ಹಿಂತಿರುಗಿ ನೋಡಿದಾಗ
ನಾವು ವೈದ್ಯಕೀಯ ಕಲಿಯುವಾಗ ಎಂ ಬಿ ಬಿ ಎಸ್ ನಮ್ಮ ಗುರಿ ಆಗಿತ್ತು . ಆಮೇಲೆ ಎಲ್ಲಿಯಾದರೂ ಪ್ರಾಕ್ಟೀಸ್ ಮಾಡುವುದು ,ಅಥವಾ ಸರಕಾರಿ ಸೇವೆ . ಪಿ ಜಿ ಬಗ್ಗೆ ಆಲೋಚನೆ ಇರಲಿಲ್ಲ .ಇಂಟರ್ನ್ ಆಗಿದ್ದಾಗ ಪಿ ಜಿ ಗೆ ಓದುವುದು ಅಂತ ಇಲ್ಲದೆ ರೋಗಿಗಳ ಚಿಕಿತ್ಸೆ ಬಗ್ಗೆ ಕಲಿಯುವುದರಲ್ಲಿಯೇ ಆಸಕ್ತಿ .ಆದ ಕಾರಣ ಹೆರಿಗೆ ,ಸಣ್ಣ ಶಸ್ತ್ರ ಚಿಕಿತ್ಸೆ ,ಮಕ್ಕಳ ರೋಗ ಇತ್ಯಾದಿ ಎಲ್ಲಾ ವಿಭಾಗಗಳಲ್ಲಿಯೂ ತಕ್ಕ ಮಟ್ಟಿಗೆ ಅನುಭವ ಮತ್ತು ಆತ್ಮ ವಿಶ್ವಾಸ ಇರುತ್ತಿತ್ತು . ಎಂ ಬಿ ಬಿ ಎಸ್ ಫೀಸಿಶಿಯನ್ ಅಂಡ್ ಸರ್ಜನ್ ಎಂದು ಹಾಕಿ ಕೊಳ್ಳಲು ನಿಜಕ್ಕೂ ಅರ್ಹರಾಗಿದ್ದೆವು .ಈಗ ಎಲ್ಲರೂ ಪಿ ಜಿ ಮಾಡುವ ತರಾತುರಿಯಲ್ಲಿಯೇ ಇರುತ್ತಾರೆ ಮತ್ತು ಹೌಸ್ ಸರ್ಜನ್ ಆಗಿರುವಾಗ MCQ ಬಿಡಿಸುವುದರಲ್ಲಿಯೇ ಸಮಯ ಕಳೆಯುವರು .
ನಮ್ಮ ವಿದ್ಯಾರ್ಥಿ ಕಾಲದಲ್ಲಿ ರೇಡಿಯೋಲೋಜಿ ಯಲ್ಲಿ ಎಕ್ಸ್ ರೇ ಮಾತ್ರ ಇದ್ದು ಬಹಳ ಮಂದಿ ಪ್ರಾಧ್ಯಾಪಕರು ರೇಡಿಯೇಶನ್ ನಿಂದ ಕಾನ್ಸರ್ ರೋಗಕ್ಕೆ ತುತ್ತಾಗುತ್ತಿದರು. ಉನ್ನತ ಅಭ್ಯಾಸಿಗಳಿಗೆ ಆಕರ್ಷಕ ವಿಷಯ ಆಗಿರಲಿಲ್ಲ .ಈಗ ಬೇರೆ ಬೇರೆ ತರಹದ ಸ್ಕ್ಯಾನ್ ಗಳು ಬಂದಿದ್ದು ಈ ವಿಭಾಗ ಅತ್ಯಧಿಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ . ಮೊದಲು ಸ್ತ್ರೀ ರೋಗ ತಜ್ನರು ಕೈಯಿಂದಲೇ ಗರ್ಭಸ್ಥ ಶಿಶುವಿನ ಬಗ್ಗೆ ತಿಳಿದು ಕೊಳ್ಳಬೇಕಿತ್ತು .ಅದೇ ರೀತಿ ಹೃದ್ರೋಗ ದಲ್ಲಿ ಎಕೋ ಕಾರ್ಡಿಯೋ ಗ್ರಫಿ ಎಂಬ ಸ್ಕ್ಯಾನ್ ನಿಂದ ಕವಾಟಗಳ ,ಹೃದಯ ಮಾಂಸ ಖಂಡಗಳ ಬಗ್ಗೆ ನಿಮಿಷಾರ್ಧದಲ್ಲಿ ನೋಡಿ ತಿಳಿಯ ಬಹುದು .ಹಿಂದೆ ಸ್ಟೇತೋಸ್ಕೋಪ್ ಮಾತ್ರ ಇದ್ದಾಗ ನಾವು ಹೃದಯದ ವಿಶೇಷ ಮರ್ಮರಗಳ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿದ್ದೆವು .
ಎಚ್ ಐ ವಿ ಬಂದ ಮೇಲೆ ಸಿರಿಂಜ್ ಗಳನ್ನು ಕುದಿಸಿ ಮರು ಉಪಯೋಗಿಸುವುದು ನಿಂತು ಹೋಗಿ ದಿಸ್ಪೊಸಿಬಲ್ ಸಿರಿಂಜ್ ಬಂದುವು .ಹಿಂದಿನ ಕಾಲದ ವೈದ್ಯರು ಇಕ್ಕುಳು ಉಪಯೋಗಿಸಿ ಪಿಸ್ಟನ್ ಮತ್ತು ಸೂಜಿ ಸಿರಿಂಜ್ ಗೆ ಸಿಕ್ಕಿಸುವ ದೃಶ್ಯ ಮರೆಯಾಯಿತು .ಮಕ್ಕಳು ಮೊದಲಿನಂತೆ ಇಂಜೆಕ್ಷನ್ ಗೆ ಅಂಜುವುದಿಲ್ಲ . ರಕ್ತದಾನ ಆಗ ಸುಲಭ ಇತ್ತು .ತುರ್ತು ಸಂದರ್ಭದಲ್ಲಿ ಗ್ರೂಪ್ ಕ್ರಾಸ್ ಮ್ಯಾಚಿಂಗ್ ಮಾಡಿ ನಾವೇ ರಕ್ತ ಕೊಡುತ್ತದ್ದೆವು .ಈಗ ಎಚ್ ಐ ವಿ .ಹೆಪಾಟೈಟಿಸ್ ಇತ್ಯಾದಿ ರೋಗಗಳು ಇವೆಯೇ ಎಂದು ನೋಡಿಯೇ ಕೊಡ ಬೇಕಾಗಿದೆ . ಸರ್ಜರಿಗೆ ಮೊದಲು ಕೂಡಾ ಈ ಟೆಸ್ಟ್ ಗಳನ್ನು ಮಾಡಬೇಕಿದ್ದು ಖರ್ಚು ಹೆಚ್ಚು ಮಾಡುತ್ತದೆ .
ಹಿಂದೆ ಅಧ್ಯಾಪಕರನ್ನು ಭಯ (ಇದು ಜಾಸ್ತಿ ) ಭಕ್ತಿಯಿಂದ ನೋಡುತ್ತಿದ್ದೆವು .. ಕೆಲವರಮೇಲೆ ಪ್ರೀತಿಯೂ ಇರುತ್ತಿತ್ತು . ಪರೀಕ್ಷೆಯಲ್ಲಿ ಪಾಸ್ ಆಗುವುದು ತುಂಬಾ ಕಷ್ಟವಲ್ಲದಿದ್ದರೂ ಸುಲಭವಾಗಿರಲಿಲ್ಲ ,ಅದೃಷ್ಟ ಬೇಕಿತ್ತು . ಈಗ ಫೇಲ್ ಆಗುವುದಕ್ಕೇ ಕಷ್ಟ ಪಡ ಬೇಕಾಗುವುದು .
ಬಹಳ ಬೇಸರದ ವಿಚಾರ ಆಗಲೂ ಈಗಲೂ ನಮ್ಮ ದೇಶದಲ್ಲಿ ತಮ್ಮ ವಿದ್ಯಾರ್ಥಿ ಒಬ್ಬ ಪ್ರಾಮಾಣಿಕ ,ಬುದ್ದಿವಂತ ಮತ್ತು ಶ್ರಮಜೀವಿ ಎಂದು ಪ್ರಾಧ್ಯಾಪಕನಿಗೆ ತಿಳಿದಿದ್ದರೂ ಅವನನ್ನು ಉನ್ನತ ವಿದ್ಯಾಭ್ಯಾಸಕ್ಕೆ ಚುನಾಯಿಸುವ ಹಕ್ಕು ಅವನಿಗೆ ಇರುವುದಿಲ್ಲ .ಒಂದೋ ಹಣ ಇಲ್ಲವೇ ಎಂಟ್ರನ್ಸ್ ಪರೀಕ್ಷೆಯ ಅಂಕ ಇದು ಮಾತ್ರ ನಿರ್ಧಾರಕ . ಬುದ್ದಿವಂತ ನಾದವನು ಪ್ರಾಮಾಣಿಕ ಇರ ಬೇಕೆಂದಿಲ್ಲ ,ಅಥವಾ ಇದ್ದರೂ ಶ್ರಮ ಪಟ್ಟು ಕೆಲಸ ಮಾಡುವವನು ಇರಲಾರನು .ವೈದ್ಯಕೀಯ ರಂಗದಲ್ಲಿ ಇವೆಲ್ಲಾ ಬಹಳ ಮುಖ್ಯ.
ನಮ್ಮ ಪ್ರಾಧ್ಯಾಪಕರಲ್ಲಿ ಕೈ ಬೆರಣಿಕೆ ಯಷ್ಟು ಮಂದಿಗೆ ಮಾತ್ರ ಕಾರ್ ಇತ್ತು .ಇನ್ನು ಕೆಲವರಲ್ಲಿ ಸ್ಕೂಟರ್ . ಉಳಿದವರು ನಡೆದೇ ಮತ್ತು ಬಸ್ ನಲ್ಲಿ ಸಂಚರಿಸುತ್ತಿದ್ದರು . ಆದರೂ ಅವರು ಹೆಚ್ಚು ತೃಪ್ತ ರಂತೆ ತೋರುತ್ತಿದ್ದರು . ಈಗ ವಿದ್ಯಾರ್ಥಿಗಳೇ ದೊಡ್ಡ ಕಾರ್ ಗಳಲ್ಲಿ ಬರುವರು . ಸಂಪತ್ತು ಹೆಚ್ಚಿ ದಂತೆ ಮಾನವೀಯ ಸ್ಪರ್ಶ ಮತ್ತು ಸಂಬಂಧಗಳು ಭಾಗಶಃ ಮರೆಯಾದವು .ಗುರು ಶಿಷ್ಯ ಸಂಬಂಧ ವ್ಯಾವಹಾರಿಕ ಆಗಿದೆ . .
ರೋಗಿ ವೈದ್ಯರ ಬಾಂಧವ್ಯ ಕೆಟ್ಟಿರುವುದು ಎಲ್ಲರಿಗೂ ತಿಳಿದ ವಿಷಯ .ವೈದ್ಯ ವೈದ್ಯರ ನಡುವೆ ಸುಖ ದುಖ ,ವಿಚಾರ ವಿನಿಮಯ ಕಡಿಮೆ ಆಗಿದೆ .ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೂ ಸಂಪರ್ಕ ಕಡಿಮೆ ಆಗಿದೆ .
ಕೆ ಎಂ ಸಿ ಹುಬ್ಬಳ್ಳಿಗೆ ಇತ್ತೀಚಿಗೆ ಭೆಟ್ಟಿ ನೀಡಿದ್ದೇನೆ .ನನ್ನ ಮನದಲ್ಲಿ ಚಿರಸ್ಥಾಯಿ ಆಗಿರುವ ಅದು ನನ್ನನ್ನು ಗುರುತಿಸುವುದಿಲ್ಲ . ವೈದ್ಯ ಶಾಸ್ತ್ರಕ್ಕೆ ಜೀವ ತುಂಬಿದ ಅನಾಟಮಿ ವಿಭಾಗದ ಶವಗಳೇ , ನಮ್ಮನ್ನು ಅಜ್ಞಾನ ಕೂಪದಿಂದ ಎತ್ತಿದ ಫಿಸಿಯೋಲಾಜಿ ಪ್ರಯೋಗದ ಮಂಡೂಕಗಳೇ ,ವೈದ್ಯ ಶಾಸ್ತ್ರವ ನಮಗೆ ಅರೆದು ಇಳಿಸಿದ ಗುರುಗಳೇ , ನಿಮ್ಮ ಸಂಟಕದೊಡನೆ ನಮ್ಮನ್ನೂ ಸಹಿಸಿ ,ರೋಗ ನಿದಾನ ಕಲಿಯಲನುವು ಮಾಡಿದ ರೋಗಿಗಳೇ ,ನಮ್ಮ ಕಾಲೇಜು ತುಂಟಾಟದ ಹುಡುಗರೇ ,ಸೀರೆ ಉಟ್ಟ ಸಹಪಾಠಿ ಬೆಡಗಿಯರೇ ,ಸದಾ ವರ್ಣಮಯ ತೋಟದ ಹೂಗಳೇ,ಸಿ ಬೀ ಟಿ ಸಿಟಿ ಬಸ್ ಗಳೆ ಎಲ್ಲಿ ಹೋದಿರಿ ನೀವು ನಿಮ್ಮವ ಬಂದಿರುವೆನು ,ನನ್ನ ಗುರುತಿಸೆಯಾ ಎಂದು ನನ್ನ ಹೃದಯ ಕೂಗುವುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ