ಬೆಂಬಲಿಗರು

ಭಾನುವಾರ, ಜನವರಿ 9, 2022

ಎಡ್ರಿನಲ್ ಗ್ರಂಥಿ

                                     Illu adrenal gland.jpg

 ಆಂಗ್ಲ ಭಾಷೆಯಲ್ಲಿ  ರೀನಲ್ ಎಂದರೆ ಮೂತ್ರ ಪಿಂಡಕ್ಕೆ ಸಂಬಂದಿಸಿದುದು ಎಂದು ಅರ್ಥ . ರೀನಲ್ ಸ್ಟೋನ್ ಎಂದರೆ ಮೂತ್ರ ಪಿಂಡದ ಕಲ್ಲು ,ರೀನಲ್ ಫೈಲ್ಯೂರ್ ಎಂದರೆ ಮೂತ್ರ ಪಿಂಡಗಳ ವೈಫಲ್ಯ ಇತ್ಯಾದಿ .  ಎಡ್ರಿನಲ್ ಎಂದರೆ ಮೂತ್ರ ಪಿಂಡದ  ಮೇಲೆ ಸ್ಥಾಪಿತ ವಾಗಿರುವ( ಗ್ರಂಥಿ ). 

ಈ  ಗ್ರಂಥಿ ಗೆ  ಒಳಗೊಂದು ಹೊರಗೊಂದು ಪ್ರತ್ಯೇಕ ಭಾಗ ಇದೆ .ಹೊರ ಭಾಗ ಅಥವಾ ಕಾರ್ಟೆಕ್ಸ್  ಜೀವಕ್ಕೆ ಅತ್ಯಾವಶ್ಯವಾದ ಕಾರ್ಟಿಸೋಲ್ ಹಾರ್ಮೋನ್ ಸ್ರವಿಸುವದು . ಈ ಹಾರ್ಮೋನ್ ಗಳು ಕೊಲೆಸ್ಟರಾಲ್ ನಿಂದ ಜನ್ಯ ವಸ್ತುಗಳು ಆಗಿದ್ದು  ಸ್ಟೆರೋಯಿಡ್ ಹಾರ್ಮೋನ್ ಎಂದು ಕರೆಯುವರು .ನಾವು ಚಿಕಿತ್ಸೆಗಾಗಿ ಕೊಡುವ ಸ್ಟೆರೋಯಿಡ್ ಗಳು ಇವುಗಳ ಕೃತಕ ಸೃಷ್ಟಿ ಅಷ್ಟೇ . 

ಸ್ಟೆರೋಯಿಡ್ ಹಾರ್ಮೋನ್ ಗಳಲ್ಲಿ  ಸಕ್ಕರೆ (ಗ್ಲುಕೋಸ್ ) ,ಲವಣ ಮತ್ತು  ಲೈಂಗಿಕ ಎಂಬ  ಮೂರು ಪ್ರಭೇದಗಳು . ಮೊದಲನೆಯದು ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಕಷ್ಟು ಇರುವಂತೆ ನೋಡಿಕೊಂಡರೆ ,ಎರಡನೆಯದು ಸೋಡಿಯಂ ಪ್ರಮಾಣವನ್ನು ಮತ್ತು ಮೂರನೆಯದು ಲಘು ಲೈಂಗಿಕ ಚೋದಕ . ಅಡ್ರಿನಲ್ ಹಾರ್ಮೋನ್  ಕೊರತೆಯಾದರೆ ರಕ್ತದ   ಗ್ಲುಕೋಸ್ ಪ್ರಮಾಣ ಅಪಾಯಕಾರಿಯಾಗಿ ಕಡಿಮೆ ಆಗಿ ಬಳಲಿಕೆಯಿಂದ ಹಿಡಿದು ಪ್ರಜ್ಞೆ ತಪ್ಪುವ ವರೆಗೆ ಆಗ ಬಹುದು . ಸೋಡಿಯಂ ಪ್ರಮಾಣ ಕಡಿಮೆ ಆದಾಗ ಹೆಚ್ಚು ಕಡಿಮೆ ಇವೇ ಲಕ್ಷಣಗಳು . 

ಅಡ್ರಿನಲ್ ಗ್ರಂಥಿಯ ಒಳಮೈ ಅಥವಾ ಮೆಡುಲ್ಲಾ ದಿಂದ ಅಡ್ರಿನಲಿನ್ ಮತ್ತು ನೋರ್ ಅಡ್ರಿನಲಿನ್ ಹಾರ್ಮೋನ್ ಗಳು ಉತ್ಪತ್ತಿ ಆಗುವವು . ಇವು ಜೀವ ರಕ್ಷಣೆಗೆ ಅತೀ ಅವಶ್ಯ  ಅಪಾಯ ಬಂದಾಗ ಹೋರಾಡು  ಇಲ್ಲವೇ ಓಡಿ ಪಾರಾಗು ಎಂಬ ಗುರಿ . 

ಅಡ್ರಿನಲ್ ಗ್ರಂಥಿ ಗಳ ಶೈಥಿಲ್ಯ ಉಂಟಾಗಲು ಸ್ವಯಮ್ ನಿರೋಧ (ಆಟೋ ಇಮ್ಮ್ಯೂನ್ )ಕಾಯಿಲೆ ಮುಖ್ಯ ಕಾರಣ ವಾದರೆ , ಕ್ಷಯ ,ಕ್ಯಾನ್ಸರ್ ಇತ್ಯಾದಿ ಇತರ ಕಾರಣಗಳು . ಅಡ್ರಿನಲ್  ಸ್ಟೆರೋಯಿಡ್ ಗಳ ಕೊರತೆ ಯಾದರೆ ರಕ್ತದ ಒತ್ತಡ ಕಡಿಮೆಯಾಗಿ ಎದ್ದು ನಿಲ್ಲಲು ಕಷ್ಟವಾಗುವದು . ಚರ್ಮದಲ್ಲಿ ಕಪ್ಪು ಬಣ್ಣದ ಲೇಪ ಬರುವದು ,ಮಾಂಸ ಖಂಡಗಳು ಬಲಹೀನ ಆಗುವುವು ,ಸ್ತ್ರೀಯರಲ್ಲಿ ಮುಟ್ಟು ಅಸ್ತವ್ಯಸ್ತ ಆಗುವದು .ಮೊದಲೇ ತಿಳಿಸಿದಂತೆ ಕೆಲವರಲ್ಲಿ ಯಾವುದೇ ಕಾರಣ ವಿಲ್ಲದೆ ಸಕ್ಕರೆ ಪ್ರಮಾಣ ಅಪಾಯಕಾರಿ ಯಾಗಿ ಕಡಿಮೆ ಆಗುವುದು .ನಾನು ಪುತ್ತೂರಿನಲ್ಲಿ ಈ ರೀತಿ  ಸಕ್ಕರೆ ಕಡಿಮೆ ಆಗಿ ಪ್ರಜ್ಞಾಹೀನರಾಗಿ ಬಂದ ಅಡ್ರಿನಲ್ ಕೊರತೆಯ ಮೂರು ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಮಾಡಿದ್ದೇನೆ . 

ಅಡ್ರಿನಲ್ ಹಾರ್ಮೋನ್ ಲೆಕ್ಕಕ್ಕಿಂತ ಹೆಚ್ಚು   ಉತ್ಪತ್ತಿ ಆದರೆ ಕುಶಿಂಗನ ಕಾಯಿಲೆ ಬರುವದು . ಇದರಲ್ಲಿ ಬೊಜ್ಜು ,ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕ,ರಕ್ತದ ಒತ್ತಡ ಏರಿಕೆ ,ಋತು ಚಕ್ರ ನಿಲ್ಲುವುದು ಇತ್ಯಾದಿ ಉಂಟಾಗುವದು .ಈ ಲಕ್ಷಣಗಳು    ಬೇರೆ ಕಾಯಿಲೆಗಳಿಗೆ  ದೀರ್ಘ ಕಾಲ ಸ್ಟೀರಾಯ್ಡ್ ಕೊಡುವುದರಿಂದ ಕೂಡಾ ಉಂಟಾಗ ಬಹುದು . 

ಇನ್ನು ಅಡ್ರಿನಲ್ ಒಳಮೈ ಯ ಗಡ್ಡೆಯಾದ ಫಿಯೋ ಕ್ರೋಮೋ ಸೈಟೋಮಾ ಎಂಬ ಕಾಯಿಲೆಯಲ್ಲಿ  ಹಾರ್ಮೋನುಗಳಾದ ಅಡ್ರಿನಲಿನ್ ,ನೊರಾಡ್ರೆನಲಿನ್ ಅಧಿಕವಾಗಿ ಎದೆ ಬಡಿತ ಅಧಿಕವಾಗುವದು ,ರಕ್ತದ ಒತ್ತಡ ಅಪಾಯಕಾರಿ ಯಾಗಿ ಏರುವದು ಮತ್ತು ವಿಪರೀತ ತಲೆನೋವು ಬರ ಬಹುದು .

Addisons vs Cushing's | Nursing school survival, Nursing school tips,  Nursing school studying

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ