ನಿನ್ನೆ ೪. ೧. ೨೨ ಬಹಳ ಸಂಭ್ರಮ . ಪುತ್ತೂರಿನ ಒಬ್ಬ ಹಿರಿಯ ಸಜ್ಜನ ಸಾಧಕ ,ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಸಾರ್ಥಕ ಬದುಕಿನ ತೊಂಬತ್ತನೇ ವರ್ಷಕ್ಕೆ ಕಾಲಿಟ್ಟ ದಿನ .ಅವರ ಕುಟುಂಬದವರು ಮತ್ತು ಅಭಿಮಾನಿಗಳು ಸೇರಿ ಪರ್ಲಡ್ಕದ ಬಹುವಚನಂ ಸಭಾಂಗಣದಲ್ಲಿ ಸೇರಿ ಆಚರಿಸಿದರು . ಸಭಾಂಗಣ ತುಂಬಿ ತುಳುಕಿತ್ತು . ಎಲ್ಲೆಲ್ಲೂ ಉತ್ಸಾಹ ,ಸಂತೋಷ ,ಆತ್ಮೀಯತೆ .
ಶ್ರೀ ಸುಬ್ರಹ್ಮಣ್ಯ ಕೊಳತ್ತಾಯರು ವೃತ್ತಿಯಿಂದ ವಕೀಲರು . ೫೭ ವರ್ಷಗಳ ಸುಧೀರ್ಘ ವೃತ್ತಿ ಜೀವನ .ಇವರಿಂದ ತರಬೇತು ಪಡೆದ ಅನೇಕರು ಇಂದು ಪ್ರಸಿದ್ಧ ವಕೀಲರೂ ,ನ್ಯಾಯಾಧೀಶರೂ ಆಗಿದ್ದಾರೆ .
ಇವರ ಪ್ರವೃತ್ತಿ ಬಹು ಮುಖ . ಶಾಸ್ತ್ರೀಯ ಸಂಗೀತ ಅದರಲ್ಲಿ ಒಂದು ..ಪಿಟೀಲು ವಾದಕಿಯಾಗಿದ್ದ ತಮ್ಮ ಅಮ್ಮನಿಂದ ಬಂದ ಬಳುವಳಿ . ಸ್ವಯಂ ಮೃದಂಗ ವಾದಕರು . ಪುತ್ತೂರಿನ ಪ್ರಮುಖ ಸಂಗೀತ ಪೋಷಕರು . ಬೇರೆ ಯಾರೇ ಅಯೋಜಕರು ಇದ್ದರೂ ಸಮಯಕ್ಕೆ ಸರಿಯಾಗಿ ಇವರು ಕಾರ್ಯಕ್ರಮಕ್ಕೆ ಹಾಜರ್ . ಈಗ ಇವರ ಪ್ರತಿಭಾವಂತೆ ಮೊಮ್ಮಗಳು ಶ್ರೀಮತಿ ಶ್ರೇಯಾ ಕೊಳತ್ತಾಯ ಉದಯೋನ್ಮುಖ ಹಾಡು ಗಾರ್ತಿ .
ಸಾಹಿತ್ಯ ಓದು ಮತ್ತು ಸಂಘಟನೆ ಇವರ ಇನ್ನೊಂದು ಪ್ರವೃತ್ತಿ . ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಇದರ ಮಾಜಿ ರೂವಾರಿ , ಪುತ್ತೂರು ಕನ್ನಡ ಸಂಘದ ಕ್ರಿಯಾಶೀಲ ಮುಖಂಡ . ಪ್ರಸಿದ್ಧ ಪುತ್ತೂರು ದಸರಾ ದ ಆಯೋಜನೆಯಲ್ಲಿ ಶಿವರಾಮ ಕಾರಂತಹರ ಕಾಲದಿಂದ ಇಂದಿನ ವರೆಗೂ ಸಕ್ರಿಯ .
ಇದಕ್ಕೆಲ್ಲಾ ಕಳಶವಿಟ್ಟಂತೆ ಪುತ್ತೂರು ರಾಮಕೃಷ್ಣ ಸೇವಾಶ್ರಮ (ಅನಾಥಾಲಯ ) ದ ಕೆಲಸಗಳಲ್ಲಿ ಈ ಇಳಿ ವಯಸ್ಸಿನಲ್ಲೂ ಸಕ್ರಿಯ .
ಈ ಎಲ್ಲಾ ಕಾರ್ಯಗಳಿಗೆ ಬೆನ್ನೆಲುಬಾಗಿದ್ದ ಪತ್ನಿ ಶ್ರೀಮತಿ ಜಯಲಕ್ಷ್ಮಿ ಹೋದ ವರ್ಷ ತೀರಿ ಕೊಂಡರು . ಅವರ ಅನುಪಸ್ಥಿತಿ ನಿನ್ನೆ ಕಾಡುತ್ತಿತ್ತು .
ಮನೆಯಲ್ಲಿ ಓದು (ಈಗ ಸ್ವಲ್ಪ ಕಷ್ಟ ಆಗುತ್ತದೆ ಎಂದರು ),ಸಂಗೀತ ಆಲಿಸುವಿಕೆ ಯೊಡನೆ ಹೂ ಗಿಡಗಳ ಆರೈಕೆ ಈಗ ಈ ಹಿರಿಯರ ಕಲಾಪ . ನಿನ್ನೆ ತಮ್ಮ ,ಈಗಲೂ ಸ್ಪಷ್ಟ ವಾಗಿರುವ ಮಾತಿನಲ್ಲಿ , ಸಮಯವನ್ನು ಅರ್ಥ ಪೂರ್ಣವಾಗಿ ಕಳೆಯಿರಿ ಎಂದು ಕಿವಿ ಮಾತು ಹೇಳಿದರು .
ಹಿರಿಯರು ನೂರ್ಕಾಲ ಅರೋಗ್ಯ ದಿಂದ ಬಾಳಲಿ . ಸುಸಂಸ್ಕೃತ ಸುಂದರ ಮತ್ತು ಮಾನವೀಯ ನಡವಳಿಕೆಗೆ ಯುವ ಜನಾಂಗ ಮಾದರಿಯಾಗಿ ನೋಡ ಬಹುದಾದ ಇಂತಹ ಹಿರಿಯ ಚೇತನಗಳು ನಮ್ಮೊಂದಿಗೆ ಇರಬೇಕಾದ ಅವಶ್ಯಕತೆ ಬಹಳ ಇದೆ .
ನಿನ್ನೆಯ ಕಾರ್ಯಕ್ರಮ ದಲ್ಲಿ ಮೊದಲಿಗೆ ನಾದ ಯಾನ ದಲ್ಲಿ ಪ್ರಸಿದ್ಧ ಕಲಾವಿದ ಶ್ರೀ ಆರ್ ಕೆ ಶ್ರೀರಾಮ ಕುಮಾರ್ ಮತ್ತು ತಂಡದಿಂದ ಸುಶ್ರಾವ್ಯ ವಯೊಲಿನ್ ವಾದನ ,ನಂತರ ಭಾವಯಾನದಲ್ಲಿ ಡಾ ವರದ ರಾಜ ಚಂದ್ರಗಿರಿ ಯವರ ಸಮಯೋಚಿತ ಭಾಷಣ ಮತ್ತು ಸುಬ್ರಹ್ಮಣ್ಯ ಕೊಳತ್ತಾಯ ರ ಹಿತ ನುಡಿ ಇದ್ದವು . ಬಹುವಚಮ್ ನ ಡಾ ಶ್ರೀಶ ಕುಮಾರ್ ಮತ್ತು ಐ ಕೆ ಬೊಳುವಾರ್ ತಂಡ ದ ಉತ್ಸಾಹ ದ ತೊಡಗಿಸಿ ಕೊಳ್ಳುವಿಕೆ ವಿಶೇಷ ಗಮನ ಸೆಳೆಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ