ಮೆದುಳು ಹಾಗೂ ಮೆದುಳು ಬಳ್ಳಿ ಬಹಳ ಅಮೂಲ್ಯ ಅಂಗಗಳು ಆಗಿದ್ದು ,ಅವುಗಳ ರಕ್ಷಣೆಗೆ ಹಲವು ವ್ಯೂಹಗಳು ಪ್ರಕೃತಿ ನಿರ್ಮಿಸಿದೆ .ಅದರಲ್ಲೂ ಮೆದುಳು ಇನ್ನೂ ಮುಖ್ಯವಾಗಿದ್ದು ಮೆದುಳು ನಿಷ್ಕ್ರಿಯವಾದಾಗ ಮಾತ್ರ ಅಂತ್ಯ ನಿಶ್ಚಯ . ನಿಮಗೆ ತಿಳಿದಂತೆ ಮೆದುಳು ಗಟ್ಟಿಯಾದ ತಲೆ ಬುರುಡೆಯ ಒಳಗೆ ಇದ್ದು ,ಇದೊಂದು ನೈಸರ್ಗಿಕ ಹೆಲ್ಮೆಟ್ ಎಂದು ತಿಳಿದು ಕೊಳ್ಳ ಬಹುದು . ಐ ಎಸ ಐ ಮಾರ್ಕ್ ಬದಲಿಗೆ ಎಂ ಡಿ ಬಿ (ಮೇಡ್ ಬೈ ಬ್ರಹ್ಮ )ಮಾರ್ಕ್ ಇರುತ್ತದೆ .ಇದೂ ಸಾಲದೆಂದು ಮೆದುಳಿನ ಹೊರಗೆ ಕ್ರಮವಾಗಿ ಪಯಾ ಮ್ಯಾಟರ್ ,ಅರಕೆನೋಯಿಡ್ ಮತ್ತು ಡ್ಯೂರಾ ಮ್ಯಾಟರ್ ಎಂಬ ಮೂರು ಪೊರೆಗಳು ಇದ್ದು ,ಪಯಾ ಮತ್ತು ಅರಕೆನೋಯ್ಡ್ ಪೊರೆ ನಡುವೆ ಸೆರೆಬ್ರೊ(ಮೆದುಳು ) ಸ್ಪೈನಲ್ ಮೆದುಳು ಬಳ್ಳಿ )ದ್ರವ ಇರುತ್ತದೆ . ಈ ದ್ರವ ಮೆದುಳಿಗೆ ಕುಶನ್ ತರಹ ರಕ್ಷಣೆ ಕೊಡುವುದಲ್ಲದೆ ಆಹಾರ ಇತ್ಯಾದಿ ಸರಬರಾಜು ಮಾಡುವದು ..
ಮೆದುಳು ಒಂದು ಕಂಪ್ಯೂಟರ್ ತರಹ . ಒಂದು ಸಿ ಡಿ ಅಥವಾ ಡಿ ವೀ ಡಿ ಗೆ ಸ್ವಲ್ಪ ತರುಚಿದರೆ ಅದರ ಕಾರ್ಯಗಳು ಅಸ್ತವ್ಯಸ್ತ ಆಗುವ ಹಾಗೆ ಮೆದುಳಿನ ಜೀವ ಕೋಶಗಳಲ್ಲಿ ಕೂಡಾ ಆಗುವದು .
ಮೆದುಳಿಗೆ ಸಂಬಂದಿಸಿದ ರಕ್ತ ಸ್ರಾವಗಳಲ್ಲಿ ಕೆಲವು ವಿಧ ಇವೆ .ಇವು ಯಾವುದಾದರೂ ಅವಘಡದಿಂದ ಅಥವಾ ತನ್ನಿಂದ ತಾನೇ ಉಂಟಾಗ ಬಹುದು .
ಇದರಲ್ಲಿ ಕೆಲವು ವಿಧ ಇವೆ .
೧ ಎಕ್ಸ್ಟ್ರಾ ಡ್ಯೂರಲ್ . ಇದು ತಲೆ ಬುರುಡೆ ಮತ್ತು ಡ್ಯೂರಾ ಮ್ಯಾಟೆರ್ ನಡುವೆ ಆಗುವ ರಕ್ತಸ್ರಾವ . ಒತ್ತಡ ಹೆಚ್ಚು ಇರುವ ಅಪಧಮನಿ (artery )ಯಿಂದ ಆಗುವ ಕಾರಣ ಸ್ರಾವ ಶೇಖರಣೆ ಬೇಗ ಹೆಚ್ಚಾಗುವುದು .
೨ ಸಬ್ ಡ್ಯೂರಲ್ : ಇದು ಡ್ಯೂರಾ ಮ್ಯಾಟರ್ ಮತ್ತು ಅರ್ಕನೋಯಿಡ್ ಮ್ಯಾಟರ್ ನಡುವೆ . ಅಭಿಧಮನಿ ಕಾರಣ (vein ). ನಿಧಾನ ಸ್ರಾವ ಆಗುವುದು .
ಮೇಲಿನ ಎರಡು ಸಂಧರ್ಭ ಸೀಮಿತ ಜಾಗದಲ್ಲಿ ಶೇಖರಣೆ ಆದ ರಕ್ತವು ತನ್ನ ಅಳವಿಗೆ ಅನುಗುಣವಾಗಿ ಮೆದುಳಿನ ಮೇಲೆ ಒತ್ತಡ ಹಾಕುವುದರಿಂದ ಭ್ರಮಾವಸ್ಥೆ ಯಿಂದ ಹಿಡಿದು ಪ್ರಜ್ಞಾ ಹೀನ ಸ್ಥಿತಿ ವರಗೆ ಉಂಟಾಗ ಬಹುದು .ಸ್ಕ್ಯಾನ್ ನಲ್ಲಿ ಕಂಡು ಹಿಡಿದು ಅವಶ್ಯಕ ಇದ್ದರೆ ತಲೆ ಬುರುಡೆಯಲ್ಲಿ ರಂಧ್ರ ಮಾಡಿ ಅದನ್ನು ತೆಗೆಯುವರು .
೩ . ಸಬ್ ಅರಕನೋಯಿಡ್ ಹೆಮೊರೇಜ್ (ಅರಕನೊಯಿಡ್ ಮ್ಯಾಟರ್ ಒಳಗಿನ ರಕ್ತ ಸ್ರಾವ ). ಇಲ್ಲಿ ಕೆಲವೊಮ್ಮೆ ಮೊದಲೇ ಇದ್ದ ರಕ್ತ ನಾಳದ ಉಬ್ಬುಗಳು ಕಾರಣ ಆಗ ಬಹುದು . ಇದನ್ನು ನಿಲ್ಲಿಸಲು ಕೂಡಾ ಕೆಲವು ಚಿಕಿತ್ಸಾ ವಿಧಾನಗಳು ಇವೆ .
೪. ಮೆದುಳಿನ ಒಳಗಿನ ರಕ್ತ ಸ್ರಾವ . ಇದಕ್ಕೆ ಅಧಿಕ ರಕ್ತದ ಒತ್ತಡ ಒಂದು ಕಾರಣ. ಮೆದುಳಿನ ಒಳಗೆ ಆಗುವ ಕಾರಣ ಅದು ಆದ ಜಾಗವನ್ನು ಹೊಂದಿ ಕೊಂಡು ಪಕ್ಷವಾತ ,ಮಾತು ನಿಲ್ಲುವುದು ಇತ್ಯಾದಿ ಆಗಬಹುದು ಅಲ್ಲದೆ ಕೆಲವೊಮ್ಮೆ ಅಪಸ್ಮಾರ ಕೂಡಾ ಬರ ಬಹುದು . ಮೆದುಳಿನ ಒಳಗಡೆ ಶೇಖರಣೆ ಅದ ರಕ್ತವನ್ನು ತೆಗೆಯುವದು ಕಷ್ಟ (ಯಾಕೆಂದರೆ ಹೀಗೆ ಮಾಡುವಾಗ ಮೆದುಳಿನ ಸೂಕ್ಷ್ಮ ಜೀವಕೋಶಗಳಿಗೆ ಇನ್ನೂ ಹಾನಿ ಆಗಬಹುದು ).ಸೆರೆಬೆಲ್ಲಮ್ ಎಂಬ ಭಾಗದಲ್ಲಿ ಆದರೆ ಗಣನೀಯ ಶೇಖರಣೆ ಆದರೆ ಸಾಮಾನ್ಯವಾಗಿ ತೆಗೆಯುವರು ಏಕೆಂದರೆ ಅದು ಶ್ವಾಸ ಕೇಂದ್ರ ಇರುವ ಮೆದುಳಿನ ಕೆಳ ಭಾಗಕ್ಕೆ ಒತ್ತಡ ಹಾಕಿದರೆ ಜೀವ ಅಪಾಯ ಬರಬಹುದು . ಇದರ ಹೊರತಾಗಿ ಮೆದುಳಿನ ಒಳಗಿನ ರಕ್ತಸ್ರಾವಕ್ಕೆ ರಕ್ತದ ಒತ್ತಡ ಅಧಿಕ ಇದ್ದರೆ ಕಡಿಮೆ ಮಾಡುವದು ಮತ್ತು ಮೆದುಳಿನ ಆಘಾತದಿಂದ ಬಲಹೀನ ಆದ ಅಂಗಕ್ಕೆ ವ್ಯಾಯಾಮ ಮಾಡುವದು ಮಾತ್ರ ಇರುವ ಚಿಕಿತ್ಸೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ