ಬೆಂಬಲಿಗರು

ಮಂಗಳವಾರ, ಜನವರಿ 4, 2022

ಪಿತ್ತ ಪುರಾಣ

                     ಪಿತ್ತ ಪುರಾಣ 

               Bile duct - Wikipedia

'ನೆತ್ತಿಗೆ ಏರಿದ ನಿನ್ನ ಪಿತ್ತ ಇಳಿಸುವೆನು ' ಎಂದು ತುಂಟ ಮಕ್ಕಳನ್ನು ಹೆತ್ತವರು ,ಅಧ್ಯಾಪಕರು ಗದರುವುದು ಇತ್ತು . ವಾಡಿಕೆಯಲ್ಲಿ ಪಿತ್ತ ಎಂದರೆ  ವ್ಯಾಖ್ಯಾತೀತ ವಸ್ತು ಅಥವಾ ಅನುಭವ . ಬಾಲ್ಯದಲ್ಲಿ ವೀಳ್ಯದ ಎಲೆಗೆ ಯಾವುದೊ ಔಷಧ ಹಾಕಿ ಎರಡು ಮೂರು ದಿನ ನಮ್ಮ ತಲೆಗೆ ಅಂಟಿಸಿ ವಾರ್ಷಿಕ ಪಿತ್ತ ಅವರೋಹಣ ಕಾರ್ಯಕ್ರಮ ಆಚರಿಸುತ್ತಿದ್ದರು . ಅದಕ್ಕೆ ಹಾಕುವ ಮದ್ದಿನ ಹೆಸರು ನೆನಪಿಲ್ಲ . 

        ವಾಸ್ತವದಲ್ಲಿ  ಪಿತ್ತ ರಸ ಉತ್ಪತ್ತಿ ಮಾಡುವುದು ಲಿವರ್ . ಆದುದರಿಂದ ಅದನ್ನು ಪಿತ್ತ ಜನಕಾಂಗ ಎಂದು ಕರೆಯುತ್ತಾರೆ . ಅಲ್ಲಿ ಕೊಲೆಸ್ಟರಾಲ್ ನಿಂದ ಪಿತ್ತ ಲವಣ ಅಥವಾ ಬೈಲ್ ಸಾಲ್ಟ್ ಉತ್ಪತ್ತಿ ಮಾಡಿ ಪಿತ್ತ ರಸಕ್ಕೆ ಸೇರಿಸಲಾಗುತ್ತದೆ .(ಕೊಲೆಸ್ಟರಾಲ್ ನಿಂದ ವಿಟಮಿನ್ ಡಿ ,ಸ್ಟೇರೋಯಿಡ್ ಹಾರ್ಮೋನ್ ಗಳು ಕೂಡಾ ಉತ್ಪತ್ತಿ ಆಗುವುವು . )ಕೆಂಪು ರಕ್ತ ಕಣಗಳು ಸತ್ತ ಮೇಲೆ ಅವುಗಳ ಶರೀರದ ವರ್ಣ ದ್ರವ್ಯಗಳು ಕೂಡಾ ಲಿವರ್ ಮೂಲಕ ಇದನ್ನು ಸೇರುತ್ತವೆ .ಅವನ್ನು ಬೈಲ್ ಪಿಗ್ಮೆಂಟ್ಸ್ ಎನ್ನುವರು .  ಹಳದಿ ಮಿಶ್ರಿತ ಹಸಿರು ಬಣ್ಣದ ಪಿತ್ತ ರಸವು ಪಿತ್ತನಾಳದ ಮೂಲಕ ಸಣ್ಣ ಕರುಳಿನ ಉಗಮ ಸ್ಥಾನಕ್ಕೆ ಸಾಗಿಸಲ್ಪಡುವುದು .ದಾರಿಯಲ್ಲಿ ಪಿತ್ತ  ಕೋಶದಲ್ಲಿ ಸ್ವಲ್ಪ ವಿಶ್ರಾಂತಿ . ಕರುಳನ್ನು ಸೇರುವ ಮೊದಲು ಮೇದೋಜೀರಕ ಗ್ರಂಥಿಯ(ಪ್ಯಾಂಕ್ರಿಯಾಸ್ ) ನಾಳವೂ ಕೂಡಿ ಕೊಳ್ಳುತ್ತದೆ 

ಪಿತ್ತರಸ ಆಹಾರದಲ್ಲಿ ಇರುವ ಕೊಬ್ಬಿನ ಅಂಶವನ್ನು  ಕರಗುವ ವಸ್ತುವಾಗಿ ಮಾರ್ಪಡಿಸಿ ,ಅದರ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ . ಕೆಲಸ ಮುಗಿಸಿ ಪುನಃ ರಕ್ತ ಮೂಲಕ ಲಿವರ್ ಸೇರುತ್ತದೆ . ಬೈಲ್ ಪಿಗ್ಮೆಂಟ್ಸ್ ಮಾತ್ರ ಮಲದ ಮೂಲಕ ವಿಸರ್ಜನೆ ಆಗುವುದು .ಮಲದ ಬಣ್ಣಕ್ಕೆ ಕಾರಣ ಈ ವರ್ಣದ್ರವ್ಯಗಳು . 

             ಪಿತ್ತ ರಸ ಸಾಮಾನ್ಯವಾಗಿ ಜಠರ ಕ್ಕೆ ಬರುವುದಿಲ್ಲವಾದರೂ ಯಾವುದಾದರೂ ಕಾರಣಕ್ಕೆ ಜೋರಾಗಿ ವಾಂತಿ ಆಗುವಾಗ ಕರುಳಿನಿಂದ ಅಲ್ಪ ಸ್ವಲ್ಪ ಉದರ ಮೂಲಕ ಬಾಯಲ್ಲಿ ಬರುವುದು ಉಂಟು .ಡಾಕ್ಟ್ರೇ ಹಳದಿ ಹಳದಿ ವಾಂತಿ ಆಯಿತು ಎಂದು ಗಾಬರಿಯಿಂದ ಹೇಳುವುದು ಸಾಮಾನ್ಯ . 

ಪಿತ್ತ ನಾಳದ ಉದ್ದಕ್ಕೂ ಏನಾದರೂ ತಡೆ ಉಂಟಾದರೆ (ಉದಾ ಪಿತ್ತ ನಾಳದ ಕಲ್ಲು ,ಪಿತ್ತ ನಾಳದ ಅಥವಾ ಮೇದೋಜೀರಕ ಗ್ರಂಥಿಯ ಗಡ್ಡೆ )ವರ್ಣ ದ್ರವ್ಯಗಳು ರಕ್ತ ಸೇರಿ ಜಾಂಡಿಸ್ ಉಂಟಾಗ ಬಹುದು . ಆಗ ಈ ತಡೆಗಳನ್ನು ನಿವಾರಣೆ ಮಾಡುವ ಚಿಕಿತ್ಸೆ ಮಾಡಬೇಕೇ ಹೊರತು ವಾಡಿಕೆಯ ಹಳ್ಳಿ ಮದ್ದು ಅಲ್ಲ . ಈ ತರಹ ಜಾಂಡಿಸ್ ನಲ್ಲಿ ವಿಪರೀತ ತುರಿಕೆ ಇರುತ್ತದೆ ,ತೀವ್ರ ತರ ತಡೆಯಿದ್ದರೆ ಮಲದ ಬಣ್ಣ ಬಿಳಿ ಇರುತ್ತದೆ 

ಬಾಲಂಗೋಚಿ : ಹೊಟ್ಟೆಯ ಹುಳಗಳು (roundworm )ಕೆಲವೊಮ್ಮೆ ತಮ್ಮ ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂದರೆ ಸಣ್ಣ ಕರುಳಿನಿಂದ ಪಿತ್ತ ನಾಳದ ಮೂಲಕ ಹೊಕ್ಕು ಅಲ್ಲಿ ಸಿಲುಕಿ ಗೊಂಡು ಪಿತ್ತ ರಸ ತಡೆ ಜಾಂಡಿಸ್ ಉಂಟು ಮಾಡುವುದೂ ಉಂಟು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ