ಒಂದು ಪ್ರಯಾಣದ ನೆನಪು
೧೯೮೨ ಇರಬೇಕು . ಯು ಪಿ ಎಸ ಸಿ ಸಂಯುಕ್ತ ವೈದ್ಯಕೀಯ ಸೇವೆ ರಿಟನ್ ಟೆಸ್ಟ್ ಪಾಸ್ ಆಗಿ ಇಂಟರ್ವ್ಯೂ ಗೆ ದೆಹಲಿಗೆ ಕರೆದಿದ್ದರು .ಬೆಂಗಳೂರಿನಿಂದ ಗ್ರಾಂಡ್ ಟ್ರಂಕ್ ಎಕ್ಷ ಪ್ರೆಸ್ ರೈಲಿನಲ್ಲಿ ಹೋಗುವದು .ಈ ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮದ್ಯಾಹ್ನ ಚೆನ್ನೈಗೆ ತಲುಪುವುದು .ಅಲ್ಲಿಂದ ನಾಲ್ಕು ಗಂಟೆಗಳ ತರುವಾಯ ಡೆಲ್ಲಿಯತ್ತ . ಇಷ್ಟು ದೂರ ಒಬ್ಬನೇ ಹೋಗುವುದು ಮೊದಲ ಬಾರಿಯಾದ್ದರಿಂದ ಆತಂಕ .
ಗ್ರ್ಯಾಂಡ್ ಟ್ರಂಕ್ ಎಕ್ಷ ಪ್ರೆಸ್ ಬಹು ಉದ್ದದ ರೈಲು . ನನ್ನ ಕಂಪಾರ್ಟ್ಮೆಂಟ್ ನಲ್ಲಿ ಕುಂದಾಪುರ ಮೂಲದ ಒಬ್ಬ ಯುವಕ ಇದ್ದರು . ಅವರು ಬೆಂಗಳೂರಿನಲ್ಲಿ ಹೆಗ್ಡೆ ಅಂಡ್ ಗೋಲೆ ಕೈ ಗಡಿಯಾರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು ಬೇರೊಂದು ಕಂಪನಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗುವವರು . ಆಗೆಲ್ಲಾ ಸಹ ಪ್ರಯಾಣಿಕರನ್ನು ಈಗಿನಂತೆ ಸಂದೇಹಿಸುತ್ತಿರಲಿಲ್ಲ . ಊಟ ತಿಂಡಿಗಳನ್ನು ಹಂಚಿ ತಿನ್ನುತ್ತಿದ್ದರು .ಅಲ್ಲದೆ ಸಹ ಪ್ರಯಾಣಿಕರಿಗೆ ತಮ್ಮ ವಿಳಾಸ ಫೋನ್ ನಂಬರ್ ಕೊಟ್ಟು ಸಂಪರ್ಕ ಇಟ್ಟು ಕೊಳ್ಳಲು ಹೇಳುತ್ತಿದ್ದರು . ಗ್ರಾಂಡ್ ಟ್ರಂಕ್ ರೈಲಿನಲ್ಲಿ ಲೈಬ್ರರಿ ಕೂಡಾ ಇತ್ತು ,ಸಮಯ ಕಳೆಯಲು ಪುಸ್ತಕ ಎರವಲು ಕೊಡುತ್ತಿದ್ದರು .ಪ್ಯಾಂಟ್ರಿ ಕಾರ್ ಗೆ ಹೋಗಿ ನಮಗೆ ಬೇಕಾದದ್ದನ್ನು ತಿನ್ನ ಬಹುದಾಗಿತ್ತು .ಇದೆಲ್ಲಾ ನನಗೆ ಹೊಸದು.
ಆಗ ತಾನೇ ಏಶಿಯನ್ ಗೇಮ್ಸ್ ಗಾಗಿ ಹೊಸ ಹೋಟೆಲ್ ಗಳು ಹುಟ್ಟಿ ಕೊಂಡಿದ್ದು ಟ್ರೈನ್ ನಲ್ಲಿ ಪರಿಚಯ ಆದ ಯುವಕ ಮತ್ತು ನಾನು ಸೇರಿ ಹೊಸ ದಿಲ್ಲಿ ರೈಲ್ವೆ ಸ್ಟೇಷನ್ ಬಳಿ ಒಂದು ರೂಮ್ ಪಡೆದೆವು .
ಟಿ ಟಿ ಕೆ ಮ್ಯಾಪ್ ಹಿಡಿದು ಸ್ಥಳಗಳ ಅನ್ವೇಷಣೆ . ಕಿಲೋಮೀಟರ್ ದೂರದಲ್ಲಿ ಕನ್ನಾಟ್ ಪ್ಲೇಸ್ ಇತ್ತು .ಅಲ್ಲಿಯ ಮದ್ರಾಸ್ ಕೆಫೆ ಯಲ್ಲಿ ಊಟ ತಿಂಡಿ .ನನ್ನ ಇಂಟರ್ವ್ಯೂ ಇದ್ದ ಧೋಲ್ಪುರ್ ಹೌಸ್ ಗೆ ಕೂಡಾ ನಡೆದೇ ಹೋದೆನು .ಯು ಪಿ ಎಸ ಸಿ ಸಂದರ್ಶನ ಬಹಳ ಚೆನ್ನಾಗಿ ,ವೈಜ್ಞಾನಿಕ ರೀತಿಯಲ್ಲಿ ನಡೆಸುತ್ತಾರೆ .ಅದರಲ್ಲಿ ಸಾಮಾನ್ಯ ಮತ್ತು ವಿಷಯ ತಜ್ಞರು ಇರುತ್ತಾರೆ . ಉದ್ಯೋಗಾರ್ಥಿಯನ್ನು ಕುಶಲ ಸಂಭಾಷಣೆಗಳಿಂದ ಮಾತನಾಡಿಸಿ ಪರಿಚಿತ ವಾತಾವರಣ ಸೃಷ್ಟಿ ಮಾಡಿ ಆಮೇಲೆ ಅವನ ವಿಷಯದ ಮೇಲೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿ ಅವನಲ್ಲಿ ಏನು ಜ್ಞಾನ ಇದೆ ಎಂದು ಅಳೆಯುವರು . ನಮಗೇನು ತಿಳಿದಿಲ್ಲಾ ಎಂಬುದನ್ನು ತೋರಿಸುವ ಮನೋಭಾವ ಇಲ್ಲ . ನಾನು ಜೀವ ಮಾನದಲ್ಲಿ ಎದುರಿಸಿದ ಅತ್ಯುತ್ತಮ ಸಂದರ್ಶನ ಎನ್ನ ಬಹುದು .
ನನ್ನ ಮಿತ್ರರೂ ಅವರ ಸಂದರ್ಶನ ಮುಗಿಸಿ ,ನಾವು ಜತೆಗೇ ವಾಪಸ್ಸು ಆದೆವು .
ಇದನ್ನು ಬರೆಯುವ ಉದ್ದೇಶ ಕಾಲ ಹೇಗೆ ಬದಲಾಗಿದೆ . ಈಗ ಸಹ ಪ್ರಯಾಣಿಕರಲ್ಲಿ ಮಾತನಾಡಲು ಅಂಜುತ್ತೇವೆ . ಅವರು ಕೊಟ್ಟುದನ್ನು ತಿನ್ನುವ ಅಥವಾ ಕುಡಿಯುವ ಮಾತೇ ಇಲ್ಲ .ಅಪನಂಬಿಕೆ ,ಅನಾದರ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ