ಹಿಂದೆ ನೀವು ಎಂದೂ ನಗದೇ ಇರುವ ರಾಜಕುಮಾರಿಯನ್ನು ನಗಿಸಿದವರಿಗೆ ಅವಳನ್ನು ಮತ್ತು ಅರ್ಧ ರಾಜ್ಯವನ್ನು ಕೊಡಲಾಗುವದು ಎಂದು ಅರಂಭವಾಗುವ ಕತೆ ಕೇಳಿರಬಹುದು .
ನನ್ನ ಅಮ್ಮ (ಅಬ್ಬೆ )ಯಾವತ್ತೂ ಮನ ಬಿಚ್ಚಿ ನಕ್ಕದ್ದಿಲ್ಲ . ಹೆಚ್ಚೆಂದರೆ ಮುಗುಳು ನಗು . ಅಲ್ಲದೆ ಮಕ್ಕಳು ಕೂಡಾ ಚೆಲ್ಲು ಚೆಲ್ಲಾಗಿ ನಗುತ್ತಿರುವುದು ಕಂಡರೆ ಇಷ್ಟವಾಗುತ್ತಿರಲಿಲ್ಲ . ಸ್ವಲ್ಪ ಗಂಭೀರ ವಾಗಿಯೇ ಇರಬೇಕು .ಇಲ್ಲದಿದ್ದರೆ "ಎಂತ ಹೆದರಿಕೆ ಇಲ್ಲದ ನಗು "ಎಂದು ಕಣ್ಣು ದೊಡ್ಡ ಮಾಡಿ ಎಚ್ಚರಿಸುವರು .
ಹೀಗಿರಲು ಒಂದು ದಿನ ಅವರ ಇಳಿ ದಿನಗಳಲ್ಲಿ ಒಂದು ದಿನ ಅವರನ್ನು ಬೆಂಗಳೂರಿಗೆ ಹಗಲು ಹೊತ್ತು ಕೆಎಸ ಆರ್ ಟಿ ಸಿ ಐರಾವತದಲ್ಲಿ ಕರೆದು ಕೊಂಡು ಹೋಗುತ್ತಿದ್ದೆ . ಬಸ್ ಖಾಲಿ ಇದ್ದು ಎದುರುಗಡೆ ವಿಡಿಯೋ ಶಬ್ದ ಕಿರಿ ಕಿರಿ ಯಿಂದ ಬೇಸತ್ತು ಅಮ್ಮನನ್ನು ಮುಂದೇ ಬಿಟ್ಟು ನಾನು ಹಿಂದುಗಡೆ ಹೋಗಿ ಕುಳಿತು ನಿದ್ದೆಗೆ ಜಾರಿದೆ .
ಚೆನ್ನರಾಯ ಪಟ್ಟಣ ಸಮೀಪ ಇರಬೇಕು .ಅಮ್ಮ ನನ್ನನ್ನು ಮಗಾ ಮಗಾ ಎಂದು ಗಟ್ಟಿಯಾಗಿ ಕರೆಯುತ್ತಿದ್ದಾರೆ .ಕಣ್ಣು ತೆರೆದು ನೋಡಲು ಅಮ್ಮನಿಗೆ ತಡೆಯಾಗದ ನಗು ,ಮನ ಬಿಚ್ಚಿ ನಗುತ್ತಿದ್ದರು . ಏನಾಯಿತು ಎಂದು ವಿಚಾರಿಸಲು ಬಸ್ ನಲ್ಲಿ ರಾಜಕುಮಾರ್ ಅವರ ಕಾಮನ ಬಿಲ್ಲು ಚಿತ್ರ ಹಾಕಿದ್ದರು; ,ಅದರಲ್ಲಿ ಅಮ್ಮನಿಲ್ಲದ ವೇಳೆ ಅಳುತ್ತಿರುವ ಮಗುವನ್ನು ಸಂತೈಸಲು ರಾಜಕುಮಾರ್ ಸೀರೆ ಉಟ್ಟುಕೊಂಡು ಸೆರಗಿನ ಒಳಗೆ ಫೀಡಿಂಗ್ ಬಾಟಲಿ ಯಿಂದ ಹಾಲು ಕೊಡುವ ದೃಶ್ಯ ಇತ್ತು . ಅದನ್ನು ನೋಡಿ ರಾಜಕುಮಾರ್ ಮಗುವೂ ಸುಮ್ಮನಾಯಿತು ;ನನ್ನ ಅಮ್ಮನೂ ಮನಸಾರೆ ನಕ್ಕರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ