ಬೆಂಬಲಿಗರು

ಶನಿವಾರ, ಜನವರಿ 1, 2022

ಹಾಜರಿ ಸಾರ್

              ಹಾಜರ್ ಸರ್ 

ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಮೊದಲನೇ ಪಿರಿಯಡ್ ಗೆ ಮಾತ್ರ ಹಾಜರಿ ತೆಗೆದು ಕೊಳ್ಳುವ ಪದ್ಧತಿ ಇತ್ತು . ಹಾಜರಿ ಶಬ್ದ ಉರ್ದು ಮೂಲದ್ದು ಇರಬೇಕು . ಗುರುಗಳು ಕ್ಲಾಸ್ ಮುಗಿಸಿ ಬೆತ್ತವನ್ನು ಮೇಜಿಗೆ ಬಾರಿಸಿ ಸೈಲೆನ್ಸ್ ಸೈಲೆನ್ಸ್ ಎನ್ನುವರು . ಅದು ವರೆಗೆ ಸಂಜೆ ಯಾವ ಆಟ ಆಡುವದು ಎಂದು ಕನಸು ಕಾಣುತ್ತಿದ್ದ ನಾವು ಈ ಲೋಕಕ್ಕೆ ಬರುವೆವು . ಅದ್ರಾಮ .ಇಬ್ರಾಯಿ ,ಕೃಷ್ಣ ,ಗೋಪಾಲ ,ಹಿಲರಿ ,ಪೂವಕ್ಕ ,ಪಾರ್ವತಿ ಹೀಗೆ ಮಾಷ್ಟ್ರು ಕರೆಯುವಾಗ ಹಾಜರಿ ಸರ್ ,ಕೆಲವರು ಇದ್ದೇನೆ ಎನ್ನುವರು . ಮುಂದೆ ಹೈ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಹಾಜರಿ ಸಂಖ್ಯೆ ಕೊಟ್ಟಿದ್ದು ,ಒನ್ ,ಟೂ ,ಥ್ರೀ ,ಫೋರ್ ಆಬ್ಸೆಂಟ್ ಫೈವ್ ಹೀಗೆ ,ಯಾರಾದರೂ  ಗೈರು ಆಗಿದ್ದರೆ ಅವರ ನಂತರದವನು ಅದನ್ನು ಹೇಳುವುದು . 

ಕಾಲೇಜ್ ನಲ್ಲಿ ಕೆಲವು ಅಧ್ಯಾಪಕರು ನಂಬರ್ ಕೂಗುವರು ,ಕೆಲವರು ಹೆಸರು. ಇನ್ನು ಕೆಲವರು ಮುಂದಿನ ಬೆಂಚಿನ ವಿದ್ಯಾರ್ಥಿಯನ್ನು ಕರೆದು ಟೇಕ್ ಅಟೆಂಡೆನ್ಸ್ ಎಂದು ಹೇಳುವರು . 

ನಾನು ವೈದ್ಯಕೀಯ ಕಾಲೇಜು ಅಧ್ಯಾಪಕ ನಾಗಿದ್ದಾಗ  ಎಲ್ಲಾ ವಿದ್ಯಾರ್ಥಿಗಳ ಹೆಸರು ಕೂಗಿ ಕರೆಯುತ್ತಿದ್ದೆನು . ಒಮ್ಮೆ ಒಬ್ಬಳು ಹುಡುಗಿಯ ಹೆಸರು ಹಾಜರಿ ಪುಸ್ತಕದಲ್ಲಿ Vidhya ಎಂದು ಬರೆದಿತ್ತು .ಅವಳು ಜಾಣೆ ,ಪಠ್ಯೇತರ ಚಟುವಟಿಕೆ ಯಲ್ಲೂ ಮುಂದು . ನಾನು  ವಿದ್ಯಾ ಮತ್ತು ವಿದ್ಯಾರ್ಥಿ ಗೆ ಬಾಲ ಇಲ್ಲ ,ಅಧ್ಯಾಪಕರಿಗೆ ಮಾತ್ರ ಬಾಲ ಎಂದು ಹೇಳಿದೆನು . ಅವಳ ಪಕ್ಕದ ಹುಡುಗಿ ಅವಳಿಗೆ ಕೊಂಬು (ಜಂಬ )ಉಂಟು ಸರ್ ಎಂದಳು . 

ಇನ್ನೊಬ್ಬ ಹುಡುಗನ ಹೆಸರು ಬನವಾಸಿ .ಪಂಪನ ಬನವಾಸಿ ಯಿಂದ ಬಂದವನು .ಅವನ ಹೆಸರು ಓದಿದೊಡನೆ ಆರಂಕುಶವ ಇಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶವಂ ಎಂದು ನೆನಪಿಗೆ ಬಂದು ಅದನ್ನು ಹೇಳುತ್ತಿದ್ದೆನು . (ಇದೇ ವಾಕ್ಯವನ್ನು ಬಾಲ್ಯದಲ್ಲಿ ನಾವು  ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಕೋಡಿ ಭಟ್ಟರ ಮಸಾಲೆ ದೋಸೆಯಂ ,ನೀರುಳ್ಳಿ ಬಜ್ಜಿಯಂ ಎಂದು ಅಣುಕು ಮಾಡುತ್ತಿದ್ದೆವು .)

ಒಂದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ  ವಿದ್ಯಾರ್ಥಿಗಳು ಸುಮ್ಮ ಸುಮ್ಮನೇ ಗೈರು ಹಾಜರಿ ಆಗುವುದನ್ನು ತಪ್ಪಿಸಲು ಒಂದು ದಿನ ಆಬ್ಸೆಂಟ್ ಆದರೆ ನೂರು ರೂಪಾಯಿ ದಂಡ ಕಟ್ಟಬೇಕು ಎಂದು ಸುತ್ತೋಲೆ ಕಳುಹಿಸಿದರು . ಅದರಿಂದ ಹಾಜರಾತಿ ಏನೂ ಹೆಚ್ಚಾಗಲಿಲ್ಲ . ಹೆತ್ತವರು ಮಕ್ಕಳನ್ನು ನೋಡಲು ಬಂದಾಗ ಗೈರು ಹಾಜರಿ ದಂಡ ಎಂದು ಸಾವಿರ ಎರಡು ಸಾವಿರ ಅಡ್ವಾನ್ಸ್ ಆಗಿ ಕಟ್ಟಿ ,ನಮ್ಮ ಮಕ್ಕಳನ್ನು ಮುಂದೆ ಬಂದರೆ ಹಾಯ ಬೇಡಿ ಹಿಂದೆ ಬಂದರೆ ಒದೆಯ ಬೇಡಿ ಎಂದು ವಿನಂತಿ ಮಾಡುತ್ತಿದ್ದರು . ಎಚ್ ನರಸಿಂಹಯ್ಯ ನ್ಯಾಷನಲ್ ಕಾಲೇಜ್ ಹಾಸ್ಟೆಲ್ ನಲ್ಲಿ ಬೆಳಿಗ್ಗೆ ಪ್ರಾರ್ಥನೆಗೆ ಬಾರದವರಿಗೆ ಐವತ್ತು ಪೈಸೆ ದಂಡ ಹಾಕಲು ಒಬ್ಬ ವಿದ್ಯಾರ್ಥಿ ಒಮ್ಮೆಲೇ ಐದು ರೂಪಾಯಿ ತಂದು ಕೊಟ್ಟು ಹತ್ತು ದಿನ ತಂಟೆಗೆ ಬರಬೇಡಿ ಎಂದನಂತೆ .. 

        ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ಹಾಜರಿ ಹಾಕುವ ಪದ್ದತಿಯೇ ಇರಲಿಲ್ಲ .ಎಲ್ಲರೂ ನಿಗದಿತ ಸಮಯಕ್ಕಿಂತ ಮೊದಲೇ ಬಂದು ಕೆಲಸ ಎಲ್ಲಾ ಪೂರ್ಣ ಗೊಳಿಸಿಯೇ ಹೋಗುತ್ತಿದ್ದ ಸಂಸ್ಕೃತಿ ಇತ್ತು . ಈಗ ಎಲ್ಲೆಡೆಯೂ ನಂಬಿಕೆ ಕೊರತೆ. ಸಂಸ್ಥೆಗಳಲ್ಲಿ  ಪ್ರಾಕ್ಸಿ ಹಾಜರಿ ಹಾಕುತ್ತಾರೆ ಎಂದು ಪಂಚಿಂಗ್ ಪದ್ಧತಿ ತಂದಿದ್ದಾರೆ .ಕೆಲವು ವೈದ್ಯಕೀಯ  ಕಾಲೇಜುಗಳಲ್ಲಿ  ಬೆಳಿಗ್ಗೆ ಪಂಚ್ ಮಾಡಿ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿ ಸಂಜೆ ಮತ್ತೆ ಬಂದು ಪಂಚ್ ಮಾಡುವವರು ಇದ್ದಾರೆ ಎಂದು ಓದಿದ್ದೇನೆ . ಆದರೆ ಇಂಥವರು ಪ್ರಭಾವ ಶಾಲಿಗಳು ಆಗಿ ಇರುವುದರಿಂದ ಏನೂ ಮಾಡಲು ಆಗುವುದಿಲ್ಲ .



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ