ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ . ಮರ ಸೇರಿ ಸೇರಿ ಎಲ್ಲಾ ಉತ್ಪತ್ತಿಯೂ ಜನೋಪಯೋಗಿ . ಎಳನೀರು ,ತೆಂಗಿನ ಕಾಯಿ ,ಗೆರಟೆ ,ಸೊಪ್ಪು ,ಮಡಲು ,ಕೊನೆಗೆ ಸತ್ತ ಮರ ಕೂಡಾ .
ತೆಂಗಿನ ಮಡಲು ಅಥವಾ ಗರಿ ಉತ್ತಮ ಸ್ಟಾರ್ಟರ್ ಉರುವಲು . ಒಲೆಗೆ ಮೊದಲು ಬೆಂಕಿ ಹೆಚ್ಚಿಸಲು ,ಒಂದು ಒಲೆಯಿಂದ ಇನ್ನೊಂದು ಒಲೆಗೆ ಹಬ್ಬಿಸಲು ,ಒಲೆ ಬೆಂಕಿಯಿಂದ ಚಿಮಿಣಿ ದೀಪ ಹಚ್ಚಲು ಮತ್ತು ವೈಸ್ ವೆರ್ಸಾ ಇದು ಬೇಕೇ ಬೇಕು . ರಾತ್ರಿ ಹೊತ್ತು ಜಾತ್ರೆಗೆ ,ಆಟಕ್ಕೆ ಹೋಗುವಾಗ ಬೆಳಕು ಸೂಟೆಯದ್ದೇ . ಇನ್ನು ತೆಂಗಿನ ಗರಿಯನ್ನು ಚೆನ್ನಾಗಿ ಹೆಣೆದು ,ಚಪ್ಪರ (ತರಕಾರಿ ಚಪ್ಪರ ಸೇರಿ )ಮಾಡಲು ಉಪಯೋಗಿಸುತ್ತಿದ್ದರು.ಕೆಲವು ಮನೆಗಳಿಗೆ ಇದರದೇ ಗೋಡೆ .ಬಜಕ್ಕರೆ ತರಲು ಮೂಡೆ ಕೂಡಾ . ಇದರ ಕಡ್ಡಿಯನ್ನು ಕಸಬರಿಕೆ ಮಾಡಲು ,ಮತ್ತು ದೊನ್ನೆ ಕುತ್ತಲು ,ಮಕ್ಕಳಿಗೆ ಪೆಟ್ಟು ಕೊಡಲು ,ತಾತ್ಕಾಲಿಕ ಅಳತೆ ಗೋಲು ಮಾಡಲು ಇತ್ಯಾದಿ ಉಪಯೋಗಿಸುತ್ತಿದ್ದರು .
ಇನ್ನು ಕೊತ್ತಣಿಕೆ ನಮಗೆ ಕ್ರಿಕೆಟ್ ಆಡಲು ಬ್ಯಾಟ್ ಆಗುತ್ತಿತ್ತು ,ಒಲೆಗೆ ಹಾಕಿದರೆ ಉರುವಲು ,ಅದರ ತುದಿ V ಶೇಪ್ ಇರುವುದರಿಂದ ಬೇಲಿ ಇತ್ಯಾದಿ ತಾಂಗಲು ತೂಣ ವಾಗಿಯೂ ಉಪಯೋಗಕ್ಕೆ ಬರುತ್ತಿತ್ತು
ಬೇಲಿಯ ಹೊರಗೆ ತೆಂಗಿನ ಮಡಲು ಒಣಗಿ ಬಿದ್ದೊಡನೆ ತಾ ಮುಂದು ತಾ ಮುಂದು ಎಂದು ಬಂದು ಹೆಕ್ಕಿ ಕೊಂಡು ಹೋಗುತ್ತಿದ್ದರು .ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇದರ ಹಕ್ಕು ಸ್ಥಾಪಿಸಲು ಜಗಳ ಆದದ್ದೂ ನೋಡಿದ್ದೇನೆ .
ಆದರೆ ಈಗ ಎಲ್ಲಾ ವೃದ್ದರಂತೆ ಒಣಗಿದ ತೆಂಗಿನ ಗರಿ ಯಾರಿಗೂ ಬೇಡವಾಗಿದೆ . ಅಡಿಗೆಗೆ ಗ್ಯಾಸ್ ,ಬಿಸಿನೀರಿಗೆ ವಿದ್ಯುತ್,ರೆಡಿ ಮೇಡ್ ಕಸ ಬರಿಕೆ ಇರುವಾಗ ಇದನ್ನು ಕೇಳುವರಿಲ್ಲ . ಈಗ ಕೆಲ ಹಿರಿಯರು ಮಕ್ಕಳಿಗೆ ತೊಂದರೆ ಯಾಕೆ ಮತ್ತು ಸಮಾಜಕ್ಕೆ ಉಪಕಾರ ಆಗಲಿ ಎಂದು ತಮ್ಮ ಶರೀರ ವೈದ್ಯಕೀಯ ಕಾಲೇಜ್ ಗಳಿಗೆ ದಾನ ಮಾಡಿದಂತೆ ಇವುಗಳಿಗೆ ಅವಕಾಶ ಇದ್ದರೆ ಕೃಷಿ ಕಾಲೇಜು ಗೆ ತೆಂಗಿನ ಮರ ದಾನ ಪತ್ರ ಬರೆಯುತಿತ್ತೊ ಏನೋ ?
ಬಾಲಂಗೋಚಿ :ತೆಂಗಿನ ಗರಿಯ ಸೂಟೆ ಸ್ತ್ರೀಲಿಂಗ .ಬಜಾರಿ ಹುಡುಗಿಯರನ್ನು ಮತ್ತು ಹೆಂಗಸರನ್ನು ಸೂಟೆ ಎಂದು ಕರೆಯುತ್ತಿದ್ದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ