ಬೆಂಬಲಿಗರು

ಗುರುವಾರ, ಏಪ್ರಿಲ್ 29, 2021

ಹುಬ್ಬಳ್ಳಿ ದಿನಗಳು 10

                            ಹುಬ್ಬಳ್ಳಿ ದಿನಗಳು10

 ನಾನು ಕಾಲೇಜ್ ಸೇರುವಾಗ ತುರ್ತು ಪರಿಸ್ಥಿತಿ ಜ್ಯಾರಿಯಲ್ಲಿ ಇದ್ದು ಯಾವುದೇ ವಿದ್ಯಾರ್ಥಿ ಸಂಘಗಳಿಗೆ ಅವಕಾಶ ಇರಲಿಲ್ಲ .1977 ರ ನಂತರ ಅವುಗಳಿಗೆ ಅವಕಾಶ ಮಾಡಿಕೊಡಲಾಯಿತು .ಶ್ರೀ ಬೆಲ್ಲದ ಎಂಬವರು ಕಾರ್ಯ ದರ್ಶಿ ಅದರೆಂದು ನೆನಪು .ಸಂಘದ ಉದ್ಘಾಟನೆಗೆ ಬೆಳ್ಳಾರಿ ಮೆಡಿಕಲ್ ಕಾಲೇಜ್ ನಲ್ಲಿ ಪ್ರಿನ್ಸಿಪಲ್ ಆಗಿದ್ದ ಪ್ರಸಿದ್ದ ಸರ್ಜನ್ ಪ್ರಾಧ್ಯಾಪಕ ಡಾ ಆರ್ ಎಚ್ ಎನ್ ಶೆಣಯ್  ಅವರು ಮುಖ್ಯ ಅತಿಥಿ ಯಾಗಿದ್ದರು .ಕಾಲೇಜ್ ಡೇ ಗೆ ಆಗ ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಜಿ ಕೆ ಗೋವಿಂದ ಭಟ್ ಮತ್ತು ಅವರ ಸಹೋದ್ಯೋಗಿ ಸಭಾಹಿತ (ಸೀನಿಯರ್ )ಮುಖ್ಯ ಅತಿಥಿ ಯನ್ನಾಗಿ ಕರೆಸಿದ್ದರು .ಆಗಿನ್ನೂ ಸರಕಾರಿ  ಕಾಲೇಜ್ ಗಳಲ್ಲಿ ಜನ ಪ್ರತಿನಿಧಿಗಳನ್ನು ಖಡ್ಡಾಯವಾಗಿ ಕರೆಯಬೇಕು ಎಂಬ ಈಗಿನ ಪ್ರೋಟೋಕಾಲ್ ಇದ್ದಂತಿಲ್ಲ .ಈ ಅವಧಿಯಲ್ಲಿ  ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿಯಾಗಿ ಶ್ರೀ ಶಿವಾನಂದ ಕುಬಸದ್ ಎಂಬ ಸೀನಿಯರ್ ಇದ್ದರು.ಅವರು ಬಹುಮುಖ ಪ್ರತಿಭೆಯವರಾಗಿದ್ದು ಈಗ ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂದಿಸಿದ ಒಳ್ಳೆಯ ಲೇಖನಗಳನ್ನು ಬರೆಯುತ್ತಿರುತ್ತಾರೆ .

ನಂತರದ ಅವಧಿಗೆ ಶ್ರೀ ಮಾಲಿ ಪಾಟೀಲ್ ಎಂಬ ನನ್ನ ಸಹಪಾಠಿ ಕಾರ್ಯದರ್ಶಿ ಆದರು ಮತ್ತು ಮತ್ತೊಬ್ಬ ಪ್ರತಿಭಾವಂತ ಮಿತ್ರ ಶ್ರೀ ವಿವೇಕ ವಾಣಿ
ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಆದರು .ಮುಂದಿನ ಕಾಲೇಜ್ ಡೇ ಗೆ ಆಗ ಕೇಂದ್ರ ರಾಸಾಯನಿಕ ಖಾತೆ ಸಚಿವರಾಗಿದ್ದ ಶ್ರೀ ವೀರೇಂದ್ರ ಪಾಟೀಲ್  ಮತ್ತು ಗುಲ್ಬರ್ಗಾ ಮೆಡಿಕಲ್ ಕಾಲೇಜ್ ಮುಖ್ಯಸ್ಥ ಶ್ರೀ ಜವಳಿ ಯವರು ಅತಿಥಿಗಳು .

ಕಾಲೇಜ್ ನಲ್ಲಿ ಬಹುಮುಖ ಪ್ರತಿಭೆಯ ಅನೇಕ ವಿದ್ಯಾರ್ಥಿಗಳು ಇದ್ದರು .ನಮ್ಮದೇ ಒಂದು ಆರ್ಕೇಸ್ತ್ರಾ ಇತ್ತು .ನನ್ನ ತರಗತಿಯ ಸುನೀಲಾ ಜೋತಾಡಿ ಮತ್ತು ಪರಿಮಳ ಒಳ್ಳೆಯ ಹಾಡುಗಾರ್ತಿ ಗಳಾಗಿ ಹೆಸರು ಪಡೆದಿದ್ದರು . ಮಿತ್ರ ಹರೀಶ್ ಕುಮಾರ್ ಶೆಟ್ಟಿ ಇಂಗ್ಲಿಷ್ ನಲ್ಲಿ  ಚೆನ್ನಾಗಿ ಭಾಷಣ ಮಾಡುತ್ತಿದ್ದು ,ಅವರು ಉಪಯೋಗಿಸಿದ ಶಬ್ದಗಳ ಅರ್ಥ ನಾವು ನಿಘಂಟುವಿನಲ್ಲಿ ನೋಡಿ ತಿಳಿಯುತ್ತಿದ್ದೆವು .

ನಮ್ಮ ನಾಟಕಗಳು ಉತ್ತಮ ಮಟ್ಟದ್ದಾಗಿ ಇರುತ್ತಿದ್ದು ,ವಿವೇಕ ವಾಣಿ ಸ್ವತಃ ಒಂದನ್ನು  ಯಶಸ್ವಿಯಾಗಿ ನಿರ್ದೇಶಿಸಿದ ನೆನಪು .ಪ್ರದೀಪ್ ಹನುಮಸಾಗರ್ ಎಂಬ ನಮ್ಮ ಸೀನಿಯರ್ ನಾಟಕ ,ಸಂಗೀತ  ಮತ್ತು ಕಲೆ ಎಲ್ಲಾ ರಂಗಗಳಲ್ಲಿ ಮಿಂಚುತ್ತಿದ್ದ ವಿಶೇಷ ಪ್ರತಿಭೆ .ಇಕ್ಬಾಲ್ ಮಣಿಯಾರ್ ಎಂಬ ಜೂನಿಯರ್ ಹಾರ್ಮೋನಿಯಂ ನುಡಿಸುತ್ತಿದ್ದು ,ಪಿ ಗಣೇಶ್ ಒಳ್ಳೆಯಗಾಯಕ .ಧಾರವಾಡದಲ್ಲಿ ಈಗ ಪ್ರಸಿದ್ದ ಸ್ತ್ರೀ ರೋಗ ತಜ್ನರೂ ,ಚಿಂತಕರೂ ,ಬರಹಗಾರರೂ ಆಗಿ ಅಸಾಂಪ್ರದಾಯಿಕ ಮಕ್ಕಳ ಶಾಲೆ ನಡೆಸುತ್ತಿರುವ ಸಂಜೀವ ಕುಲಕರ್ಣಿ ನಮ್ಮ ಜೂನಿಯರ್ ಮತ್ತು ಸಂಮಿತ್ರರು ;ಆಗಲೇ ಕವನಗಳನ್ನು ಬರೆಯುತ್ತಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು .


ನನ್ನ ಮಿತ್ರ ಡಾ ಮಂಟೂರ್ (ಈಗ ಪ್ರಸಿದ್ದ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ನ )ಅವರು ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಸಕ್ರಿಯರಾಗಿದ್ದು ಅವರೊಡನೆ ವಾರಾಂತ್ಯದಲ್ಲಿ ಒಂದು ಹಲ್ಲಿಗೆ ಸೈಕಲ್ ನಲ್ಲಿ ತೆರಳಿ ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಉಚಿತ ಔಷಧಿ ವಿತರಣೆ ಮಾಡುತ್ತಿದ್ದ ನೆನಪು .

ಮಕ್ಕಳ ವಾರ್ಡ್ ನಲ್ಲಿ ಕೆಲವು ಬಾಲ್ಯ ಸಕ್ಕರೆ ಕಾಯಿಲೆ ಮತ್ತು ದಿನವೂ ಔಷಧ ಬೇಡುವ ಕಾಯಿಲೆಯ ಕೆಲವು ಬಡ ಮಕ್ಕಳನ್ನು ಮಾನವೀಯ ನೆಲೆಯಲ್ಲಿ ಖಾಯಂ ಆಗಿ ಅಡ್ಮಿಟ್ ಮಾಡಿದ್ದರು .ಇವರು ವಾರ್ಡ್ ಸಿಸ್ಟರ್ ಗಳಿಗೆ ಸಹಾಯ ಮಾಡುವರು .ಅನಕ್ಷರಸ್ಥ ರಾಗಿದ್ದ ಈ ಮಕ್ಕಳಿಗೆ ನಾವು ಕೆಲವು ವಿದ್ಯಾರ್ಥಿಗಳು ಸೇರಿ ಸಂಜೆ ಹೊತ್ತು ಅಕ್ಷರಾಭ್ಯಾಸ ಮಾಡಿಸಿದೆವು .ಮತ್ತು ಬಹಳ ಚೆನ್ನಾಗಿ ಹಾಡುತ್ತಿದ್ದ ಅವರಿಗೆ ತರಬೇತು ನೀಡಿ ಮಕ್ಕಳ ದಿನಾಚರಣೆ ಯಂದು ಒಳ್ಳೆಯ ಕಾರ್ಯಕ್ರಮ ಏರ್ಪಡಿಸಿದ್ದು ಧಾರವಾಡ ಆಕಾಶವಾಣಿಯವರು ಅದನ್ನು ಪ್ರಸಾರ ಮಾಡಿದರು .ಈ ಕಾರ್ಯದಲ್ಲಿ ಸಂಜೀವ ಕುಲಕರ್ಣಿ ಮತ್ತು ಇಕ್ಬಾಲ್ ಮಣಿಯಾರ್ ಸಹಕಾರ ನೀಡಿದ ನೆನಪು .ಮಕ್ಕಳ ವಿಭಾಗದ ಮುಖ್ಯಸ್ಥ ರಾಗಿದ್ದ  ಡಾ ಮಾಲತಿ ಯಶವಂತ್ ನನಗೊಂದು ಸರ್ಟಿಫಿಕೇಟ್ ದಯಪಾಲಿಸಿದರು .ಅದೇ ರೀತಿ ಹೆರಿಗೆ ವಿಭಾಗದಲ್ಲಿ ಹೆತ್ತವರಿಂದ ನಾನಾ ಕಾರಣಕ್ಕೆ ತ್ಯಕ್ತರಾದ ಕಂದಮ್ಮಗಳು ಇದ್ದು ಅವರನ್ನು ವಾರ್ಡ್ ಸಿಸ್ಟರ್ಸ್ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು . ಅಂತಹ ಒಂದು ಮಗು ಪ್ರೀತಿ ;ನನ್ನನ್ನು ತುಂಬಾ ಹಚ್ಚಿ ಕೊಂಡಿತ್ತು.ಆಗ ದತ್ತು ತೆಗೆದು ಕೊಳ್ಳುವ ಕಾನೂನುಗಳು ಸರಳ ಮತ್ತು ಸುಲಭ ಇದ್ದುದರಿಂದ  ಈ ಮಕ್ಕಳು ತುಂಬಾ ಕಾಲ ಇರ ಬೇಕಾಗಿ ಬರುತ್ತಿರಲಿಲ್ಲ .

ಕ್ರೀಡಾ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶಗಳು ಇದ್ದವು .ಹಾಸ್ಟಲ್ ನಲ್ಲಿ  ಟೇಬಲ್ ಟೆನ್ನಿಸ್ ಟೇಬಲ್ ಕಾಮನ್ ಹಾಲ್ ನಲ್ಲಿ ಇತ್ತು.ವಾಲಿ ಬಾಲ್ ಕೂಡಾ ಆಡುತ್ತಿದ್ದರು .ಕಾಲೇಜ್ ನಲ್ಲಿ ಟೆನ್ನಿಸ್ ಕೋರ್ಟ್  , ಮತ್ತು ದೊಡ್ಡ  ಕ್ರೀಡಾಂಗಣ ಇದ್ದು ನಮ್ಮಲ್ಲಿ  ಒಳ್ಳೆಯ  ಫೂಟ್ ಬಾಲ್ ಮತ್ತು ಕ್ರಿಕೆಟ್ ಆಟಗಾರರು ಇದ್ದರು .ನನ್ನ ಕ್ಲಾಸ್ ನಲ್ಲಿ  ಮೋಹನ್ .ಉದಯ್ ಸಾಂಭ್ರಾಣಿ ,ಸಂದೀಪ್ ಒಳ್ಳೆಯ  ಕ್ರಿಕೆಟ್ ಆಟಗಾರರು ಆಗಿದ್ದು ,ರಾಮನಾಥನ್ ಟೆನ್ನಿಸ್ ಮತ್ತು ಫೂಟ್ ಬಾಲ್ ಆಟಗಾರರಾಗಿದ್ದರು .

                  



ಬುಧವಾರ, ಏಪ್ರಿಲ್ 28, 2021

ಹುಬ್ಬಳ್ಳಿ ನೆನಪುಗಳು 9

                  ಹುಬ್ಬಳ್ಳಿ ನೆನಪುಗಳು 9

          

 
ಅಜ್ಞಾನ ತಿಮಿರಾಂಧಸ್ಯ  ಜ್ನಾನಾಂಜನ ಶಲಾಕಾಯ
ಚಾಕ್ಷುರುನ್ಮಿಲೀತಮ್  ಯೇನ ತಸ್ಮೈ ಶ್ರೀ ಗುರುವೇ ನಮಃ
 
 ನಮಗೆ  ಸರ್ಜರಿ ವಿಭಾಗದಲ್ಲಿ ಕೆ ಜಿ ನಾಯಕ್ ಎಂಬ ಪ್ರಾಧ್ಯಾಪಕರು ಇದ್ದರು.ಅವರ ಪತ್ನಿ ಶೀಲಾ ನಾಯಕ್ ಅನಾಟಮಿ ಪ್ರೊಫೆಸರ್ .ಇಬ್ಬರೂ ನಿವೃತ್ತಿ ನಂತರ ಸುಳ್ಯ ದ ಕೆ ವಿ ಜಿ‌ ಮೆಡಿಕಲ್ ಕಾಲೇಜ್ ನಲ್ಲಿ  ಕೆಲಸ ಮಾಡುತ್ತಿದ್ದರು.ಕೆ  ಜಿ‌ ನಾಯಕ್ ಅವರ ಒಂದು ಪಾದ ಸ್ವಲ್ಪ ಊನ ಆಗಿದ್ದರೂ ಬಹಳ ಕ್ರಿಯಾಶೀಲ .ಟೆನ್ನಿಸ್ ಕೂಡಾ ಆಡುತ್ತಿದ್ದರು . ನಾನು ವಿದ್ಯಾರ್ಥಿಯಾಗಿ ಮತ್ತು ಇಂಟರ್ನ್ ಆಗಿ ಅವರ (ಪ್ರೊ ಕೌಲ್ಗುಡ್ ಯೂನಿಟ್ )ಯೂನಿಟ್ ನಲ್ಲಿಯೇ ಇದ್ದೆ.ಅವರಿಗೆ ಕಲಿಸುವುದು ಅಚ್ಚು ಮೆಚ್ಚು .ಮಂಗಳೂರು ಕನ್ನಡದಲ್ಲಿ ಬೈಯ್ಯುವರು (ಪ್ರೀತಿಯಿಂದ ).ನನ್ನ ಉತ್ತರ ಅವರಿಗೆ ಸಮಾಧಾನ ಆಗದಿದ್ದರೆ 'ಏನಾ ಭಟ್ ಬಾಯಿಗೆ ಬಂದ ಹಾಗೆ ಏನಾದರೂ ಹೇಳುತ್ತಿ ,ಸರಿಯಾಗಿ ಓದುವುದಿಲ್ಲ," ನಮ್ಮ ಬ್ಯಾಚ್ ನಲ್ಲಿ ಇದ್ದ ಭಗವಾನ್ ಸಿಂಗ್ ಎಂಬ ಸರ್ದಾರ್ ನನ್ನು ಅವರು ಸಿಂಗು ಎಂದು ಕರೆಯುವರು .ವಾಟ್ ಸಿಂಗು ವಾಟ್ ಈಸ್ ಯುವರ್ ಫೈಂಡಿಂಗ್ ?ಇತ್ಯಾದಿ .ಪರೀಕ್ಷೆ ಗೆ ಮೊದಲು ಒಂದು ಸ್ಪೆಷಲ್ ಕ್ಲಾಸ್ ಸರಣಿ ತೆಗೆದು ಕೊಳ್ಳುವರು .ಅವರ ಹಿಂದಿನ ಶಿಷ್ಯ ಮತ್ತು ಈಗಿನ ಸಹೋದ್ಯೋಗಿ ಡಾ ಗಿರಿ ಗೌಡ ಕೂಡಾ ತೆಗೆದುಕೊಳ್ಳುವರು .ಹಾಗೆ ಶಸ್ತ್ರ ಚಿಕಿತ್ಸಾ ವಿಷಯ ನಮಗೆ ಸುಲಿದ ಬಾಳೆಯ ಹಣ್ಣಿನಂದದಿ ,ಕಳೆದ ಚಿಗುರಿನ ಕಬ್ಬಿನಂದದಿ ಆಗಿ ಹೋಯಿತು .




. ಗಿರಿ ಗೌಡರು ಅತೀ ಸರಳ ಆದರೆ ಜನಪ್ರಿಯ ಮತ್ತು ಅಧ್ಯಯನ ಶೀಲ ಗುರುಗಳು ಅವರು ತರಗತಿ ಆರಂಭಿಸುವ ಮೊದಲು ಕಣ್ಣು ಮುಚ್ಚಿ  ತಮ್ಮ ಗುರುಗಳಾದ ಡಾ ಅರ್ ಎಚ್ ಏನ್ ಶೆಣಯ್ ಮತ್ತು ,ಡಾ ಕೆ ಜಿ ನಾಯಕ್  ರವನ್ನು  ವಂದಿಸಿ  ತರಗತಿ ಆರಂಭಿಸುತ್ತಿದ್ದರು . ಅವರ ಬೆಡ್ ಸೈಡ್ ಕ್ಲಿನಿಕ್ಸ್ ಮತ್ತು ಪರೀಕ್ಷಾ ಕಾಲದ ವಿಶೇಷ ತರಬೇತಿ ಯು ಜಿ ಮತ್ತು ಪಿ ಜಿ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಆಗಿತ್ತು .ಅವರೂ ಕೆ ಜಿ ನಾಯಕ ಅವರ ಶಿಷ್ಯರು .

ಗಿರಿ ಗೌಡರು ಉತ್ತಮ ಅಧ್ಯಾಪಕ ರಾದರೂ  ಒಳ್ಳೆಯ ಶಸ್ತ್ರ ಚಿಕಿತ್ಸಾ ನಿಪುಣರಾಗಿರಲಿಲ್ಲ ,ಅವರಿಗೆ ಅನಾರೋಗ್ಯದಿಂದ ಸ್ವಲ್ಪ ಕೈ ನಡುಕ ಇತ್ತು .
ಸ್ತನದ ಗಡ್ಡೆಗಳ ಬಗ್ಗೆ  ಪಾಠ ಆರಂಭಿಸುವಾಗ ಅವರು  'ಈ ಅಂಗವು ಶಿಶು , ಕವಿ ಪ್ರೇಮಿಗಳಿಗೆ ಅಪ್ಯಾಯಮಾನವಾಗಿ ಇರುವಂತೆ ಕ್ಯಾನ್ಸರ್ ರೋಗಕ್ಕೂ 'ಎನ್ನುತ್ತಿದ್ದರು .  ಫೈನಲ್ ಪರೀಕ್ಷೆಯಲ್ಲಿ ಯಾವುದೊ  ಒಂದು  ವಿಷಯ ರೋಗಿಯನ್ನು ಪರೀಕ್ಷಿಸುವಾಗ ಮರೆತು ಹೋದರೆ ಏನಾಗುವುದು ? ಎಂದು ಕೇಳುವರು ,ನಾವು 
ಹೆದರಿ ಉತ್ತರ ನಿರೀಕ್ಷಿಸುತ್ತಿರುವಾಗ  ನಿರುಮ್ಮಳವಾಗಿ   ಏನೂ ಸಂಭವಿಸದು  ಎನ್ನುವರು .ಅದು ಅವರು ವಿಶ್ವಾಸ ಹುಟ್ಟಿಸುತ್ತಿದ್ದ ರೀತಿ .

   ಅಲ್ಪಾಯುವಿನಲ್ಲಿ  ತೀರಿ ಕೊಂಡರೂ  ವಿದ್ಯಾರ್ಥಿಗಳ ಹೃದಯ ದಲ್ಲಿ  ಜ್ಞಾನ ರೂಪಿಯಾಗಿ ನೆಲೆಸಿದ್ದಾರೆ .ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ ಜ್ಞಾನ ವಾಹಿನಿ  ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ  ದಾರಿ ತೋರಿ ಕಾಪಾಡುತ್ತಿದೆ .


ಸರ್ಕಾರೀ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡು ತರದ ವೈದ್ಯರು ಇರುತ್ತಾರೆ . ಒಂದು ಅಸಿಸ್ಟೆಂಟ್ ಸರ್ಜನ್ ಕ್ಯಾಟಗೊರಿ  ,ಇವರು ಕ್ಯಾಶುಯಾಲಿಟಿ ,ಓ ಪಿ ಡಿ ವಾರ್ಡ್ ಗಳಲ್ಲಿ ಇರುವರು . ಟೀಚಿಂಗ್ ವಿಭಾಗದವರು ಇನ್ನೊಂದು . ಲೆಕ್ಚರರ್ ,ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಪ್ರೊಫೆ ಸರ್  ಇತ್ಯಾದಿ . ಈಗ ಪ್ರಸಿದ್ಧ ಮಕ್ಕಳ ಹೃದ್ರೋಗ ತಜ್ಞೆಯಾಗಿರುವ  ವಿಜಯ ಲಕ್ಷ್ಮಿ ಬಾಳೇಕುಂದ್ರಿ  ಅಸಿಸ್ಟೆಂಟ್ ಸರ್ಜನ್ ಆಗಿದ್ದು ಮೆಡಿಸಿನ್ ವಿಭಾಗದಲ್ಲಿ ಇದ್ದರು .ಬಹಳ ಪ್ರತಿಭಾವಂತೆ ,ಉತ್ಸಾಹಿ ಆಗಿದ್ದ ಇವರು ಕೆಲವೊಮ್ಮೆ ನಮಗೆ ಕ್ಲಾಸ್ ತೆಗೆದು ಕೊಳ್ಳುವರು .ಹಾಗೆಯೇ ಡಾ ಹೊಸ್ಮಟ್ಟ್ ಎಂಬುವರು ಕೂಡ ನಮಗೆ ಪಾಠ ಮಾಡುತ್ತಿದ್ದರು . 

ಇನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಮೂರು ತಿಂಗಳು ಪೋಸ್ಟಿಂಗ್ಸ್ ಇದ್ದಾಗ ಅಲ್ಲಿ ಡಾ ಗಜಾನನ ಗುಡಿಗಾರ ಎಂಬ ಪ್ರತಿಭಾವಂತ ಫಿಸಿಷಿಯನ್ ಇದ್ದು ಅವರಿಂದ ನಾನು ಹಲವು ವಿಷಯಗಳನ್ನು ಕಲಿತೆನು . ಸೂಕ್ಷ್ಮ ಮತಿಯಾಗಿದ್ದ ಅವರದು ರೋಗ ನಿಧಾನದಲ್ಲಿ ಎತ್ತಿದ ಕೈ . ಅವರ ಪತ್ನಿ ಸ್ತ್ರೀ ರೋಗ ತಜ್ಞೆ .ನಾನು ಧಾರವಾಡದಲ್ಲಿ ಇದ್ದಷ್ಟು ದಿನ ಅವರ ಮನೆಯವನೇ ಆಗಿದ್ದು ನನ್ನ ಬಹುಪಾಲು ಊಟೋಪಚಾರ ಅವರಲ್ಲಿ ಆಗುತ್ತಿತ್ತು . ನಿವೃತ್ತರಾದ ಮೇಲೆ ಹುಬ್ಬಳ್ಳ್ಳಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದು ಶಿರೂರ್ ಪಾರ್ಕ್ ನಲ್ಲಿ ನೆಲಸಿದ್ದರು .ಅವರ ಕೈ ಬರಹ ಮತ್ತು ವೈದ್ಯಕೀಯ ನೋಟ್ಸ್ ಬಹಳ ಚಂದ . ಸರಕಾರಿ ಸೇವೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನೆಲ್ಲಾ  ಆಗಾಗ ಸ್ಮರಿಸಿ ಕೊಳ್ಳು ವೆನು . 

  ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿದ್ದ ಮೂರು ತಿಂಗಳು ನಾನು ಆಸ್ಪತ್ರೆಯಲ್ಲಿಯೇ ನೆಲಸಿ ೨೪ ಗಂಟೆ ಕೆಲಸ ಮಾಡುತ್ತಿದ್ದೆ .ಹೆರಿಗೆ ,ಮಕ್ಕಳ ವಿಭಾಗ ಮತ್ತು ತುರ್ತು ಚಿಕಿತ್ಸೆಯಲ್ಲಿ ತುಂಬಾ ಅನುಭವ ದೊರೆಯಿತು . ಮೆಡಿಕಲ್ ಕಾಲೇಜು ನಲ್ಲಿ ಪಿ ಜಿ ಗಳು ಇದ್ದ ಕಾರಣ  ನಮಗೆ ಸ್ವತಂತ್ರವಾಗಿ ನಿರ್ಧಾರ ತೆಗೆದು ಕೊಳ್ಳುವ ಅವಕಾಶಗಳು ಕಡಿಮೆ ಇದ್ದವು . 

ಸಿವಿಲ್ ಆಸ್ಪತ್ರೆಯಲ್ಲಿ  ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದ (ಗೌರವ ಉಪನ್ಯಾಸಕ )ಕಾರಣ ನನ್ನ ಅನುಭವದ ಪರಿಧಿ ವಿಸ್ತರಿಸಿ ಕೊಂಡಿತು . 

ಲೇಖಕ ಬಸವರಾಜ ಕಟ್ಟಿಮನಿ (MLC ಆಗಿದ್ದರು )ಸಿವಿಲ್ ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿದ್ದರು .ಅವರನ್ನು ಉಪಚರಿಸುವ ಭಾಗ್ಯ ಸಿಕ್ಕಿತ್ತು . ಧಾರವಾಡ ವಿಶ್ವವಿದ್ಯಾಲಯ ಉಪಕುಲಪತಿ ಯಾಗಿದ್ದ  ಖ್ಯಾತ ಅರ್ಥ ಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ ಕೂಡಾ ವೈದ್ಯಕೀಯ ಸಲಹೆಗಾಗಲಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದರು . 

ಸಿವಿಲ್ ಆಸ್ಪತ್ರೆಯ ನವ ಶಿಶು ವಿಭಾಗದಲ್ಲಿ ಹೀಟರ್ ಇಲ್ಲದಿದ್ದುದರಿಂದ ನನ್ನ ಸ್ಟೈಪೆಂಡ್ ಹಣದಲ್ಲಿ ಒಂದನ್ನು ಕೊಡುಗೆಯಾಗಿ ನೀಡಿ ನನ್ನ ಋಣ ಅಲ್ಪ ಸಂದಾಯ ಮಾಡಿದೆನು .

 

ಮಂಗಳವಾರ, ಏಪ್ರಿಲ್ 27, 2021

ಹುಬ್ಬಳ್ಳಿ ದಿನಗಳು 11

  ಹುಬ್ಬಳ್ಳಿ ದಿನಗಳು 11

ನಮ್ಮ ಫೈನಲ್ ಎಂ ಬಿ ಬಿ ಎಸ್ 1980 -81 ರಲ್ಲಿ ಆಗಿದ್ದು ನಿರ್ಣಾಯಕ ಆಗಿತ್ತು .ನಾವೆಲ್ಲ ಅದರ  ತಯಾರಿಯಲ್ಲಿ ಇದ್ದೆವು . 

ಅದೇ ವರ್ಷ ಕೆಲವು ಪ್ರಮುಖ ಘಟನೆಗಳು ನಡೆದವು .

ಒಂದು ಗೋಕಾಕ ಚಳುವಳಿ .ಕರ್ನಾಟಕದಲ್ಲಿ ಶಾಲೆಗಳಲ್ಲಿ ಕನ್ನಡವೇ ಒಂದನೇ ಭಾಷೆ ಆಗಿರಬೇಕು ಎಂಬ ಡಾ ವಿ ಕೃ ಗೋಕಾಕ ಸಮಿತಿ ಕೊಟ್ಟ ತೀರ್ಮಾನ ಜ್ಯಾರಿಗೆ ತರಲು ಆಗ ಮುಖ್ಯ ಮಂತ್ರಿ ಆಗಿದ್ದ  ಶ್ರೀ ಗುಂಡೂ ರಾವು ಸರ್ಕಾರ ಮೀನ ಮೇಷ ನೋಡಿದಾಗ ರಾಜ್ಯದಾದ್ಯಂತ ನಡೆದ ಚಳುವಳಿ . ವರನಟ ಡಾ ರಾಜ್ ಕುಮಾರ್ ಕೂಡಾ ಭಾಗವಸಿದ್ದುದು ವಿಶೇಷ .ಕೊನೆಗೆ ಸರಕಾರ ಮಣಿಯಿತು .

ಇನ್ನೊಂದು ನರಗುಂದದ ರೈತ ಬಂಡಾಯ . ನರಗುಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅಲ್ಲಿಯ ಅರಸ ಬಾವು ಸಾಹೇಬ ಬಾವೆ ಸಾರಿದ ಬಂಡಾಯದಿಂದ ಪ್ರಸಿದ್ದವಾದ ಸ್ಥಳ . ಇಲ್ಲಿಯ ರೈತರು ಮಲಪ್ರಭಾ ನೀರಾವರಿ ತೆರಿಗೆ ಎಂದು ಕಟ್ಟಿದರೂ ಸಾಕಷ್ಟು ನೀರು ಸಿಗುವುದಿಲ್ಲ ಎಂದು ಚಳವಳಿ ಮಾಡುತ್ತಿದ್ದರೂ ಸರಕಾರ ಕ್ಯಾರೇ ಎನ್ನಲಿಲ್ಲ .
ಅಂದು 1980ರ ಜುಲೆ 21, ಆಗಿನ ತಹಸೀಲ್ದಾರ ವರೂರ ಅವರು ಕಚೇರಿಗೆ ಬಂದರು. ರೈತರು ಕಚೇರಿ ಬಾಗಿಲು ಮುಚ್ಚಿ, ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಅರೆಬೆತ್ತಲೆಯಾಗಿ ಅಡ್ಡ ಮಲಗಿದರು. ಹೋಗುವುದಾದರೆ ನಮ್ಮನ್ನು ತುಳಿದುಕೊಂಡ ಹೋಗಿ ಎಂದು ಎಚ್ಚರಿಸಿದರು. ತಹಸೀಲ್ದಾರ  ಪ್ರತಿಭಟನಾ ನಿರತ ಅರೆಬೆತ್ತಲೆ ರೈತರನ್ನು ತುಳಿದುಕೊಂಡು ಕಚೇರಿ ಪ್ರವೇಶಿಸಿದ್ದು ರೆತರನ್ನು ಕೆರಳಿಸಿತು. ಆವೇಶ ಭರಿತ ರೈತರು ತಹಸೀಲ್ದಾರರನ್ನು ಹೊರಗೆಳೆದು ಥಳಿಸಿದರು. ಕಚೇರಿ ಒಳಗೆ ನುಗ್ಗಿದ ರೈತರು ಸಿಕ್ಕಿದ್ದನ್ನು ಕಿತ್ತೆಸೆದರು. ಕಿಟಕಿ,ಬಾಗಿಲು ಪುಡಿಪುಡಿಯಾದವು, ಅಲ್ಲಿಯೆ ಇದ್ದ ಅಬಕಾರಿ ಇಲಾಖೆಯಲ್ಲಿನ ಸರಾಯಿ ಟ್ಯಾಂಕಗಳನ್ನು ಒಡೆದು ಅದರಿಂದಲೆ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಬೆರಳೆಣಿಕೆಯಲ್ಲಿದ್ದ ಪೊಲೀಸರು ರೈತರ ಮೇಲೆ ಲಾಠಿ ಬೀಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ರೈತರ ಮೇಲೆ ಪಿಎಸ್‌ಐ ಗುಂಡು ಹಾರಿಸಿದನು. ಆಗ ಚಿಕ್ಕನರಗುಂದ ಗ್ರಾಮದ ಯುವ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ರೈತನ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಕ್ರೋಶಗೊಂಡ ರೈತರು ಸಿಕ್ಕ ಸಿಕ್ಕ ಪೋಲಿಸರನ್ನು ಮನಬಂದಂತೆ ಥಳಿಸಿ ಸಾಯಿಸಿದರು. ಈ ದುರ್ಘಟನೆ ಸುದ್ದಿ ನವಲಗುಂದಕ್ಕೂ ಹಬ್ಬಿದಾಗ ಪ್ರತಿಭಟನಾ ರೈತರು ಪೊಲೀಸರ ವಿರುದ್ಧ ಬಂಡಾಯ ಎದ್ದರು. ಅಲ್ಲಿಯೂ ಓರ್ವ ರೈತ ಗುಂಡಿಗೆ ಬಲಿಯಾಗುವ ಮೂಲಕ ರೈತ ಕ್ರಾಂತಿಯೇ ನಡೆಯಿತು. 

ನಾವು ಆಗ ಸರ್ಜರಿ ಫೈನಲ್ ವರ್ಷದ ಪೋಸ್ಟಿಂಗ್ ನಲ್ಲಿ ಇದ್ದು ನೂರಾರು ಗಾಯಾಳುಗಳನ್ನು  ಕೆ ಎಂ ಸಿ ಆಸ್ಪತ್ರೆಗೆ ತಂದಿದ್ದರು ,ಹಗಲೂ ರಾತ್ರಿ ವೈದ್ಯರು ,ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.ರಕ್ತ ದಾನ ಮಾಡಿದರು .ತಲೆಗೆ ಏಟು ಬಿದ್ದು ಪ್ರಜ್ನಾಹೀನ ರಾದ ಪೋಲೀಸು ಮತ್ತು ರೈತರ ತಲೆಯೊಳಗೆ ಏನಾಗಿದೆ ಎಂದು ತಿಳಿಯಲು ಆಗ ಸಿ ಟಿ ಸ್ಕ್ಯಾನ್ ಇರಲಿಲ್ಲ .ತಲೆ ಬುರುಡೆ  ಓಪನ್ ಮಾಡಿಯೇ ತಿಳಿಯ ಬೇಕಿತ್ತು .ಬುರುಡೆ ಕಟ್ ಮಾಡಲು ಈಗಿನ ಪರಿಷ್ಕೃತ  ಉಪಕರಣಗಳೂ ಇರಲಿಲ್ಲ . ಸುಧಾರಿತ ಉಳಿ ಮತ್ತು ಚಮ್ಮಟಿ ಉಪಯೋಗಿಸುತ್ತಿದ್ದ ನೆನಪು . 

ಈ ಚಳುವಳಿ ಗುಂಡೂ ರಾಯರಿಗೆ ರಾಜಕೀಯವಾಗಿ ವಾಟರ್ಲೂ ಆಗಿ ಮುಂದಿನ ಚುನಾವಣೆ ಯಲ್ಲಿ ಸೋತವರು ಮೇಲೆ ಎಳಲೇ ಇಲ್ಲ.

ಮೂರನೆಯದು ಸರ್ಕಾರಿ ವೈದ್ಯಕೀಯ ವಿದ್ಯಾರ್ಥಿಗಳ ಚಳುವಳಿ .

ನಾನು ಹಿಂದೆಯೇ ಬರೆದಂತೆ ಸರಕಾರ ತಾನು  ನಡೆಸುತ್ತಿರುವ ಮೆಡಿಕಲ್ ಕಾಲೇಜ್ ಗಳ ಸ್ಥಿತಿ ದಿನೇ ದಿನೇ ಚಿಂತಾ ಜನಕ ಆಗುತ್ತಿದ್ದರೂ ಅದರ ಸುಧಾರಣೆಗೆ ಗಮನ ಕೊಡದೆ ಹೊಸ ಖಾಸಗಿ ವೈದ್ಯಕೀಯ  ಕೋಲೇಜುಗಳಿಗೆ ಅನುಮತಿ ಕೊಡಲು ಪ್ರಾರಂಭಿಸಿತ್ತು.ಕೆ ಎಂ ಸಿ ಹುಬ್ಬಳ್ಳಿ ಯಂತಹ ಉತ್ತರ ಕರ್ನಾಟಕದ ಹೆಮ್ಮೆಯ ಏಕಮೇವ ಸಂಸ್ಥೆಯಲ್ಲಿಯೇ ಪ್ರಿನ್ಸಿಪಲ್ ಇಲ್ಲ ,ಮೆಡಿಸಿನ್ ನಂತಹ ಮುಖ್ಯ ವಿಭಾಗದಲ್ಲಿ ಅಧ್ಯಾಪಕರಿಲ್ಲ .ಇನ್ನು ಖಾಸಗಿ ಕಾಲೇಜ್ ಆರಂಭ ಆದರೆ ಅಲ್ಲಿಗೂ ಇಲ್ಲಿಂದ ಕೆಲವರನ್ನು ಎರವಲು ಕೊಡುವರು .ಇಲ್ಲಿಯ ಅನೇಕ ಗುರುಗಳು ತಮ್ಮ ಊರಿಗೆ ಸಮೀಪ ಎಂದು ಇಲ್ಲಿ ಬಿಟ್ಟು ಅಲ್ಲಿಗೆ ಹೋಗುವರು . ಇಂದಿಗೂ ಕೂಡ ಕೇರಳ ಮತ್ತು ತಮಿಳುನಾಡಿನ ಸರಕಾರಿ ವೈದ್ಯಕೀಯ ಕಾಲೇಜ್ ಗಳು  ನಮ್ಮ ಸಂಸ್ಥೆಗಳಿಗಿಂತ ತುಂಬಾ ಮುಂದುವರಿದಿವೆ .

ಇದರ ವಿರುದ್ದ ನಾವು ಮನವಿ ಸಲ್ಲಿಸಿದೆವು . ಆದರೆ ಸರಕಾರ ಸ್ಪಂದಿಸಲಿಲ್ಲ .ನಾವು ಮುಷ್ಕರ ಮಾಡಿದರೆ ಫೈನಲ್ ವರ್ಷದಲ್ಲಿ ಇರುವ ನಮಗೆ ನಷ್ಟ ,ಆದರೂ ಸುಮ್ಮನಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು ಎಂದು  ಚಳುವಳಿ ಆರಂಬಿಸಿದೆವು . ಸರ್ಕಾರ ತಾನೇ ಮೆಡಿಕಲ್ ಕಾಲೇಜ್ ಗಳನ್ನು ಸ್ಥಾಪಿಸಲಿ ,ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಕ್ಷೇಮ ಎಂಬುದೂ ನಮ್ಮ ಬೇಡಿಕೆಯಲ್ಲಿ ಸೇರಿತ್ತು .

(ಮುಂದೆ ಹಲವು ದಶಕ ಗಳ ನಂತರ ಡಾ ವಿ ಎಸ್ ಆಚಾರ್ಯ ರು  ವೈದ್ಯಕೀಯ ಶಿಕ್ಷಣ ಮಂತ್ರಿ ಆಗಿದ್ದಾಗ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜ್ ಗಳನ್ನು ಆರಂಬಿಸುವ ಕೆಲಸ ಆರಂಬಿಸಿದ್ದು ಈಗ ಮುಂದುವರಿದಿದೆ .ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅದರಿಂದ ಆದ ಪ್ರಯೋಜನ ಅಳೆಯಲಾರದ್ದು .)

ಈ ಚಳುವಳಿಯ ಅಂಗವಾಗಿ ನಾವು ನೂರಾರು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿ ನ್ಯಾಯಾಧೀಶರು ಜಾಮೀನು ಕೊಡುತ್ತೇನೆ ಎಂದರೂ ತಿರಸ್ಕರಿಸಿ ಜೈಲಿಗೆ ಹೋದೆವು .ನಾನು ಹುಬ್ಬಳ್ಳಿ ಸಬ್ ಜೈಲಿನಲ್ಲಿ ಹತ್ತು ದಿನ ಬಂಧಿಯಾಗಿ ಇದ್ದೆನು .ಇನ್ನೊಂದು ದೊಡ್ಡ ತಂಡ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ.ನಮಗೆ ಹಾಸ್ಟಲ್ ನಿಂದ ಊಟ ಉಪಾಹಾರ ಸರಬರಾಜು ಆಗುತ್ತಿತ್ತು ಮತ್ತು ಕಾಲೇಜ್ ಹಿಂದೆ ಇರುವ ಪೈ ಹೊಟೇಲ್ ನವರು ಪ್ರೀತಿಯಿಂದ ವಿಶೇಷ ಆಹಾರ ಉಚಿತ ವಾಗಿ ತಂದು ಕೊಡುತ್ತಿದರು . ನಮ್ಮ ಗುರುಗಳಿಗೆ (ಅವರು ಜೈಲಿಗೂ ಬಂದಿದ್ದರು)ಮತ್ತು ಸಾರ್ವಜನಿಕರಿಗೆ ನಮ್ಮ ಮೇಲೆ ಸಹಾನುಭೂತಿ ಇತ್ತು . ಎಸ್ ಆರ್ ಬೊಮ್ಮಾಯಿ ,ಜೋರ್ಜ್ ಫೆರ್ನಾಂಡಿಸ್ ಮುಂತಾದ ನಾಯಕರು ನಮ್ಮನ್ನು ಕಂಡು ಬೆಂಬಲ ಸೂಚಿಸಿದ್ದರು .ನನ್ನ ಅತ್ತೆ ಮಗ ಸುಬ್ರಹ್ಮಣ್ಯ ಇಂಜಿನಿಯರಿಂಗ್ ವಿದ್ಯಾರ್ಥಿ ದಿನಾಲೂ ನನ್ನನ್ನು ಜೈಲ್ ನಲ್ಲಿ ಬಂದು ಕಾಣುತ್ತಿದ್ದ .ಇಲ್ಲಿಯ ಜೈಲರುಗಳಿಗೆ ಇದು ಒಂದು ಹಬ್ಬ ಆಗಿತ್ತು .ಕ್ರಿಮಿನಲ್ ಚಟುವಟಿಕೆಯವರೆ ಹೆಚ್ಕು ಬರುತ್ತಿದ್ದವರನ್ನು ನೋಡಿ ನಮ್ಮಂತಹ ಹುಡುಗ ಹುಡುಗಿಯರನ್ನು ನೋಡಿದ ಮೇಲೆ .ಹಲವರು ಆ ಮೇಲೂ ಆಸ್ಪತ್ರೆಯಲ್ಲಿ ಬಂದು ನಮ್ಮನ್ನು ಕಾಣುತ್ತಿದ್ದು ನಾವೂ ನೃಪತುಂಗ ಬೆಟ್ಟಕ್ಕೆ ವಾಕಿಂಗ್ ಹೋಗುವಾಗ ಜೈಲ್ ವಸತಿಗೆ ಭೇಟಿ ಕೊಡುತ್ತಿದ್ದೆವು .ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಯಾಗಿದ್ದ (ಮತ್ತು ನನ್ನ ಆತ್ಮೀಯರೂ ಆಗಿದ್ದ )ಅನಂತಕುಮಾರ್  ಕ್ರಿಯಾತ್ಮಕವಾಗಿ ನಮ್ಮೊಡನೆ ಸಹಕರಿಸಿದ್ದರು .ಅವರ ತಂದೆ ರೈಲ್ವೇ ನೌಕರರಾಗಿ ಹುಬ್ಬಳ್ಳಿಯಲ್ಲಿ ಇದ್ದರು .ತಾಯಿ ಹುಬ್ಬಳ್ಳಿ ಧಾರವಾಡ ಕಾರ್ಪೊರೇಷನ್  ಉಪ ಮೇಯರ್ ಆಗಿದ್ದರು ಎಂದು ನೆನಪು .ಮುಂದೆ ಅವರು ಎಂ ಪಿ ,ಮಂತ್ರಿ ಆದಮೇಲೆ ಸಂಪರ್ಕ ಬಿಟ್ಟು ಹೋಯಿತು . ಇದೇ ಚಳುವಳಿಯ ಅಂಗವಾಗಿ ಆಗ ಮಂತ್ರಿಗಳಾಗಿದ್ದ  ಶ್ರೀ ಎಂ ವೀರಪ್ಪ ಮೊಯಿಲಿಯವರನ್ನು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಘೇರಾವೋ ಮಾಡಿದಾಗ ಲಾಟಿ ಚಾರ್ಜ್ ಆಯಿತು .ಆ ದಿನ ನಾನು ಊರಿನಲ್ಲಿ ಇದ್ದರೂ ಕೇಸ್ ನಲ್ಲಿ ನನ್ನ ಹೆಸರನ್ನೂ ಸೇರಿಸಿದ್ದರು . ಮುಂದೆ ರಾಮಕೃಷ್ಣ ಹೆಗ್ಡೆ ಸರಕಾರ ರೈತರು ಮತ್ತು ವಿದ್ಯಾರ್ಥಿಗಳ ಮೇಲಿನ ಕೇಸ್ ಗಳನ್ನು ಹಿಂಪಡೆಯಿತು .ಆದರೂ ಸರಕಾರಿ ವೈದ್ಯಕೀಯ ಕಾಲೇಜ್ ಗಳ ಸ್ಥಿತಿ ಹೆಚ್ಚು ಸುಧಾರಣೆ ಕಾಣಲಿಲ್ಲ ,ಅವುಗಳನ್ನು ಸ್ವಾಯತ್ತ ಸಂಸ್ಥೆ ಗಳನ್ನಾಗಿ ಮಾಡಿದರೂ .ಇದರಲ್ಲಿ ಅಧ್ಯಾಪಕ ವೈದ್ಯರ ಪಾಲೂ ಇದೆ ಎಂದು ಹೇಳಲು ವಿಷಾದ ಪಡುತ್ತೇನೆ .


ಹುಬ್ಬಳ್ಳಿ ದಿನಗಳು 7

                      ಹುಬ್ಬಳ್ಳಿ ದಿನಗಳು7

ನಮಗೆ  ಆಸ್ಪತ್ರೆ ಪೋಸ್ಟಿಂಗ್ ಜತೆಗೆ ಔಷಧ ಶಾಸ್ತ್ರ (Pharmacology) ,ರೋಗ ನಿದಾನ ಶಾಸ್ತ್ರ  (Pathology),ಸೂಕ್ಷ್ಮಾಣು ಜೀವಿ ಶಾಸ್ತ್ರ (Microbiology)ಮತ್ತು ಅಪರಾಧ ಪತ್ತೆ ವೈದ್ಯ ಶಾಸ್ತ್ರ (Forensic medicine) ಕಲಿಯಬೇಕಿತ್ತು .ಪ್ಯಾಥಾಲಜಿ ಯಲ್ಲಿ  ಡಾ ಗೊರವಲಿಂಗಪ್ಪ ,ಡಾ ಮಹಾಲೆ ಮತ್ತು ಡಾ ನಾಡಿಗ್ ಪ್ರಾಧ್ಯಾಪಕರಾಗಿದ್ದು ಕೊನೆಯವರು ಮೈಕ್ರೋಬಯಾಲಜಿ ವಿಭಾಗದ ಪ್ರಭಾರಿ ಆಗಿದ್ದು ಡಾ ಮೀರಾ ಮೇವುಂಡಿ ಅವರೊಡನೆ ಇದ್ದರು . ಫೋರೆನ್ಸಿಕ್ ಮೆಡಿಸಿನ್ ಗೆ  ಡಾ ಭಾಸ್ಕರ್ ಕೆಲವು ತಿಂಗಳುಗಳ ನಂತರ ಬಂದರು . 

ಫಾರ್ಮಕಾಲಜಿ ಪ್ರೊಫೆಸರ್ ಡಾ ಕಂದ ಸ್ವಾಮಿ ಹಿಂದಿ ಸಿನಿಮಾ ದ  ಪ್ರಾಣ್ ತರಹ ಇದ್ದು  ಅವರ ಡೈಲಾಗ್ ಡೆಲಿವರಿ ಮತ್ತು ಪಾಠ ಮಾಡುವ ಕ್ರಮ  ವಿಶಿಷ್ಟ ಆಗಿತ್ತು . ನಮಗೆ ಪರೀಕ್ಷೆಗೆ ಇಲ್ಲದಿದ್ದರೂ ಪ್ರಾಯೋಗಿಕ ಔಷಧ ಶಾಸ್ತ್ರಕ್ಕೆ  ಹೆಚ್ಚು ಒತ್ತು ನೀಡುತ್ತಿದ್ದರು . ಔಷಧ ಶಾಸ್ತ್ರ  ವೈದ್ಯರಿಗೆ ಬಹಳ ಮುಖ್ಯ  . ಯಾವುದೇ ಔಷಧಿ ಬರೆಯುವ ಮೊದಲು ,ಅದರ ರಚನೆ ,ಇತರ ಔಷಧಿಗಳಿಗೆ ಅದರ ಪ್ರತಿಕ್ರಿಯೆ ,ಅಡ್ಡ ಪರಿಣಾಮಗಳು ,ಅದು ಶರೀರದಿಂದ ವಿಸರ್ಜನೆ ಆಗುವ ವಿಧಾನ , ಡೋಸ್ ಇತ್ಯಾದಿ ತಿಳಿದಿರಬೇಕು . ಪ್ರಸಿದ್ಧ ನೆಫ್ರೊಲೊಜಿಸ್ಟ್ ಡಾ ಎಂ ಕೆ ಮಣಿ ತಮ್ಮ ಗುರು ಡಾ ಈಶ್ವರಯ್ಯ  ಹೇಳುತ್ತಿದ್ದ  ಕಿವಿ ಮಾತು ಆಗಾಗ ನೆನಪಿಸಿ ಕೊಳ್ಳುವರು . 

"ವೈದ್ಯಕೀಯ ದಲ್ಲಿ  ಮೂರೂ ಪ್ರಾಥಮಿಕ ವಿಷಯಗಳು . ಫಿಸಿಯೋಲಾಜಿ (ಸಾಮಾನ್ಯ ಶರೀರ ಕಾರ್ಯ ಶಾಸ್ತ್ರ ),ಪ್ಯಾಥಾಲಜಿ (ರೋಗ ಶಾಸ್ತ್ರ )ಮತ್ತು ಫಾರ್ಮಕಾಲಜಿ (ಔಷಧ ಶಾಸ್ತ್ರ ).ಫಾರ್ಮಕಾಲಜಿ ಚೆನ್ನಾಗಿ ಕಲಿತರೆ ಪ್ಯಾಥಾಲಜಿ ಯನ್ನು ಫಿಸಿಯೋಲಾಜಿ ಮಾಡುವಿರಿ ,ಇಲ್ಲದಿದ್ದರೆ ಫಿಸಿಯೋಲಾಜಿ ಪ್ಯಾಥಾಲಜಿ ಆಗುವುದು ."

ಪ್ಯಾಥಾಲಜಿ ಯಲ್ಲಿ  ರೋಗ ಪೀಡಿತ ಅಂಗಗಳ  ಸ್ಲೈಡ್ ಗೆ ಬಣ್ಣ ಹಾಕಿ ಮೈಕ್ರೋಸ್ಕೋಪ್ ನಲ್ಲಿ ನೋಡಿ ರೋಗ ಗುರುತಿಸ ಬೇಕು . ಅದೇ ರೀತಿ ರಕ್ತವನ್ನೂ . ನಮಗೆ ತರಗತಿಯಲ್ಲಿ ಕೊಡುತ್ತಿದ್ದ ಸ್ಲೈಡ್ ಪರೀಕ್ಷೆಗೂ ಇಡುತ್ತಿದ್ದು ವಿದ್ಯಾರ್ಥಿಗಳು ಕೆಲವು ಕಷ್ಟದ ಸ್ಲೈಡ್ ಗಳನ್ನು  ಮೂಲೆ ತುಂಡಾದ ಸ್ಲೈಡ್ ಲಿವರ್ ಕ್ಯಾನ್ಸರ್ ,ಸ್ಲೈಡ್ ನ ಬದಿಯಲ್ಲಿ  ನೊಣದ ರೆಕ್ಕೆ ತರಹ ಇದ್ದರೆ  ಥೈರಾಯಿಡ್ ಕಾಯಿಲೆ ಇತ್ಯಾದಿ ನೆನಪು ಇಟ್ಟುಕೊಳ್ಳುತ್ತಿದ್ದೆವು . ಇದಲ್ಲದೆ ರೋಗ ಪೀಡಿತ ಅಂಗಗಳನ್ನು   ಸ್ಪೆಸಿಮೆನ್  ಅಂತ ಕಲಿಸುತ್ತಿದ್ದರು .ಆಸ್ಪತ್ರೆಯ ಆಪರೇಷನ್ ಥೀಯೇಟರ್ ನಿಂದ ಬಂದ  ಈ ಅಂಗಗಳನ್ನು  ಫಾರ್ಮಲಿನ್ ಇರುವ ಗಾಜಿನ ಜಾರಿನಲ್ಲಿ ಇಡುವರು . ವೈದ್ಯಕೀಯ ವಲಯದಲ್ಲಿ ಪ್ರಚಲಿತ ವಿರುವ ಒಂದು ಜೋಕ್ . 

ಒಂದು  ಪ್ರಾಯೋಗಿಕ ಪರೀಕ್ಷೆ .ವಿದ್ಯಾರ್ಥಿ ಹುಡುಗ ಮತ್ತು  ಗಂಡು ಎಕ್ಸಾಮಿನರ್ . ಗರ್ಭ ಕೋಶದ ಸ್ಪೆಸಿಮೆನ್  ಇಟ್ಟಿದ್ದರು .ಇದು ಏನು ?ಎಂದು ಕೇಳಿದರು ಪರೀಕ್ಷಕ .ವಿದ್ಯಾರ್ಥಿ  ಮೇಲಿಂದ ಕೆಳಗೆ ಅಂಗವನ್ನು ನೋಡಿ ಕಿಡ್ನಿ ಅಂದ .  Is it kidney ?ಸರಿಯಾಗಿ ನೋಡು . ಸಾಮಾನ್ಯ ವಾಗಿ  ಆತ್ಮ ವಿಶ್ವಾಸ ಇಲ್ಲದ ವಿದ್ಯಾರ್ಥಿ ಮಾಡುವಂತೆ 'ಅಲ್ಲ ಅಲ್ಲ ಸಾರೀ ಸರ್ ಅದು ಲಿವರ್ ಎಂದು ಅಂದಾಜಿಗೆ ಗುಂಡು ಬಿಟ್ಟ . ಪರೀಕ್ಷಕರು ಒಳ್ಳೆಯಕಲರ್ಡ್ ವರು .ಅವನನ್ನು ಹೇಗಾದರೂ ಪಾಸ್ ಮಾಡುವಾ ಎಂದು "ನೋಡಪ್ಪಾ ಈ ಅಂಗ ನನ್ನಲ್ಲೂ ಇಲ್ಲ ,ನಿನ್ನಲ್ಲೂ ಇಲ್ಲ ,ಯೋಚಿಸಿ ಹೇಳು "ಎಂದರು .ಹುಡುಗ ತಟ್  ಎಂದು "ಗೊತ್ತಾಯಿತು ಸರ್ ಮೆದುಳು "ಎಂದು ಬಿಡುವುದೇ ?

ರೋಗ ಶಾಸ್ತ್ರದಲ್ಲಿ ಹಲವು ಆಹಾರ ವಸ್ತುಗಳ ಹೆಸರುಗಳನ್ನು  ರೋಗಗಳ ಜತೆ ತಳುಕು ಹಾಕಿ ಹೆಸರು ಇಟ್ಟಿದ್ದು ಊಟ ಮಾಡುವಾಗ ಅದರ ನೆನಪು ಆಗುವುದು .ಉದಾ ಕಾಲರಾ ದಲ್ಲಿ ರೈಸ್ ವಾಟರ್ (ಗಂಜಿ )ಮತ್ತು ಟೈಫಾಯಿಡ್ ನಲ್ಲಿ  ಶೇಂಗಾ ಸೂಪ್ ಭೇದಿ ,ಇದೇ  ರೀತಿ ಕೋಲಾ ಕಲರ್ಡ್ ಮೂತ್ರ ,ಜಾಯಿಕಾಯಿ ಲಿವರ್ ,ಸ್ಟ್ರಾಬೆರಿ  ಪಿತ್ತಕೋಶ ,ಬ್ರೆಡ್ ಅಂಡ್ ಬಟರ್ ಅಪಿಯರೆನ್ಸ್ , ಎಂಕೋವಿ (ಮೀನು)ಸಾಸ್ ಕೀವು ಇತ್ಯಾದಿ ಹಲವು ಇವೆ

  ಫೋರೆನ್ಸಿಕ್ ಮೆಡಿಸಿನ್  ತರಗತಿಗಳು ರಂಜಕ .ನಮ್ಮ ಪ್ರಾಧ್ಯಾಪಕರಾಗಿದ್ದ ಡಾ ಭಾಸ್ಕರ್ ಸಿಗಾರ್ ಪೈಪ್ ಇಟ್ಟುಕೊಂಡು ಬರುವರು ,ಅವರಿಗೆ ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದು ,ಹಲವು ಪತ್ತೇದಾರಿ ಕಥೆಗಳನ್ನು ತಮ್ಮ ಅನುಭವದಿಂದ ಹೇಳುವರು . ಮರಣೋತ್ತರ ಪರೀಕ್ಷೆಗಳನ್ನು ನಾವು ಅಟೆಂಡ್ ಮಾಡಬೇಕಿತ್ತು . ಇದು ಕಷ್ಟದ ವಿಷಯ ಅಲ್ಲದಿದ್ದರೂ ನಮ್ಮ ಫೈನಲ್ ಪರೀಕ್ಷೆಯಲ್ಲಿ ಭಾರೀ ಅನ್ಯಾಯ ಆಯಿತು .ಡಾ ಭಾಸ್ಕರ್  ಒಳ್ಳೆಯವರು .ಆದರೆ ಪರೀಕ್ಷೆಗೆ ನಮಗೆ ಆಂತರಿಕ ಪರೀಕ್ಷಕರು ಇರಲಿಲ್ಲ .ಹೊರಗಿನಿಂದ ಬಂದವರು ಪೂರ್ವಾಗ್ರಹ ಪೀಡಿತರಾಗಿ ಬಂದಂತ್ತಿತ್ತು .ನಮ್ಮ ತರಗತಿಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಫೇಲ್ ಮಾಡಿ ಹೋದರು . ಆಗ ಈ ತರಹ ಅಲ್ಲಲ್ಲಿ ನಡೆಯುತ್ತಿತ್ತು . ಪ್ರಾಧ್ಯಾಪಕರ ಮರ್ಜಿಯ ಮೇಲೆ ವಿದ್ಯಾರ್ಥಿಯ ಭವಿಷ್ಯ .. ವಿದ್ಯಾರ್ಥಿ ಎಷ್ಟು ಪ್ರಾಮಾಣಿಕ ,ಬುದ್ದಿವಂತ ಆಗಿದ್ದರೂ ಸಾಲದು ,ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ .ಆದರೆ ಇಂತಹವರು ಅಪರೂಪಕ್ಕೆ ಕೆಲವರು ಇದ್ದು ಬಹುತೇಕ ಅಧ್ಯಾಪಕರು ಒಳ್ಳೆಯವರು ಆಗಿದ್ದರು . 

ಈ ಅನ್ಯಾಯದ ಬಗ್ಗೆ ಆಗ  ಇಲ್ಲಿಯ ಅತ್ಯಧಿಕ ಪ್ರಸಾರ ಇದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮುಖ ಪುಟದ ಲೇಖನ ಬಂದಿತು . ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತೂ  ನಾಜೂಕು ಆಯಿತು .ನಮ್ಮವರೇ ಪತ್ರಿಕೆಗೆ ಸುದ್ದಿ ಕೊಟ್ಟದ್ದು ಎಂದು ತಿಳಿದು ಮುಂದಿನ ಪರೀಕ್ಷೆಯಲ್ಲಿಯೂ ಅದೇ ಪರೀಕ್ಷಕರು ಅಥವಾ ಅವರ ಮಿತ್ರರು ಬಂದರೆ ಬಹಳ ಕಷ್ಟ ವಾದೀತು  ಎಂದು ನಾವೆಲ್ಲಾ ಪತ್ರಿಕೆಯ ಆಫೀಸ್ ಗೆ ದೌಡಾಯಿಸಿದೆವು ..ಸಂಪಾದಕರು ನಿಮಗೆ ಆದ ಅನ್ಯಾಯ ಪುನಃ ಮರುಕಳಿಸ ಬಾರದು ಎಂಬುದುದಷ್ಟೇ ನಮ್ಮ ಉದ್ದೇಶ ಎಂದು ಸಮಾಧಾನ ಮಾಡಿ ಕಳುಹಿಸಿದರು . ನಮ್ಮ ಅದೃಷ್ಟಕ್ಕೆ ಮುಂದಿನ ಪರೀಕ್ಷೆಗೆ ವಿಶ್ವವಿದ್ಯಾನಿಲಯ ದವರು ಡಾ ಭಾಸ್ಕರ್ ಜತೆಗೆ ರಾಜ್ಯದ ಹೊರಗಿನಿಂದ ಪರೀಕ್ಷಕರನ್ನು ತರಿಸಿದರು ಮತ್ತು ಅನ್ಯಾಯವಾಗಿ  ಅನುತ್ತೀರ್ಣರಾದ ಎಲ್ಲರೂ ಉನ್ನತ ದರ್ಜೆಯಲ್ಲಿ ಪಾಸ್ ಆದರು  

ಬಾಲಂಗೋಚಿ : ಔಷಧಿ ಶಾಸ್ತ್ರದಲ್ಲಿ ಮದ್ಯಪಾನ ಮತ್ತು ಲೈಂಗಿಕತೆ ಯ  ಬಗ್ಗೆ ಶೇಕ್ಸ್ ಪಿಯರ್ ನ ಮಾಕ್ಬೆತ್ ನಾಟಕದ ಒಂದು ಉಕ್ತಿಯನ್ನು ಕೋಟ್ ಮಾಡುವರು " It provokes the desire, but it takes away the performance"

 

ಸೋಮವಾರ, ಏಪ್ರಿಲ್ 26, 2021

ಹುಬ್ಬಳ್ಳಿಯ ದಿನಗಳು 8

   ಹುಬ್ಬಳ್ಳಿಯ ದಿನಗಳು 8

ಕೆ ಎಂ ಸಿ ಯ ಸುವರ್ಣ ದಿನಗಳು ನಾವು ಅಲ್ಲಿಗೆ ಸೇರುವಾಗ ಮುಗಿದು ಕೊಂಡು ಬಂದು ಅವನತಿಯ ಪರ್ವ ಆರಂಭ ಆಗಿತ್ತು . ರಾಜ್ಯದ ನಾಲ್ಕು ಮೆಡಿಕಲ್ ಕಾಲೇಜ್ ನ ಅಧ್ಯಾಪಕರಿಗೆ ವರ್ಗಾವಣೆ ಇದ್ದು ಹುಬ್ಬಳ್ಳಿ ಗೆ ಬರಲು ಹಳೆ ಮೈಸೂರು ಕಡೆಯವರು ಹಿಂದೇಟು ಹಾಕುತ್ತಿದ್ದರು . ತಮ್ಮ ಪ್ರಭಾವ ಉಪಯೋಗಿಸಿ ಅಲ್ಲೇ ಉಳಿದು ಕೊಳ್ಳುತ್ತಿದ್ದರು .ಇಲ್ಲಿಗೆ ವರ್ಗ ಅದವರು ರಜೆ ಹಾಕಿ ಹುಣ್ಣಿಮೆಗೊ ಅಮಾವಾಸ್ಯೆಗೋ ಒಮ್ಮೆ ಬರುವರು.ಹೆಚ್ಕಿನವರು ಅಲ್ಲಿ ಪ್ರೈವೇಟ್ ಪ್ರಾಕ್ಟೀಸ್ ಇಟ್ಟುಕೊಂಡಿದ್ದು ,ನರ್ಸಿಂಗ್ ಹೋಮ್ ನಡೆಸುವವರೂ ಇದ್ದರು . ಕಾಲೇಜಿಗೆ ಖಾಯಂ ಪ್ರಿನ್ಸಿಪಾಲ್ ,ಇಲ್ಲದೆ ಹೊಟೇಲ್ ನಲ್ಲಿ ಇಂದಿನ ವಿಶೇಷ ಏನು ಎಂದು ಕೇಳುವಂತೆ ಇಂದಿನ ಪ್ರಿನ್ಸಿಪಾಲ್ ಯಾರು ಎಂದು ಕೇಳುವ ಸ್ಥಿತಿ ಬಂದಿತ್ತು . ಹಿಂದಿನವರ ಪುಣ್ಯದ ಪ್ರಭಾವದಿಂದ ಆಸ್ಪತ್ರೆ ಮತ್ತು ಕಾಲೇಜ್ ನಡೆಯುತ್ತಿದ್ದವು .

ನಮ್ಮ ಅದೃಷ್ಟಕ್ಕೆ ಸರ್ಜರಿ ಯಲ್ಲಿ ಒಳ್ಳೆಯ ಅಧ್ಯಾಪಕರು ಇದ್ದರು .ಡಾ ಎಸ್ ಆರ್ ಕೌಲ್ಗುಡ್ ,ಡಾ ವಿಜಯಕಾಂತ್ ,ಡಾ ಕೆ ಜಿ ನಾಯಕ್ ,ಡಾ ಬೂದಿಹಾಳ್ ,ಡಾ ಗಿರಿಗೌಡ ,ಮತ್ತು ಡಾ ಲಕ್ಷ್ಮೀಕಾಂತ್ ನೆನಪಿಗೆ ಬರುವರು . ನಾನು ವಿದ್ಯಾರ್ಥಿ ಯಾಗಿ ಮತ್ತು ಹೌಸ್ ಸರ್ಜನ್ ಆಗಿ ಡಾ ಕೌಲ್ಗುಡ್ ,ಡಾ ನಾಯಕ್ ,ಗಿರಿಗೌಡ ಮತ್ತು ಲಕ್ಷ್ಮೀಕಾಂತ್ ಯೂನಿಟ್ ನಲ್ಲಿ ಇರುವ ಸೌಭಾಗ್ಯ ದೊರಕಿತ್ತು .

ಸ್ತ್ರೀ ರೋಗ ವಿಭಾಗದಲ್ಲಿ ಡಾ ಎಸ್ ಏನ್ ಕೌಲ್ ಗುಡ್ ಮುಖ್ಯಸ್ಥರು ,ಡಾ ಪದ್ಮಾ ರಾವ್(ಹಿರಿಯ ಐ ಎ ಎಸ ಅಧಿಕಾರಿ ಆಗಿದ್ದು ಜೈತ್ರ ಯಾತ್ರೆ ಎಂಬ ಆತ್ಮ ಚರಿತ್ರೆ ಬರೆದ ಕೆ ಜೈರಾಜ್ ಇವರ ಪುತ್ರ ) ಮತ್ತು ಇಂದುಮತಿ ವಿಶಾಲಾಕ್ಷಿ ಪ್ರಾಧ್ಯಾಪಕರು .ನಾನು ಡಾ ಕೌಲ್ ಗುಡ್ ಯೂನಿಟ್ ನಲ್ಲಿ ಇದ್ದು ಡಾ ಸುನಂದಾ ಕುಲಕರ್ಣಿ(ಸುಧಾ ಮೂರ್ತಿ ಸಹೋದರಿ ) ,ಡಾ ದಮಯಂತಿ ಇದ್ದರು . 

ಕೌಲ್ ಗುಡ್ ಸಹೋದರರು ಪ್ರಾಮಾಣಿಕರೂ ,ವಿದ್ವಜ್ಜನರೂ ಆಗಿದ್ದು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು . ಸರ್ಜರಿ ಕೌಲ್ ಗುಡ್ ಸ್ಥಿತ ಪ್ರಜ್ಞ ,ಮೃದು ಭಾಷಿ ಯಾಗಿದ್ದರೆ  ಸ್ತ್ರೀ ರೋಗ ದವರು ಭಾವ ಜೀವಿ ಮತ್ತು  ಗಟ್ಟಿ ಧ್ವನಿಯವರು . ಎಸ ಏನ್ ಕೌಲ್ಗುಡ್ ಪತ್ನಿಗೆ ರಕ್ತ ಕೊಡಲು ಹಿಂಜರಿಯುವ ಗಂಡಂದಿರಿಗೆ ಗದರಿಸುವರು ,ಕೆಲವೊಮ್ಮೆ ಏಟು ಹಾಕಿದ್ದೂ  ಇದೆ ಎಂದು ಪ್ರತೀತಿ .ಆಮೇಲೆ  ತಾವೇ ರಕ್ತ ಕೊಡುವರು . ಅವರು ನೂರಾರು ಭಾರಿ ರಕ್ತ ದಾನ ಮಾಡಿರಬಹುದು .ಅವರ ಓ ಪಿ ಡಿ ಯಲ್ಲಿ  ಯಾವಾಗಲೂ  ಜನ ಗಂಗುಳಿ ,ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾದದ್ದು ಮುಗಿಯುವಾಗ ಸಂಜೆ ಆಗುತ್ತಿತ್ತು .ಆಮೇಲೆ ಮನೆಗೆ ಹೋಗಿ ಊಟದ ಶಾಸ್ತ್ರ  ಮುಗಿಸಿ ರೌಂಡ್ಸ್ ಗೆ ಬರುವರು .ಸಣ್ಣ ಸಣ್ಣ ತಪ್ಪಿಗೆ ರೇಗುವರು .ದೊಡ್ಡ ತಪ್ಪನ್ನು ಸಮಾಧಾನದಿಂದ ಪರಿಹಾರ ಮಾಡುವರು . ನಾನು ಹೌಸ್ ಸರ್ಜನ್ ಆಗಿದ್ದ ವೇಳೆ ಕುಮಟಾ ದ  ಡಾ ಟಿ ಏನ್ ಹೆಗ್ಡೆ ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದು ,ಈಗ ಜನಪ್ರಿಯ ಸ್ತ್ರೀ ರೋಗ ತಜ್ಞರು ಮತ್ತು ಈಗಲೂ ನನ್ನ ಸ್ನೇಹಿತರು . 

ಎಸ ಏನ್ ಕೌಲ್ಗುಡ್ ನಿಯಮಿತವಾಗಿ  ಮತ್ತು ಪರೀಕ್ಷಾ ಸಮಯ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವರು .ತರಗತಿಯ ಕೊನೆಗೆ I may not be that good but i am Koulgud  ಎನ್ನುವರು . ಎರಡು ಮಂದಿ  ಕೌಲ್ಗುಡ್ ಇದ್ದ ಕಾರಣ ಒಂದು ಬೆರಳಿನ ವರು ಮತ್ತು ಎರಡು ಬೆರಳಿನವರು ಎಂದೂ ತಮಾಷೆಗೆ ಗುರುತಿಸುತ್ತಿದ್ದರು . ಸರ್ಜನ್ ದೊಡ್ಡಕರುಳು ,ಗುದ ದ್ವಾರ ಪರೀಕ್ಷೆಗೆ ಒಂದು ಬೆರಳು ಉಪಯೋಗಿದರೆ ಸ್ತ್ರೀ ರೋಗ ತಜ್ಞರು  ಜನನಾಂಗ ,ಗರ್ಭಕೋಶ ಪರೀಕ್ಷೆಗೆ ಎರಡು ಬೆರಳು ಉಪಯೋಗಿಸುವರು . 

  ಇವರು ಮತ್ತು ಸರ್ಜರಿಯಲ್ಲಿ ಡಾ ಕೆ ಜಿ ನಾಯಕ್ ಮತ್ತು ಡಾ ಗಿರಿ ಗೌಡ ಯಾವುದೇ  ಹೆಚ್ಚಿನ  ಆರ್ಥಿಕ ಲಾಭ ಇಲ್ಲದಿದ್ದರೂ ತಪ್ಪದೆ  ಸ್ಪೆಷಲ್ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು . ಅವರಿಗೆಲ್ಲಾ ನಾವು ಎಷ್ಟು ಋಣಿ ಗಳು ಆದರೂ ಸಾಲದು 

 ಇನ್ನೊಂದು ಮುಖ್ಯ ವಿಷಯ ಮೆಡಿಸಿನ್ ವಿಭಾಗ .ಇದು ಸ್ವಲ್ಪ ಲಾಚಾರ  ಸ್ಥಿತಿಯಲ್ಲಿ ಇತ್ತು ಇಲಾಖಾ ಮುಖ್ಯಸ್ಥರೇ ಸರಿಯಾಗಿ ಇರಲಿಲ್ಲ .ಫೋರೆನ್ಸಿಕ್ ಮೆಡಿಸಿನ್ ನಲ್ಲಿ ಆದಂತೆ ಹೊರಗಿನಿಂದ ಬಂದ  ಪರೀಕ್ಷಕರು ನಿರ್ದಾಕ್ಷಿಣ್ಯವಾಗಿ ನಮ್ಮ ಬ್ಯಾಚ್ ನ ಮೇಲೆ  ವಿನಾ ಕಾರಣ  ಪ್ರಹಾರ ಮಾಡಿದರು . 

ಕೆ ಜಿ ನಾಯಕ್ ಮತ್ತು ಗಿರಿ ಗೌಡ ಬಗ್ಗೆ ಮುಂದೆ ಬರೆಯುವೆನು 

ಬಾಲಂಗೋಚಿ : ಕಲ್ಲಿಕೋಟೆ ಮೆಡಿಕಲ್ ಕಾಲೇಜ್ ನಲ್ಲಿ ಕಾಸರಗೋಡು ಮೂಲದ ಇಬ್ಬರು ಭಟ್ ಡಾಕ್ಟರ್ ಗಳು ಇದ್ದರು.(ಸಹೋದರರಲ್ಲ ).ಒಬ್ಬರು  ಕಣ್ಣಿನ ,ಮತ್ತೊಬ್ಬರು ಮುತ್ರಾಂಗ ಶಸ್ತ್ರಕ್ರಿಯ ತಜ್ನರು .ಅಲ್ಲಿ ರೋಗಿಗಳು ಭಟ್ ಡಾಕ್ಟರರು ಇದ್ದಾರೆಯೇ ಎಂದು ಕೇಳಿದಾದ "ನಿ0ಙಳುಕ್ಕು ನೇತ್ರ ಡಾಕ್ಟ್ರು ವೇಣೋ ಮೂತ್ರ ಡಾಕ್ಟ್ರುವೇಣೋ' ಎಂದು ಕೇಳುತ್ತಿದ್ದರಂತೆ

ಭಾನುವಾರ, ಏಪ್ರಿಲ್ 25, 2021

ಹುಬ್ಬಳ್ಳಿ ನೆನಪುಗಳು 6 ಕ್ಲಿನಿಕಲ್ ಪೋಸ್ಟಿಂಗ್

              ಹುಬ್ಬಳ್ಳಿ ನೆನಪುಗಳು 6   ಆಸ್ಪತ್ರೆ ಕಲಿಕೆ (ಕ್ಲಿನಿಕಲ್ ಪೋಸ್ಟಿಂಗ್ )

 He who studies medicine without books sails an uncharted sea, but he who studies medicine without patients does not go to sea at all. William Osler.

   

ಒಂದೂವರೆ ವರ್ಷದ ಧೀರ್ಘ ಅಧ್ಯಯನ ಬಳಿಕ ನಾವು ಕ್ಲಿನಿಕಲ್ ವಿದ್ಯಾರ್ಥಿಗಳಾದೆವು. ಆಸ್ಪತ್ರೆ ಒಳಗೆ ನಮಗೆ ಪ್ರವೇಶ . ಉರಗ ಭೂಷಣ ಶಿವನಂತೆ ಸ್ಟೇಥೋಸ್ಕೋಪ್ ಧರಿಸಿ ,ಕೋಟ್ ನ ಪಾಕೆಟ್ ನಲ್ಲಿ  ಒಂದು ಮೊಣಕಾಲ ಚಮ್ಮಟಿ (knee hammer),ಪೆನ್ ಟಾರ್ಚ್,ಅಳೆಯುವ ಟೇಪ್ ಧಾರಿಗಳಾಗಿ ಬಲಗಾಲು ಒಳಗಿಟ್ಟು ಆಸ್ಪತ್ರೆ ಪ್ರವೇಶಿಸುವಾಗ ಆಗಲೇ ವೈದ್ಯರಾದ ಸಂತೋಷ . 

ಆದರೆ ಜ್ಯೂನಿಯರ್  ಮೆಡಿಕೊ ಗಳಾದ ನಮ್ಮನ್ನು ವಾರ್ಡ್ ನರ್ಸ್ ಗಳು ಕನಿಕರದಿಂದ ಮತ್ತು ಬಹಳಷ್ಟು ರೋಗಿಗಳು ಅನುಮಾನದಿಂದ ನೋಡಿದಾಗ ನಮಗೆ ನಾವು ನಡೆಯಲಿರುವ ದಾರಿ ಹೂವ ಹಾಸು ಅಲ್ಲ ಮತ್ತು ಬಲು ದೂರ ಎಂಬ ವಾಸ್ತವ ಬಹು ಬೇಗ ಮನವರಿಕೆ ಆಯಿತು . ಮೆಡಿಸಿನ್ ಪೊಸ್ಟಿಂಗ್ಸ್ ನಲ್ಲಿ  ಕನ್ನಿ0ಗ್ ಹ್ಯಾಮ್ ವಿರಚಿತ ಕೈಪಿಡಿ  ಮತ್ತು ಸರ್ಜರಿ ಯಲ್ಲಿ ಡಾ ದಾಸ್ ಅವರದ್ದು .

ಬಹಳ ಜನರು  ಆ ಆಸ್ಪತ್ರೆ ಬೇಡ ,ಅಲ್ಲಿ ಕಲಿಯುವ ಡಾಕ್ಟರರು ,ಹೌಸ್ ಸರ್ಜನ್ ,ಪಿ ಜಿ ಗಳು ಮದ್ದು ಕೊಡುವುದು ,ಆಪರೇಷನ್ ಮಾಡುವುದು ಎಂದು ಮೂಗು ಮುರಿಯುವರು .ಅಮೆರಿಕಾ ದೇಶದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಇಂತಹ ಅಸ್ಪ್ತ್ರೆಗಳಲ್ಲಿ ಯೇ (ನುರಿತ ವೈದ್ಯರು ಮಾತ್ರ ಇರುವ ಆಸ್ಪತ್ರೆಗಳಿಗೆ ಹೋಲಿಸಿದರೆ )ಮರಣ ಪ್ರಮಾಣ ಕಡಿಮೆ ಮತ್ತು ಗುಣಮುಖ ರಾಗುವವರ  ಸಂಖ್ಯೆ ಅಧಿಕ ಎಂದು ಕಂಡು ಬಂದಿದೆ . ಯಾಕೆಂದರೆ ಬಹಳಷ್ಟು ವಿದ್ಯಾರ್ಥಿ ವೈದ್ಯರು ತಮ್ಮ ಅನನುಭವದಿಂದ ತೊಂದರೆ ಬರದಂತೆ ವಿಶೇಷ ಅಧ್ಯಯನ ಮಾಡುವರಲ್ಲದೆ  ಚಿಕಿತ್ಸೆಗೆ ರೋಗಿಯ ಸ್ಪಂದನೆ ಬಗ್ಗೆ ಹೆಚ್ಕು ಬಾರಿ ಅವಲೋಕನ ನಡೆಸುವರು .

  ವಾರ್ಡ್ ನಲ್ಲಿ ನಾವು ರೋಗಿಯ ರೋಗ (ಈಗಿನ ಮತ್ತು ಹಿಂದಿನ )ಚರಿತ್ರೆ ,ಕುಟುಂಬ ರೋಗ ಮತ್ತು ಚಿಕಿತ್ಸಾ ವಿವರ ಎಲ್ಲಾ  ಹಾಕಿ ಅದರ ಆಧಾರದ ಮೇಲೆ ಅಂಗಾಂಗಗಳ ಪರೀಕ್ಷೆಯ ಆದ್ಯತೆ ನಿರ್ಧರಿಸುವೆವು .ಉದಾಹರಣೆಗೆ ಹೊಟ್ಟೆ ನೋವು ಮತ್ತು ವಾಂತಿ ಎಂದು ಬಂದರೆ ಉದರ ಪರೀಕ್ಷೆ .ಆದರೆ ಎಲ್ಲಕ್ಕೂ ಮೊದಲು ಸಾಮಾನ್ಯ ಶರೀರ ಪರೀಕ್ಷೆ ಮತ್ತು ಕೊನೆಗೆ ಸರ್ವಾಂಗ ಪರೀಕ್ಷೆ ಮಾಡಬೇಕು .

ಸಾಮಾನ್ಯ ಪರೀಕ್ಷೆಯ ವಿವರ ಈ ರೀತಿ ಇರುವುದು . "ಮಧ್ಯ ವಯಸ್ಸಿನ ಸಾಮಾನ್ಯ ಮೈಕಟ್ಟು ಮತ್ತು ಬಡ  ಆಹಾರ ಪೋಷಣೆ ಇರುವ ವ್ಯಕ್ತಿ ,ನಾಡಿ  ನಿಮಿಷಕ್ಕೆ ೭೪ ,ನಿಯಮಿತ ,ಸರಿಯಾದ ಪರಿಮಾಣ ,ಮತ್ತು ಎಲ್ಲಾ ನಾಡಿಗಳು ಸಮನಾಗಿ ಸಿಗುವವು ,ಉಷ್ಣತೆ ೯೮.೬  ಫೆ ., ರಕ್ತಹೀನತೆ ಮತ್ತು ಕಾಮಾಲೆ ಇಲ್ಲ ,ಕೈಕಾಲ ಬೆರಳಲ್ಲಿ ಉಗುರ ಬಾಗುವಿಕೆ ಅಥವಾ ತಟ್ಟೆಯಾಕಾರ ಇಲ್ಲ . ಶರೀರದಲ್ಲಿ ಗಣನೀಯ ದುಗ್ಧ ಗ್ರಂಥಿಗಳ  ಊತ ಇಲ್ಲ "

ಮುಖ್ಯ ಅಂಗ ಪರೀಕ್ಷೆ ನಿರೀಕ್ಷಣೆ ,ಸ್ಪರ್ಶ ,ಮರ್ದನ ಮತ್ತು ಶ್ರವಣ ಈ ಆರ್ಡರ್ ನಲ್ಲಿಯೇ ನಡೆಸ ಬೇಕು .. ನಿರೀಕ್ಷಣೆಗೆ ಕಣ್ಣು ಮತ್ತು ಮೆದುಳು (ಮನವರಿಯದುದ ಕಣ್ಣು ನೋಡದು Eyes don't  see what mind doesn't know ಎಂಬುದು ವೈದ್ಯ ಶಾಸ್ತ್ರದ ಪ್ರಸಿದ್ಧ ನುಡಿಗಟ್ಟು ),ಸ್ಪರ್ಶಕ್ಕೆ ಅಂಗೈ ,ಮರ್ದನಕೆ ಬೆರಳುಗಳು ,ಶ್ರವಣಕ್ಕೆ ಸ್ಟೆಥೋಸ್ಕೋಪ್ .. 

ಉದರ ಪರೀಕ್ಷಾ ವರದಿ ಈ ಪರಿ ಇರುವುದು . ಹೊಟ್ಟೆಯ ಆಕಾರ ಸಾಮಾನ್ಯ ವಾಗಿದ್ದು ಉಸಿರಾಟದೊಡನೆ  ಎಲ್ಲಾ  ಭಾಗಗಳೂ ಒಂದೇ ತರನಾಗಿ ಮೇಲೆ ಕೆಳಗೆ ಹೋಗುತ್ತಿವೆ .ಹೊಕ್ಕುಳು ಮಧ್ಯ ಭಾಗದಲ್ಲಿ ಇದ್ದು ,ಉದರದ ಮೇಲ್ಮೈ ಯಲ್ಲಿ ಅಭಿಧಮನಿ ಗಳು (ಸಾಮಾನ್ಯರ ಭಾಷೆಯಲ್ಲಿ ನರ )ಉಬ್ಬಿ ಕಾಣುವುದಿಲ್ಲ ಮತ್ತು ಕರುಳಿನ ಚಲನೆ  ಕಾಣುವುದಿಲ್ಲ . ಉದರದ ಸುತ್ತಳತೆ --- ಇಷ್ಟು ಇದೆ 

ಮುಟ್ಟಿ ನೋಡಿದಾಗ ಲಿವರ್ ಪಕ್ಕೆಲುಬಿನಿಂದ ಎರಡು ಇಂಚು ಕೆಳಗೆ ಕೈಗೆ ಸಿಗುವುದು ,ಗಟ್ಟಿಯಾಗಿದ್ದು ,ಸ್ಪರ್ಶಿಸಿದಾಗ ವೇದನೆ ಇದೆ . 

ಮರ್ದನದಲ್ಲಿ ಲಿವರಿನ  ಅಳತೆ ---- ಇಷ್ಟು ಇದೆ . ದ್ರವಶೇಖರಣೆ ಲಕ್ಷಣಗಳು ಇಲ್ಲ . 

ಶ್ರವಣದಲ್ಲಿ  ಸಾಮಾನ್ಯ ಕರುಳಿನ ಚಲನಾ  ದನಿ ಕೇಳಿಸುವುದು .ಲಿವರ್ ನ ಮೇಲೆ ಅನ್ಯ ಶಬ್ದಗಳು ಇಲ್ಲ . 

ಹೆರ್ನಿಯಾ ಉಂಟಾಗ ಬಲ್ಲ ಸ್ಥಳಗಳು ಸಾಮಾನ್ಯ ವಾಗಿ ಇದ್ದು ವೃಷಣ ಮತ್ತು ವೃಷಣ ಚೀಲಗಳು ನಾರ್ಮಲ್ ಇವೆ . ಉದರ ಪರೀಕ್ಷೆ   ಜನನಾಂಗ ಮತ್ತು ತೊಡೆ ಬುಡ ಪರೀಕ್ಷೆಯ ಹೊರತು ಪೂರ್ಣವಾಗದು ಎಂದು ಪುನಃ ಪುನಃ ಕಲಿತು ,ಕಲಿಸಿದ್ದರೂ ಈಗಲೂ ಬೇರೆ ಬೇರೆ ಕಾರಣಗಳಿಂದ ಅದು ಬಿಟ್ಟು ಹೋಗುವುದು .ಬಹಳ ವಿದ್ಯಾರ್ಥಿಗಳು ಈ ಲೋಪಕ್ಕಾಗಿ  ಅನುತ್ತೀರ್ಣ ಆದದ್ದುಂಟು . 

ಆಮೇಲೆ  ಶ್ವಾಸ ಕೋಶ ,ಹೃದಯ ,ನರಾಂಗ ಪರೀಕ್ಷೆಯಲ್ಲಿ ವಿಶೇಷವೇನೂ ಕಂಡು ಬರುವುದಿಲ್ಲ . 

ನನ್ನ  ಪೂರ್ವಭಾವೀ  ರೋಗ ನಿದಾನ (ಡಯ ಗ್ನೋಸಿಸ್ ) ಅಮೀಬಿಕ್ ಲಿವರ್ ಕಾಯಿಲೆ . 

ಮಾಡಬೇಕಾದ  ಪರೀಕ್ಷೆಗಳು . 

ಆಗೆಲ್ಲಾ ಸ್ಕ್ಯಾನ್ ಇರಲಿಲ್ಲ ,ನಮ್ಮ ಅನುಭವ ಮತ್ತು ರೋಗಿಯ ಕೂಲಂಕುಷ ಪರೀಕ್ಷೆಗೆ ಹೆಚ್ಚಿನ ಮಹತ್ವ ಇತ್ತು

ಶುಕ್ರವಾರ, ಏಪ್ರಿಲ್ 23, 2021

ಹುಬ್ಬಳ್ಳಿ ನೆನಪುಗಳು 5

              ಹುಬ್ಬಳ್ಳಿ ನೆನಪು ಗಳು 5 

                     

Jowar Roti Meals at Kamat | Mouli's blogಮಡಿಕೆ ಕಾಳಿನ ಪಲ್ಯUttar Karnataka Special Madike kaalu palya recipe| Moth  beans Sprouts curry or bhaji - YouTube

ಹುಬ್ಬಳ್ಳಿಯಲ್ಲಿ ನನಗೆ ಉತ್ತರ ಕರ್ನಾಟಕದ ಆಹಾರ ಕ್ರಮಗಳ ಪರಿಚಯ ಆಯಿತು . ಮೊದಲನೆದಾಗಿ  ಅದು ವರೆಗೆ ಕಾಫಿ ಕುಡಿಯುತ್ತಿದ್ದ ನಾನು ಚಹಾದ ದಾಸನಾದೆ .ಇದಕ್ಕೆ ಕಾರಣ  ಮೆಸ್ಸ್ ನಲ್ಲಿ ಕಾಫಿ ಕೊಡುತ್ತಿರಲಿಲ್ಲ ;ಮತ್ತು ಖಾನಾವಳಿಗಳಲ್ಲಿ ಒಳ್ಳೆಯ ಕಾಫಿ ಸಿಗದು ,ಚಹಾ ಮಾತ್ರ ಎಲ್ಲೆಡೆ ಖಡಕ್ . ಬೇಂದ್ರೆಯವರು ಇನ್ನೂ ಯಾಕೆ ಬರಲಿಲ್ಲಾವ  ಹುಬ್ಬಳ್ಳಿಯಾಂವ ದಲ್ಲಿ  ಚಹಾದ ಕೂಡಾ ಚೂಡಾ(ಚಿವುಡ ,ಹುರಿದ ಅವಲಕ್ಕಿ ಮಿಶ್ರಣ ) ದಾಂಗ ಎಂದು ಬರೆದಿದ್ದಾರೆ .(ಕಾಫಿ ಕೂಡ ಎಂದು ಬರೆದರೆ ಸೇರದು ). 

ಇನ್ನು ಅವರ ಊಟ ನಮ್ಮ ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ ಹೆಚ್ಚು ಸಮತೋಲ .ರೊಟ್ಟಿ ,ಸ್ವಲ್ಪ ಅನ್ನ ,ಸಾರು .ಮೊಸರು , ಕಾಳು ಪಲ್ಯ (ಮಡಿಕಿ ಕಾಳು ,ಅಲಸಂದಿ ,ಕಡಲೆ ಮತ್ತು ಹೆಸರು ),ಸೊಪ್ಪಿನ ಪಲ್ಯ .ಶೇಂಗಾ ಪುಟಾಣಿ  ಅಥವಾ ಗುರೆಳ್ಳು ಚಟ್ನಿ . ಅದರ ಜೊತೆ ಹಸಿ ಮೆಣಸಿನ ಕಾಯಿ .(ಇದು ಅಷ್ಟು ಒಳ್ಳೆಯದಲ್ಲ ). 

ನಮ್ಮ ಹಾಸ್ಟೆಲ್ ನಲ್ಲಿ ಜೋಳದ ರೊಟ್ಟಿ ಮಾಡುತ್ತಿದ್ದುದು ಕಡಿಮೆ ,ಚಪಾತಿ  ಕೊಡುತ್ತಿದ್ದರು .ಹಬ್ಬ ಹುಣ್ಣಿಮೆಗೆ ವಿಶೇಷವಾಗಿ ರೊಟ್ಟಿ ಮಾಡುವ ಅಕ್ಕನವರನ್ನು ಕರೆಸುತ್ತಿದ್ದರು .ಅವರು ರೊಟ್ಟಿ ತಟ್ಟುವ ಲಯ ಪೂರ್ಣ ಶಬ್ದ ಕಿವಿಯಲ್ಲಿದೆ .ಹೊರಗಡೆ ಮೆಸ್ಸ್ ಗಳಲ್ಲಿ ಒಂದು ಹೊತ್ತು ರೊಟ್ಟಿ ,ಇನ್ನೊಂದು ಹೊತ್ತು ಚಪಾತಿ ಕೊಡುತ್ತಿದ್ದರು . 

ಹಬ್ಬದ ದಿನ ಮತ್ತು ಕೆಲವು ಭಾನುವಾರ  ಕಡಲೆ ಝುಣಕ  ಬದನೆಕಾಯಿ ಎಣ್ಣೆ ಗಾಯಿ ,ಮತ್ತು ಶೇಂಗಾ ಹೋಳಿಗೆ ಇರುತ್ತಿತ್ತು . 

ಹುಬ್ಬಳ್ಳಿಯ ಹೋಟೆಲ್ ಮತ್ತು ಹಾಸ್ಟೆಲ್ ಗಳಲ್ಲಿ ಆಗ ಜನಪ್ರಿಯ ಆಗಿದ್ದ ತಿಂಡಿಗಳು ನಮ್ಮಲ್ಲಿ  ಅಪರೂಪವಾದ ಬ್ರೆಡ್ ಒಗ್ಗರಣೆ ,ಬ್ರೆಡ್ ಬೋಂಡಾ ,ಅವಲಕ್ಕಿ ಒಗ್ಗರಣೆ .. 

   ನಾವು ಕಾಲೇಜಿಗೆ ಸೇರುವಾಗ ಪ್ರಸಿದ್ದ ಕಾಮತ್ ಹೋಟೆಲ್ ನವರು ಕಾಲೇಜು ಕ್ಯಾಂಟೀನ್ ನಡೆಸುತ್ತಿದ್ದು ಆಮೇಲೆ ಶಾಸ್ತ್ರೀ ಗ್ರೂಪ್ ನವರು ಏಲಂ ಪಡೆದರು . ಕ್ಯಾಂಪಸ್ ನ ಹಿಂಭಾಗದಲ್ಲಿ ಇದ್ದ ಪೈ ಹೋಟೆಲ್ ,ಎದುರು ಗಡೆ  ಕಾಮರ್ಸ್ ಕಾಲೇಜು ಮುಂದೆ ಸಂಗೀತಾ ಹೋಟೆಲ್ ವಿದ್ಯಾರ್ಥಿ ವೃಂದದಲ್ಲಿ ಜನ ಪ್ರಿಯ ಆಗಿದ್ದುವು . ಪಕ್ಕದಲ್ಲೇ ಇದ್ದ ಅಂಬೇಶ್  ಹೋಟೆಲ್ ,ಎದುರು ಗಡೆ  ಇದ್ದ ಗುರುದತ್ತ ಭವನ ಹೊಗ್ಗುತ್ತಿದ್ದೆವು . ಗುರುದತ್ತ ಭವನದ ಶ್ರೀ ಜಯಂತ ಶೆಟ್ಟಿ    ಉತ್ತಮ ಕ್ರಿಕೆಟ್ ಆಟಗಾರ ಆಗಿದ್ದು ರಣಜಿ ಟೀಮ್ ವರೆಗೆ ಹೋಗಿದ್ದ ನೆನಪು .ಮುಂದೆ ಅವರು ಪೊಲೀಸ್ ಇಲಾಖೆ ಸೇರಿದರು ಎಂದು ಕೇಳಿದ್ದೇನೆ .ಹೆಚ್ಚಿನ ಹೋಟೆಲ್ ನವರೂ ಮಂಗಳೂರು ಕಡೆಯವರು ಆಗಿದ್ದರೂ ನಮ್ಮೊಡನೆ ಹೆಚ್ಚು ಸಲಿಗೆ ಇರಲಿಲ್ಲ .ಯಾರಾದರೂ ದುರುಪಯೋಗ ಗೊಳಿಸಿದರೆ ಎಂಬ ಭಯ ಇದ್ದಿರ ಬಹುದು . 

ಇನ್ನು ಮಾಂಸಾಹಾರ  ಇಷ್ಟ ವಿದ್ದವರು ಹೆಚ್ಚಾಗಿ ಅವಲಂಬಿಸಿದ್ದ ಹೋಟೆಲ್ ಅಭಿಮಾನ್ ಕ್ಯಾಂಪಸ್ ನೇರ ಎದುರುಗಡೆ ಇತ್ತು . ಇನ್ನೊಂದು ಹೋಟೆಲ್ ಹೈ ವೇ  ; ಅದರ ಯಜಮಾನರು ನನ್ನ ಸಹಪಾಠಿ ಹರೀಶ್ ಕುಮಾರ್ ಎಂಬುವರ ಬಂಧುಗಳು ಆದ ಕಾರಣ ನನಗೂ ಮಿತ್ರರಾದರು

ಇನ್ನು  ನಮ್ಮ ಮಿತ್ರರು ಊರಿಂದ ಬರುವಾಗ ಕರದಂಟು (ಗೋಕಾಕ ) ,ಕುಂದಾ (ಬೆಳಗಾವಿ ),ಮತ್ತು ಪೇಡಾ (ಧಾರವಾಡ )ತರುವರು .ಇವುಗಳ ಪೈಕಿ ಕರದಂಟು ನನಗೆ ಬಲು ಇಷ್ಟ ವಾಯಿತು .ನನ್ನ ಸಹಪಾಠಿ ಗೋಕಾಕದ ಡಾ ಮಹೇಶ್ ಹೂಲಿ ಯಾವಾಗಲೂ ತಂದು ಕೊಡುತ್ತಿದ್ದರು . 

ನಾವು ಊರಿಗೆ ಹೋಗುವಾಗ ಧಾರವಾಡ ಪೇಡಾ  ಮತ್ತು ವಿದ್ಯಾನಗರದಲ್ಲಿ ಇದ್ದ ಶಿರೂರ್ ಗಾರ್ಡನ್ ದ್ರಾಕ್ಷಿ ತೋಟದಿಂದ ಹಣ್ಣು ಕೊಂಡು ಹೋಗುತ್ತಿದ್ದೆವು . ಧಾರವಾಡ ದ  ಲೈನ್ ಬಜಾರ್ ಠಾಕೂರ್ ಪೇಡಾ  ಬಹಳ ಪ್ರಸಿದ್ಧ ..ಈಗ ದ್ರಾಕ್ಷಿ ತೋಟ ಹೋಗಿ ಅದೇ ಹೆಸರಿನ ಬಡಾವಣೆ ಬಂದಿದೆ . 

ಇಂದಿಗೂ ನನಗೆ ಉತ್ತರ ಕರ್ನಾಟಕದ ಊಟ ಬಹಳ ಇಷ್ಟ . ದುರದೃಷ್ಟ ವಶಾತ್ ಉತ್ತರ ಕರ್ನಾಟಕದಲ್ಲಿಯೂ ಸಮಾರಂಭ ಗಳಲ್ಲಿ  ಇತ್ತೀಚಿಗೆ ಉತ್ತರ ಭಾರತದ ಊಟ ಮತ್ತು  ತಿನಸುಗಳು ಸ್ಥಳೀಯ ಆಹಾರದ ಸ್ಥಾನ ಆಕ್ರಮಿಸಿವೆ . ನಾನು ಎರಡು ವರ್ಷಗಳ ಹಿಂದೆ ಕಾನ್ಫರೆನ್ಸ್ ಗಾಗಿ  ಬೆಳಗಾವಿಗೆ ಹೋದವನು ಒಳ್ಳೆಯ ರೊಟ್ಟಿ ಊಟಕ್ಕೆ  ತುಂಬಾ ಹುಡುಕಾಡ  ಬೇಕಾಯಿತು . (ಕೊನೆಗೆ ಅನ್ನಪೂರ್ಣ ಎಂಬ ಒಳ್ಳೆಯ ಖಾನಾವಳಿ ಸಿಕ್ಕಿತು ಅನ್ನಿ ). 

ಈಗಲೂ ನಾನು ಆನ್ಲೈನ್ ಮೂಲಕ ಬಿಜಾಪುರ ದಿಂದ ಶೇಂಗಾ ಚಟ್ನಿ ,ಶೇಂಗಾ ಹೋಳಿಗೆ ಮತ್ತು ರೊಟ್ಟಿ ತರಿಸಿ ತಿನ್ನುವೆನು . ಹಲಸಿನ ಹಣ್ಣಿನ ಕಡುಬು ತಿನ್ನುವಾಗ ಅಜ್ಜ ಅಜ್ಜಿ ಯ  ನೆನಪಾದಂತೆ ಇವುಗಳನ್ನು ಸವಿಯುವಾಗ ನನ್ನ ಕೆ ಎಂ ಸಿ ದಿನಗಳು ಮತ್ತು ಮಿತ್ರರ ನೆನಪು ಆಗುವದು . ರೊಟ್ಟಿ ,ಚಟ್ನಿ ಮತ್ತು ಹೋಳಿಗೆ ಬಿಜಾಪುರದ ಉಮದಿ ಫುಡ್ಸ್ (   https://umadifoods.com/ ) ಮತ್ತು ಕರದಂಟು ಸದಾನಂದ ಸ್ವೀಟ್ಸ್ (   https://gokakkaradant.com/ ) ಆನ್ಲೈನ್ ಅಂಗಡಿಗಳಲ್ಲಿ ಸಿಗುವದು.ಅಲ್ಲದೆ ನನ್ನ ಮಿತ್ರ ಡಾ ವೈ ಬಿ ಭಜಂತ್ರಿ ಹುಬ್ಬಳ್ಳಿಯಿಂದ ನಾನು ಕೇಳಿದಾಗಲೆಲ್ಲ ಪಾರ್ಸೆಲ್ ಮಾಡಿ ಕಳುಹಿಸುವರು .

ಬುಧವಾರ, ಏಪ್ರಿಲ್ 21, 2021

ಹುಬ್ಬಳ್ಳಿ ನೆನಪುಗಳು 2

             ಹುಬ್ಬಳ್ಳಿ ನೆನಪುಗಳು 2 

 ರಾವ್ ಬಹಾದ್ದೂರ್ ,ಕೃಷ್ಣ ಮೂರ್ತಿ ಪುರಾಣಿಕ ,ಬೇಂದ್ರೆ ಯವರನ್ನು ಓದಿ ಕೊಂಡಿದ್ದ ನನಗೆ ಉತ್ತರ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯನ್ನು ಹತ್ತಿರದಿಂದ ಅರಿಯಲು ಅಲ್ಲಿ ನಾನು ಇದ್ದ ಆರು ವರ್ಷಗಳು ಸಹಾಯಕ ಆದವು . ಒಟ್ಟಿನ ಲ್ಲಿ ಮುಂಬೈ ಕರ್ನಾಟಕ ದ  ಜನರು ಒರಟರಂತೆ ಕಂಡರೂ ಸ್ನೇಹ ಜೀವಿಗಳು ಮತ್ತು ಗೆಳೆತನಕ್ಕಾಗಿ ಪ್ರಾಣ ಕೊಡಲೂ ಸಿದ್ದರು .                                                                             ಅವರ ಆಡು ನುಡಿಯಲ್ಲಿ ಉರ್ದು ಮತ್ತು ಮರಾಠಿ ಶಬ್ದಗಳು ಹೇರಳ . 

ಈರುಳ್ಳಿ ಉಳ್ಳಾಗಡ್ಡಿ ,ಹೋಟೆಲ್ ಖಾನಾವಳಿ ,ರಜೆ ಸೂಟಿ,ಬೇಗನೆ  ಲಗೂ  ,ಅಂಗಡಿ ದುಕಾನ ,ಆಸ್ಪತ್ರೆ  ದವಾಖಾನೆ , ಸ್ನಾನ ಝಳಕ ,ಮೂರು  ಮುಕ್ಕಾಲು ಪೌನೇ ಚಾರ್ ಆಗುತ್ತವೆ . ನೀವು ಚೆನ್ನಾಗಿ ಇದ್ದೀರಾ ಎನ್ನಲು ಛಲೋ  ಇದ್ದೀರೇನ್ರಿ ? ಬಹಳ ಆಯಿತು ಎನ್ನಲು ರಗಡ್  ಆತ್ರಿ ಎನ್ನುವರು .

ಕೆಲವು ಶಬ್ದ ಮತ್ತು ನುಡಿಗಟ್ಟುಗಳು ನನ್ನಲ್ಲಿ ಮೊದಲು ಕುತೂಹಲ ಉಂಟು ಮಾಡುತ್ತಿದ್ದವು .ರಖಂ ಮತ್ತು ಚಿಲ್ಲರೆ ವ್ಯಾಪಾರಸ್ಥರು ಎನ್ನುವುದಕ್ಕೆ  ಟೋಕ ಮತ್ತು ಕಿರುಕುಳ ವ್ಯಾಪರಿಗಳು ಎಂದು ನಾಮಫಲಕ .ಯಾರಿಗೆ ಕಿರುಕುಳ?

 ಆಮೇಲೆ  ಎನ್ನುವುದಕ್ಕೆ ಹಿಂದಾ ಗಡೆ  ಹಾಯಿಸಿ ಎನ್ನುವರು .ಉದಾ ಹಣ ಕಡ ಕೇಳುವಾಗ ,ಎರಡು ರೂಪಾಯಿ ರೊಕ್ಕ ಉದ್ರಿ  ಕೊಡ್ರಿ ಹಿಂದಾ ಗಡೆ  ಆಯಿಸಿ ಕೊಡ್ತೀನ್ರಿ ಎನ್ನುವರು .ಇವನು ಹಿಂದುಗಡೆಯಿಂದ ಯಾಕೆ ಕೊಡುವನು ,ಎದುರಿನಿಂದ ಕೊಡಬಾರದೇ ? ಅಂಗಡಿಯವನು ಕೇಳಿದ ವಸ್ತು ಇಲ್ಲದಿದ್ರೆ ಈಗ ಇಲ್ರಿ ಹಿಂದಾ ಗಡೆ ಹಾಯಿಸಿ ಬರ್ರಿ ಎಂದರೆ ನೀವು ಅಂಗಡಿ ಹಿಂದೆ ಹೋದ್ರಿ ಮತ್ತೆ .ಅದೇ ರೀತಿ ಹೊಟೇಲ್ ಹೊಟೇಲ ,ಕಾಲೇಜ್ ಕೋಲೇಜ ಆಗುವುದು .

 ಸ್ನೇಹಿತರಲ್ಲಿ ವಾಚ್ಯವಾಗಿ ಉಪಯೋಗಿಸುವ ಸಂಬೋಧನೆ ಶಬ್ದಗಳು ಅಕ್ಷರ ರೂಪದಲ್ಲಿ  ಮಡಿವಂತರಿಗೆ ಹೀಗೂ ಉಂಟೇ ಎಂದು ತೋರ ಬಹುದು .ಭಾರೀ  ಗಳಸ್ಯ ಕಂಠಸ್ಯ ಇರುವ ಮಿತ್ರರು ಸ್ನೇಹಿತನಿಗೆ ಸೂಳೆ ಮಗನೇ ,ಇನ್ನೂ ಹೆಚ್ಚು ಪ್ರೀತಿ ತೋರಿದರೆ ಹುಚ್ ಸೂಳೇ ಮಗನೇ ಎಂದು ಕರೆಯುವರು . 

ಆಸ್ಪತ್ರೆಗೆ ಬರುವ ರೋಗಿಗಳ ಮಾತಿನಲ್ಲಿಯೂ ಹೊಸ ಶಬ್ದಗಳು ಸಿಗುವುವು .ಮೈಯೆಲ್ಲಾ ತಿಂಡಿ ಎಂದರೆ ಮೈಯಿಡೀ ತುರಿಕೆ ,ಕಾಲ್ಮಡಿ ಎಂದರೆ ಮೂತ್ರ ,ಬೈಲಕಡೆ ಎಂದರೆ ಮಲ ಎಂಬ ಅರ್ಥ . ನಮ್ಮ ಸರ್ಜರಿ ಪ್ರಾಧ್ಯಾಪಕರು (ಬೆಂಗಳೂರು ಕಡೆಯವರು)ಒಬ್ಬ ರೋಗಿಗೆ ನಿನ್ನ ಉದ್ಯೋಗ ಏನಪ್ಪಾ ಎಂದು ಕೇಳಿದ್ದಕ್ಕೆ ನಮ್ದು  ಕಷ್ಟದ ಕೆಲಸರೀ  ಎಂದ .ಅದಕ್ಕೆ ನಮ್ಮ ಅಧ್ಯಾಪಕರು ನಮ್ಮ ಕೆಲಸಕ್ಕಿಂತಲೂ ಕಷ್ಟವೇನ್ರಿ ಎಂದರು .(ನಾಪಿತನ ಕೆಲಸಕ್ಕೆ ಅಲ್ಲಿ ಕಷ್ಟದ ಕೆಲಸ ಎನ್ನುವರು ). 

ನಿಮಗೆಲ್ಲ ತಿಳಿದಿರುವಂತೆ ಆರಂಭ ಮಾಡಿದ್ದೇನೆ ಎನ್ನುವುದಕ್ಕೆ ಹತ್ತಿದ್ದೀನ್ರಿ ಎನ್ನುವರು .ಮಾಡಕ್ ಹತ್ತಿದೀನ್ರೀ ,ಚಲೋ ಓದಾಕ್ ಹತ್ತಿದಿಯೇನಪ್ಪಾ ?ಇದನ್ನೇ ಬಸ್ಸಿನಿಂದ ಇಳಿಯಾಕ್ ಹತ್ತಿದೀನ್ರೀ ಎಂದು ತಮಾಷೆ ಮಾಡುವರು 

ಇಲ್ಲಿಯ ಹೆಸರುಗಳಲ್ಲಿ ತರಕಾರಿ ಹೆಸರುಗಳು ಹೇರಳವಾಗಿ ಬರುವವು . .ಉಳ್ಳಾಗಡ್ಡಿಮಠ್ ,ಮೆಣಸಿನಕಾಯಿ ,ಬದನಿ ಕಾಯಿ ,ಸೊಪ್ಪಿನ ಮಠ ,ಇತ್ಯಾದಿ ಹೆಸರುಗಳು ಸಾಮಾನ್ಯ . ಇನ್ನು ತಹಸೀಲ್ದಾರ್ ,ಬೆಲ್ಲದ ,ಗುಡ್ಡಕಾಯು ,ಹೊಸ ಮನಿ ,ಹಳೇ ಮನಿ ,ಇತ್ಯಾದಿ ಸರ್ ನೇಮ್ ಗಳೂ .  ಪಾಟೀಲ್ ರಲ್ಲಿ  ಮಾಲಿಪಾಟೀಲ್ .,ಪೋಲಿಸ್ ಪಾಟೀಲ್ ಇತ್ಯಾದಿ . ಸ್ಥಳ ನಾಮವನ್ನು ಹೆಸರಿಗೆ ಸೇರಿಸಿದ  ಗೋಕಾಕ ,ಹುಯಿಲಗೋಳ ,ಮಂಟೂರು ಇತ್ಯಾದಿ .


ಹುಬ್ಬಳ್ಳಿಯ ನೆನಪುಗಳು 4

 ಹುಬ್ಬಳ್ಳಿಯ ನೆನಪುಗಳು ೪ 

ಮೊದಲೇ ತಿಳಿಸಿದಂತೆ ನನಗೆ ಹಾಸ್ಟೆಲ್ ನಲ್ಲಿ ರೂಮ್ ಸಿಗದ ಕಾರಣ  ಕಾಲೇಜು ಸಮೀಪ ಒಂದು ರೂಮು ಹಿಡಿದೆ .ನಮ್ಮ ಊರಿನವರೇ ಆದ  ಕಡೆ೦ಬಿಲ  ಶ್ರೀಪತಿ ನನ್ನ ರೂಮ್ ಮೇಟ್  ಆಗಿ ಸಿಕ್ಕಿದರು .ಸರಳ ಜೀವಿ . 

ಊಟಕ್ಕೆ   ಆಗ ಜನಪ್ರಿಯ ಆಗಿದ್ದ ಮಲ್ಲಿಕಾರ್ಜುನ ಖಾನಾವಳಿ ಗೆ ಹಚ್ಚಿದೆನು .ಅಲ್ಲಿ ತುಂಬಾ ವಿದ್ಯಾರ್ಥಿಗಳು ಬರುತ್ತಿದ್ದ ಕಾರಣ ಮೊದಲು ನಿರಾಕರಿಸಿದರೂ ನನ್ನ ಸಹಪಾಠಿ ವಿವೇಕ ವಾಣಿ (ಅಲ್ಲಿಯೇ ರೂಮಿನಲ್ಲಿ  ಇದ್ದವರು )ಯವರ ಶಿಫಾರಸು ಮೇರೆಗೆ ನನ್ನನ್ನು ಸೇರಿಸಿ ಕೊಂಡರು . ಬೆಳಿಗ್ಗೆ  ಹತ್ತೂವರೆಗೆ ಊಟ ಶುರು ಆಗುತ್ತಿತ್ತು .ಊಟಕ್ಕೆ ಜೋಳದ ರೊಟ್ಟಿ(ಒಂದು ಹೊತ್ತು ಚಪಾತಿ ) ,ಒಂದು ಕಾಳು (ಮಡಿಕೆ ಕಾಳು ಜನಪ್ರಿಯ ),ಒಂದು ಸೊಪ್ಪು ,ಒಂದು ತರಕಾರಿ ಪಲ್ಯ ,ಗುರೆಳ್ಳು ಹಿಂಡಿ  ಚಟ್ನಿಪುಡಿ ,ಅನ್ನ ,ಸಾರು ಮತ್ತು ಮೊಸರು . ಎಷ್ಟು ಬೇಕಾದರೂ ತಿನ್ನ ಬಹುದು . ಅಲ್ಲಿಯ ವಿಭೂತಿ ಧಾರೀ ನೌಕರರು ಮತ್ತು ಜೋಳ ರೊಟ್ಟಿ ತಟ್ಟುವ ಶಬ್ದ ಈಗಲೂ ನೆನಪಿಗೆ ಬರುತ್ತಿದೆ . 

   ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮ ಇಲ್ಲದಿದ್ದ ಕಾರಣ  ಬೆಳಗ್ಗೆ ಕಾಪಿ ಚಾ ತಿಂಡಿ ತೆಗೆದು ಕೊಳ್ಳದೆ ಖಾಲಿ ಹೊಟ್ಟೆಯಲ್ಲಿ ಕ್ಲಾಸ್ ಗೆ ಹೋಗುತ್ತಿದ್ದೆ .ಹತ್ತು ಗಂಟೆಗೆ ವಿರಾಮ ಸಮಯದಲ್ಲಿ ಮೆಸ್ಸಿಗೆ ನಾಗಾಲೋಟ .ಅಲ್ಲಿ ಹೊಟ್ಟೆ ತುಂಬಾ ತಿಂದು ಮತ್ತೆ ರಾತ್ರೆಯ ಊಟ . ಹೀಗೆ ಕೆಲವು ಸಮಯ ನಡೆಯಿತು .ನಡುವೆ ಶ್ರೀಪತಿಯವರಿಗೆ ಹಾಸ್ಟೆಲ್ ರೂಮ್ ಸಿಕ್ಕಿ ಅವರು ಅಲ್ಲಿಗೆ ಹೋದರು .ನಾನು ಖೋಲಿ ಬದಲಿಸಿ ಉಣಕಲ್ ಗುಡ್ಡದ ಕೆಳಗೆ ಕಡಿಮೆ ಬಾಡಿಗೆಯ ಜಾಗಕ್ಕೆ ಬದಲಿಸಿದೆ .ಅಲ್ಲಿ ನನ್ನೊಡನೆ ಮತೊಬ್ಬ ಸಹಪಾಠಿ ಒಬೇದುಲ್ಲಾ ಸೇರಿ ಕೊಂಡರು .ಅವರು ಅಫಘಾನಿ ಸ್ಥಾನದವರು .. ಭಾರತ ಸರಕಾರದ ಕೋಟಾ ದಲ್ಲಿ ಬಂದವರು . ಬುದ್ದಿವಂತ ಮತ್ತು  ಸಜ್ಜನ .ಪಸ್ತುನ್ ಭಾಷೆಯ ಪ್ರಭಾವವಿದ್ದ ಇಂಗ್ಲಿಷ್ ಮಾತನಾಡುತ್ತಿದ್ದನು . ಕ್ಲಾಸ್ ನಲ್ಲಿ ಮುಂದಿನ ಬೆಂಚ್ ನಲ್ಲಿ ಕುಳಿತು , ಆಸಕ್ತಿಯಿಂದ ಪಾಠ ಕೇಳುವನು .ಅರ್ಥವಾಗದಿದ್ದರೆ ಎದ್ದು ಪ್ರಶ್ನೆ ಕೇಳುವನು . ದುರದೃಷ್ಟ ವಶಾತ್ ರಜೆಯಲ್ಲಿ ಊರಿಗೆ ಹೋದವನು ಅಲ್ಲಿ ನಡೆದ ಕ್ರಾಂತಿಯಲ್ಲಿ ಸಿಕ್ಕು ಕೊಂಡಿರಬೇಕು ;ಹಿಂತಿರುಗಿ ಬರಲಿಲ್ಲ . 

ಅಷ್ಟರಲ್ಲಿ ನನಗೆ ಆನಂದ ಹಾಸ್ಟೆಲ್ ನಲ್ಲಿ ರೂಮ್ ಸಿಕ್ಕಿತು .ರೂಮ್ ನಂಬರ್ ೩ .ನನ್ನ ರೂಮ್ ಮೇಟ್  ಜೋಸ್ ಚೆರಿಯನ್ .ಇವರು ಕೂಡಾ ಭಾರತ ಸರಕಾರದ ಕೋಟಾ ದಲ್ಲಿ ಬಂದವರು .ಮಲಯಾಳಿ ,ತಂದೆ ಅಂಡಮಾನ್ ನಲ್ಲಿ ಅರಣ್ಯ ಅಧಿಕಾರಿ ಆಗಿದ್ದರು . ತುಂಬಾ ಒಳ್ಳೆಯವರು  ಮತ್ತು ಸಾಧು . ನಮ್ಮ ಎದುರಿನ ರೂಮ್ ನಲ್ಲಿ ಮಲೇಷ್ಯಾ ದಿಂದ ಬಂದ  ಭಾರತ ಮೂಲದ ರಾಮನಾಥನ್ ,ಭಗವಾನ್ ಸಿಂಗ್ ಮತ್ತು ಮಾರಿಷಿಯಸ್ ನ  ಕಸ್ರತ್ ಸಿಂಗ್ ಎಂಬವರು ಇದ್ದರು . ಭಗವಾನ್ ಸಿಂಗ್ ಮುಂದೆ ಕ್ಲಿನಿಕಲ್  ಪೋಸ್ಟಿಂಗ್ ನಲ್ಲಿ ನನ್ನ ಬ್ಯಾಚ್ ಮೇಟ್  ಆಗಿದ್ದು ಒಳ್ಳೆಯ ಸ್ನೇಹಿತರು ,ಸರಸಿಗಳು .ಈಗಲೂ ಸಂಪರ್ಕ ಇಟ್ಟುಕೊಂಡಿದ್ದು ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿರುವೆನು . 

ನಾನು ರೂಮಿನಲ್ಲಿ ಹೆಚ್ಚು ಓದುತ್ತಿದ್ದುದುದು ಕಡಿಮೆ .ಸಂಜೆ ಕಾಲೇಜು ಲೈಬ್ರರಿ ಯಲ್ಲಿ ಸ್ವಲ್ಪಮಟ್ಟಿನ ಪಠಣ .ತರಗತಿಯಲ್ಲಿ ಮೊದಲನೇ ಬೆಂಚ್ ನಲ್ಲಿ ಕುಳಿತು ಕೊಳ್ಳುತ್ತಿದ್ದ ಕಾರಣ  ಎಟೆಂಟಿವ್  ಆಗಿರ ಬೇಕಿತ್ತು . ಹುಬ್ಬಳ್ಳಿಯಲ್ಲಿ ಇದ್ದ ಸಾರ್ವಜನಿಕ ವಾಚನಾಲಯ ಗಳಿಗೆ ಸದಸ್ಯನಾಗಿ ಕತೆ ಕಾದಂಬರಿ ಇತ್ಯಾದಿ ತಂದು ಓದುತ್ತಿದ್ದೆ . 

ಅದೃಷ್ಟಕ್ಕೆ ನಮಗೆ ಮೊದಲನೇ ಎಂ ಬಿ ಬಿ ಎಸ (ಒಂದೂವರೆ ವರ್ಷ )ಒಳ್ಳೆಯ ಪ್ರಾಧ್ಯಾಪಕರು ಇದ್ದರು . ಅನಾಟಮಿ ಯಲ್ಲಿ ಡಾ  ಥಕ್ಕರ್ ನಾಯ್ಕ್ ,ಡಾ ಪಾರ್ಥಸಾರಥಿ ಎಂಬ ಪ್ರೊಫೆಸ್ಸರ್ ಇದ್ದರು . ಥಕ್ಕರ ನಾಯ್ಕ್  ಎಂಬ್ರಿಯಲಾಗಿ ತಜ್ಞರು ,ಕೋಟ್ ಟೈ ಕಟ್ಟಿ ಬರುವರು , ಆಗಾಗ ವಾಟ್ ಐ ಶೇ ಎಂದು ಟೈ ಮುಟ್ಟಿಕೊಳ್ಳುವರು . ಪಾರ್ಥಸಾರಥಿ  ನಿವೃತ್ತಿ ನಂತರ ಪುನರ್ನೇಮಕ ಗೊಂಡು ಬಂದವರು ,ಅವರಿಗೆ ಮೊಣಕಾಲಿನ ಸಂಧಿ ವಾತ ಇತ್ತು . ಬೋರ್ಡ್ ನಲ್ಲಿ  ಸುಂದರವಾಗಿ ಚಿತ್ರ ಬರೆದು ಪಾಠ ಮಾಡುವರು . ಅನಾಟಮಿ ಡಿಸ್ಸೆಕ್ಷನ್ ಕ್ಲಾಸ್ ಗೆ ಹಲವು ಟ್ಯೂಟರ್ ಗಳು ಬರುತ್ತಿದ್ದರು .

  ಅನಾಟಮಿ  ಡಿಸೇಕ್ಷನ್ ಹಾಲ್ ಗೆ ಮೊದಲು ಪ್ರವೇಶಿಸುವಾಗ ವಿಚಿತ್ರ ಅನುಭವ ,ಎಲ್ಲರಂತೆ ಜೀವನ ಸಾಗಿಸಿ ಮೃತ ಹೊಂದಿದ ಗಂಡು ಮತ್ತು ಹೆಣ್ಣು ಶರೀರಗಳ ಸಾಲಾಗಿ ಮಲಗಿಸಿದ ಶವಗಳನ್ನು ಕಂಡಾಗ ಮೊದಲು 'ಮನುಜ ಶರೀರವಿದೇನು ಸುಖ ಇದ ನೆನೆದರೆ ಘೋರವಿದೇನು ಸುಖ' ;'ಮಾನವಾ ನೀ ಮೂಳೆ ಮಾಂಸದ ತಡಿಕೆ ' ಇತ್ಯಾದಿ ಹಾಡುಗಳು ನೆನಪಾಗುತ್ತಿದ್ದವು . ಫೋರ್ಮಾಲಿನ್ ಘಾಟು ನಾಸಿಕದಲ್ಲಿ  ಹೊಕ್ಕು ದಿನವಿಡೀ ಅದರ ನೆನಪು ತರುವುದು . ಇಲ್ಲಿ ಒಂದು ವಿಷಯ ಜ್ನಾಪಕ ಬರುತ್ತದೆ ಅನಾಟಮಿ ಯ  ಹಳೆಯ ಅಟೆಂಡರ್ ಗಳು (ಡೇವಿಡ್ ಅಂತ ಒಬ್ಬರು ) ಅಂಗ ರಚನಾಶಾಸ್ತ್ರದಲ್ಲಿ ನಿಪುಣರಾಗಿದ್ದು  ಹಲವು ನರ ,ಮಾಂಸ ಖಂಡ ಗಳ ಹೆಸರು ,ಅವುಗಳನ್ನು ನೆಪಪಿಡುವ ನಿಮೋನಿಕ್ಸ್ ಮತ್ತು ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಅವರಿಗೆ ಕರತಾಮಲಕ ಆಗಿದ್ದವು . ವಿದ್ಯಾರ್ಥಿಗಳಿಗೆ ಅವರು ಸ್ವಚ್ಛ ಮಾಡಿದ ಎಲುಬು ತಲೆ ಬುರುಡೆ ಇತ್ಯಾದಿ ಮಾರಾಟ ಮಾಡುತ್ತಿದ್ದು  ಒಸ್ಟಿಯಾಲಜಿ  ತರಗತಿಗೆ ಅವುಗಳನ್ನು ಹೊತ್ತುಕೊಂಡು ಹೋಗುವಾಗ  ಮಾಟ ಮಂತ್ರ ಮಾಡುವ ತಾಂತ್ರಿಕರಂತೆ ಕಾಣುತ್ತಿದ್ದೆವು . 

ಡಿಸ್ಸೆಕ್ಷನ್ ನಲ್ಲಿ ನನ್ನ ಬ್ಯಾಚ್ ನಲ್ಲಿ  ಸೊರಬದ ಡಾ ಪರಿಮಳ (ಉತ್ತಮ ಗಾಯಕಿ ,ಈಗ  ಬೆಂಗಳೂರು ಬನ್ನೇರುಘಟ್ಟ ರೋಡ್ ನಲ್ಲಿ ಇರುವ ಪರಿಮಳ ಆಸ್ಪತ್ರೆಯ ಒಡತಿ  ,),ಈಗ ಮುಂಬೈನ ಮುಲುಂಡ್ ನಲ್ಲಿ ಪ್ರಸಿದ್ಧ ಈ ಏನ್ ಟಿ ತಜ್ಞರಾಗಿರುವ  ಬಾರಕೂರು ಮೂಲದ ಡಾ ಜೀವನ್ ರಾಮ ಶೆಟ್ಟಿ ಇದ್ದು . ಶರೀರದ  ಇನ್ನೊಂದು ಪಾರ್ಶ್ವ ದಲ್ಲಿ (ನಮ್ಮ ಎದುರುಗಡೆ )ಈಗ ಬೆಂಗಳೂರಿನ ಮಲ್ಲೇಶ್ವರದಲ್ಲಿ ಪ್ರಸಿದ್ಧ ಗೈನಕೊಲೊಜಿಸ್ಟ್  ಆಗಿರುವ ಡಾ ನಂದಿನಿ ದೇವಿ ,ಅಮೇರಿಕಾ ದಲ್ಲಿ ಆಸ್ಪತ್ರೆ ನಡೆಸುತ್ತಿರುವ  ಡಾ ಕಲ್ಪನಾ ,ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಅರಿವಳಿಕಾ ವಿಭಾಗದ ಮುಖ್ಯಸ್ಥರಾಗಿದ್ದ ಡಾ ರಾಘವೇಂದ್ರ ರಾವ್ ಮತ್ತು ಪ್ರಸ್ತುತ ತಿರುವನಂತಪುರ ರೀಜನಲ್ ಕ್ಯಾನ್ಸರ್ ಸೆಂಟರ್ ನಲ್ಲಿ ಹಿರಿಯ ತಜ್ಞರಾಗಿರುವ ಡಾ ರೇಚಲ್ ಇದ್ದರು.ಪ್ರಸಿದ್ದಿ ಪಡೆಯದವನು ನಾನು ಮಾತ್ರ ಎಂಬ ಬೇಸರ ಇಲ್ಲ .ನಾವು ಮೂವರು ಗ್ರಾಮಾಂತರ ಪ್ರದೇಶ ದಿಂದ ಕನ್ನಡ ಮಾಧ್ಯಮ ಶಾಲೆಯಿಂದ ಬಂದವರು .ಅವರೆಲ್ಲ ಇಂಗ್ಲಿಷ್ ಮೀಡಿಯಂ ನವರು .ಆದರೂ ಒಳ್ಳೆಯ ಮಿತ್ರರಾದರು .(ಮೊದ  ಮೊದಲು ಕನ್ನಡ ಮೀಡಿಯಂ ನವರು ನಾವು toe ಎಂಬುದನ್ನು ಟೊಯೀ  ಎಂದು ಓದುತ್ತಿದ್ದೆವು ). 

ಅನಾಟಮಿ  ಡಿಸ್ಸೆಕ್ಷನ್ ಗೆ  ಕನಿಂಗ್ ಹ್ಯಾಮ್ ಬರೆದ ಎಂಬ ಮೂರು ಸಂಪುಟದ ಕೈಪಿಡಿ ಮತ್ತು ಪಠ್ಯ ಪುಸ್ತಕ ಗ್ರೇ ಅನಾಟಮಿ .ಇದು ಬೃಹತ್ ಗ್ರಂಥ ಆಗಿದ್ದು ಹೊರಲಾಗದೆ ತುಂಡು ತುಂಡು ಮಾಡಿ ಕೊಂಡು ಓದುತ್ತಿದ್ದೆವು .ನೂರಾರು ನರಗಳು,ಮಾಂಸ ಖಂಡಗಳು.ರಕ್ತ ನಾಳಗಳು,ಮೂಳೆಗಳು ,ರಂದ್ರಗಳು ಮತ್ತು ಅಂಗೋಪಾಂಗಗಳು ಇವುಗಳ ನಾಮ ಸ್ಮರಣೆ ಮಾಡಿ ಸೋತು ಸುಣ್ಣ ಆಗುತ್ತಿದ್ದೆವು .ಈಗ ಅದನೆಲ್ಲಾ  ಹೃಸ್ವ ಗೊಳಿಸಿದ್ದಾರೆ .

  ಫಿಸಿಯೋಲಾಜಿ  ಪ್ರೊಫೆಸ್ಸರ್ ಡಾ ನಾರಾಯಣ ಶೆಟ್ಟಿ ನಾನು ಕಂಡ ಅತ್ಯುತ್ತಮ ಗುರುಗಳಲ್ಲಿ ಒಬ್ಬರು .ಅವರ ಕ್ಲಾಸ್ ಎಂದರೆ ನಮಗೆ ಹಬ್ಬ . ನರ ಮಂಡಲ ಅವರ ಮೆಚ್ಚಿನ  ವಿಷಯ .ಕಬ್ಬಿಣದ ಕಡಲೆಯಂತೆ ಇರುವ ಅದನ್ನು ಕಳೆದ ಬಾಳೆಯ ಹಣ್ಣಿನಂದದಿ ಮಾಡುತ್ತಿದ್ದರು . ಕಲ್ಲಚ್ಚಿನ ಅವರ ನೋಟ್ಸ್ ವಿದ್ಯಾರ್ಥಿಗಳಲ್ಲಿ ಜನಪ್ರಿಯ ವಾಗಿತ್ತು . ಅವರು ನೋಡಲು ಗಂಭೀರ ;ತಾವು ನಗದೇ ಜೋಕ್ ಮಾಡುವರು . ಗಂಭೀರವಾದ ತರಗತಿಯ ಅಂತ್ಯದಲ್ಲಿ" Now you can relax but not your sphincters"( ಭಾವಾರ್ಥ :ಈಗ ನೀವು ವಿಶ್ರಮಿಸಿ ಆದರೆ ನಿಮ್ಮ ಮಲ ಮೂತ್ರ ವನ್ನು  ಹೊರ ಹೋಗದಂತೆ ಹಿಡಿವ ಮಾಂಸಖಂಡಗಳನ್ನು ಅಲ್ಲ ).ಅವರ ಸ್ಲೈಡ್ ಶೋ ದಲ್ಲಿ ಯಾವಾಗಲೂ ಒಂದು ಖಾಲಿ ಸ್ಲೈಡ್ ಕೊನೆಗೆ ಇರುತ್ತಿದ್ದು ನಿಮ್ಮ ಮೆದುಳಿನ ಸ್ಥಿತಿ ಈಗ ಹೀಗೆ ಇದೆ ಎನ್ನುವರು . ಮೆದುಳಿನ ಫಿಸಿಯೋಲಾಜಿ ಪಾಠ ಮಾಡುವಾಗ "ನಾನು  ಅನಾಟಮಿ ಪ್ರೊಫೆಸರ್ ಗೆ  ಏಕಕಾಲಕ್ಕೆ ಮೆದುಳಿನ ಅನಾಟಮಿ ಪಾಠ ಕೂಡಾ ಮಾಡಿರಿ .ಆಗ ವಿದ್ಯಾರ್ಥಿಗಳಿಗೆ ಸುಲಭ ಆಗುವುದು ಎಂದುದಕ್ಕೆ "We don't have enough brains (read brain specimens )"ಎಂದು ಪನ್  ಮಾಡುತ್ತಿದ್ದರು 

ಡಾ ನಾರಾಯಣ ಶೆಟ್ಟಿ ಯವರ ಬಗ್ಗೆ   ಇನ್ನೊಂದು ನೆನಪು .ಆಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ  ಸರ್ಕಾರದ ಆದೇಶದಂತೆ ಮುಂಜಾನೆ ಸ್ಪೆಷಲ್ ಕ್ಲಾಸ್ ನಡೆಸುತ್ತಿದ್ದರು . ನಮ್ಮ ಈ ಗುರುಗಳು  ಈ ತರಹ ವಿದ್ಯಾರ್ಥಿಗಳನ್ನು ವಿಂಗಡಿಸಿದರೆ ಚೆನ್ನಾಗಿ ಇರುವುದಿಲ್ಲ ಮತ್ತು  ಇಂತಹ ವಿದ್ಯಾರ್ಥಿ ಈ ಪಂಗಡದವನು ಎಂದು ಜಾಹೀರು ಆಗುವುದು ಎಂದು ಎಲ್ಲಾ ಮಕ್ಕಳನ್ನೂ ವಿಶೇಷ ತರಗತಿಗೆ ಬರಬಹುದು ,ಹಾಜರಿ ಇಲ್ಲ ಎಂದು ಹೇಳುವರು .ಒಬ್ಬನೂ ಬಿಡದೆ ಆ ಕ್ಲಾಸ್ ಗಳಿಗೂ ಹೋಗುವರು . ಅವರ  ಪ್ರವಚನದ ಮಟ್ಟ ಮತ್ತು ಆಕರ್ಷಣೆ ಹಾಗಿತ್ತು . 

ನಾನು ಅವರ ತರಗತಿಯಲ್ಲಿ ಮುಂದಿನ ಬೆಂಚ್ ನಲ್ಲಿ ಕುಳಿತು ಕೊಳ್ಳುತ್ತಿದ್ದು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ . ನಾನು ಜಾಣ ಹುಡುಗ ಎಂದು ಅವರು ತಿಳಿದಿದ್ದರ ಬೇಕು .ಅಂತಿಮ ಪರೀಕ್ಷೆಯಲ್ಲಿ ಅವರು ಇಂಟರ್ನಲ್ ಎಕ್ಸಾಮಿನರ್ . ವೈವಾ ದಲ್ಲಿ  (ಈ ಹುಡುಗ ಜಾಣ )ನೀವೇ ಪ್ರಶ್ನೆ ಕೇಳಿರಿ ಎಂದು ಹೊರಗಿನಿಂದ ಬಂದ  ಪರೀಕ್ಷಕರಲ್ಲಿ ಕೇಳಿಕೊಂಡರು .ಅವರು ಕೇಳಿದ ಮೊದಲ ಸರಳ ಪ್ರಶ್ನೆಗೇ  ನಾನು ಸರಿಯಾಗಿ ಉತ್ತರಿಸಲಿಲ್ಲ . ಗುರುಗಳು ನನ್ನ ಮೇಲೆ ಇಟ್ಟ  ವಿಶ್ವಾಸ ಉಂಟು ಮಾಡಿದ ಉದ್ವೇಗ ಕಾರಣ ಇರ ಬಹುದು . ಪರೀಕ್ಷೆಯಲ್ಲಿ ನಾನು ಒಳ್ಳೆಯ ದರ್ಜೆಯಲ್ಲಿ ಪಾಸ್ ಆದರೂ ಇಂದಿಗೂ ನನ್ನ ಪ್ರಾಧ್ಯಾಪಕರ ನಿರೀಕ್ಷೆ  ಹುಸಿ ಮಾಡಿದೆನಲ್ಲಾ ಎಂದು ಅಜ್ಜನಿಗೆ ಬೆಲ್ಲ ಕೊಡದೆ ಮುಂದೆ ಮರುಗಿದ ಮಾಸ್ತಿ ಯವರಂತೆ ನನ್ನ ಮನಸಿನಲ್ಲಿ ಈಗಲೂ ಇದೆ .. 

  ಇನ್ನು  ಫಿಸಿಯೋಲಾಜಿ  ವಿಭಾಗದಲ್ಲಿ ಡಾ ದ್ರು ರುವನಾರಾಯಣ ,ಡಾ ಪಾರ್ವತಿ ಮತ್ತು ಡಾ ಅಮೃತಾ ರೈ  ಎಂಬ  ಪ್ರಾಧ್ಯಾಪಕರೂ ಇದ್ದು ಎಲ್ಲರೂ ಅಧ್ಯ ಯನಶೀಲರು   ,ಮತ್ತು  ವಿದ್ಯಾರ್ಥಿ ಸ್ನೇಹಿ ಆಗಿದ್ದು ಡಿಪಾರ್ಟ್ಮೆಂಟ್ ನ ಘನತೆ ಹೆಚ್ಚಿಸಿದ್ದರು . 

ಫಿಸಿಯೋಲಜಿ  ಪ್ರಾಕ್ಟಿಕಲ್ಸ್ ನಲ್ಲಿ ಸ್ಟಾರ್ಲಿಂಗ್  ಶೆರ್ರಿಂಗ್ಟನ್ ಡ್ರಮ್ ಎಂಬ ಮಸಿ ಬಳಿದ  ಡ್ರಮ್ ನಲ್ಲಿ ಕಪ್ಪೆಯ ಮಾಂಸ ಖಂಡಗಳಿಗೆ ವಿದ್ಯುತ್ ಪ್ರಚೋದನೆ ಕೊಟ್ಟು ಅವುಗಳ ಸಂಕುಚನ ವಿಕಸನ ರೆಕಾರ್ಡ್ ಮಾಡುವದು ಇತ್ತು .ಇದಕ್ಕೆದೊಡ್ಡ  ಜೀವಂತ ಕಪ್ಪೆಗಳನ್ನು  ನಮ್ಮ ಕೈಗೆ ಕೊಡುತ್ತಿದ್ದು ,ಅದರ ಕುತ್ತಿಗೆಗೆ ಸೂಜಿಯಲ್ಲಿ ಚುಚ್ಚಿ ಪ್ರಜ್ಞೆ ತೆಗೆಯುತ್ತಿದ್ದೆವು .ಇದು ಬಹಳ ಸಂಕಟದ ಕಾರ್ಯ ಆಗಿದ್ದು ಅಟೆಂಡರ್ ಗಳಿಗೆ ಹಾಗೆ ಮಾಡಿಕೊಡಲು ದುಂಬಾಲು ಬೀಳುತ್ತಿದ್ದೆವು . ಮಸಿ ಡ್ರಮ್ ನಿಂದ ನಮ್ಮ ಬಿಳಿ ಏಪ್ರಾನ್ ಗೆ  ಕರಿ ಹಿಡಿದು ಹಿಂದಿನ ಕಾಲದ ಅಡಿಗೆ ಮನೆಯಿಂದ ಬಂದವರಂತೆ ಕಾಣುತ್ತಿದ್ದೆವು 

ಇನ್ನು  ಬಯೋ ಕೆಮಿಸ್ಟ್ರಿ ಗೆ ಡಾ ಅನಂತ ಪದ್ಮನಾಭ (ಅಲ್ಲ ಸುಬ್ಬ ರಾವ್ ಸರೀ ನೆನಪಿಲ್ಲ )ರಾವ್ ಎಂಬ ಪ್ರಾಧ್ಯಾಪಕರು ,,ಸರಸಿಗಳು ,ಜೋಕ್ ಮಾಡುತ್ತಾ ನಗಿಸುವರು ..  

ಹುಡುಗಿಯರಿಗೆ ಆಗ ಕಾಲೇಜಿನಲ್ಲಿ ಅನಧಿಕೃತ  ಡ್ರೆಸ್ ಕೋಡ್ ಇದ್ದು ಸೀರೆ ರವಿಕೆ ಕಡ್ಡಾಯ ಇತ್ತು .ಸಣ್ಣ ಸಣ್ಣ ಹುಡುಗಿಯರು ಕೂಡಾ ಕಷ್ಟ ಪಟ್ಟು   ಸೀರೆ ಉಟ್ಟು ಬರುತ್ತಿದ್ದು , ವೈದ್ಯ ವೃತ್ತಿಯ ಗಾಂಭೀರ್ಯ ಪಡೆಯುತ್ತಿದ್ದರು . ನಮ್ಮ ತರಗತಿಯಲ್ಲಿ ಎರಡು ಸಾಲು ಹುಡುಗರು ಮತ್ತು ಒಂದು ಸಾಲು ಹುಡುಗಿಯರು ಇದ್ದರು .ಹಲವು ವರ್ಷಗಳ ನಂತರ ನಾನು ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕನಾದಾಗ  ಈ ದಾಮಾಶಯ  ಉಲ್ಟಾ ಆಗಿ ಹುಡುಗಿಯರೇ ಹೆಚ್ಚು ಇರುತ್ತಿದ್ದರು ,

ಹುಬ್ಬಳ್ಳಿ ನೆನಪುಗಳು 1

                         ಹುಬ್ಬಳ್ಳಿ ನೆನಪುಗಳು 1

                 

ನನಗೆ ಹುಬ್ಬಳ್ಳಿ ಕೆ ಎಂ ಸಿ ಯಲ್ಲಿ ಪ್ರಥಮ ಎಂ ಬಿ ಬಿ ಎಸ ಪ್ರವೇಶ ದೊರೆತು ನಾನು ಒಂದು ಟ್ರಂಕ್ ಮತ್ತು ಹಾಸಿಗೆ ಸಹಿತ ಅಲ್ಲಿಗೆ ತೆರಳಿ ಲ್ಯಾಮಿಂಗ್ಟನ ರಸ್ತೆಯ ಅಶೋಕ ಹೋಟೆಲ್ ನಲ್ಲಿ ಖೋಲಿ ಹಿಡಿದೆ .ಇದು ನಗರದ ಪ್ರಸಿದ್ಧ ನೆಹರು ಮೈದಾನ್ ಪಕ್ಕದಲ್ಲಿಯೇ ಇದ್ದು ಈಗ ಎರಡೋ ಮೂರೋ ಬೇರೆ ಬೇರೆ ಹೋಟೆಲ್ಲುಗಳಾಗಿ ಮಾರ್ಪಟ್ಟಿದೆ . ಹೋಟೆಲ್ ಎದುರು ಸಿಟಿ ಬಸ್ ಸ್ಟಾಪ್ ಇದ್ದು ಬಸ್ಸಿನಲ್ಲಿ ಕೆ ಎಂ ಸಿ ಗೆ ಹೋದೆ . ಹುಬ್ಬಳ್ಳಿ ಕೆ ಎಂ ಸಿ ಕ್ಯಾಂಪಸ್ ಸುಯೋಜಿತ ,ಸುಂದರ ಮತ್ತು ಅದನ್ನು ನಿರ್ಮಿಸಿದವರ ದೂರ ದೃಷ್ಟಿ ಮತ್ತು ಪ್ರಾಮಾಣಿಕತೆಯ ಸಂಕೇತ . ಕಾಲೇಜಿನ ಮುಖ್ಯ ಕಟ್ಟಡ ಭವ್ಯ ಮತ್ತು ಸುದೃಢ ,ಅದರ ಹೆಬ್ಬಾಗಿಲು  ಮೊದಲ ಬಾರಿ ಒಳ ಹೊಗ್ಗುವ ವಿದ್ಯಾರ್ಥಿಗೆ ರೋಮಾಂಚನ ಆಗುವದು .ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರು  ರಸ್ತೆ  ನಡೆದರೆ ಇದು ಸಿಗುವದು  . ರಸ್ತೆಯ ಎಡ  ಬದಿ  ಹಾಸ್ಟೆಲುಗಳು ,ಆನಂದ ,ವಿವೇಕ ,ಚೇತನ ಮತ್ತು ಶುಶ್ರುತ (ಈಗ ಕೆಲವು ಸೇರ್ಪಡೆ ಆಗಿದೆ ),ಬಲ ಬದಿಯಲ್ಲಿ  ಅಧ್ಯಾಪಕರ ವಸತಿ ಗೃಹಗಳು . ರಸ್ತೆ ಬದಿಯಲ್ಲಿ ಗುಲ್ ಮೊಹರ್ ,ಮತ್ತು ಮೇ ಫ್ಲವರ್ ಮರಗಳು ಸರತಿಯಲ್ಲಿ ಹೂ ಬಿಟ್ಟು ಸದಾ ವರ್ಣ ಮಯ .ದ್ವಿಪಥ  ರಸ್ತೆಯ ವಿಭಾಜಕದಲ್ಲಿಯೂ  ಬಣ್ಣ ಬಣ್ಣದ ಹೂ ಬಿಡುವ ಗಿಡಗಳು . ಮುಖ್ಯ ಕಟ್ಟಡದ ಮುಂಭಾಗ ಎರಡು ವೃತ್ತಾಕಾರದ  ಹೂ ತೋಟಗಳು . ಕಾಲೇಜಿಗೆ  ಪುಷ್ಪ ಪ್ರದರ್ಶನದಲ್ಲಿ  ಹಲವು ಭಾರಿ ಪ್ರಥಮ ಬಹುಮಾನ ಬಂದಿದೆ .ಕಾಲೇಜಿನ ಹಿಂಭಾಗದಲ್ಲಿ  ಸುಸಜ್ಜಿತ ಆಡಿಟೋರಿಯಂ ಇದ್ದು ಹುಬ್ಬಳ್ಳಿ ಧಾರವಾಡದಲ್ಲಿ ಆ ಕಾಲಕ್ಕೆ ಅತ್ಯಂತ ಉತ್ತಮ ಸಭಾಗೃಹ ಆಗಿತ್ತು . ಇಲ್ಲಿ ಶ್ರೇಷ್ಠ ಮಟ್ಟದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದುವು . ಅದರ ಹಿಂದೆ ನೌಕರರ ವಸತಿ ಗೃಹಗಳು .ಸಂಜೆ ಹೊತ್ತು ಮನೆಗಳಿಂದ ಸುಶ್ರಾವ್ಯ ಭಜನೆ ಕೇಳಿ ಬರುತ್ತಿತ್ತು . ಹಿಂದೆ ಸಂಪರ್ಕ ರಸ್ತೆ  ದೇಶಪಾಂಡೆ ನಗರ ,ಉಣಕಲ್ ಗುಡ್ಡ ಕಡೆಗೆ . ಕಾಲೇಜು ಎದುರು ನಿಂತರೆ ಬಲಬದಿ ಯಲ್ಲಿ ಆಸ್ಪತ್ರೆ ,ತುರ್ತು ವಿಭಾಗ ಮತ್ತು ಹೊರ ರೋಗಿ ವಿಭಾಗ .ನಡುವೆ ಒಂದು ರಸ್ತೆ  ಉಳ್ಳಾಗಡ್ಡ್ಡಿ ಮಾರ್ಕೆಟ್ ಕಡೆಗೆ ,ಅದರ ಬದಿಯಲ್ಲಿ ಸಾಕಷ್ಟು ದೊಡ್ಡದಾದ ಕ್ರೀಡಾಂಗಣ . ಆಫೀಸ್ ನಲ್ಲಿ ಮಿಣ ಚಿಗಿ  ಎಂಬವರು ದಾಖಲಾತಿ ವಿಭಾಗದ ಗುಮಾಸ್ತರು . ಹುಬ್ಬಳ್ಳಿ ಮುಂಬೈ ಕರ್ನಾಟಕಕ್ಕೆ ಸೇರಿದ್ದು ಅಲ್ಲಿ ಶಾಲೆಗಳಲ್ಲಿ ಹೆಸರು ಬರೆಯುವ ಪದ್ಧತಿ ಬೇರೆ .ಮೊದಲು ಸರ್ ನೇಮ್ ,ಆಮೇಲೆ ಹೆಸರು ,ಕೊನೆಗೆ ತಂದೆಯ ಹೆಸರು . ಅಂತೆಯೇ ಎ (ಅಂಗ್ರಿ )ಪದ್ಮನಾಭ ಭಟ್ ಆಗಿದ್ದ ನಾನು ಭಟ್ ಪದ್ಮನಾಭ ಸುಬ್ಬಣ್ಣ ಆಗಿ ಮಾರ್ಪಟ್ಟೆ . ಪ್ರದೇಶ ಸಮಾಚಾರದಲ್ಲಿ ಪುರುಷೋತ್ತಮ್ ಚುನಾವಣಾ ಫಲಿತಾಂಶ ಓದುವಾಗ ಬೊಮ್ಮಾಯಿ ಸೋಮಪ್ಪ ರಾಯಪ್ಪ ಅವರು , ತಹಸೀಲದಾರ್ ಶರಣಪ್ಪ ಬಸಪ್ಪ ಇತ್ಯಾದಿ ಓದುತ್ತಿದುದು ನಿಮಗೆ ಜ್ಞಾಪಕ ಇರಬಹುದು . 

ನಾನು ಸೇರುವಾಗ ಸ್ವಲ್ಪ ತಡವಾಗಿದ್ದರಿಂದ  ಹಾಸ್ಟೆಲ್ ನಲ್ಲಿ ರೂಮ್ ಸಿಕ್ಕಲಿಲ್ಲ ,ಪಕ್ಕದಲ್ಲಿ ಒಂದು ರೂಮ್ ಮಾಡಿಖಾಸಗಿ ಮೆಸ್ಸ್ ನಲ್ಲಿ ಹಚ್ಚಿದೆ . ಕೆ ಎಂ ಸಿ ಹುಬ್ಬಳ್ಳಿ  ಹುಬ್ಬಳ್ಳಿ   ಧಾರವಾಡ ರಸ್ತೆಯಲ್ಲಿ ವಿದ್ಯಾನಗರ ವಿಸ್ತರಣೆ ಯ  ಆರಂಭ ದಲ್ಲಿ ಇದ್ದು ,ಕಾಮರ್ಸ್ ಕಾಲೇಜು ,ಕೋತಂಬರಿ ಆರ್ಟ್ಸ್ ಕಾಲೇಜು ,ಪಿ ಸಿ ಜಾಬಿನ  ಸೈನ್ಸ್ ಕಾಲೇಜು ಮತ್ತು ಭೂಮ ರೆಡ್ಡಿ ಇಂಜಿನಿಯರಿಂಗ್ ಕಾಲೇಜು ಕ್ರಮವಾಗಿ ಬರುತ್ತವೆ . ವಿದ್ಯಾರ್ಥಿಗಳಿಗಾಗಿ ರೂಮುಗಳು ಮೆಸ್ಸ್ ಗಳು ಅನೇಕ ಇದ್ದುವು .ಈಗಿನ ಕಟ್ಟಡ ಮತ್ತು ಜನ ಜಂಗುಳಿ ಅಗ ಇರಲಿಲ್ಲ .

ಕಾಲೇಜು ಹಿಂದುಗಡೆ  ರೈಲ್ವೆ ಟ್ರ್ಯಾಕ್ ದಾಟಿದರೆ ವಿಶ್ವೇಶ್ವರ ನಗರ . ಅದರ ಬಸ್ ಸ್ಟಾಪ್ ನ ಪಕ್ಕವೇ ಪಾಟೀಲ್ ಪುಟ್ಟಪ್ಪನವರ ಮನೆ ಪ್ರಪಂಚ .ಮುಂದೆ ಹೋದರೆ ಸಂಸದರಾಗಿದ್ದ  ಎಂ ಎಫ್ ಮೊಹಸಿನ್ ಮನೆ ,ಹುಬ್ಬಳ್ಳಿ ಸಬ್ ಜೈಲ್ ಮತ್ತು ಎಡಕ್ಕೆ ಹೋದರೆ ನೃಪತುಂಗ (ಉಣಕಲ್ )ಬೆಟ್ಟ . ಸುಧಾ ಮೂರ್ತಿ ಯವರ ಮನೆ ಕೂಡಾ ನಮ್ಮ ಕಾಲೇಜು ಹಿಂದು ಗಡೆ  ಇದ್ದು ಅವರ ಅಕ್ಕ ಸುನಂದಾ ಕುಲಕರ್ಣಿ ನಮ್ಮ ಗುರುಗಳು ಆಗಿದ್ದರು . ಸಂಜೆ ವಿಹಾರಕ್ಕೆ ಉಣಕಲ್ ಗುಡ್ಡಕ್ಕೆ  ನಾವು ಮತ್ತು ನಮ್ಮ ಗುರುಗಳು ಹೋಗುತಿದ್ದೆವು.

 

 

 

ಮಂಗಳವಾರ, ಏಪ್ರಿಲ್ 20, 2021

ಡಾ ವಸಂತ ಕುಮಾರ್ ರಾವ್

  ಡಾ ವಸಂತ ಕುಮಾರ ರಾವ್ 

                             



ಡಾ ವಸಂತ ಕುಮಾರ ರಾವ್ ಒಂದು ಅಪರೂಪದ ವೈದ್ಯರು ಮತ್ತು ವ್ಯಕ್ತಿ . ಇವರು ಮೊದಲು  ಆಯುರ್ವೇದ  ಪದವಿ ಬಿ ಎಸ್ ಎ ಎಂ ಮಾಡಿ ಆಮೇಲೆ ಎಂ ಬಿ ಬಿ ಎಸ ಮಾಡಿದರು . ಎರಡೂ  ಮೆರಿಟ್ ಸೀಟ್ . ಜೀವನ ದ  ಕೊನೇ  ದಶಕದಲ್ಲಿ ಹೋಮಿಯೋಪಥಿ  ಸ್ವತಃ ಕಲಿತು ಪ್ರಾಕ್ಟೀಸ್ ಮಾಡುತ್ತಿದ್ದರು .ಅವರು ಬೆಂಗಳೂರಿನಲ್ಲಿ  ವೃತ್ತಿ ಆರಂಭಿಸಿ ಜನಪ್ರಿಯ ರಾಗಿದ್ದರಲ್ಲದೆ ಸ್ವಂತ ಮನೆಯನ್ನೂ  ಕಟ್ಟಿಸಿಕೊಂಡಿದ್ದರು . 

ಇವರ ಮೂಲ ಸುಳ್ಯ ತಾಲೂಕಿನ ಪಂಜ ಸಮೀಪ  .ಶಿವಳ್ಳಿ ಬ್ರಾಹ್ಮಣರು ,ಮನೆಯಲ್ಲಿ ತುಳು ಭಾಷೆ .ಆದರೆ ಗ್ರಾಮೀಣ ತುಳು ,ಹವ್ಯಕ ಭಾಷೆ ,ಮಲಯಾಳ ,ಬೆಂಗಳೂರು ಕನ್ನಡ ಲೀಲಾಜಾಲ ವಾಗಿ  ಮಾತನಾದ ಬಲ್ಲರು . ಆಯಾ ಭಾಷೆಯವರು ಅವರನ್ನು ತಮ್ಮವರೆಂದೇ  ತಿಳಿಯ ಬೇಕು . ಇವರು ಯಾವ ವೈದ್ಯಕೀಯ ಪದ್ಧತಿ ಪ್ರಾಕ್ಟೀಸ್ ಮಾಡುವಾಗಲೂ ಅವರಿಗೆ ರೋಗಿಗಳು ಮುತ್ತು ತ್ತಿದ್ದರು . ಅವರ ಸಂಹವನ ಕಲೆ ,ಮಾನವೀಯತೆ ಮತ್ತು ಸರಳತೆ ಅದಕ್ಕೆ ಮುಖ್ಯ ಕಾರಣ . ಪದವಿಯೊಂದೇ ವೈದ್ಯರಿಗೆ ಸಾಲದು ಎಂಬುದಕ್ಕೆ ಸಾಕ್ಷಿ . 

ದುರದೃಷ್ಟ ಎಂಬಂತೆ ಆವರಿಗೆ ಪಾಲಿ ಅರ್ಟಿರೈಟಿಸ್ ನೋಡೋಸ ಎಂಬ  ಸ್ವಯಂ ನಿರೋಧಕ ಕಾಯಿಲೆ ಬಂತು .ಇದರಲ್ಲಿ ಅಂಗಾಂಗಗಳ ಮುಖ್ಯವಾಗಿ ಮೂತ್ರಪಿಂಡಗಳ  ರಕ್ತ ಸಂಚಾರ ವ್ಯತ್ಯಯ ಆಗುವುದು . ಬೆಂಗಳೂರಿನಲ್ಲಿ ಚಳಿಗೆ ತುಂಬಾ ತೊಂದರೆ ಆಗುವುದು ಎಂದು ಮಂಗಳೂರಿಗೆ ತಮ್ಮ ಕಾರ್ಯ ಕ್ಷೇತ್ರ ಬದಲಿಸಿದರು .ಇಲ್ಲಿಯ ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು . ಇವರು ಬೆಂಗಳೂರಿನಲ್ಲಿ ಇದ್ದಾಗಲೇ ನನಗೆ ಮಿತ್ರರ ಮೂಲಕ ಅವರ ಪರಿಚಯ ಆಗಿತ್ತು . ಆದರೆ ಸುಮಾರು ಹತ್ತು ವರ್ಷ ಅವರ ಸಂಪರ್ಕ ಇರಲಿಲ್ಲ . 

ನಾನು ಮಂಗಳೂರು ರೈಲ್ವೆ ಅರೋಗ್ಯ ಕೇಂದ್ರದಲ್ಲಿ (೧೯೯೦-೯೨)ವೈದ್ಯಾಧಿಕಾರಿ ಯಾಗಿದ್ದು ಕೆಲವು ರೋಗಿಗಳನ್ನು ವೆನ್ ಲೋಕ್ ಆಸ್ಪತ್ರೆಗೆ ಕಳುಹಿಸುತ್ತಿದ್ದೆ .ನನ್ನ ಅಕ್ಷರ ಮತ್ತು ಹೆಸರು ನೋಡಿ ಈ ಹಿರಿಯ ಮಿತ್ರರು ನನ್ನ ಬಿಡಾರಕ್ಕೇ ಬಂದು "ಎಂತ ಮಾರಾಯ ನೀನು ಇಲ್ಲಿಯೇ ಇದ್ದೆಯಾ "ಎಂದು ಹವ್ಯಕ ಭಾಷೆಯಲ್ಲಿ ಮಾತನಾಡಿ ,ನಮ್ಮಲ್ಲಿ ಊಟ ಮಾಡಿ ಹೋದರು .ಅಲ್ಲದೆ ನನ್ನನ್ನು  ಮತ್ತು ಮನೆಯವರನ್ನು ಒಂದು ಭಾನುವಾರ ಅವರಲ್ಲಿಗೆ ಊಟಕ್ಕೆ ಕರೆದರು . ನಾವು ಅಲ್ಲಿಗೆ ಹೋದ ದಿನ ಅವರ ಶ್ರೀಮತಿಯವರಿಗೆ ಜ್ವರ ದಿಂದ ಮಲಗಿದ್ದರು .ಡಾಕ್ಟರರರೇ  ನಮಗೆ ಬಡಿಸಿ ಉಪಚಾರ ಮಾಡಿದರು . 

ಇದು ಆಗಿ ನಾನು ಉನ್ನತ ವ್ಯಾಸಂಗಕ್ಕೆ ಚೆನ್ನೈ ಗೆ ತೆರಳಿ  ಹಲವು ವರ್ಷಗಳ ನಂತರ ಮಂಗಳೂರಿನ ದೇರಳಕಟ್ಟೆ ಯಲ್ಲಿ  ಕೆ ಎಸ ಮೆಡಿಕಲ್ ಕಾಲೇಜು ನಲ್ಲಿ  ಅಧ್ಯಾಪಕನಾಗಿ ಸೇರಿ ಪುನಃ ಮಂಗಳೂರಿಗೆ ಬಂದೆ . ಅಷ್ಟರಲ್ಲಿ ಅವರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಗಿದ್ದು ,ಸರಕಾರಿ ಸೇವೆ ಬಿಟ್ಟು ಗುರುಪುರ ಕೈಕಂಬದಲ್ಲಿ ಮನೆ ಕಟ್ಟಿ ,ಪ್ರಾಕ್ಟೀಸ್ ಆರಂಭಿಸಿದ್ದರು .ಅವರ ಮೂಲ ಕಾಯಿಲೆಯ  ಕೆಲವು ತೊಂದರೆಗಳಿಗೆ ಹೋಮಿಯೋಪಥಿಯಲ್ಲಿ  ಗುಣ ಕಂಡಿತು ಎಂದು ಆ ಪದ್ದತಿ ಯನ್ನು ಅಧ್ಯಯನ ಮಾಡಿ ಪ್ರಾಕ್ಟೀಸ್ ಮಾಡುತ್ತಿದ್ದರು .ನಮ್ಮ ಕಾಲೇಜ್ ಆಸ್ಪತ್ರೆಗೆ ಹಲವು ರೋಗಿಗಳನ್ನು ಕಳುಹಿಸುತ್ತಿದ್ದರಲ್ಲದೆ  ಅವರ ಯೋಗ ಕ್ಷೇಮ ವಿಚಾರಿಸಲು ತಾವೇ ಬರುವರು . 

  ನಾಡಿನ ಹೆಸರಾಂತ ವೈದ್ಯ ಸಾಹಿತಿ ಡಾ ನಾ ಮೊಗಸಾಲೆ ಪಕ್ಕದ ಕಾಂತಾವರದಲ್ಲಿ ನೆಲೆಸಿದ್ದು  ಇವರಿಗೆ ಮಿತ್ರರು .ಮೊಗಸಾಲೆ ಮತ್ತು ನಾನು ಕನ್ಯಾನ ದಲ್ಲಿ ಒಂದೇ ಶಾಲೆಯಲ್ಲಿ ಓದಿದವರು . ಆದರೂ ಅವರು ತುಂಬಾ ಹಿರಿಯರಾದುದರಿಂದ ನನಗೆ ಅವರ ಪರಿಚಯ ಇರಲಿಲ್ಲ . ಇಂತಿರಲು ಅವರು ಆರೋಗ್ಯದ ಬಗ್ಗೆ ಒಂದು ಪುಸ್ತಕ ಬರೆದು ಅದನ್ನು ಯಥೋಚಿತವಾಗಿ ಬಿಡುಗಡೆ ಮಾಡಲು ವಸಂತ ಕುಮಾರ್ ರಾವ್ ಅವರನ್ನು ಕೇಳಿಕೊಳ್ಳಲು ಅವರು ನನ್ನನ್ನು ಪ್ರೀತಿಯಿಂದ ಸೂಚಿಸಿದರು .ವಸಂತಕುಮಾರ್ ಅವರ ಕೈಕಂಬ ಮನೆಯ ವಿಶಾಲ ಸುಂದರ ವಾತಾವರಣದಲ್ಲಿ ನಡೆದ ಕಾರ್ಯಕ್ರಮ ಚೆನ್ನಾಗಿ ನಡೆದು ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ . ಶ್ರೀಮಾನ್ ಶ್ರೀನಿವಾಸ ಜೋಕಟ್ಟೆ (ಸ್ವತಃ ಬರಹಗಾರರು )ಕಾರ್ಯಕ್ರಮ ನಿರೂಪಣೆ ಮಾಡಿದ  ಕಾರ್ಯಕ್ರಮದಲ್ಲಿ ನಾನು ಅತ್ಯಂತ ಆದರಿಸುವ ಬೋಳಂತಕೋಡಿ ಈಶ್ವರ ಭಟ್ ಕೂಡಾ ಮುಖ್ಯಅತಿಥಿ ಆಗಿದ್ದುದು ಸಂತೋಷ . ಅವರು ನನ್ನನ್ನು ಮೊದಲೇ ಬಲ್ಲವರು ,ಆಮಂತ್ರಣ ಪತ್ರಿಕೆಯಲ್ಲಿ  ಎ  ಪಿ ಭಟ್ ಎಂಬುದನ್ನು ನೋಡಿ ಯಾರೋ ಎಂದು ತಿಳಿದುಕೊಂಡಿದ್ದರಂತೆ . ನನ್ನನ್ನು  ನೋಡಿ ಸಲುಗೆಯಲ್ಲಿ ನೀನಾ ಮಾರಾಯ ಎಂದರು .ಅವರ ಪ್ರೀತಿ ನನಗೆ ಆಶೀರ್ವಾದ .. ಇದೇ ಸಮಾರಂಭದಲ್ಲಿ ಸಹೃದಯಿ ಲೇಖಕ ಜನಾರ್ಧನ ಭಟ್ ಅವರ ಪರಿಚಯವೂ ಆಯಿತು . ನಾ ಮೊಗಸಾಲೆ ನನ್ನನ್ನು ಓರ್ವ ತಮ್ಮನಂತೆ ಕಂಡು ಪ್ರೋತ್ಸಾಹಿಸಿದ್ದಾರೆ ,ಕಾಂತವರದ ಕೆಲವು ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ .

ಮುಂದೆ ಹಲವು ಭಾರಿ ನಮ್ಮ ಭೇಟಿ ಆಗಿದೆ .ಅವರೂ  ಅವರ ಶ್ರೀಮತಿಯವರೂ ನಮ್ಮನ್ನು ಮನೆಯವರಂತೆ ಕಂಡಿದ್ದಾರೆ . 

ಆದರೆ ಅವರ ಅರೋಗ್ಯ ಕ್ಷೀಣಿಸುತ್ತಾ ಹೋಗಿ ಕೆಲವು ವರ್ಕ್ ವರುಷ ಗಳಲ್ಲಿ  ನಮ್ಮನ್ನು ಬಿಟ್ಟು ಹೋದರು .ಅವರ ಒಬ್ಬ ಮಗ  ಇಂಜಿನಿಯರ್ ಮತ್ತು ಇನ್ನೊಬ್ಬ ಸರ್ಜನ್ ಆಗಿದ್ದಾರೆ . 

ಜೀವನದುದ್ದಕ್ಕೂ  ನೋವು ಅನುಭವಿಸಿ ,ಅದನ್ನು ಸ್ವಲ್ಪವೂ ತೋರಿಸಿ ಕೊಳ್ಳದೆ ,ಸದಾ ನಗು ನಗುತಾ ಬಾಳಿ ,ಜನರ ಸೇವೆ ಮಾಡಿ ಕಣ್ಮರೆಯಾದ ಅವರು ನನಗೆ ನಿಜವಾದ ಯೋಗಿಯಂತೆ ಕಾಣುತ್ತಾರೆ .ಅವರ ಬಗ್ಗೆ ಕಾಂತಾವರ ಕನ್ನಡ ಸಂಘದವರು ಒಂದು ಪುಸ್ತಕ ಪ್ರಕಟಿಸಿದ್ದು ನನ್ನ ಬಂಧು ವೈದ್ಯರಾದ ವಿಶ್ವೇಶ್ವರ ಭಟ್ ಸಂಪಾದಿಸಿದ್ದಾರೆ .

 

 

 

 

 

ಸೋಮವಾರ, ಏಪ್ರಿಲ್ 19, 2021

ಹುಬ್ಬಳ್ಳಿ ನೆನಪುಗಳು 3

                      ಹುಬ್ಬಳ್ಳಿ ನೆನಪುಗಳು 3 

ನಮ್ಮ ಕಾಲೇಜು ನ  ಸಭಾಭವನ ಆಗಿನ  ಕಾಲಕ್ಕೆ ಬಹಳ ಸುಸಜ್ಜಿತ ಎನ್ನ ಬಹುದಾಗಿತ್ತು .ಇಲ್ಲಿ  ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದ್ದು ವಿದ್ಯಾರ್ಥಿ ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸುತ್ತಿದ್ದರು .  ಬಿ ವಿ ಕಾರಂತರ ಸತ್ತವರ ನೆರಳು .ಪ್ರೊತಿಮಾ ಬೇಡಿ ಅವರ ಒಡಿಸ್ಸಿ ನೃತ್ಯ ,ಬಾಳಪ್ಪ ಹುಕ್ಕೇರಿ ,ಗುರುರಾಜ ಹೊಸಕೋಟೆ ಅವರ ಗಾಯನ ಇತ್ಯಾದಿ ಕಾರ್ಯಕ್ರಮಗಳು ನಾನು ಇದ್ದಾಗ ನಡೆದ ನೆನಪು . ಗಿರೀಶ್ ಕಾರ್ನಾಡ್ ಕೆಲವು ಕಾರ್ಯಕ್ರಮಗಳಿಗೆ ಧಾರವಾಡದಿಂದ ಪ್ರೇಕ್ಷಕರಾಗಿ ಬರುತ್ತಿದ್ದರು . 

  ಕಾಲೇಜು ನಲ್ಲಿ ಒಂದು ಕನ್ನಡ ಸಂಘ ಇದ್ದು ಕ್ರಿಯಾಶೀಲ ಆಗಿತ್ತು . ರಾಜ್ಯೋತ್ಸವ ವನ್ನು  ವಿಜೃಂಭಣೆಯಿಂದ ಆಚರಿಸುತ್ತಿದ್ದೆವು . ನಾನು ಮೊದಲನೇ ಎಂ ಬಿ ಬಿ ಎಸ ನಲ್ಲಿ ಇರುವಾಗ  ಪಾಂಡುರಂಗ ಪಾಟೀಲ್ ಎಂಬ ಪ್ರತಿಭಾವಂತ ಹಿರಿಯ ವಿದ್ಯಾರ್ಥಿ ಅದರ ಕಾರ್ಯದರ್ಶಿ ಆಗಿದ್ದರು .ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು .ಮುಂದೆ ಅವರು ಹುಬ್ಬಳ್ಳಿ ಧಾರವಾಡ ಮೇಯರ್ ಕೂಡಾ ಆಗಿದ್ದರು ಎಂದು ನೆನಪು .  ನಾನು ಎರಡೇ ವರ್ಷಕ್ಕೆ ಬಂದಾಗ ವೇದ ವ್ಯಾಸ ದೇಶಪಾಂಡೆ ಅದರ ಕಾರ್ಯದರ್ಶಿ ಮತ್ತು ನಾನು ಉಪ ಕಾರ್ಯದರ್ಶಿ . ನಮ್ಮ ಅವಧಿಯಲ್ಲಿ  ಕೆರೆಮನೆ ಮೇಳದವರಿಂದ ಶಂಭು ಹೆಗ್ಗಡೆಯವರ ನೇತೃತ್ವದಲ್ಲಿ   ಶ್ರೀ ಕೃಷ್ಣ ಲೀಲೆ ಪ್ರಸಂಗ ಆಡಿಸಿದೆವು .ಅದಕ್ಕಾಗಿ ನಾನು ಗುಣವಂತೆ ಸಮೀಪ ಅವರ ಮನೆಗೆ ಹೋಗಿ ದ್ದೆನು .ಕಾರ್ಯಕ್ರಮದ ದಿನ ಶಿವರಾಮ ಹೆಗ್ಡೆಯವರಿಗೆ ಸನ್ಮಾನ ಇಟ್ಟುಕೊಂಡಿದ್ದೆವು .. ಅವರು ತಂಡದ ಜೊತೆ ಬಂದವರು ನನ್ನ ಹಾಸ್ಟೆಲ್ ರೂಮ್ ನಲ್ಲಿಯೇ ವಿಶ್ರಾಂತಿ ತೆಗೆದು ಕೊಂಡರು ಕಾರ್ಯಕ್ರಮ ಭಾರೀ ಯಶಸ್ವಿ ಆಗಿ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದರು . 

ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆದಾಗ ಕರ್ನಾಟಕದ ಟೀಮ್ ನ್ನು ಕಾಲೇಜಿಗೆ ಕರೆಸಿ ಸನ್ಮಾನ ಮಾಡಿದರು .ಚಂದ್ರಶೇಖರ್ ,ಕಿರ್ಮಾನಿ ಯವರಂತಹ ಸ್ಟಾರ್ ಗಳನ್ನು ಹತ್ತಿರದಿಂದ ನೋಡಿದೆವು .. 

ಇದಲ್ಲದೆ  ಸಾಹಿತಿ ಬರಹ ಗಾರರಾದ  ಪಾಟೀಲ್ ಪುಟ್ಟಪ್ಪ,ಪಾ ವೆಂ ಆಚಾರ್ಯ ,ನಾಡಿಗೇರ್ ಕೃಷ್ಣರಾಯ ,ಚೆನ್ನವೀರ ಕಣವಿ ,ಸನದಿ ಮುಂತಾದವರು ,ಸಿತಾರ್ ವಾದಕ ಉಸ್ತಾದ್ ಬಾಲೇ ಖಾನ್ ,ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ್ ಮತ್ತು ಇನ್ನೂ ಅನೇಕರನ್ನು ಕಾಣುವ ಮತ್ತು ಕೇಳುವ ಅವಕಾಶ ನಮಗೆ ಕಾಲೇಜಿನಲ್ಲಿ ಲಭಿಸಿತು . 

   ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚು ಇದ್ದ ನಮ್ಮ ಕೋಲೇಜಿನ ಕಾರ್ಯಕ್ರಮಗಳಲ್ಲಿ ಬಹಳ ಸಂಭ್ರಮ ಮತ್ತು ಉತ್ಸಾಹ . ಅವರ ಜವಾರಿ ಪ್ರತಿಕ್ರಿಯೆಗಳು  ಆಡಿಟೋರಿಯಂ ನಲ್ಲಿ ಪ್ರತಿದ್ವಂದಿಸುವುದು . ಉದಾ ಹಾಂಗ್ ಹಾಡ್ಲೆ ಮಗನ , ಇತ್ಯಾದಿ . 

ಅಧ್ಯಾಪಕ ವಿದ್ಯಾರ್ಥಿಗಳ ನಡುವೆ ಚರ್ಚಾ ಕೂಟಗಳೂ ನಡೆಯುತ್ತಿದ್ದವು .ದಯಾ ಮರಣ ಬೇಕೇ ಬೇಡವೇ ಎಂಬ ಚರ್ಚೆ ಇನ್ನೂ ನೆನಪಿನಲ್ಲಿ ಇದೆ . ನಾನು ಭಾಷಣ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಭಾಗವಾಸಿಸುತ್ತಿದ್ದು .ಒಮ್ಮೆ  ಸಾಕಷ್ಟು ಸ್ಪರ್ಧಾಳು ಗಳು ಇಲ್ಲಾ ಎಂದು ಒಂದು ಭಾವ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವನ್ನೂ  ಪಡೆದಿದ್ದೆನು . 

ಕಾಲೇಜಿಗೆ ಸಮೀಪ ದೇಶಪಾಂಡೆ ನಗರದಲ್ಲಿ ಸವಾಯಿ ಗಂಧರ್ವ ಹಾಲ್ ಇದ್ದು ಅಲ್ಲಿ ಒಳ್ಳೆಯ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು . 

ಶಿವರಾಮ ಕಾರಂತರಿಗೆ  ಜ್ಞಾನ ಪೀಠ ಪ್ರಶಸ್ತಿ ಬಂದಾಗ ಹುಬ್ಬಳ್ಳಿ ಧಾರವಾಡ ಗಳಲ್ಲಿ ಅವರಿಗೆ ಸನ್ಮಾನ ಏರ್ಪಡಿಸಿದ್ದರು .ಅವರನ್ನು ನಮ್ಮ ಕಾಲೇಜಿಗೆ ಕೂಡಾ ಕರೆಸಲು ನಾವು ಪ್ರಯತ್ನ ಮಾಡಿದೆವು .ಕು ಶಿ ಹರಿದಾಸ ಭಟ್ಟರು ಅವರ ಸನ್ಮಾನ ಯಾತ್ರೆಯ ಸಂಗಾತಿ ಯಾಗಿದ್ದು ,ಅವರನ್ನು ಹೋಟೆಲ್ ನಲ್ಲಿ ಕಾಣ  ಹೋದೆವು .ಅಲ್ಲಿ ಅವರು ಮತ್ತು ಕರ್ನಾಟಕ ಬ್ಯಾಂಕ್ ಛೇರ್ಮನ್ ಅಡಿಗರು ಸಂಭಾಷಣೆಯಲ್ಲಿ ನಿರತರಾಗಿದ್ದರು .ಅಡಿಗರು ಬ್ಯಾಂಕ್ ಕೆಲಸಕ್ಕೆ ಬಂದವರು ಅದೇ ಹೋಟೆಲ್ ನ ಬೇರೆ ರೂಮ್ ನಲ್ಲಿ ಇದ್ದವರು . ಆ ಹೋಟೆಲ್  ಸಾಧಾರಣ ಎನ್ನ ಬಹುದಾದ ಹೋಟೆಲ್ ,ಆದರೂ ಒಂದು ಬ್ಯಾಂಕ್ ನ ಛೇರ್ಮನ್ ಅನಾವಶ್ಯಕ ಆಡಂಬರಕ್ಕೆ ಖರ್ಚು ಮಾಡಲು ಹೋಗುತ್ತಿರಲಿಲ್ಲ ಎಂದು ಇದನ್ನು ಬರೆದಿರುವೆನು . 

ಹುಬ್ಬಳಿಯ ಅವಳಿ ನಗರ ಧಾರವಾಡ . ಸಾಹಿತ್ಯ ಸಂಸ್ಕೃತಿ ಕೇಂದ್ರ . ಧಾರವಾಡದಲ್ಲಿ ನೀವು ಒಂದು ಕಲ್ಲು ಎಸೆದರೆ ಅದು ಒಂದು ಸಾಹಿತಿಯ ಮನೆ ಮೇಲೆ ಬೀಳುವುದು ಎಂಬ ಹೇಳಿಕೆ ಇತ್ತು .ಈಗ ಇದನ್ನೇ ಬೆಂಗಳೂರು ಮತ್ತು ಟೆಕ್ಕಿ ಗಳಿಗೆ ಹೇಳುತ್ತಾರೆ . 

ಪ್ರಸಿದ್ಧ ವಿದ್ಯಾವರ್ಧಕ ಕೇಂದ್ರದಲ್ಲಿ ನಿಯಮಿತವಾಗಿ ಸಾಹಿತ್ಯ  ಚಟುವಟಿಕೆಗಳು ನಡೆಯುತ್ತಿದ್ದು ನಾನು ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ .ಆಗ ಚಂದ್ರಶೇಖರ ಪಾಟೀಲ್ ಕಾರ್ಯದರ್ಶಿ ಆಗಿದ್ದು .ಅಡಿಗ ,ಲಂಕೇಶ್ ,ಅನಂತ ಮೂರ್ತಿ ಅವರಂತಹ ಹಿರಿಯ ಲೇಖಕರನ್ನು ಕಂಡು ಕೇಳುವ ಭಾಗ್ಯ ಸಿಕ್ಕಿತ್ತು . ಜೀವಂತ ಚರ್ಚೆಯೂ  ನಡೆಯುತ್ತಿತ್ತು .ಧಾರವಾಡದಲ್ಲಿ ಕಲಾಭನನ ಎಂಬ ಹೊಸ ಸಭಾ ಭವನ ನಿರ್ಮಾಣ ಆಯಿತು .

ಗಣೇಶ ಹಬ್ಬವನ್ನು ಭಾರೀ ಉತ್ಸಾಹದೊಡನೆ ಅಚ್ಚರಿಸುತ್ತಿದ್ದು ಎಲ್ಲಾ ಹಾಸ್ಟಲ್ ಮತ್ತು ಕಾಲೇಜ್ ನಲ್ಲಿ ಗಣಪತಿ ಇಡಲಾಗುತ್ತಿತ್ತು . ವರ್ಣ ಮಯ ಆಕರ್ಷಕ ರಂಗೋಲಿಗಳನ್ನು  ರಚಿಸುತ್ತಿದ್ದರು .ಹುಡುಗರು  ಹುಡುಗಿಯರನ್ನೂ ಮೀರಿ ರಂಗೋಲಿ ಹಾಕುವುದನ್ನು ನಾನು ಅಲ್ಲಿಯೇ ಕಂಡದ್ದು .  ರಂಗೋಲಿ ಸ್ಪರ್ಧೆಯೂ ಇರುತ್ತಿದ್ದು ಹುಡುಗರು ಅನೇಕ ಬಹುಮಾನ ಬಾಚಿ ಕೊಳ್ಳುತ್ತಿದ್ದರು . ಕೊನೆಯ ದಿನ ಎಲ್ಲಾ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಒಯ್ದು ವಿಸರ್ಜನೆ ಮಾಡುತ್ತಿದ್ದರು.

ಹೋಳಿ ಹಬ್ಬ ಇನ್ನೊಂದು ಸಾರ್ವಜನಿಕ ಹಬ್ಬ .ನನಗೆ ಕೆಲವೇ ಜತೆ ಬಟ್ಟೆಗಳು ಇದ್ದುದರಿಂದ ಅದನ್ನು ತಪ್ಪಿಸಿ ಕೊಳ್ಳುತ್ತಿದ್ದೆ . ಪುಣ್ಯಕ್ಕೆ ಹುಬ್ಬಳ್ಳಿಯ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ದಿನ ಹೋಳಿ  ಆಚಚರಿಸುತ್ತಿದ್ದರು . ಕೆ ಎಂ ಸಿ ಯ ದಿನ ಬೇರೆ ಕಡೆ ಹೋಗಿ ಸಂಜೆ ಬರುತ್ತಿದ್ದೆ . ಸಂಜೆ ಎಲ್ಲಾ ಹುಡುಗರು ಕಾಮ ದಹನ ಮಾಡುತ್ತಾ (ಆ ದಿನ ಮಾತ್ರ ಹಾಡುವ ,ಅಶ್ಲೀಲ ವೆನಿಸ ಬಹುದಾದ )ಹಾಡು ಹಾಡಿ ಸಂತೋಷ ಪಡುವರು .ರಾತ್ರಿ ಪಕ್ಕದ  ಟಾಕಿಸ್ ನಲ್ಲಿ ಉಚಿತ ಇಂಗ್ಲಿಷ್ ಸಿನೆಮಾ ನೋಡುವರು .

ಭಾನುವಾರ, ಏಪ್ರಿಲ್ 18, 2021

ಅಗಲಿದ ವೈದ್ಯ ಮಿತ್ರ ಅಮೈ ಕೃಷ್ಣ ಮೂರ್ತಿ

                       ಅಗಲಿದ ವೈದ್ಯ ಮಿತ್ರ ಅಮೈ ಕೃಷ್ಣ ಮೂರ್ತಿ 

                          



ನಿನ್ನೆ ನಾನು ಅಮೈ ನಾರಾಯಣ ಭಟ್ಟರ ಬಗ್ಗೆ ಬರೆದಿದ್ದೆ .ಅವರ ಪತ್ನಿಯ ಸಹೋದರ ವೇ ಮೂ ವಡ್ಯ ಗಣಪತಿ ಭಟ್ ; ನಾನು ಕಂಡ ಸಜ್ಜನರಲ್ಲಿ ಸಜ್ಜನರು .ಒಬ್ಬ ತಂದೆಗೆ ಬರಬಾರದ ಕ್ರೂರ ಸಂಭವ ತನ್ನ ಜೀವನದಲ್ಲಿ ನಡೆದರೂ ಎಲ್ಲವೂ ದೈವ ಚಿತ್ತ ಎಂದು ತಾಳಿ ಬಾಳಿ ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು . ಇತ್ತೀಚಿಗೆ ನಿಧನರಾದ ಶ್ರೀ ಅಮೈ ಸುಬ್ಬಣ್ಣ ಭಟ್ (ಈಚಣ್ಣ ಭಟ್ ) ಅವರದು ಮೇರು ವ್ಯಕ್ತಿತ್ವ .ಮೆಲು ಆದರೆ ಗಂಭೀರ ನುಡಿ ,ನೋಡಿದ ಯಾರಿಗೂ ಗೌರವ ತೋರುವುದು .ಅವರ ಒಬ್ಬ ಮಗ ಡಾ ಕುಮಾರ ಸುಬ್ರಹ್ಮಣ್ಯ  ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ನಲ್ಲಿ ಸಂಸ್ಕೃತ ಪ್ರಾಧ್ಯಾಪಕ ,ಸೊಸೆ ಶ್ರೀಮತಿ ಅರುಣಾ ಲೇಖಕಿ ಗಂಗಾ ಪಾದೇಕಲ್ ಅವರ ಪುತ್ರಿ ಮತ್ತು ಸಂಗೀತ ವಿದುಷಿ .(ಸಂಗೀತ ಶಾಲೆ ನಡೆಸುತ್ತಿರುವರು ). ಮೊಮ್ಮಗ ಉದಯೋನ್ಮುಖ ಮೃದಂಗ ಕಲಾವಿದ . ಇನ್ನೊಬ್ಬರು ಮಗ ಸುರತ್ಕಲ್ ಏನ್ ಐ ಟಿ ಕೆ ಯಲ್ಲಿ ಪ್ರಾಧ್ಯಾಪಕ ,ಯುವ ವಿಜ್ಞಾನಿ  ಪ್ರಶಸ್ತಿ ವಿಜೇತ ಡಾ ಮಹೇಶ .ಮಹೇಶ ಅವರ ಪತ್ನಿ ನನ್ನ ಗುರು ಕಮ್ಮಜೆ ಸುಬ್ಬಣ್ಣ ಭಟ್ಟರ ಪುತ್ರಿ . ಪ್ರಸಿದ್ಧ ಲೇಖಕ ಬಲ್ನಾಡು ಸುಬ್ಬಣ್ಣ ಭಟ್ಟರ  ಪತ್ನಿ  ಯ  ತವರುಮನೆ ಅಮೈ . ಇನ್ನೂ ಅನೇಕರು ಬೇರೆ ಬೇರೆ ಕಡೆ ಹರಡಿ ಹೋಗಿರುವರು . 

ಇವರ ಕುಟುಂಬದವರೇ  ನಾನು ಇಂದು ನೆನಪಿಸಿ ಕೊಳ್ಳುವ ಡಾ ಕೃಷ್ಣ ಮೂರ್ತಿ . ಇವರು ಅಮೈ ದಿ  (ಹಿರಿಯ )  ಸುಬ್ಬಣ್ಣ ಭಟ್ಟರ ಪುತ್ರ . ಪ್ರತಿಭಾವಂತ ರಾಗಿದ್ದ  ಇವರು  ಆ ಕಾಲದಲ್ಲಿಯೇ  ಬಳ್ಳಾರಿ ಸರಕಾರಿ ವೈದ್ಯಕೀಯ ಕಾಲೇಜು ನಲ್ಲಿ ಎಂ ಬಿ ಬಿ ಎಸ ಗೆ ಪ್ರವೇಶ ಪಡೆದರು .ನನಗಿಂತ ಕೆಲ ವರ್ಷ ಕಿರಿಯರು . ಬಳ್ಳಾರಿ ಮೆಡಿಕಲ್ ಕಾಲೇಜು ನಲ್ಲಿ  ದಂತ ಕತೆ ಯಾಗಿರುವ ಡಾ ಆರ್ ಎಚ್ ಏನ್ ಸಿ ಶೆಣೋಯ್ ಅಂತಹವರು ಇದ್ದ ಕಾಲ . 

ಅಲ್ಲಿ ಸುಗಮವಾಗಿ ಅಧ್ಯಯನ ಪೂರೈಸಿ ,ಸ್ವಲ್ಪ ಸಮಯ ಉಪ್ಪಳ ಕೆ ಏನ್ ಎಚ್ ಆಸ್ಪತ್ರೆಯಲ್ಲಿ  ರೆಸಿಡೆಂಟ್ ಡಾಕ್ಟರ್ ಆಗಿ ಅನುಭವ ಪಡೆದು  ,ಅಲ್ಲಿಗೆ ಸಮೀಪ ಬಾಯಾರು ಎಂಬಲ್ಲಿ ಪ್ರಾಕ್ಟೀಸ್ ಆರಂಭಸಿದರು .ಬಾಯಾರು ಎಂಬುದು ಗ್ರಾಮೀಣ ಪ್ರದೇಶ . ಹಳ್ಳಿಗಳಿಗೆ ಎಂ ಬಿ ಬಿ ಎಸ  ವೈದ್ಯರು ಹೋಗುವುದಿಲ್ಲ ಎಂಬ  ಆರೋಪ ಇದೆ .ಅದಕ್ಕೆ ವ್ಯತಿರಿಕ್ತವಾಗಿ ಯಾವುದೇ ನಾಗರೀಕ ಸೌಲಭ್ಯ ಇದ್ದಿರದ ಸ್ಥಳದಲ್ಲಿ ಸೇವೆ ಆರಂಭಿಸಿದ್ದು ಗಮನಾರ್ಹ .ಅಲ್ಲಿಯ ಕ್ಯಾಂಪ್ಕೋ ಆವರಣದಲ್ಲಿ ಅವರ ಕ್ಲಿನಿಕ್ ಇದ್ದುದರಿಂದ  ಅವರು ಕ್ಯಾಂಪ್ಕೋ ಡಾಕ್ಟರ್ ಎಂದೇ ಜನಪ್ರಿಯ ಆಗಿದ್ದರು . ಕೆಲವು ವರ್ಷ ನಾನು ಮಂಗಳೂರಿನಲ್ಲಿ ಇದ್ದು ಉಪ್ಪಳ ಕ್ಕೆ  ವೈದ್ಯಕೀಯ ಸಂದರ್ಶನ ಕೊಡುತ್ತಿದ್ದೆ . ಅಲ್ಲಿ ಅವರ ಭೇಟಿ ಆಗುತ್ತಿತ್ತು ,ಅವರ ಕೆಲವು ರೋಗಿಗಳನ್ನು ನನ್ನ ಸಲಹೆಗೆ ಕಳುಹಿಸುವರು . 

ಮೃದು  ಮತ್ತು ಮಿತ ಭಾಷಿ . ಸರಳ ವ್ಯಕ್ತಿತ್ವ  . ಮುಂದೆ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು . ಗ್ರಾಮೀಣ ಭಾಗದ ಜನತೆಗೆ ಒಳ್ಳೆಯ ವೈದ್ಯಕೀಯ ಸೇವೆ ,

ಕಳೆದ ವರ್ಷ ಕೊರೋನಾ ಆರಂಭ ಸಮಯದಲ್ಲಿ ಇವರ ಕುಟುಂಬ ಬಂಧುಗಳ ಮನೆಗೆ ಶುಭ ಕಾರ್ಯಕ್ಕೆ  ಹೋಗಿದ್ದು ಇವರು ಒಬ್ಬರೇ ಇದ್ದರು . ಆಗ ವಿಷ ಜಂತು ಏನೋ ಕಚ್ಚಿ  ಮನೆಯಲ್ಲಿ ಪ್ರಜ್ಞಾಹೀನರಾಗಿ ಇದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮಾಡಿದರು . ಅಲ್ಲಿಯ ವೈದ್ಯರ ಪರಿಶ್ರಮ ದಿಂದ ಜೀವ ಉಳಿಯಿತು  ಆದರೂ ಪ್ರಜ್ಞೆ ಬರಲಿಲ್ಲ (ಅವರನ್ನು ನೋಡಿಕೊಂಡ ಆದಿತ್ಯ ಭರದ್ವಾಜ ನನ್ನ  ಶಿಷ್ಯನೇ ಆಗಿದ್ದು ಜಾಣ ಮತ್ತು  ನುರಿತ ವೈದ್ಯ ). ಅಲ್ಲಿಂದ ಸ್ವಲ್ಪ ಸಮಯ  ಫಿಸಿಯೋ ತೆರಪಿ ಗಾಗಿ ನಮ್ಮ ಆಸ್ಪತ್ರೆಯಲ್ಲಿ ಇದ್ದು ,ಕೆಲ ದಿನಗಳ ನಂತರ  ಮನೆಯಲ್ಲಿ  ನಿಧನರಾದರು . 

ಇವರ ಮಿತ್ರರಿಗೆ ,ಬಂಧುಗಳಿಗೆ ಮತ್ತು ಮುಖ್ಯವಾಗಿ ರೋಗಿಗಳಿಗೆ ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟ . ವೈಯುಕ್ತಿಕವಾಗಿ ನನಗೆ ಕಿರಿಯ ಸಹೋದರನನ್ನು ಕಳೆದು ಕೊಂಡಂತೆ ಆಯಿತು .

ಬಾಲಂಗೋಚಿ : ಇವರನ್ನು ಮಂಗಳೂರಿಗೆ ಒಯ್ದ ಕೆಲವೇ ದಿನಗಳಲ್ಲಿ ಕೇರಳ ಗಡಿಯನ್ನು  ನಮ್ಮ ಜಿಲ್ಲಾಡಳಿತ ಬಂದ್ ಮಾಡಿತು .ಇಂತಹ ಎಷ್ಟು ರೋಗಿಗಳಿಗೆ ಕಷ್ಟ ವಾಗಿದೆಯೋ ದೇವರೇ ಬಲ್ಲ .ಕಾಸರಗೋಡಿವರು ನಮ್ಮವರು ,ಅಲ್ಲಿ ನಮ್ಮ ಅನೇಕ ಬಂಧು ಮಿತ್ರರು ಇದ್ದಾರೆ .ಮಂಗಳೂರಿನ ವಾಣಿಜ್ಯ ಅಭಿವೃದ್ಧಿಗೆ ಅವರು ಬೇಕು ,ನಮ್ಮ ಕಾಲೇಜು ಗಳಿಗೆ ಅಲ್ಲಿಯ ವಿದ್ಯಾರ್ಥಿಗಳು ಬೇಕು .ಕಷ್ಟದ ಸಮಯದಲ್ಲಿ ಎಕಾ ಏಕಿ ಅವರು ಅಸ್ಪೃಶ್ಯರಾದರು ..

ಶನಿವಾರ, ಏಪ್ರಿಲ್ 17, 2021

ಚಾತಕ ಪಕ್ಷಿ

                        ಚಾತಕ ಪಕ್ಷಿ 

            

Jacobin Cuckoo (Clamator jacobinus) Photograph By Shantanu Kuveskar.jpgನಮ್ಮಲ್ಲಿ ಕಾಯುವುದಕ್ಕೆ ಹಲವು ಉಪಮೆಗಳನ್ನು ಉಪಯೋಗಿಸುವದು  ರೂಢಿ .ಶಬರಿಯು ರಾಮನಿಗೆ ಕಾದಂತೆ ಅಥವಾ ಚಾತಕ ಪಕ್ಷಿಯಂತೆ ಎನ್ನುವುದು ಜನಪ್ರಿಯ .ಅದರಲ್ಲಿ ಶಬರಿ ರಾಮನ ಕಥೆ ಎಲ್ಲರಿಗೂ ತಿಳಿದಿರುವದು .ಆದರೆ ಏನಿದು ಚಾತಕ ಪಕ್ಷಿ ?ಯಾರಿಗೆ ಅದು ಕಾಯುವುದು ?

ಚಾತಕ ಪಕ್ಷಿ  ಕೋಗಿಲೆ ಜಾತಿಗೆ ಸೇರಿದ ಹಕ್ಕಿ .ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಾಣಿಸಿಕೊಳ್ಳುವುದು .ಇದಕ್ಕೆ ಒಂದು ಜುಟ್ಟು ಇರುವ ಕಾರಣ ಜುಟ್ಟು ಕೋಗಿಲೆ ಎಂದೂ ಕರೆಯುವರು .ಇಂಗ್ಲಿಷ್ ನಲ್ಲಿ ಜಾಕೋಬಿನ್ ಕುಕ್ಕೂ ಎಂದು ಕರೆಯಲ್ಪಡುವುದು . 

ಇದರ ದರ್ಶನ  ಮುಂಗಾರು ಮಳೆಯ ಆಗಮನದ ಸೂಚನೆ ಎಂಬ ಪ್ರತೀತಿ .ಅಲ್ಲದೆ ಇದು ಮಳೆ ನೀರನ್ನೇ ಕುಡಿದು ಬದುಕುವುದು ಎಂಬ ನಂಬಿಕೆ . 

ಇಲ್ಲಿ ಚಾತಕ ಪಕ್ಷಿ ಮುಂಗಾರು ಮಳೆಗಾಗಿ ಕಾಯುವುದು ;ಜನರು ಚಾತಕ ಪಕ್ಷಿ ಆಗಮನ (ಮತ್ತು ಅದರ ಹಿಂದೆ ಬರುವ ಮುಂಗಾರು ಮಳೆಗೆ )ಕ್ಕೆ ದಾರಿ ನೋಡುವರು . 

ಪ್ರಜೆಗಳು ಒಳ್ಳೆಯ ದಿನಗಳಿಗೆ ,ರೈತರು ಒಳ್ಳೆಯ ಮಳೆಗೆ ,ಪ್ರೇಮಿಯು ಪ್ರೇಮಿಯ ಸಂದೇಶ ಮತ್ತು ದರ್ಶನಕ್ಕೆ ,  ತಾಯಿ ದೂರ ದೇಶಕ್ಕೆ ಹೋದ ಮಗನ ಆಗಮನಕ್ಕೆ ,ಹೆತ್ತವರು ಕೋರೋನ ಕಡಿಮೆಯಾಗಿ ಮಕ್ಕಳ ಶಾಲೆ ಪುನರಾರಂಭ ಆಗಲು ,ಹೀಗೆ ಹಲವರು ಚಾತಕ ಪಕ್ಷಿಯಂತೆ ಕಾಯುತ್ತಲಿರುವರು .

ಕಾಯುವವರಿಗೆ ತಾಳ್ಮೆ ಬೇಕಾಗುವುದು

 ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ

ದುಷ್ಟ ಮನುಜರು ಪೇಳ್ವ ನಿಷ್ಟುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು  
ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು
ಕಟ್ಟು ಬುಟ್ಟಿಯ ಮುಂದೆ ಉಣಲುಂಟು ತಾಳು


ಹಳಿದು ಹಂಗಿಸುವ ಹಗೆಯ ಮಾತನು ತಾಳು
ಸುಳಿನುಡಿ ಕುಹುಕ ಕುಮಂತ್ರವನು ತಾಳು
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಲಿ ತಾಳು


ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋ ಹಾಲಿಗೆ ನೀರು ಇಕ್ಕಿದಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು
-ವಾದಿರಾಜರು

ಶುಕ್ರವಾರ, ಏಪ್ರಿಲ್ 16, 2021

ನೂತನ ಸಕ್ಕರೆ ಕಾಯಿಲೆ ಔಷಧಿ ಗ್ಲಿಪ್ಲೋಜಿನ್

 ನೂತನ  ಸಕ್ಕರೆ ಕಾಯಿಲೆ ಔಷಧಿ  ಗ್ಲಿಪ್ಲೋಜಿನ್ 

ಸಕ್ಕರೆ ಕಾಯಿಲೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಿದೆ ಮತ್ತು  ಸಣ್ಣ ವಯಸ್ಸಿನಲ್ಲಿಯೇ  ಇದು ಆರಂಭವಾಗುತ್ತಿದೆ . ಸಕ್ಕರೆ ಕಾಯಿಲೆಯವರ ಲ್ಲಿ ಎರಡು ಮುಖ್ಯ ಕರ್ಣಾತ್ಮಕ ಅಂಶಗಳು .ಒಂದು ಇನ್ಸುಲಿನ್ ಉತ್ಪಾದನೆಯ ಕೊರತೆ ಮತ್ತು ಇನ್ನೊಂದು ಜೀವಕೋಶಗಳು ಇನ್ಸುಲಿನ್ ಪ್ರತಿರೋಧ ಹೊಂದುವದು . 

     ಮೂತ್ರಪಿಂಡಗಳು  ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿ ಮುಖ್ಯ  ಪಾತ್ರ ವಹಿಸುತ್ತವೆ .  ಕಿಡ್ನಿಯ ರಕ್ತ ನಾಳಗಳಿಂದ ಮೂತ್ರ ನಳಿಕೆಗೆ  ನೀರು ಮತ್ತು ವಿಸರ್ಜನಾ ವಸ್ತುಗಳ ಸ್ರಾವ ಆಗುವುದು . ಅದರೊಂದಿಗೆ ಲವಣಗಳು ಮತ್ತು ಗ್ಲೋಕೋಸ್ ಕೂಡಾ ಇರುವುದು . ಆದರೆ  ಶರೀರಕ್ಕೆ ಅವಶ್ಯವಿರುವ  ಅಂಶಗಳನ್ನು ಕಿಡ್ನಿ ಪುನಃ ಹೀರಿಕೊಳ್ಳುವುದು . ರಕ್ತದಲ್ಲಿ ಒಂದು ಮಿಲಿ ಲೀಟರ್ ಗೆ ೧೮೦ ಮಿಲಿಗ್ರಾಮ್ ಗಿಂತ ಜಾಸ್ತಿ  ಗ್ಲುಕೋಸ್ ಇದ್ದರೆ  ಅದು ಮೂತ್ರದಲ್ಲಿ ವಿಸರ್ಜನೆ ಆಗುವುದು . 

ಇದುವರೆಗೆ ಲಭ್ಯವಿದ್ದ  ಔಷಧಿಗಳು  ಮೇದೋಜೀರಕ ಗ್ರಂಥಿಯಿಂದ  ಇನ್ಸುಲಿನ್ ಹೆಚ್ಚು ಉತ್ಪಾದಿಸುವಂತೆ ಪ್ರಚೋದಿಸುವವು .,ಯಕೃತ್ ಗ್ಲುಕೋಸ್ ಉತ್ಪಾದಿಸಿ ರಕ್ತಕ್ಕೆ ಬಿಡದಂತೆ ಮಾಡುವವು ,ನೈಸರ್ಗಿಕವಾಗಿ ಉತ್ಪತ್ತಿಯಾದ  ಇನ್ಸುಲಿನ್ ನ ಅಯುಷ್ಸು ಹೆಚ್ಚಿಸುವವು , ಜೀವಕೋಶಗಳನ್ನು ಇನ್ಸುಲಿನ್ ಗೆ ಸ್ಪಂದಿಸುವಂತೆ ಮಾಡುವವು ಮತ್ತು  ಕರುಳಿನಿಂದ ಸಕ್ಕರೆ ರಕ್ತಕ್ಕೆ ಸೇರುವುದನ್ನು ನಿಧಾನಿಸುವವು ..  ಇದು ಯಾವುದೂ ಸಂಪೂರ್ಣ ಪರಿಣಾಮ ಕಾರಿ ಆಗದಿದ್ದರೆ ಮತ್ತು ಇವುಗಳ ಉಪಯೋಗ ಬೇರೆ ಕಾರಣಕ್ಕೆ (ಉದಾ ಗರ್ಭಿಣಿಯರು )ನಿರೋಧಿಸಿದ್ದರೆ  ಇನ್ಸುಲಿನ್ ಮತ್ತು ಇನ್ಸುಲಿನಂತಹ  ವಸ್ತುಗಳನ್ನು ಕೊಡುವರು . 

ಇತ್ತೀಚಿಗೆ  ಮೂತ್ರಪಿಂಡಗಳಿಂದ  ಅಧಿಕ ಪ್ರಮಾಣದಲ್ಲಿ ಸಕ್ಕರೆ (ಗ್ಲುಕೋಸ್ )ಯನ್ನು ಮೂತ್ರದ ಮೂಲಕ ವಿಸರ್ಜಿಸಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡುವ ಔಷಧಿಗಳು ಬಂದಿವೆ . ಅವುಗಳನ್ನು ಗ್ಲಿಫ್ಲೋಝಿನ್ ಗಳು ಎಂದು ಕರೆಯುವರು . ಅವುಗಳು ಸುರಕ್ಷಿತ ಮತ್ತು ಹೃದ್ರೋಗದಲ್ಲಿಯೂ ಸಹಾಯಕಾರಿ ಎಂದು ಕಂಡು ಬಂದಿದೆ .ಹೊಸತಾಗಿ ಬಂದಿರುವ ಕಾರಣ  ಬೆಲೆ ಸ್ವಲ್ಪ ಜಾಸ್ತಿ ಇದೆ .ಕ್ರಮೇಣ ಕಡಿಮೆ ಆಗ ಬಹುದು


ಬೇಂಕುಗಳ ಕಲಸುಮೇಲೋಗರ

 ಬ್ಯಾಂಕುಗಳ ಕಲಸು ಮೇಲೋಗರ 


ಬ್ಯಾಂಕುಗಳ  ವಿಲೀನ ಪರ್ವ ನಡೆಯುತ್ತಿದೆ .ವ್ಯವಹಾರ ದೃಷ್ಟಿಯಿಂದ ಇದು ಸರಿ ಇರಬಹುದು .ಆದರೆ ಎಲ್ಲ ಸಂಸ್ಥೆ ಗಳಿಗೂ ಒಂದು ಆತ್ಮ ಇರುತ್ತದೆ . ಒಬ್ಬನು ಸಿಂಡಿಕೇಟ್ ಬ್ಯಾಂಕ್ ಗೆ  ಕೆಲಸಕ್ಕೆ ಸೇರಿ ಬೆಳೆದು ,ಅದರ ಜತೆ ತಾದಾತ್ಮ್ಯ ಹೊಂದಿದ ಮೇಲೆ ಒಂದು ದಿನ ಬೆಳಿಗ್ಗೆ  ನಿನ್ನ ಅನ್ನದಾತ ಕೆನರಾ ಬೇಂಕ್ ಎಂದರೆ ,ತನಗೆ ಸಂಬಳ ಸಾರಿಗೆ ಮೊದಲಿನಂತೆ ಬಂದರೂ ಅವನ  ಮನಸು ಹೊಂದಿಕೊಳ್ಳಲು ಸಮಯ ಬೇಕು  . ಹಳೇ  ಕೆನರಾ ಬ್ಯಾಂಕ್ ನವರಿಗೆ  ಸಿಂಡಿಕೇಟ್ ನಿಂದ ಬಂದವರು  ಹೊರಗಿನವರು .ಸಿಂಡಿಕೇಟ್ ನವರಿಗೆ  ಇದು ತಮ್ಮ ತವರು ಮನೆ ಅಲ್ಲ ಎಂಬ ಭಾವನೆ . ಮೊದಲೇ  ಬ್ಯಾಂಕುಗಳಲ್ಲಿ ಗ್ರಾಹಕರೊಡನೆ ಇದ್ದ  ವೈಯುಕ್ತಿಕ ಸಂಬಂಧಗಳು  ನಶಿಸುತ್ತಿವೆ . ಅದರ ಮೇಲೆ  ಕ್ಲರ್ಕ್ ಮತ್ತು ಮ್ಯಾನೇಜರ್ ಹುದ್ದೆಗೆ  ಬೇರೆ ರಾಜ್ಯಗಳಿಂದ ಸ್ಥಳೀಯ ಭಾಷೆ ಅರಿಯದ ಸಿಬ್ಬಂದಿ ಹೆಚ್ಚು .(ಇದು ಮೊದಲೂ ಇತ್ತು .ಆದರೆ ಅನುಪಾತ ಈಗ ಬದಲಾಗಿದೆ )

                ದಕ್ಷಿಣ ಕನ್ನಡ ದವರಿಗೆ ಒಂದು ಗುಣ ಇದೆ .ತಾವು ಹೋದಲ್ಲಿ ಭಾಷೆ ಬೇಗ ಕಲಿಯುವರು .ಹಿಂದಿ ಹೇಗೂ ಬರುವದು .ಅದರಿಂದ ನಮ್ಮ ಜಿಲ್ಲೆಯಲ್ಲಿ ಹುಟ್ಟಿಕೊಂಡ ಖಾಸಗಿ ಬ್ಯಾಂಕ್ ಗಳು  ಬೇಗ ಜನಪ್ರಿಯ ಆದವು . 

ಇನ್ನು  ಕೇಂದ್ರ ಸರಕಾರದ ಹಿಂದಿ ಜನಪ್ರಿಯ ಗೊಳಿಸುವ ಪರಿ ಪ್ರಶ್ನಾರ್ಹ . ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲಿ ಹಿಂದಿ ಅನುಷ್ಠಾನ ಇಲಾಖೆ ಮತ್ತು ಹೇರಳ ಸಿಬ್ಬಂದಿ ಇರುವರು .ಕಾಲ ಕಾಲಕ್ಕೆ ಒಂದು ಮೀಟಿಂಗ್ ಮಾಡುವುದು ,ತಿಂಡಿ ಕಾಫಿ ಕುಡಿಯುವದು ಮತ್ತು ಒಂದು ರಿಪೋರ್ಟ್ ಬರೆಯುವುದು ಇವರ ಕೆಲಸ .ಆಫೀಸ್ ಬ್ಯಾಂಕ್ ಗಳಲ್ಲಿ ಇಂದಿನ ಹಿಂದಿ ಶಬ್ದ ಎಂದು ಬರೆಯುವುದು . ನೀವು ಒಳ ಹೊಕ್ಕ ಕೂಡಲೇ  ಇಂದಿನ ಶಬ್ದ  बिल्ली means   ಬೆಕ್ಕು  ಎಂದು ಬರೆದಿರುವುದನ್ನು ಓದಿ ಯಾರು ಹಿಂದಿ ಕಲಿಯುವರು ?ಇದರಿಂದ ಹಿಂದಿ ಪ್ರಚಾರ ಮತ್ತು ಉದ್ದಾರ ಆಗದು ,ಜನರಿಗೂ ಉಪಯೋಗ ಶೂನ್ಯ . ಇದರ ಬದಲಿಗೆ ಉತ್ಪಾದಕ ಮತ್ತು ಜನೋಪಯೋಗಿ ನೌಕರಿ ಸೃಷ್ಟಿ ಮಾಡಬಹುದು .                                            ಹಳ್ಳಿಯಿಂದ  ಬಂದ  ತುಳು ,ಕನ್ನಡ ಮಾತ್ರ ಬರುವ ಗ್ರಾಹಕರು ಹೇಗೆ ವ್ಯವಹಾರ ಮಾಡ ಬೇಕು ?ಅವರಿಗೆ ಚಲನ್  ಭರ್ತಿ  ಮಾಡಲು ಹೇಳಿ ಕೊಡುವದು ಯಾರು ?

ನಿಜಕ್ಕೂ ಸರಕಾರಕ್ಕೆ ಜನರ ಕಾಳಜಿ ಇದ್ದರೆ  ಅವರು ಎಲ್ಲಾ ಕೇಂದ್ರ ಸರಕಾರದ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಸ್ಥಳೀಯ ವ್ಯಾವಹಾರಿಕ ಭಾಷೆಯನ್ನು ಹೊರಗಿನಿಂದ ಬಂದ  ಸಿಬ್ಬಂದಿಗೆ ಕಲಿಸುವ ಅಧಿಕಾರಿ ನೇಮಿಸ ಬೇಕು .ಅಂತೆಯೇ ಕಚೇರಿಗಳಲ್ಲಿ 

ಇಂದಿನ  ಶಬ್ದ  " ಬೇಲೆ  " meaning '' work" ಅಥವಾ " ಒಣಸ್ meaning ಊಟ ಎಂದು ಬರೆಯುವಂತಾಗ ಬೇಕು .

ಮೊನ್ನೆ  ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ಮ್ಯಾನೇಜರ್ ಆಗಿ ನಿವೃತ್ತರಾದ ಹಿರಿಯರು ಒಬ್ಬರು  ಈಗ ಬ್ಯಾಂಕ್ ಗೆ ಹೋದರೆ ನಮ್ಮನ್ನು ಬದಿಗೆ ನಿಲ್ಲಿ ಎಂದು ಗದರಿಸುವ ಸ್ಥಿತಿಗೆ ಬಂದಿದೆ ಎಂದು ಬೇಸರ ಹಂಚಿಕೊಂಡರು .

 

ಮಂಗಳವಾರ, ಏಪ್ರಿಲ್ 13, 2021

ವಾಚಿನ ಕತೆ

                                  


ಒಂದು  ವಾಚಿನ ಕತೆ 

 

  ಹಿಂದೆ  ಕೈ ಗಡಿಯಾರ ಸುಲಭವಾಗಿ ಸಿಗುತ್ತಿರಲಿಲ್ಲ .ಎಚ್ ಎಂ ಟಿ ವಾಚ್ ಗೆ ಬುಕ್ ಮಾಡಿ ಕಾಯಬೇಕಿತ್ತು .ಆಮದು ವಾಚ್ ಗಳು  ದುರ್ಲಭ ವಾಗಿದ್ದು  ತುಂಬಾ ತುಟ್ಟಿ ಯಾಗಿದ್ದವು . ಬ್ಲಾಕ್ ಮಾರ್ಕೆಟ್ ನಲ್ಲಿ ಸ್ವಲ್ಪ ಕಡಿಮೆಗೆ ಸಿಗುತ್ತಿದ್ದವು . (ನಾವು ಎಷ್ಟು ದೇಶ ಭಕ್ತರು ಎಂದು ಹೇಳಿ ಕೊಂಡರೂ ಬ್ಲ್ಯಾಕ್ ನಲ್ಲಿ ಏನಾದರೂ ಕಡಿಮೆಗೆ ಸಿಗುವುದಾದರೆ ಮುಗಿ ಬೀಳುವೆವು )

ಆದುದರಿಂದ ಹೈ ಸ್ಕೂಲ್ ಮತ್ತು ಪಿ ಯು ಸಿ ಯಲ್ಲಿ ನಮ್ಮ ಬಳಿ ಕೈಗಡಿಯಾರ ಇರುತ್ತಿರಲಿಲ್ಲ ,ಪಬ್ಲಿಕ್ ಪರೀಕ್ಷೆಗೆ ಹಿರಿಯರ  ವಾಚ್ ಕಟ್ಟಿಕೊಂಡು ಕೆಲವು ಅನುಕೂಲಸ್ಥ ಮನೆಯ ವಿದ್ಯಾರ್ಥಿಗಳು ಬರುವರು .ಶಾಲೆಯ ಬೀಳ್ಕೊಡುಗೆ ಸಮಾರಂಭದ  ಗ್ರೂಪ್ ಫೋಟೋದಲ್ಲಿ  ಹುಡುಗಿಯರು ಒಂದು ಜಡೆ ಮುಂದೆ ,ಇನ್ನೊಂದು ಹಿಂದೆ ಮತ್ತು ಕೈಯಲ್ಲಿ (ಹಿರಿಯರ ) ಗಡಿಯಾರದ ಡಯಲ್  ಕಾಣುವಂತೆ ನಿಂತಿರುವ ಚಿತ್ರ ಕಾಣಬಹುದು . 

 Rare Photos of Karnataka State , Bangalore and Mysore | Old pictures, Rare  photos, Karnataka

ಅಂತಿರುವಾಗ ನನಗೆ ಎಂ ಬಿ ಬಿ ಎಸ ಸೇರುವಾಗ ನನ್ನ ದೊಡ್ಡಣ್ಣ ಜನತಾ ಬಜಾರ್ ನಲ್ಲಿ  ಕ್ಯೂ ನಿಂತು ,(ಕಸ್ಟಮ್ಸ್ ನವರು ವಶ ಪಡಿಸಿ ಕೊಂಡ ಕಳ್ಳ ಮಾಲು ,ಅಲ್ಲಿ ಸಾಮಾನ್ಯ ಜನತೆಗೆ ತಲೆಗೆ ಒಂದರಂತೆ ಕೊಡುತ್ತಿದ್ದರು ) ಒಂದು ಬ್ಲೂ ಡಯಲ್  ಹೊಳೆಯುವ  ಹೆನ್ರಿ ಸ್ಯಾಂಡೋಜ್ ವಾಚ್ ತಂದು ಕೊಟ್ಟರು .ಅದು ನನ್ನ  ಬೆಲೆ ಬಾಳುವ  ಪೊಸೆಶನ್ ಆಯಿತು . ಮುಂದೆ ಸುಮಾರು ೨೫ ವರ್ಷ ನನ್ನಲ್ಲಿ ಇತ್ತು . 

  ಒಂದು ಬಾರಿ ಬೆಂಗಳೂರಿಗೆ ಹೋಗಿದ್ದವನು ಆಡುಗೋಡಿ ಬಳಿ ಫುಟ್ ಪಾತ್ ನಲ್ಲಿ  ನಡೆಯುತ್ತಿದ್ದಾಗ  ಈ ವಾಚ್ ಹೇಗೋ ಜಾರಿ ಕೆಳಗೆ ಬಿತ್ತು . ಬಿದ್ದದ್ದು ಫುಟ್ ಪಾತ್ ನ ಸ್ಲಾಬ್ ನಲ್ಲಿ ಒಂದು ಸಣ್ಣ ರಂಧ್ರದ ಮೂಲಕ ಚರಂಡಿ ಪಾಲಾಯಿತು .ನನ್ನ ನಿರಾಶೆ ಹೇಳ ತೀರದು .ಇನ್ನು ಸದ್ಯಕ್ಕಂತೂ ಕೈಗಡಿಯಾರ ಕೊಳ್ಳುವ ಸಾಧ್ಯತೆ ಇಲ್ಲ .ಆ ರಂಧ್ರದಲ್ಲಿ  ಬಗ್ಗಿ ನೋಡಿದೆ ..ಚರಂಡಿಯಲ್ಲಿ ನೀರು ಕೊಳಚೆ ಇರಲಿಲ್ಲ . ಒಳಗೆ ಸ್ವಲ್ಪ ಕತ್ತಲು . ನನ್ನ ಚಡಪಡಿಕೆ ಕಂಡು ಅಲ್ಲಿ ದಾರಿ ನಡೆಯುತ್ತಿದ್ದ ಒಬ್ಬ ಹುಡುಗ ಏನು ಸರ್ ಎಂದು ವಿಚಾರಿಸಿದ . ನಾನು ನನ್ನ ಗೋಳು ಹೇಳಿದೆ .ಆತ "ನೀವು ಚಿಂತೆ ಮಾಡ ಬೇಡಿ ನೋಡುವಾ ' ಎಂದು ಪಕ್ಕದ ಗ್ಯಾರೇಜು ನಿಂದ ಒಂದು ಸರಳಿನಂತಹ ಕಬ್ಬಿಣದ ರಾಡ್ ತಂದು ಅದರ ತುದಿಗೆ ರಸ್ತೆಯ ಪಕ್ಕದಲ್ಲಿ ಇದ್ದ ಡಾಮರಿನ  ಉಂಡೆ ಅಂಟಿಸಿ ಅದಕ್ಕೆ ಬೆಂಕಿ ಕೊಟ್ಟ .ಅದರ ಬೆಳಕಿನಲ್ಲಿ ರಂಧ್ರದ ಮೂಲಕ ಸರಳು ಒಳಗೆ ಇಳಿಸಲು  ನನ್ನ ವಾಚ್ ಕಂಡಿತು .ಡಾಮರಿನಲ್ಲಿ ಅದರ ಬೆಲ್ಟ್ ಒತ್ತಲು ಅದು ಅಂಟಿ ಕೊಂಡಿತು ,ಅದನ್ನು ಮೆಲ್ಲನೆ ಮೇಲಕ್ಕೆ ರಂಧ್ರದ ಮೂಲಕ ಮೇಲೆ ತಂದು ನನಗೆ ಕೊಟ್ಟನು .ನನಗೆ ಹೋದ ಜೀವ ಬಂದಂತಾಯಿತು . ಮತ್ತು ಆತನಿಗೆ ಸೂಕ್ತ ಬಹುಮಾನ ನೀಡಿದೆನು

ವೈದ್ಯೇತರ ಸೇವೆ

                          ವೈದ್ಯೇತರ( ಆದರೆ ವೈದ್ಯಕೀಯ) ಸೇವೆ 

ಮೊನ್ನೆ ಆದೂರು (ಕೇರಳ )ನಿಂದ ಒಬ್ಬ ಹುಡುಗ ಹೊಟ್ಟೆ ನೋವು ವಾಂತಿ ಎಂದು ಬಂದಿದ್ದ . ಪರೀಕ್ಷೆ ಮಾಡಿ ನೋಡುವಾಗ ಅವನಿಗೆ ಡೆಂಗ್ಯು ಕಾಯಿಲೆ ಇತ್ತು .ಕೆಲವೊಮ್ಮೆ ಜ್ವರ  ಇಲ್ಲದೆ ಮೈ ಕೈ ನೋವು ,ಹೊಟ್ಟೆ ನೋವು (ವಾಂತಿ ಸಹಿತ ಅಥವಾ ರಹಿತ ) ಡೆಂಗ್ಯು ಕಾಯಿಲೆಯಲ್ಲಿ ಇರುವುದುಂಟು . ಅವನಿಗೆ ಡೆಂಗ್ಯು ಇದೆಯೆಂದು ಗೊತ್ತಾದ ಮೇಲೆ ಅವನ ಮನೆ ಮತ್ತು ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಜ್ವರ ಇದ್ದ ಕಾರಣ ಕರೆದು ಕೊಂಡು ಬಂದರು .ಅವರಿಗೂ ಅದೇ ಕಾಯಿಲೆ ಇತ್ತು .ರಿಪೋರ್ಟ್ ಸಿಗುವಾಗ ಸಂಜೆ ಮೂರೂವರೆ .ಮಕ್ಕಳಲ್ಲಿ  ಸ್ವಲ್ಪ ನಿತ್ರಾಣ ಇದ್ದ ಕಾರಣ ಅವರಿಗೆ ಒಂದು ಗ್ಲುಕೋಸ್ ಡ್ರಿಪ್ ಹಾಕಿಸಿ ಹೋಗುವ ಆಸೆ .ಸಂಜೆ ಐದು ಗಂಟೆಗೆ ಅವರಿಗೆ ಇರುವ ಕೊನೇ ಬಸ್ ;ಅದು ಕುಂಟಾರಿಗೆ ಹೋಗುವುದು .ತಪ್ಪಿದರೆ  ಸ್ಪೆಷಲ್ ವಾಹನ ಮಾಡಿ ಹೋಗಬೇಕು . ಅವರ ಡ್ರಿಪ್ ಮುಗಿದಾಗ ನಾಲ್ಕು ಐವತ್ತು ,ಇನ್ನೂ ಬಿಲ್ ಕಟ್ಟಬೇಕು ,ಫಾರ್ಮೆಸಿ ಯಿಂದ ಔಷಧಿ ಕೊಂಡು ಅಲ್ಲಿಯ ಬಿಲ್ ಪಾವತಿ ಮಾಡಬೇಕು . ಬಿಲ್ ಕೌಂಟರ್ ಮತ್ತು ಫಾರ್ಮೆಸಿ ಯಲ್ಲಿ ರಶ್ ಇರುತ್ತದೆ .ಇವರ ಅವಸರ ಅವರಿಗೆ ತಿಳಿಯದು .ಅದಕ್ಕೆ ನಾನೇ ಅವರ ಹಿಂದೆ ಹೋಗಿ ಅವರ ಪಾವತಿ ಎಲ್ಲಾ ಮಾಡಿಸಿ ,ಔಷಧಿ ಕಟ್ಟು ಸ್ವತಃ ತಂದು ,ಒಂದು ಆಟೋ ತರಿಸಿ ಅವರನ್ನು ಅದರಲ್ಲಿ ತಳ್ಳಿ ,ಕಳುಹಿಸಿದೆ .ಬಸ್ ಸ್ಟಾಂಡ್ ತಲುಪುವಾಗ ಬಸ್ ಹೊರಡಲು ತಯಾರಾಗಿತ್ತಂತೆ. ಇದು ನಮ್ಮ ವೈದ್ಯೇತರ ಕೆಲಸ . ಮರುದಿನ ಅವರ ಪೈಕಿ ಬಂದವರು ನನಗೆ ಧನ್ಯವಾದ ಹೇಳಿದರು . ಹಳ್ಳಿಯ ಮುಗ್ದ ಜನ .

                   ಇನ್ನೊಮ್ಮೆ ಪೆರುವಾಯಿ ಒಬ್ಬ ಸಹೋದರಿ  ಪಾಂಕ್ರಿಯಸ್ ತೊಂದರೆಗೆ ದಾಖಲಾಗಿದ್ದರು .ಅವರನ್ನು ಎರಡು ದಿನ ಉಪವಾಸ ಇಟ್ಟು ಚೇತರಿಸಿ ಕೊಂಡ ಮೇಲೆ ,ನಾಳೆಯಿಂದ ಬರೀ ಗಂಜಿ ತೆಗೆದು ಕೊಳ್ಳಿರಿ ಎಂದೆ.ಮರುದಿನ  ಮಧ್ಯಾಹ್ನ ಅವರಿಗೆ ಭೇದಿ ಶುರು ಆಯಿತು .ವಿಚಾರಿಸಿದಾಗ ಅವರು ಬೆಳಿಗ್ಗೆ ಗಂಜಿ ಸಿಕ್ಕದು ಎಂದು ಮುಂಚಿನ ದಿನವೇ  ಹೊಟೇಲ್ ನಿಂದ ಗಂಜಿ ತರಿಸಿ ಇಟ್ಟು ಅದನ್ನು ಕುಡಿದಿದ್ದರು .ಹೊಟೇಲ್ ನಲ್ಲಿ  ಅದು ಮಧ್ಯಾಹ್ನ ಮಾಡಿದ್ದು ಇರ ಬಹುದು .ಮತ್ತೆ ಅವರಿಗೆ ಯೋಗ್ಯ ಚಿಕಿತ್ಸೆ ಸಲಹೆ ಮಾಡಿ ಮರುದಿನ ಮುಂಜಾನೆ ಆಸ್ಪತ್ರೆಗೆ ಬರುವಾಗ ನಾನೇ ಮನೆಯಲ್ಲಿ ಗಂಜಿ ಮಾಡಿಸಿ ತಂದು ಕೊಟ್ಟೆನು ,(ನನ್ನ ಮನೆಯವರು ಸಂತೋಷ ದಿಂದ ಮಾಡಿ ಕೊಟ್ಟರು) .ಗುಣ ಮುಖರಾಗಿ ಮನೆಗೆ ಹೋದರು.

ಆಸ್ಪತ್ರೆಯಲ್ಲಿ  ರೋಗಿಗಳ ಪರೀಕ್ಷೆ ಮಾಡಿ ಔಷಧಿ ಕೊಡುವುದಲ್ಲದೆ ಅವರನ್ನು ತಳ್ಳು ಗಾಲಿಯಲ್ಲಿ ಕೂರಿಸುವುದು (ಮತ್ತು ಕೆಲವೊಮ್ಮೆ ತಳ್ಳುವುದು ),ಶ್ಟ್ರೆಚರ್ ನಿಂದ ಹಾಸಿಗೆಗೆ  ಸ್ಥಳಾನಂತರಿಸುವುದು ಇತ್ಯಾದಿ ಕೆಲಸವೂ ನಾವು ಮಾಡ ಬೇಕಾಗುವುದು  ಮತ್ತು ಮಾಡುತ್ತೇವೆ . ರೋಗಿಯ ವಾಂತಿ ,ಮಲ ,ಮೂತ್ರ ತೆಗೆಯುವುದು ,ಮೃತರಾಗಿ ಬಂದ ಮತ್ತು ಆಸ್ಪತ್ರೆಯಲ್ಲಿ ಮೃತರಾದವರ ಶವ ಸಾಗಣೆಯಲ್ಲಿ ಕೂಡಾ ನಾವು ಸೇರುತ್ತೇವೆ . ಇದು ಎಲ್ಲಾ ವೈದ್ಯೇತರ ಮಾನವೀಯ ಸೇವೆ .

ಬಾಲಂಗೋಚಿ ; ಆಸ್ಪತ್ರೆ ಆರಂಭವಾದಾಗ ಬಹಳ ಮಂದಿಗೆ ನನ್ನ ಪರಿಚಯ ಇರಲಿಲ್ಲ ,ಮತ್ತು ನನಗೂ ಬಿಡುವು ಇರುತ್ತಿದ್ದು ,ನಾನು ಇಂತಹ ಕೆಲಸದಲ್ಲಿ ಹೆಚ್ಕು ಹೆಚ್ಚಾಗಿ ತೊಡಗಿಸಿ ಕೊಳ್ಳುತ್ತಿದ್ದಿದುರಿಂದ ಕೆಲವರು ನನ್ನನ್ನು ವಾರ್ಡ್ ಬಾಯ್ ಎಂದು ತಿಳಿದಿದ್ದರು .

ಸೋಮವಾರ, ಏಪ್ರಿಲ್ 12, 2021

ಮೂಸೆ ಬ್ಯಾರಿಯೂ ವಿಷು ಹಬ್ಬವೂ

 ಮೂಸೆ ಬ್ಯಾರಿಯೂ ವಿಷು ಹಬ್ಬವೂ 

ಕನ್ನಡದಲ್ಲಿ ಒಂದು ಗಾದೆ ಇದೆ ಗೋಕುಲಾಷ್ಟಮಿಗೂ ಇಮಾಮ್ ಸಾಹೇಬರಿಗೂ ಏನು ಸಂಬಂಧ ?ಮೇಲ್ನೋಟಕ್ಕೆ ಇದು ಸರಿ ಎನಿಸಿದರೂ ನಮ್ಮ ದೇಶದಲ್ಲಿ ಎಲ್ಲಾ  ಧರ್ಮಗಳ ಆಚರಣೆ ಹಬ್ಬಗಳಲ್ಲಿಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಧರ್ಮದವರ ಕೊಡುಗೆ ಇದ್ದೇ ಇದೆ . ಗೊರೂರು ರಾಮ ಸ್ವಾಮಿ ಅಯ್ಯಂಗಾರ್ ಅವರ ಹಳ್ಳಿಯ ಚಿತ್ರಣಗಳಲ್ಲಿ ಇದನ್ನು ಕಾಣ ಬಹುದು .

ನನ್ನ ಬಾಲ್ಯದಲ್ಲಿ ನಮ್ಮ ಅಂಗ್ರಿ ಮನೆಯಲ್ಲಿ ಮೂಸೆ ಬ್ಯಾರಿ ಎಂಬ ಒಕ್ಕಲು ಇದ್ದರು ,ನಮ್ಮ ಆಸ್ತಿಯ ಒಂದು ತುದಿ ,ಅದಕ್ಕೆ ನೇರಳೆ ಕೋಡಿ ಎಂದು ಕರೆಯುವರು .ನಮ್ಮ ಮನೆಯಿಂದ ಅಲ್ಲಿಗೆ ಒಂದು ಮೈಲು ಇರಬಹುದು .ಮೊದಲು ಒಬ್ಬರೇ ಒಕ್ಕಲು ಇದ್ದು ,ಆ ಮೇಲೆ ಅನಂತ ಮೂಲ್ಯ ಮತ್ತು ಪಕ್ರು ಮೂಲ್ಯ ಎಂಬುವರು ಬಂದರು . ಇವರು ಒಕ್ಕಲು ಎಂದರೆ ವಾಸಕ್ಕೆ ಮನೆ ಮಾತ್ರ ನಮ್ಮ ಜಾಗದಲ್ಲಿ .ಗೇಣಿ ಬೇಸಾಯ ಇಲ್ಲ .ಅವರ ಮನೆಯವರು ನಮ್ಮ ಮನೆಗೆ ಕೆಲಸಕ್ಕೆ ಬರುವರು . 

ಮೂಸೆ ಬ್ಯಾರಿ ಅವರು  ನಮ್ಮ ಗುಡ್ಡದ ಗೇರು ಬೀಜದ ಮರಗಳ ಫಸಲನ್ನು ಕೆಲವು ವರ್ಷ ಗೇಣಿಗೆ ತೆಗೆದು ಕೊಳ್ಳುವರು .ಅದರಿಂದ ಅವರಿಗೆ ಹೆಚ್ಚು ಆದಾಯ ಬಂದಂತೆ ಇಲ್ಲ ,ಆದರೂ ಬೀಡಿ ಖರ್ಚು ಬಂದಿರಬಹುದು . ನಮ್ಮ ಒಕ್ಕಲುಗಳು ,ಕೆಲಸಕ್ಕೆ ಬರುವ ಇತರರು ವಿಷು ಹಬ್ಬದ ದಿನ ಹಣ್ಣು ತರಕಾರಿ  ಕಾಣಿಕೆ ತಂದು ನಮ್ಮ ಹಿರಿಯರ ಪಾದ ಮುಟ್ಟಿ ನಮಸ್ಕಾರ ಮಾಡುವರು .  ಅವರಿಗೆ ಹಬ್ಬದ ಸಣ್ಣ ಕೊಡುಗೆ ಮತ್ತು ಪಲಹಾರ ಕೊಟ್ಟು ಕಳುಹಿಸುವರು . ಮೂಸೆ ಬ್ಯಾರಿ ಪ್ರತಿ ವರ್ಷ ವಿಷುವಿಗೆ  ಹಸಿ (ಗೇರು )ಬೀಜ ತಂದು ಕೊಡುವರು ಮತ್ತು ಅದರ ಪಾಯಸ ವಿಶುವಿಗೆ ವಿಶೇಷ . ಆದುದರಿಂದ  ಒಮ್ಮೊಮ್ಮೆ  ವಿಷುವಿನ  ದಿನ ಮೂಸೆ ಬ್ಯಾರಿಯವರ ನೆನಪು ಆಗುವುದು .

ಮೂಸೆ ಬ್ಯಾರಿ ಅವರಿಗೆ ಮೂರೋ ನಾಲ್ಕೋ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಮಗ .ಅವನು ನನ್ನ ಅಣ್ಣನ ಸರೀಕ ,ಆಟಕ್ಕೆ ಜತೆಗಾರ .ಮುಂದೆ ಮುಂಬಯಿ ,ಆಮೇಲೆ ವಾಣಿಜ್ಯ ಹಡಗಿನಲ್ಲಿ ಕೆಲಸಕ್ಕೆ  ಹೋಗಿ ಸಂಪಾದಿಸಿ ಮಂಜೇಶ್ವರ ದಲ್ಲಿ  ಮನೆ ಮಾಡಿ ಕುಟುಂಬದವರನ್ನು ಅಲ್ಲಿಗೆ ಕರೆಸಿಕೊಂಡನು .

ಮೂಸೆ ಬ್ಯಾರಿಯವರ ಒಬ್ಬರು ಮಗಳು ಕೈಜಮ್ಮ .ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ನಾನು ತುಂಬಾ ಸಣ್ಣವನಿದ್ದಾಗ ಅಂಗೈ ಸುಟ್ಟು ಗಾಯ ಮಾಡಿಕೊಂಡಾಗ ನನ್ನ ಆರೈಕೆ ಮುತುವರ್ಜಿ ವಹಿಸಿ ಮಾಡಿದ್ದರು ಎಂದು ನನ್ನ ತಾಯಿ ಆಗಾಗ ಹೇಳುತ್ತಿದ್ದರು . ಮುಂದೆ ಅವರನ್ನು ಮದುವೆ ಮಾಡಿ  ನಮ್ಮದೇ ಗ್ರಾಮದ ಪೊಡಿಯ ಬ್ಯಾರಿ ಅವರಿಗೆ ಕೊಟ್ಟರು .ಪೊಡಿಯ ಬ್ಯಾರಿ  ಸಮಾರಂಭ ಗಳಿಗೆ  ಅಡುಗೆ ಕೆಲಸ ಮಾಡುತ್ತಿದ್ದು ,ಅವರ ನೈ ಚೋರ್ ಪ್ರಸಿದ್ದ ಆಗಿತ್ತು . ನಾವು ಶಾಲೆಗೆ ಹೋಗುವಾಗ ಕೆಲವೊಮ್ಮೆ ಅವರ ಮನೆಯ ಪಕ್ಕದ ದಾರಿಯಲ್ಲಿ ಹೋಗುತ್ತಿದ್ದು ,ನಮ್ಮ ಸುಖ ದುಖ ವಿಚಾರಿಸುವರು . ಈಗಲೂ ಆಸ್ಪತ್ರೆಗೆ ಯಾರಾದರೂ ಕೈಜಮ್ಮ ಹೆಸರಿನವರು ಬಂದಾಗ ಅವರ ನೆನಪು ಆಗುವುದು ಮತ್ತು ಅವರಿಗೆ ಪ್ರತ್ಯುಪಕಾರ ಎಂದು ಕೊಂಡು ಬಂದವರ  ಚಿಕಿತ್ಸೆ ಮಾಡುವೆನು .

ನನ್ನ ತರಗತಿಯಲ್ಲಿ 5 ರಿಂದ ಹತ್ತನೇ ವರೆಗೆ ಬಂದಿತಡ್ಕ ಸೂಫಿ ಬ್ಯಾರಿ ಮತ್ತು ರಾಜು ಬೆಳ್ಛಾಡ ಕೊನೇ ಬೆಂಚಿನಲ್ಲಿ (ನಾವು ಎತ್ತರ ಇದ್ದೆವು ) ಅಕ್ಕ ಪಕ್ಕದಲ್ಲಿ  ಕುಳಿತು ಕೊಳ್ಳುತ್ತಿದ್ದೆವು .ಸೂಫಿ ಅವರಿಗೆ ಬಂಡಿತಡ್ಕ ದಲ್ಲಿ  ಒಂದು ಅಂಗಡಿ ಇತ್ತು .ಅವನು ಅಂಗಡಿಯಿಂದ ಸಣ್ಣ ಪೆನ್ಸಿಲಿನ್ ವಯಲ್ ನಲ್ಲಿ  ಪಾಚಿ ಎಣ್ಣೆ (ಆಗ ಪ್ರಸಿದ್ದ ಹೇರ್ ಆಯಿಲ್ )ತಂದು ನಮಗೆ ಕೊಡುತ್ತಿದ್ದನು . ಮದುವೆ ಮದರಂಗಿ ಸಮಯದಲ್ಲಿ ಹಾಡುತ್ತಿದ್ದ ಮೈಲಾಂಜಿ ಹಾಡುಗಳನ್ನು ಅವನು ಗುಣುಗುಣಿಸುತ್ತಿದ್ದು ಕೆಲವು ಸಾಲುಗಳು ನನಗೂ ಬಾಯಿಪಾಠ  ಬರುತ್ತಿದ್ದವು .'ಮಣಿ ಮುತ್ತೆ ಮಧು ಹರಣಂ ಪೂಮೋಳೆ ,ನಿಂದೆ ಉಪ್ಪಾನ್ದೆ ಕಣಿಯಾಲೆ ತೆ ಮೋಳೆ" (ತಪ್ಪಿದ್ದರೆ ಕ್ಷಮಿಸಿ )ಇಂತಹ ಹಾಡುಗಳನ್ನು  ನಾನು ಮೂಸೆ ಬ್ಯಾರಿ ಮತ್ತು ಅವರ ಮನೆಯವರ ಮುಂದೆ ಹಾಡಿ ತೋರಿಸುತ್ತಿದ್ದೆ;ಅದನ್ನು ಕೇಳಿ ಅವರು ನಗುವರು .

ಸೂಫಿ ಮುಂದೆ ಸೌದಿ ಅರೇಬಿಯಾ ಕ್ಕೆ  ಹೋಗಿ ಸಂಪಾದಿಸಿ ,ತೊಕ್ಕೊಟ್ಟಿನಲ್ಲಿ ಒಂದು ವಾಹನ ವರ್ಕ್ ಷಾಪ್ ಹಾಕಿದ್ದರೆ ರಾಜು ಪೋಲೀಸು ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿ ನಿವೃತ್ತ ನಾಗಿರುವನು .

ಭಾನುವಾರ, ಏಪ್ರಿಲ್ 11, 2021

ಕಂತು ಪಿತ

                      ಕಂತು ಪಿತ 

ಏತರ  ಭಯ ನಿನಗೆ ಕಂತು ಪಿತನ ದಯೆ ಇರಲು 

ಈ ತರಹದ  ದೇವರ ನಾಮ ಕೇಳಿದಾಗ ಎಲ್ಲಾ ಕುತೂಹಲ . ಯಾರು ಈ ಕಂತು ?ವೆಂಕಟಸುಬ್ಬಯ್ಯ ನವರ ನಿಘಂಟಿನಲ್ಲಿ  ಮನ್ಮಥ ನಿಗೆ  ಕಂತು ಎಂದು ಕರೆವರು ಎಂದು ಬರೆದಿರುವರಂತೆ .ಆದರೆ ಈ ಹೆಸರಿನ ಮೂಲ ಏನು ಎಂಬುದು ಸಂಶೋಧನೆಗೆ ಯೋಗ್ಯ ಎಂದು ಹೇಳುವರು . 

ನಮಗೆ  ಸಾಮನ್ಯವಾಗಿ ಕಂತು ಎಂದರೆ ಹಣ ಇಲ್ಲ ,ಕೊಳ್ಳುವ ಅಸೆ ಇದೆ ಎಂಬ  ಪರಿಸ್ಥಿತಿಯಲ್ಲಿ  ಹಂತ ಹಂತವಾಗಿ ಪಾವತಿ ಮಾಡಿ ಕೊಳ್ಳುವ ವ್ಯವಸ್ಥೆ . ಉದಾಹಣೆಗೆ ನಾನು ನನ್ನ ಮೊದಲ ಟಿ ವಿ  ಕೊಂಡದ್ದು ಕಂತಿನಲ್ಲಿ .ಅಂಗಡಿಯವರಿಗೆ ಬಾಕಿ ಹಣವನ್ನು  ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ಸಾಮಗ್ರಿ ಮನೆಗೆ ತರುವುದು .ಒಂದು ರೀತಿಯ ಸಾಲವೇ ಅನ್ನಿ . ಕೊಳ್ಳಲು ನಿಜವಾಗಿ ಅರ್ಹತೆ ಇಲ್ಲ ,ಕಂತು ದೇವನ ಕೃಪೆಯಿಂದ ಅದು ಬರುವದು . 

ಅದರಂತೆ  ನಿಜವಾದ ಕಂತು (ಮನ್ಮಥ ) ಒಬ್ಬ ಯುವಕ (ಮತ್ತು ಯುವತಿ ವೈಸ್ ವರ್ಸಾ )ನಿಗೆ  ಯುವತಿಯ ಮೇಲೆ  ಆಸೆ ಹುಟ್ಟಿಸುವನಲ್ಲದೆ ಆಕೆಯ ಸ್ನೇಹ ಸಂಪಾದಿಸಸಲು ಇವನಲ್ಲಿ ಇಲ್ಲದ ಆಕರ್ಷಣೆಯನ್ನು ತುಂಬಿಕೊಳ್ಳಲು ಕಂತಿನಲ್ಲಿ ಕೆಲವು ಚಮತ್ಕಾರಗಳನ್ನು (ಉದಾ ವಾಟ್ಸ್ ಅಪ್ ಆಕರ್ಷಕ  ಸಂದೇಶ ಕಳುಹಿಸುವ )  )ತುಂಬುವನು . 

 ಇ. ಸಾ .ಬೇ .    QED

ಅಪತ್ಭಾಂಧವರು

                                   ಅಪತ್ಭಾಂಧವರು

 ನಾನು ನಿನ್ನೆ ನೆಹರು ನಗರದ ಬಾಲಕೃಷ್ಣ  ಅವರ ಬಗ್ಗೆ ಬರೆದುದನ್ನು ಬಹಳ ಸಹೃದಯರು ಮೆಚ್ಚಿದ್ದಾರೆ ಎಂಬುದು ಸಮಾಧಾನ .ಇಂದು ಮುಂಜಾನೆ ವಾಕಿಂಗ್ ಹೋಗುವಾಗ ಯಥಾ ಪ್ರಕಾರ ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಗುಡಿಸುತ್ತಿದ್ದರು . ಅವರಿಗೆ ನಾನು ಫೇಸ್ಬುಕ್ ನಲ್ಲಿ ಅವರ ಬಗ್ಗೆ ಭಾವ ಚಿತ್ರ ಸಹಿತ ಬರೆದುದು ,ಜನ ಅದನ್ನು ಮೆಚ್ಚಿದ್ದು ಹೇಳಿ ಸಾಂಕೇತಿಕವಾಗಿ ಒಂದು ಸಣ್ಣ ಸಿಹಿ ತಿಂಡಿ ಪೊಟ್ಟಣ ಕೊಟ್ಟೆ . ನಿರ್ವಿಕಾರ ಮನೋಭಾವ ದಿಂದ ಅವರು ಸ್ವೀಕರಿಸಿ ಮಹಾಲಿಂಗೇಶ್ವರ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ತಮ್ಮ ಸ್ವಚ್ಚತಾ ಕೆಲಸದಲ್ಲಿ ಪುನಃ ತೊಡಗಿಸಿ ಕೊಂಡರು . 


 ಇಂದು ಇನ್ನೊಬ್ಬರ ಬಗ್ಗೆ ಬರೆಯುವೆನು . 

ನಾನು ಬೆಂಗಳೂರಿಗೆ ಹೋಗುವುದಿದ್ದರೆ  ಬಸ್ ಅಥವಾ ಟ್ರೈನ್ ನಲ್ಲಿ . ಆದರೆ ಕೋವಿಡ್  ಹಾವಳಿ ಇದ್ದುದರಿಂದ ಕೆಲವು ತಿಂಗಳ ಹಿಂದೆ ಕಾರ್ ನಲ್ಲಿಯೇ ಹೊರಟೆ . ನನ್ನ ಸಹೋದರಿ ಕೂಡಾ ತುರ್ತು ಕೆಲಸದಲ್ಲಿ ಬೆಂಗಳೂರಿಗೆ ಹೊರಟವರು  ನನ್ನೊಡನೆ ಇದ್ದರು . ಉಪ್ಪಿನಂಗಡಿ ಶಿರಾಡಿ  ರಸ್ತೆ ತುಂಬಾ ಹೊಂಡ  ಗುಂಡಿಗಳು ಇದ್ದವು .ನೆಲ್ಯಾಡಿ ದಾಟಿ ಸ್ವಲ್ಪ ದೂರ ಹೋಗುವಾಗ  ಒಂದು ರಸ್ತೆ ಹೊಂಡದಲ್ಲಿ ಇಳಿದ ಕಾರನ್ನು   ಪುನಃ ಏರಿಸಲು ನೋಡಿದಾಗ ಕ್ಲಚ್ ಕೇಬಲ್ ತುಂಡಾಗಿದ್ದುದರಿಂದ ಗಾಡಿ ನಡೆಸುವುದು ಅಸಾಧ್ಯ ಆಯಿತು .ಮುಂಜಾನೆ ಹತ್ತೂವರೆ ಸಮಯ ,ಚಳಿಗಾಲದ ಬಿಸಿಲು .ರಸ್ತೆ ತುಂಬಾ ಧೂಳು . 

ಅದು ಭಾನುವಾರ ವಾದುದರಿಂದ  ಕಂಪನಿ ಸರ್ವಿಸ್ ಸೆಂಟರ್ ಗೆ ರಜೆ . ನಿಂತ ಸ್ಥಳದಲ್ಲಿ  ಮೊಬೈಲ್ ಸಿಗ್ನಲ್ ಕೂಡಾ ಸರಿ ಇರಲಿಲ್ಲ .ರೋಡ್ ಸೈಡ್ ಅಸ್ಸಿಸ್ಟನ್ಸ್ ಗೆ ಫೋನ್ ಮಾಡಿದರೆ ಒಂದು ಒತ್ತಿರಿ ,ಎರಡು ಒತ್ತಿರಿ ಇತ್ಯಾದಿ ,ನಡುವೆ ಸಿಗ್ನಲ್ ಕಟ್ . 

ಆಗ ಇಬ್ಬರು ಯುವಕರು ನಮ್ಮನ್ನು ಕಂಡು ಏನು ತೊಂದರೆ ಸರ್ ಎಂದು ಕೇಳಿ "ನೀವು ಚಿಂತೆ ಮಾಡ ಬೇಡಿ ,ನೆಲ್ಯಾಡಿಯಲ್ಲಿ ಒಬ್ಬರು ಮೆಕ್ಯಾನಿಕ್ ಇದ್ದಾರೆ .ಅವರನ್ನು  ಕರೆಸುತ್ತೇವೆ . "ಎಂದು ನನ್ನ ಗಾಡಿಯನ್ನು ದೂಡಿ  ರಸ್ತೆ ಬದಿಯಲ್ಲಿ ನಿಲ್ಲಿಸಿ "ನೀವು ಕಾರಿನ ಒಳಗೆ ಕುಳಿತು  ಕೊಳ್ಳಿ "ಎಂದರು . ನನ್ನ ಕಾರ್ ನಲ್ಲಿ ಸಿಟಿ ಆಸ್ಪತ್ರೆ ವೈದ್ಯರು ಎಂದು ಕೋವಿಡ್ ಪರ್ಮಿಟ್ ಅಂಟಿಸಿತ್ತು .(ನಾನು ಇತರ ಸಮಯದಲ್ಲಿ ವೈದ್ಯರು ಎಂಬ  ಸ್ಟಿಕರ್ ಅಂಟಿಸುವುದಿಲ್ಲ )ಸಾರ್ ನಾವು ನಿಮ್ಮ ಆಸ್ಪತ್ರಗೆ ಹಲವು ಭಾರಿ ಬಂದಿದ್ದೇವೆ ,ನಿಮ್ಮ ಉದ್ಯೋಗಿ ಜಲೀಲ್ ನಮ್ಮ ಮಿತ್ರ ಎಂದು ಸಾಂತ್ವನದ ಮಾತು ಹೇಳಿದರು . 

ಸ್ವಲ್ಪ ಹೊತ್ತಿನಲ್ಲಿ  ಒಬ್ಬರು ಮೆಕ್ಯಾನಿಕ್ ಬಂದು ಕೇಬಲ್ ಇಲ್ಲಿ ಸಿಗದು ,ಭಾನುವಾರ ಆದ ಕಾರಣ  ಪುತ್ತೂರಿನಿಂದ ತರಿಸುವ ಹಾಗೂ ಇಲ್ಲ ಎಂದರು . ಅವರ ಹಿಂದೆಯೇ ಬಂದ  ಶ್ರೀ ಟಿಪ್ಪು ಸುಲ್ತಾನ್ ಎಂಬ ಸಜ್ಜನರು 'ಸಾರ್ ನಿಮ್ಮ ಗಾಡಿಯನ್ನು ಟೋ  ಮಾಡಿ ಹತ್ತಿರದ ಗ್ಯಾರೇಜು ಗೆ ತಲುಪಿಸುತ್ತೇನೆ "ಎಂದಾಗ ನನ್ನ ಒಂದು ಸಮಸ್ಯೆ ಪರಿಹಾರ ಆದರೂ ಬೆಂಗಳೂರಿಗೆ ಹೋಗುವ ಬಗೆ ಹೇಗೆ ? ಜತೆಗೆ ತಂಗಿಯೂ ಇರುವಳು .ಅದಕ್ಕೆ ಅವರು ನನ್ನ ಗಾಡಿ ಕೊಡುವೆನು ನೀವು ಹೋಗಿ ಬನ್ನಿ ಎಂದರು .ಗೊತ್ತು ಪರಿಚಯ ಇಲ್ಲದ ಟಿಪ್ಪು ಸುಲ್ತಾನ್ ಅವರಿಗೆ ನನ್ನ ಕಾರಿನ ಕೀ ಒಪ್ಪಿಸಿ ಬದಲಿ ಕಾರ್ ನಲ್ಲಿ ಬೆಂಗಳೂರರಿಗೆ ತೆರಳಿದೆ . ಹಾಸನಕ್ಕೆ ತಲುಪುವಾಗ ಸುಲ್ತಾನ್ ಫೋನ್ ಮಾಡಿ "ಸಾರ್  ನಿಮ್ಮ ಕಾರಿನ  ಸರ್ವಿಸ್  ಬೆಳ್ತಂಗಡಿ  ಶಾಖೆ ತೆರೆದಿದೆ .ಅಲ್ಲಿ ಕೊಂಡು ಹೋಗಿ ರಿಪೇರ್ ಮಾಡಿಸಿ ತರುವೆನು "ಎಂದರು . 

ನಾನು ನನ್ನ ಬೆಂಗಳೂರು ಕೆಲಸ ನಿಶ್ಚಿಂತೆಯಿಂದ ನೆರವೇರಿಸಿ ಮರುದಿನ ಸಾಯಂಕಾಲ ನೆಲ್ಯಾಡಿಗೆ ತಲುಪಿದಾಗ  ಗಾಡಿ ರೆಡಿ  ಯಾಗಿತ್ತು .ಅವರ ಸೇವೆಗೆ ಸೂಕ್ತ  ಸಂಭಾವನೆ ನೀಡಿದೆ . ಟಿಪ್ಪು ಸುಲ್ತಾನ್ ಇನ್ನೊಂದು ಕಡೆ  ಘಾಟ್ ಸೆಕ್ಷನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ ವಾಹನಕ್ಕೆ ಸಹಾಯ ಮಾಡಲು ಹೋಗಿದ್ದರಿಂದ ಫೋನ್ ನಲ್ಲಿಯೇ  ಕೃತಜ್ಞತೆ ಸಲ್ಲಿಸಿದೆ . 

 ಇದನ್ನು ಬರೆಯಲು ಕಾರಣ ಏನೆಂದರೆ ಈ ದಾರಿಯಲ್ಲಿ ,ಮುಖ್ಯವಾಗಿ ಶಿರಾಡಿ ,ಬಿಸಲೆ ಘಾಟ್ ನಲ್ಲಿ ಯಾವುದಾದರೂ  ತೊಂದರೆ ಆದರೆ ಇವರನ್ನು ಸಂಪರ್ಕಿಸ ಬಹುದು . ಇವರ ದೂರವಾಣಿ ಸಂಖ್ಯೆ  8105300131. ಅವರ ಬಳಿ ಟೋಯಿಂಗ್ ಕ್ರೇನ್ ಇದೆ ,ಎಲ್ಲಾ ಗ್ಯಾರೇಜು ಗಳ  ಮಾಹಿತಿ ಕೂಡಾ . ಸೇವೆ ಉಚಿತ ಅಲ್ಲ ಆದರೆ ಸಮಯೋಚಿತ . 

ಟಿಪ್ಪು ಸುಲ್ತಾನ್ ಮತ್ತು ಅವರ ತಂಡಕ್ಕೆ  ನನ್ನ ಕೃತಜ್ಞತೆ ಈ ಮೂಲಕ ಸಲ್ಲಿಸುತ್ತೇನೆ ,

                  



 

ಶನಿವಾರ, ಏಪ್ರಿಲ್ 10, 2021

ನಾನು ಮೆಚ್ಚಿದ ಬಾಲಕೃಷ್ಣರು

 ನಾನು ಮೆಚ್ಚಿದ ಬಾಲಕೃಷ್ಣರು 

 

 

ಇವರು ಪುತ್ತೂರಿನಲ್ಲಿ ಆಟೋ ರಿಕ್ಷಾ ಓಡಿಸುವ ಶ್ರೀ ಬಾಲಕೃಷ್ಣ ಅವರು .ನೆಹರೂ ನಗರ ದ ಸ್ಟಾಂಡ್ ಅವರ ಸಾಗಾಟದ ಉಗಮ ಸ್ಥಾನ . ಇವರು ಇಷ್ಟೇ ಆಗಿದ್ದಲ್ಲಿ ನನ್ನ ಗಮನ ಕ್ಕೆ  ಬರುತ್ತಿರಲಿಲ್ಲವೋ ಏನೋ ?

ನಗರ ಬಸ್ ಸ್ಟಾಪ್ ನಿಂದ  ವಿವೇಕಾನಂದ ಕಾಲೇಜ್ ಗೆ ಹೋಗುವ ಮಾರ್ಗದಲ್ಲಿ ಒಂದು ಅಗಲ ಕಿರಿದಾದ ರೈಲ್ವೇ ಮೇಲ್ಸೇತುವೆ ಇದೆ .ಇದು ತಗ್ಗಿನಲ್ಲಿ ಇದ್ದು ಮಳೆ ಬಂದೊಡನೆ ನೀರು ತುಂಬುವುದು .ರಸ್ತೆಯ ಬದಿಯಲ್ಲಿ ನಡೆಯುವ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ  ಕೊಳಕು ನೀರು ಪ್ರೋಕ್ಷಣೆ ಆಗುವುದು . ನೇರು ಕೆಳಗೆ ಹೋಗಲು ಸೇತುವೆಯಲ್ಲಿ ಒಂದು ಸಣ್ಣ ರಂದ್ರ ಮಾಡಿರುವರು .ಆದರೆ ಕಸ ತುಂಬಿ ಆಗಾಗ ಅದು ಬ್ಲಾಕ್ ಆಗುವುದು . ನಮ್ಮ ಬಾಲಕೃಷ್ಣರು ಆಗಾಗ ಅಲ್ಲಿಗೆ ತೆರಳಿ ಕೈಹಾಕಿ ಅದನ್ನು ಸ್ವಚ್ಛ ಮಾಡಿ ನೀರು ಹರಿದು ಹೋಗುವಂತೆ ಮಾಡುವರು .ಇದು ಯಾರ ಹೊಗಳಿಕೆಗೆ ಅವರು ಮಾಡುವುದಲ್ಲ ,ಆತ್ಮ ಸಾಕ್ಷಿಗನುಗುಣವಾಗಿ  ಮಾಡುವರು .

ಇದರೊಡನೆ ಮುಂಜಾನೆ  ರಿಕ್ಷಾ ಸ್ಟಾಂಡ್ ಸುತ್ತ ಮುತ್ತ ಇರುವ ಕಸ ಕಡ್ಡಿ ತಾನೇ ಗುಡಿಸಿ ಬೆಂಕಿ ಹಾಕಿ ಕಾಯುವರು .ಬೆಳಗಾದಾಗ  ಬೀದಿ ದೀಪ ಆರಿಸುವರು .ನಗರ ಸಭೆಯ  ನೀರು ಸರಬರಾಜು ಕೆಲಸದಲ್ಲಿ ಬೋರ್ ವೆಲ್ ಒನ್ ಆಫ್ ಮಾಡುವುದು ,ನೀರಿನ ವಾಲ್ವ್ ನಿರ್ವಹಣೆ ಕೂಡಾ ಮಾಡುವರು .

ಇಂತಹವರೆ ನಿಜವಾದ ನಾಡೋಜರು