ಮರೆಯಾದ ಚಂಪಾ
'ಕನ್ನಡ ಕಾವ್ಯದ ಭೂತ ಭವಿಷ್ಯವ
ಬಣ್ಣಿಸಿ ಹೇಳೋ ಗಾಂಪಾ;
ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ'
ಇದು ನಿನ್ನೆ ದಿವಂಗತರಾದ ಕವಿ ಚಂದ್ರ ಶೇಖರ ಪಾಟೀಲರು ತಮ್ಮನ್ನು ತಾವೇ ವಿನೋದವಾಗಿ ಪರಿಚಯಿಸುವ ರೀತಿ . ಇನ್ನು ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತಿರುವ ಅವರ ಹಳೇ ಕವನ ,ಸೈದ್ದಾಂತಿಕ ಸೇತುವೆ ಪುನರ್ನಿಮಾಣದ ಆಶಯದಲ್ಲಿ ಹೀಗಿದೆ .
ಯಾವಾಗ ಹೇಗೆ ಯಾರಿಂದ ಯಾಕೆ
ಅದೆಲ್ಲಾ ಯಾಕೆ ?ಅಂತೂ ಸೇತುವೆ
ಕಡಕೊಂಡು ಮುರಿದು ಬಿದ್ದಿದೆ .
ಶಬ್ದಗಳಿಂದ ಮುರಿದಿರ ಬಹುದು ,
ಮೌನದಿಂದ ಮುರಿದಿರ ಬಹುದು .
ಆ ಕಡೆ ನಿಂತ ನಿನ್ನ ಈ ಕಡೆ ನಿಂತ ನನ್ನ
ಶಬ್ದಗಳು ಈ ಹುಚ್ಚು ಹೊಳೆಯ ಮೌನದಲಿ
ತೇಲುತ್ತವೆ .ಮೌನಗಳು ಅದರ ಶಬ್ದದಲ್ಲಿ
ಮುಳುಗುತ್ತವೆ.
ದುರ್ಬೀನು ಹಚ್ಚಿ ಮುಖ ಮುಖ ಕಂಡೇವು
ಟೆಲಿಫೋನ್ ಮಾಡಿ ಮಾತು ಕೇಳೇವು
ಆದರೆ ಕೈಕುಲುಕಿದ ಕಾವಿನಲಿ
ಮೈ ಚಳಿ ಬಿಡ ಬೇಕೆಂದಿದ್ದರೆ..
ಮತ್ತೆ ಕಟ್ಟಲೇ ಬೇಕು ಮುರಿದ ಸೇತುವೆಯನ್ನು .
ಹಿರಿಯರಿಗೆ ಮತ್ತು ಅವರಿಗೆ ಗೌರವ ಕೊಡ ಬೇಕಾದರೂ ಅಂಧ ಶ್ರದ್ದೆ ಸಲ್ಲ ಎಂಬುದನ್ನು
"ನಿಮ್ಮ ಪಾದದ ಧೂಳಿ ನಮ್ಮ ಹಣೆಯ ಮೇಲಿರಲಿ ,ಕೆಳಗಡೆ ಬಂದು ದೃಷ್ಟಿ ಮಸುಕಾಗಿಸದಿರಲಿ "ಇದು ಅವರ ಸಂದೇಶ .
ನಾನು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಧಾರವಾಡ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಆಗಿದ್ದರು . ಆಗಷ್ಟೇ ತುರ್ತು ಪರಿಸ್ತಿತಿ ಕೊನೆಗೊಂಡಿತ್ತು .ತುರ್ತು ಪರಿಸ್ಥಿತಿ ವಿರೋಧಿಸಿ ಚಂಪಾ ಜೈಲಿಗೂ ಹೋದವರು . ಅಡಿಗ ,ಲಂಕೇಶ ,ಅನಂತ ಮೂರ್ತಿ .ಕಾರಂತ ಮುಂತಾದವರನ್ನು ಕರೆಸಿ ಭಾಷಣ ಸಂವಾದ ಏರ್ಪಡಿಸುವರು . ಎಲ್ಲಾ ಸಂದರ್ಭದಲ್ಲಿಯೂ ತಮ್ಮ ಚಾಟೂಕ್ತಿ ಯಿಂದ ಗಮನ ಸೆಳೆಯುವರು ; ಅವರ ಛೂಬಾಣ ಗಳನ್ನು ಎಂತಹವರೂ ಎದುರಿಸ ಬೇಕಿತ್ತು .
ತಾವು ಕಟುವಾಗಿ ವೈಚಾರಿಕವಾಗಿ ಟೀಕಿಸುತ್ತಿದ್ದವರನ್ನು ಕೂಡಾ ವೈಯುಕ್ತಿಕವಾಗಿ ಗೌರವಿಸುತ್ತಿದ್ದರು . ನಾಲ್ಕು ವರ್ಷಗಳ ಹಿಂದೆ ಧಾರವಾಡ ಸಾಹಿತ್ಯ ಸಂಭ್ರಮ ಕ್ಕೆ ಬೆಂಗಳೂರಿನಿಂದ ಬಂದವರು ಬಸವೇಶ್ವರ ಖಾನಾವಳಿ ಯಲ್ಲಿ ರಾತ್ರಿ ರೊಟ್ಟಿ ಊಟಕ್ಕೆ ಬಂದವರು ಸಿಕ್ಕಿದ್ದರು . ಧಾರವಾಡ ದಿಂದ ಬೆಂಗಳೂರಿಗೆ ವಾಸ ಬದಲಿಸಿದ ತಮ್ಮನ್ನು ನೋನ್ ರೆಸಿಡೆಂಟ್ ಧಾರವಾಡ ದವ ಎಂದು ಕರೆದು ಕೊಳ್ಳುತ್ತಿದ್ದರು . ತಮ್ಮ ಶಿಷ್ಯ ಪೋಲೀಸು ಅಧಿಕಾರಿ ವೇದಿಕೆಯಲ್ಲಿ ಇದ್ದಾಗಲೇ 'ಧಾರವಾಡದಲ್ಲಿ ನಮ್ಮ ಮನೆ ಪೋಲೀಸು ಸ್ಟೇಷನ್ ಪಕ್ಕದಲ್ಲಿ ಇತ್ತು ,ಆದುದರಿಂದ ಕಳ್ಳರ ಭಯ ಇರಲಿಲ್ಲ ,ಪೊಲೀಸರದ್ದೇ ಭಯ "ಎಂದು ಹೇಳಿದ ನೆನಪು .
ನಿನ್ನೆ ತಳುಕಿನ ವೆಂಕಣ್ಣಯ್ಯ ಗ್ರಂಥ ಮಾಲೆಯವರು ಪ್ರಕಟಿಸಿದ ಅವರ ಚಂಪಾಂಕಣ ಓದುತ್ತಿದ್ದೆ . ಇಂತಹ ಅಬಿವ್ಯಕ್ತಿ ಈಗ ಸಾಧ್ಯವೇ ?ಎಂದು ಆಲೋಚಿಸುತ್ತಿದ್ದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ