಮನೆಯ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದು ,ನಮ್ಮ ಸುಖ ದುಖ ವಿಚಾರಿಸುವರು . ಈಗಲೂ ಆಸ್ಪತ್ರೆಗೆ ಯಾರಾದರೂ ಕೈಜಮ್ಮ ಹೆಸರಿನವರು ಬಂದಾಗ ಅವರ ನೆನಪು ಆಗುವುದು ಮತ್ತು ಅವರಿಗೆ ಪ್ರತ್ಯುಪಕಾರ ಎಂದು ಕೊಂಡು ಬಂದವರ ಚಿಕಿತ್ಸೆ ಮಾಡುವೆನು .
ನನ್ನ ತರಗತಿಯಲ್ಲಿ 5 ರಿಂದ ಹತ್ತನೇ ವರೆಗೆ ಬಂದಿತಡ್ಕ ಸೂಫಿ ಬ್ಯಾರಿ ಮತ್ತು ರಾಜು ಬೆಳ್ಛಾಡ ಕೊನೇ ಬೆಂಚಿನಲ್ಲಿ (ನಾವು ಎತ್ತರ ಇದ್ದೆವು ) ಅಕ್ಕ ಪಕ್ಕದಲ್ಲಿ ಕುಳಿತು ಕೊಳ್ಳುತ್ತಿದ್ದೆವು .ಸೂಫಿ ಅವರಿಗೆ ಬಂಡಿತಡ್ಕ ದಲ್ಲಿ ಒಂದು ಅಂಗಡಿ ಇತ್ತು .ಅವನು ಅಂಗಡಿಯಿಂದ ಸಣ್ಣ ಪೆನ್ಸಿಲಿನ್ ವಯಲ್ ನಲ್ಲಿ ಪಾಚಿ ಎಣ್ಣೆ (ಆಗ ಪ್ರಸಿದ್ದ ಹೇರ್ ಆಯಿಲ್ )ತಂದು ನಮಗೆ ಕೊಡುತ್ತಿದ್ದನು . ಮದುವೆ ಮದರಂಗಿ ಸಮಯದಲ್ಲಿ ಹಾಡುತ್ತಿದ್ದ ಮೈಲಾಂಜಿ ಹಾಡುಗಳನ್ನು ಅವನು ಗುಣುಗುಣಿಸುತ್ತಿದ್ದು ಕೆಲವು ಸಾಲುಗಳು ನನಗೂ ಬಾಯಿಪಾಠ ಬರುತ್ತಿದ್ದವು .'ಮಣಿ ಮುತ್ತೆ ಮಧು ಹರಣಂ ಪೂಮೋಳೆ ,ನಿಂದೆ ಉಪ್ಪಾನ್ದೆ ಕಣಿಯಾಲೆ ತೆ ಮೋಳೆ" (ತಪ್ಪಿದ್ದರೆ ಕ್ಷಮಿಸಿ )ಇಂತಹ ಹಾಡುಗಳನ್ನು ನಾನು ಮೂಸೆ ಬ್ಯಾರಿ ಮತ್ತು ಅವರ ಮನೆಯವರ ಮುಂದೆ ಹಾಡಿ ತೋರಿಸುತ್ತಿದ್ದೆ;ಅದನ್ನು ಕೇಳಿ ಅವರು ನಗುವರು .
ಸೂಫಿ ಮುಂದೆ ಸೌದಿ ಅರೇಬಿಯಾ ಕ್ಕೆ ಹೋಗಿ ಸಂಪಾದಿಸಿ ,ತೊಕ್ಕೊಟ್ಟಿನಲ್ಲಿ ಒಂದು ವಾಹನ ವರ್ಕ್ ಷಾಪ್ ಹಾಕಿದ್ದರೆ ರಾಜು ಪೋಲೀಸು ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿ ನಿವೃತ್ತ ನಾಗಿರುವನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ