ಬೆಂಬಲಿಗರು

ಸೋಮವಾರ, ಏಪ್ರಿಲ್ 19, 2021

ಹುಬ್ಬಳ್ಳಿ ನೆನಪುಗಳು 3

                      ಹುಬ್ಬಳ್ಳಿ ನೆನಪುಗಳು 3 

ನಮ್ಮ ಕಾಲೇಜು ನ  ಸಭಾಭವನ ಆಗಿನ  ಕಾಲಕ್ಕೆ ಬಹಳ ಸುಸಜ್ಜಿತ ಎನ್ನ ಬಹುದಾಗಿತ್ತು .ಇಲ್ಲಿ  ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದ್ದು ವಿದ್ಯಾರ್ಥಿ ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸುತ್ತಿದ್ದರು .  ಬಿ ವಿ ಕಾರಂತರ ಸತ್ತವರ ನೆರಳು .ಪ್ರೊತಿಮಾ ಬೇಡಿ ಅವರ ಒಡಿಸ್ಸಿ ನೃತ್ಯ ,ಬಾಳಪ್ಪ ಹುಕ್ಕೇರಿ ,ಗುರುರಾಜ ಹೊಸಕೋಟೆ ಅವರ ಗಾಯನ ಇತ್ಯಾದಿ ಕಾರ್ಯಕ್ರಮಗಳು ನಾನು ಇದ್ದಾಗ ನಡೆದ ನೆನಪು . ಗಿರೀಶ್ ಕಾರ್ನಾಡ್ ಕೆಲವು ಕಾರ್ಯಕ್ರಮಗಳಿಗೆ ಧಾರವಾಡದಿಂದ ಪ್ರೇಕ್ಷಕರಾಗಿ ಬರುತ್ತಿದ್ದರು . 

  ಕಾಲೇಜು ನಲ್ಲಿ ಒಂದು ಕನ್ನಡ ಸಂಘ ಇದ್ದು ಕ್ರಿಯಾಶೀಲ ಆಗಿತ್ತು . ರಾಜ್ಯೋತ್ಸವ ವನ್ನು  ವಿಜೃಂಭಣೆಯಿಂದ ಆಚರಿಸುತ್ತಿದ್ದೆವು . ನಾನು ಮೊದಲನೇ ಎಂ ಬಿ ಬಿ ಎಸ ನಲ್ಲಿ ಇರುವಾಗ  ಪಾಂಡುರಂಗ ಪಾಟೀಲ್ ಎಂಬ ಪ್ರತಿಭಾವಂತ ಹಿರಿಯ ವಿದ್ಯಾರ್ಥಿ ಅದರ ಕಾರ್ಯದರ್ಶಿ ಆಗಿದ್ದರು .ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು .ಮುಂದೆ ಅವರು ಹುಬ್ಬಳ್ಳಿ ಧಾರವಾಡ ಮೇಯರ್ ಕೂಡಾ ಆಗಿದ್ದರು ಎಂದು ನೆನಪು .  ನಾನು ಎರಡೇ ವರ್ಷಕ್ಕೆ ಬಂದಾಗ ವೇದ ವ್ಯಾಸ ದೇಶಪಾಂಡೆ ಅದರ ಕಾರ್ಯದರ್ಶಿ ಮತ್ತು ನಾನು ಉಪ ಕಾರ್ಯದರ್ಶಿ . ನಮ್ಮ ಅವಧಿಯಲ್ಲಿ  ಕೆರೆಮನೆ ಮೇಳದವರಿಂದ ಶಂಭು ಹೆಗ್ಗಡೆಯವರ ನೇತೃತ್ವದಲ್ಲಿ   ಶ್ರೀ ಕೃಷ್ಣ ಲೀಲೆ ಪ್ರಸಂಗ ಆಡಿಸಿದೆವು .ಅದಕ್ಕಾಗಿ ನಾನು ಗುಣವಂತೆ ಸಮೀಪ ಅವರ ಮನೆಗೆ ಹೋಗಿ ದ್ದೆನು .ಕಾರ್ಯಕ್ರಮದ ದಿನ ಶಿವರಾಮ ಹೆಗ್ಡೆಯವರಿಗೆ ಸನ್ಮಾನ ಇಟ್ಟುಕೊಂಡಿದ್ದೆವು .. ಅವರು ತಂಡದ ಜೊತೆ ಬಂದವರು ನನ್ನ ಹಾಸ್ಟೆಲ್ ರೂಮ್ ನಲ್ಲಿಯೇ ವಿಶ್ರಾಂತಿ ತೆಗೆದು ಕೊಂಡರು ಕಾರ್ಯಕ್ರಮ ಭಾರೀ ಯಶಸ್ವಿ ಆಗಿ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದರು . 

ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆದಾಗ ಕರ್ನಾಟಕದ ಟೀಮ್ ನ್ನು ಕಾಲೇಜಿಗೆ ಕರೆಸಿ ಸನ್ಮಾನ ಮಾಡಿದರು .ಚಂದ್ರಶೇಖರ್ ,ಕಿರ್ಮಾನಿ ಯವರಂತಹ ಸ್ಟಾರ್ ಗಳನ್ನು ಹತ್ತಿರದಿಂದ ನೋಡಿದೆವು .. 

ಇದಲ್ಲದೆ  ಸಾಹಿತಿ ಬರಹ ಗಾರರಾದ  ಪಾಟೀಲ್ ಪುಟ್ಟಪ್ಪ,ಪಾ ವೆಂ ಆಚಾರ್ಯ ,ನಾಡಿಗೇರ್ ಕೃಷ್ಣರಾಯ ,ಚೆನ್ನವೀರ ಕಣವಿ ,ಸನದಿ ಮುಂತಾದವರು ,ಸಿತಾರ್ ವಾದಕ ಉಸ್ತಾದ್ ಬಾಲೇ ಖಾನ್ ,ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ್ ಮತ್ತು ಇನ್ನೂ ಅನೇಕರನ್ನು ಕಾಣುವ ಮತ್ತು ಕೇಳುವ ಅವಕಾಶ ನಮಗೆ ಕಾಲೇಜಿನಲ್ಲಿ ಲಭಿಸಿತು . 

   ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚು ಇದ್ದ ನಮ್ಮ ಕೋಲೇಜಿನ ಕಾರ್ಯಕ್ರಮಗಳಲ್ಲಿ ಬಹಳ ಸಂಭ್ರಮ ಮತ್ತು ಉತ್ಸಾಹ . ಅವರ ಜವಾರಿ ಪ್ರತಿಕ್ರಿಯೆಗಳು  ಆಡಿಟೋರಿಯಂ ನಲ್ಲಿ ಪ್ರತಿದ್ವಂದಿಸುವುದು . ಉದಾ ಹಾಂಗ್ ಹಾಡ್ಲೆ ಮಗನ , ಇತ್ಯಾದಿ . 

ಅಧ್ಯಾಪಕ ವಿದ್ಯಾರ್ಥಿಗಳ ನಡುವೆ ಚರ್ಚಾ ಕೂಟಗಳೂ ನಡೆಯುತ್ತಿದ್ದವು .ದಯಾ ಮರಣ ಬೇಕೇ ಬೇಡವೇ ಎಂಬ ಚರ್ಚೆ ಇನ್ನೂ ನೆನಪಿನಲ್ಲಿ ಇದೆ . ನಾನು ಭಾಷಣ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಭಾಗವಾಸಿಸುತ್ತಿದ್ದು .ಒಮ್ಮೆ  ಸಾಕಷ್ಟು ಸ್ಪರ್ಧಾಳು ಗಳು ಇಲ್ಲಾ ಎಂದು ಒಂದು ಭಾವ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವನ್ನೂ  ಪಡೆದಿದ್ದೆನು . 

ಕಾಲೇಜಿಗೆ ಸಮೀಪ ದೇಶಪಾಂಡೆ ನಗರದಲ್ಲಿ ಸವಾಯಿ ಗಂಧರ್ವ ಹಾಲ್ ಇದ್ದು ಅಲ್ಲಿ ಒಳ್ಳೆಯ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು . 

ಶಿವರಾಮ ಕಾರಂತರಿಗೆ  ಜ್ಞಾನ ಪೀಠ ಪ್ರಶಸ್ತಿ ಬಂದಾಗ ಹುಬ್ಬಳ್ಳಿ ಧಾರವಾಡ ಗಳಲ್ಲಿ ಅವರಿಗೆ ಸನ್ಮಾನ ಏರ್ಪಡಿಸಿದ್ದರು .ಅವರನ್ನು ನಮ್ಮ ಕಾಲೇಜಿಗೆ ಕೂಡಾ ಕರೆಸಲು ನಾವು ಪ್ರಯತ್ನ ಮಾಡಿದೆವು .ಕು ಶಿ ಹರಿದಾಸ ಭಟ್ಟರು ಅವರ ಸನ್ಮಾನ ಯಾತ್ರೆಯ ಸಂಗಾತಿ ಯಾಗಿದ್ದು ,ಅವರನ್ನು ಹೋಟೆಲ್ ನಲ್ಲಿ ಕಾಣ  ಹೋದೆವು .ಅಲ್ಲಿ ಅವರು ಮತ್ತು ಕರ್ನಾಟಕ ಬ್ಯಾಂಕ್ ಛೇರ್ಮನ್ ಅಡಿಗರು ಸಂಭಾಷಣೆಯಲ್ಲಿ ನಿರತರಾಗಿದ್ದರು .ಅಡಿಗರು ಬ್ಯಾಂಕ್ ಕೆಲಸಕ್ಕೆ ಬಂದವರು ಅದೇ ಹೋಟೆಲ್ ನ ಬೇರೆ ರೂಮ್ ನಲ್ಲಿ ಇದ್ದವರು . ಆ ಹೋಟೆಲ್  ಸಾಧಾರಣ ಎನ್ನ ಬಹುದಾದ ಹೋಟೆಲ್ ,ಆದರೂ ಒಂದು ಬ್ಯಾಂಕ್ ನ ಛೇರ್ಮನ್ ಅನಾವಶ್ಯಕ ಆಡಂಬರಕ್ಕೆ ಖರ್ಚು ಮಾಡಲು ಹೋಗುತ್ತಿರಲಿಲ್ಲ ಎಂದು ಇದನ್ನು ಬರೆದಿರುವೆನು . 

ಹುಬ್ಬಳಿಯ ಅವಳಿ ನಗರ ಧಾರವಾಡ . ಸಾಹಿತ್ಯ ಸಂಸ್ಕೃತಿ ಕೇಂದ್ರ . ಧಾರವಾಡದಲ್ಲಿ ನೀವು ಒಂದು ಕಲ್ಲು ಎಸೆದರೆ ಅದು ಒಂದು ಸಾಹಿತಿಯ ಮನೆ ಮೇಲೆ ಬೀಳುವುದು ಎಂಬ ಹೇಳಿಕೆ ಇತ್ತು .ಈಗ ಇದನ್ನೇ ಬೆಂಗಳೂರು ಮತ್ತು ಟೆಕ್ಕಿ ಗಳಿಗೆ ಹೇಳುತ್ತಾರೆ . 

ಪ್ರಸಿದ್ಧ ವಿದ್ಯಾವರ್ಧಕ ಕೇಂದ್ರದಲ್ಲಿ ನಿಯಮಿತವಾಗಿ ಸಾಹಿತ್ಯ  ಚಟುವಟಿಕೆಗಳು ನಡೆಯುತ್ತಿದ್ದು ನಾನು ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ .ಆಗ ಚಂದ್ರಶೇಖರ ಪಾಟೀಲ್ ಕಾರ್ಯದರ್ಶಿ ಆಗಿದ್ದು .ಅಡಿಗ ,ಲಂಕೇಶ್ ,ಅನಂತ ಮೂರ್ತಿ ಅವರಂತಹ ಹಿರಿಯ ಲೇಖಕರನ್ನು ಕಂಡು ಕೇಳುವ ಭಾಗ್ಯ ಸಿಕ್ಕಿತ್ತು . ಜೀವಂತ ಚರ್ಚೆಯೂ  ನಡೆಯುತ್ತಿತ್ತು .ಧಾರವಾಡದಲ್ಲಿ ಕಲಾಭನನ ಎಂಬ ಹೊಸ ಸಭಾ ಭವನ ನಿರ್ಮಾಣ ಆಯಿತು .

ಗಣೇಶ ಹಬ್ಬವನ್ನು ಭಾರೀ ಉತ್ಸಾಹದೊಡನೆ ಅಚ್ಚರಿಸುತ್ತಿದ್ದು ಎಲ್ಲಾ ಹಾಸ್ಟಲ್ ಮತ್ತು ಕಾಲೇಜ್ ನಲ್ಲಿ ಗಣಪತಿ ಇಡಲಾಗುತ್ತಿತ್ತು . ವರ್ಣ ಮಯ ಆಕರ್ಷಕ ರಂಗೋಲಿಗಳನ್ನು  ರಚಿಸುತ್ತಿದ್ದರು .ಹುಡುಗರು  ಹುಡುಗಿಯರನ್ನೂ ಮೀರಿ ರಂಗೋಲಿ ಹಾಕುವುದನ್ನು ನಾನು ಅಲ್ಲಿಯೇ ಕಂಡದ್ದು .  ರಂಗೋಲಿ ಸ್ಪರ್ಧೆಯೂ ಇರುತ್ತಿದ್ದು ಹುಡುಗರು ಅನೇಕ ಬಹುಮಾನ ಬಾಚಿ ಕೊಳ್ಳುತ್ತಿದ್ದರು . ಕೊನೆಯ ದಿನ ಎಲ್ಲಾ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಒಯ್ದು ವಿಸರ್ಜನೆ ಮಾಡುತ್ತಿದ್ದರು.

ಹೋಳಿ ಹಬ್ಬ ಇನ್ನೊಂದು ಸಾರ್ವಜನಿಕ ಹಬ್ಬ .ನನಗೆ ಕೆಲವೇ ಜತೆ ಬಟ್ಟೆಗಳು ಇದ್ದುದರಿಂದ ಅದನ್ನು ತಪ್ಪಿಸಿ ಕೊಳ್ಳುತ್ತಿದ್ದೆ . ಪುಣ್ಯಕ್ಕೆ ಹುಬ್ಬಳ್ಳಿಯ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ದಿನ ಹೋಳಿ  ಆಚಚರಿಸುತ್ತಿದ್ದರು . ಕೆ ಎಂ ಸಿ ಯ ದಿನ ಬೇರೆ ಕಡೆ ಹೋಗಿ ಸಂಜೆ ಬರುತ್ತಿದ್ದೆ . ಸಂಜೆ ಎಲ್ಲಾ ಹುಡುಗರು ಕಾಮ ದಹನ ಮಾಡುತ್ತಾ (ಆ ದಿನ ಮಾತ್ರ ಹಾಡುವ ,ಅಶ್ಲೀಲ ವೆನಿಸ ಬಹುದಾದ )ಹಾಡು ಹಾಡಿ ಸಂತೋಷ ಪಡುವರು .ರಾತ್ರಿ ಪಕ್ಕದ  ಟಾಕಿಸ್ ನಲ್ಲಿ ಉಚಿತ ಇಂಗ್ಲಿಷ್ ಸಿನೆಮಾ ನೋಡುವರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ