ಆರ್ಜಿತ ಬುದ್ಧಿ ಮಾಂದ್ಯತೆ
ನೀವೆಲ್ಲಾ ಡಿಮೆನ್ಷಿಯಾ (dementia )ಎಂಬ ಶಬ್ದ ಆಗಾಗ ಕೇಳಿರ ಬಹುದು . ಬುದ್ದಿ ಒಮ್ಮೆ ವಯಸ್ಸಿಗನುಗುಣವಾಗಿ ಬೆಳೆದು ಅಕಾಲದಲ್ಲಿ ಕುಂದಿದರೆ ಅದನ್ನು ಈ ಹೆಸರಿನಿಂದ ಕರೆಯುವರು .
ಇದು ಒಂದು ರೋಗ ಲಕ್ಷಣ .ಆಲೋಚನಾ ,ಜ್ಞಾಪಕ ಮತ್ತು ತಾರ್ಕಿಕ ಮಥನ ಶಕ್ತಿ ಕುಂದುವುದು ಇದರ ಮುಖ್ಯ ಅಂಗಗಳು .
ಜಗತ್ತಿನಾಧ್ಯಂತ ಅಲ್ಜ್ಹಿಮರ್ಸ್ ಕಾಯಿಲೆ ಇದಕ್ಕೆ ಮುಖ್ಯ ಕಾರಣ ವಾದರೆ ,ಮದ್ಯಪಾನ ,ಖಿನ್ನತೆ ,ಪಾರ್ಕಿನ್ಸನ್ಸ್ ಕಾಯಿಲೆ ,ಮೆದುಳಿನ ರಕ್ತ ಸಂಚಾರ ವ್ಯತ್ಯಯ ,ಥೈರಾಯಿಡ್ ಹಾರ್ಮೋನ್ ಕೊರತೆ ಇತ್ಯಾದಿ ಕೂಡಾ ಈ ರೋಗ ಲಕ್ಷಣ ಉಂಟು ಮಾಡುವವು .
ಮೊದಲನೇ ಹಂತ ;
ಮರಗುಳಿತನ , ಸಮಯದ ಪರಿವು ತಪ್ಪುವುಕೆ
ಮೊದಲೇ ಪರಿಚಯ ಪರಿಸರವೂ ಹೊಸತರಂತೆ ತೋರುವದು
ಎರಡನೇ ಹಂತ :
ಇತ್ತೀಚೆಗಿನ ಘಟನೆಗಳು ಮರೆತು ಹೋಗುವುದು ,ಅದರೊಂದಿಗೆ ಜನರ ಹೆಸರೂ
ಮನೆಯೊಳಗಿದ್ದರೂ ಎಲ್ಲಿಯೋ ಇದ್ದಂತೆ ಗೊಂದಲ ,ಸಂಭಾಷಣೆಗೆ ಕಷ್ಟ ಪಡುವುದು ,ಸ್ವಂತ ಚಾಕರಿಗೆ ಅನ್ಯರ ಸಹಾಯದ ಅವಶ್ಯಕತೆ ,ದಾರಿ ತಪ್ಪುವುದು,ನಡವಳಿಕೆ ಯಲ್ಲಿ ಬದಲಾವಣೆ ,ಪುನಃ ಪುನಃ ಹೇಳಿದ್ದನ್ನೇ ಹೇಳುವದು
ಮೂರನೇ ಹಂತದಲ್ಲಿ ಮೇಲೆ ಹೇಳಿದ ಲಕ್ಷಣಗಳು ಉಲ್ಬಣವಾಗಿ ,ಸಂಪೂರ್ಣ ಬೇರೆಯವರ ಅವಲಂಬನೆ ,ಕೆಲವೊಮ್ಮೆ ಕ್ರುದ್ಧತೆ ,ಸಂಪೂರ್ಣ ಮರೆವು ಇತ್ಯಾದಿ ಉಂಟಾಗಿ ಇವರ ಆರೈಕೆ ಮಾಡುವದು ಬಹಳ ಕಷ್ಟದ ಕೆಲಸ ಆಗುವದು .
ಅಲ್ಜ್ಹಿಮರ್ ಕಾಯಿಲೆ
೧೯೦೧ ರಲ್ಲಿ ಜರ್ಮನಿಯ ವೈದ್ಯ ಅಲೋಯಿಸ್ ಅಲ್ಜ್ಹಿಮರ್ ,ನೆನಪು ಶಕ್ತಿ ಕುಂದಿದ್ದಲ್ಲದೆ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ೫೧ ವರ್ಷದ ಮಹಿಳೆಯನ್ನು ಕುತೂಹಲದಿಂದ ದಾಖಲೀಕರಿಸಿದ್ದಲ್ಲದೆ ೧೯೦೬ ರಲ್ಲಿ ಆಕೆ ತೀರಿ ಕೊಂಡಾಗ ಅವಳ ಮೆದುಳಿನ ಮರಣೋತ್ತರ ಪರೀಕ್ಷೆ ಮಾಡಲಾಗಿ ಅದರಲ್ಲಿ ಕೆಲವು ಆಯಕಟ್ಟಿನ ಜಾಗಗಳಲ್ಲಿ ಅಮಲಾಯ್ಡ್ ಎಂಬ ವಸ್ತು ಶೇಖರಣೆ ಆದದ್ದು ಕಂಡು ಬಂತು . ೧೯೦೭ ರಲ್ಲಿ ಈ ರೋಗದ ರೂಪು ರೇಷೆಗಳ ಬಗ್ಗೆ ಆತ ಪ್ರಬಂಧ ಮಂಡಿಸಿದನು . ಅಲ್ಲಿಂದ ಇಂದಿನ ವರಗೆ ರೋಗ ಪತ್ತೆ ಹಚ್ಚುವಲ್ಲಿ ಅನೇಕ ಆವಿಷ್ಕಾರಗಳು( ಉದಾ :ಎಂ ಆರ್ ಐ ಸ್ಕ್ಯಾನ್ )ಆಗಿದ್ದರೂ ರೋಗದ ಮೂಲ ಕಾರಣ ಮತ್ತು ಚಿಕಿತ್ಸೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ .ಅಮೇರಿಕಾದ ಅಧ್ಯಕ್ಷ ರಾಗಿದ್ದ ರೊನಾಲ್ಡ್ ರೇಗನ್ ,ಉಕ್ಕಿನ ಮಹಿಳೆ ಬ್ರಿಟನ್ ನ ಮಾರ್ಗರೆಟ್ ತ್ಯಾಚೆರ್ ಮುಂತಾಗಿ ಹಲವು ಜಾಗತಿಕ ವಾಗಿ ಹೆಸರು ಮಾಡಿದವರು ಈ ರೋಗಕ್ಕೆ ತುತ್ತಾಗಿದ್ದಾರೆ .
ಇತ್ತೀಚೆಗೆ ನನ್ನ ಪರಿಚಯದ ಹೆಸರಾಂತ ಕನ್ನಡ ಲೇಖಕರನ್ನು ವರ್ಷದ ನಂತರ ಕಾಣಲು ಹೋಗಿದ್ದೆ .ಪ್ರತಿ ಸಾರಿ ನಾವು ಉಭಯ ಕುಶಲೋಪರಿ ,ಸಾಹಿತ್ಯ ಮತ್ತು ಶಿಕ್ಷಣ ಬಗ್ಗೆ ಮಾತನಾಡುತ್ತಿದ್ದೆವು .ಈ ಬಾರಿ ನನ್ನನ್ನು ಕಂಡವರು ನೀವು ಯಾರು ?ಎಲ್ಲಿಂದ ಬಂದಿರಿ ?ಎಂದು ಆರಂಭಿಸಿದರು . ನಾನು ಪುತ್ತೂರಿನಿಂದ ಎಂದಾಗ ಅದು ಎಲ್ಲಿದೆ ?ಎಂದು ಕೇಳಿದರು .
ನನ್ನ ಸಹಪಾಠಿ ಒಬ್ಬಾಕೆ ,ಪ್ರತಿಭಾವಂತೆ , ಬಿಎ ,ಎಂ ಎ ಯಲ್ಲಿ ಆಗಿನ ಮೈಸೂರು ವಿಶ್ವ ವಿದ್ಯಾಲಯಕ್ಕೆ ರಾಂಕ್ ಹೋಲ್ಡರ್ ,ಒಂದು ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದು ವಿಶ್ರಾಂತ ರಾದ ಮರುವರ್ಷದಿಂದ ನೆನಪು ಶಕ್ತಿ ಕಳೆದು ಕೊಳ್ಳ ತೊಡಗಿದರು .ಇತ್ತೀಚಿಗೆ ಅವನ್ನು ಕಾಣಲು ಹೋದರೆ ನನ್ನನ್ನು ಗುರುತೇ ಹತ್ತಲಿಲ್ಲ .
ಇಂತಹ ವ್ಯಕ್ತಿಗಳ ಆರೈಕೆ ಮಾಡುವವರಿಗೆ ತಾಳ್ಮೆ ಮತ್ತು ತರಬೇತಿ ಬಹಳ ಆವಶ್ಯ .
ಬಾಲಂಗೋಚಿ :ಪುರಾಣಗಳಲ್ಲಿ ಗುರು ಶಿಷ್ಯನಿಗೆ ಶಸ್ತ್ರ ವಿದ್ಯೆ ಬೇಕಾದಾಗ ನೆನಪಿಗೆ ಬರದೇ ಇರಲಿ ಎಂದು ಶಾಪ ಕೊಟ್ಟ ಕಾರಣ ಬಂದ ಮರೆವು ,ದುಶ್ಯಂತನಿಗೆ ಶಕುಂತಲೆಯ ಗುರುತು ಸಿಕ್ಕದ್ದು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಓದಿದ್ದು ನೆನಪಿಗೆ ಬಾರದೇ ಇರುವುದು ಈ ರೋಗಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ .
ಮಲಯಾಳಂ ನಲ್ಲಿ ಮೋಹನ್ ಲಾಲ್ ಅಭಿನಯಿಸಿದ ಚಿತ್ರ 'ತನ್ಮಾತ್ರ "ನಲ್ಲಿ ಈ ಸಮಸ್ಯೆಯನ್ನು ಚೆನ್ನಾಗಿ ಚಿತ್ರಿಸಿದ್ದು ಅವರ ಅಭಿನಯ ಹೃದಯಂಗಮ ವಾಗಿ ಬಂದಿದೆ.
https://youtu.be/PEJ_hWg_F3c
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ