ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 31, 2021

ಬೀಳ್ಕೊಡಿಗೆ

                     ಬೀಳ್ಕೊಡಿಗೆ 

ನಮ್ಮ ದೇಶದ ಹೆಚ್ಚಿನ ಸಂಸ್ಥೆಗಳಲ್ಲಿ ಒಂದು ಮ್ಯಾನೇಜ್ಮೆಂಟ್ ಲೋಪ ಇದೆ . ಸಂಸ್ಥೆಗೆ ಪ್ರಾಮಾಣಿಕವಾಗಿ ದುಡಿದು ಕಾರಣಾಂತರ ಗಳಿಂದ  ನೌಕರ ಕೆಲಸ ಬಿಡುವಾಗ ಅವನು ಸಂಸ್ಥೆಗೆ ಮಾಡಿದ ಒಳ್ಳೆಯ ಸೇವೆಯನ್ನು ಸ್ಮರಿಸಿ ಒಳ್ಳೆಯ ಮಾತುಗಳನ್ನು ಆಡಿ ,ಪುನಃ ಇಲ್ಲಿಗೆ ಬರುವುದಿದ್ದರೆ ಸ್ವಾಗತ ಎಂದು ಹೇಳುವುದು ಕೆಲವೇ ಖಾಸಗಿ ಉದ್ದಿಮೆಗಳಲ್ಲಿ ಕಂಡು ಬರುತ್ತದೆ .ಮಿಕ್ಕ ಕಡೆ ಹೋಗಿ ಬರುತ್ತೇನೆ ಎಂದು ಹೇಳುವಾಗ "ನೀನು ಇಷ್ಟು ದಿನ ಇಲ್ಲಿ ಇದ್ದದ್ದೇ ಗೊತ್ತಿರಲಿಲ್ಲ "ಎಂದು ರಾಶಿಯವರ ಕೊರವಂಜಿ ಕಾಡಿಗೆ ಹೋಗುವಾಗ ಕನ್ನಡಿಗರು ಹೇಳಿದಂತೆ ಉದ್ಘಾರ ತೆಗೆಯುವವರೇ ಹೆಚ್ಚು . ಮನಸಿನಲ್ಲಿ 'ಹಾಳಾಗಿ ಹೋಗು 'ಅನ್ನುವವರು ಕಡಿಮೆ ಇಲ್ಲ . 

ನಾನು ಇದನ್ನು ನನ್ನ ಸೇವಾ ಅವಧಿಯಲ್ಲಿ ಬಹಳ ಕಂಡಿದ್ದೇನೆ . ಹೆಚ್ಚಿನ ಕಡೆ ಸಣ್ಣ ಸಣ್ಣ ಊರುಗಳಲ್ಲಿ ನಾವು ವರ್ಗವಾಗಿ ಹೋಗುವಾಗ ಸಹೋದ್ಯೋಗಿಗಳು ಕಣ್ಣೀರು ಹಾಕಿದ್ದೂ ಇದೆ . ಇನ್ನು ಕೆಲವು ದೊಡ್ಡ ಊರುಗಳಲ್ಲಿ ನೀವು ಇಲ್ಲಿ ಬಂದು ಇದ್ದದ್ದೇ ಗೊತ್ತಿಲ್ಲ ಎಂದು ವರ್ತಿಸಿದ ಘಟನೆ ನೆನಪಿನಲ್ಲಿ ಇದೆ .ಒಂದು ರೀತಿಯಲ್ಲಿ ನಾವು ಈ ಜಗತ್ತನ್ನು ಬಿಡುವಾಗ ಕೂಡಾ ಇದಕ್ಕೆಲ್ಲಾ ಮಾನಸಿಕವಾಗಿ ಇರಲು ತಯಾರು ಎಂದು ಕೊಂಡಿದ್ದೇನೆ . 

ಒಂದು ಖಾಸಗಿ ಸಂಸ್ಥೆಯಲ್ಲಿ ನಾನು ಸಾಮಾನ್ಯ ಎರಡು ವರ್ಷ ಕೆಲಸ ಮಾಡಿದ್ದೆ . ಅಲ್ಲಿ ಯ ವಿಭಾಗ ಮುಖ್ಯಸ್ಥ ನನಗಿಂತ ವಯಸ್ಸು ,ಅನುಭವ ಎರಡರಲ್ಲಿಯೂ ಕಿರಿಯನಾದರೂ ತಾಂತ್ರಿಕ ಕಾರಣಗಳಿಂದ ಹುದ್ದೆಯಲ್ಲಿ ಇದ್ದರು .ನಾನು ವಿಭಾಗ ಸೇರಿ ಯಾವತ್ತಿನ ಸಮಯ ಪಾಲನೆ ಮತ್ತು ಕ್ರಮ ಪ್ರಕಾರ ಕೆಲಸ ಆರಂಭಿಸಿದ ಮೇಲೆ ಆತ ಬೆಳಿಗ್ಗೆ ಬಂದವರು ಮತ್ತೊಂದು ವಿಭಾಗದಲ್ಲಿ ಇದ್ದ ತನ್ನ ಬಂಧುವಿನ ಜತೆ ಸಮಯ ಕಳೆಯಲು ಹೋಗುವರು ..ಔಟ್ ಪೇಷಂಟ್ ದಿನವೂ ಒಮ್ಮೆ ಮುಖ ತೋರಿಸಿ ಹೋಗುವರು .ಕೊನೆಗೆ ನಾನು ಅಲ್ಲಿ ರಾಜೀನಾಮೆ ಕೊಟ್ಟು ಹೋಗುವಾಗ ಕೂಡಾ ಬಂದು ನನ್ನೊಡನೆ ಮಾತನಾಡುವ ಸೌಜನ್ಯ ತೋರಲಿಲ್ಲ . ಆದರೆ ನನ್ನೊಡನೆ ಇದ್ದ  ನನ್ನ ವಿದ್ಯಾರ್ಥಿಗಳು ,ಇಂಟರ್ನ್ ಗಳು ಮತ್ತು ಕಿರಿಯ ವೈದ್ಯರು ಪ್ರೀತಿಯ ಮಾತುಗಳನ್ನು ಅಡಿ ಬಿಟ್ಟು ಕೊಟ್ಟರು . 

ಇದನ್ನು ಬರೆಯಲು ಕಾರಣ ,ನಮ್ಮ ಮನೆಯಲ್ಲಿ ಅಥವಾ ಸಂಸ್ಥೆಯಲ್ಲಿ ತಮ್ಮ ಶಕ್ತ್ಯಾನುಸಾರ ಪ್ರಾಮಾಣಿಕವಾಗಿ ದುಡಿದವರು ಬಿಟ್ಟು ಹೋಗುವಾಗ ಒಳ್ಳೆಯ ನುಡಿಗಳನ್ನು ಅಡಿ ಕಳುಹಿಸುವುದು ಒಳ್ಳೆಯ ಸಂಪ್ರದಾಯ .ಅದೇ ರೀತಿ ತಮಗೆ ಕೆಲಸ ಕೊಟ್ಟು ನೆಲೆ ಒದಗಿಸಿದವರನ್ನು ಬಿಡುವಾಗ ಮುಂದಾಗಿ ಕ್ರಮ ಪ್ರಕಾರ ತಿಳಿಸಿ ಕೃತಜತೆ ಸಲ್ಲಿಸುವುದು ನೌಕರನ ಕರ್ತವ್ಯ ;ಬೇರೆ ಕಡೆ ಹಸಿರು ಹುಲ್ಲುಗಾವಲು ಕಂಡಾಗ ಪಣಾಂದೆ ಪೋ ಮಾಡ ಬಾರದು  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ