ಬಲಿಯ ಮನೆಗೆ ವಾಮನ ಬಂದಂತೆ
ಭಗೀರಥಗೆ ಶ್ರೀಗಂಗೆ ಬಂದಂತೆ
ಮುಚುಕುಂದಗೆ ಶ್ರೀಮುಕುಂದ ಬಂದಂತೆ ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ
ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ
ನಿನ್ನ ನಾಮವು ಎಲ್ಲ ನಾಲಿಗೆಯಲಿ ಬಂದು
ಸಲಹೋ ಪುರಂದರವಿಠಲ.
ಈ ಉಗಾಭೋಗ ಕೇಳಿದೊಡನೆ ನೆನಪಾಗುವುದು ಎಂ ಎಲ್ ವಿ ಅಮ್ಮ
ಇಂದು ನಾವು ಕಚೇರಿಗಳಲ್ಲಿ ಪುರಂದರ ದಾಸರ ದೇವರ ನಾಮಗಳನ್ನು ಕೇಳಿ ಸಂತೋಷ ಪಡುತ್ತೇವೆ . ಇವುಗಳನ್ನು ಸಂಗ್ರಹಿಸಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವಲ್ಲಿ ಖ್ಯಾತ ಕಲಾವಿದೆ ಎಂ ಎಲ್ ವಸಂತ ಕುಮಾರಿ ಮತ್ತು ಅವರ ತಾಯಿ ಮದ್ರಾಸ್ ಲತಾಂಗಿ ಅವರ ಕೊಡುಗೆ ಅನನ್ಯ ವಾಗಿದ್ದು ರಸಿಕರು ಸದಾ ನೆನಪಿನಲ್ಲಿ ಇಟ್ಟು ಕೊಳ್ಳ ಬೇಕಾದುದು .
ಡಾಕ್ಟರ್ ಉಡುಪಿ ರಾಮ ರಾವ್ (೧೮೭೪-೧೯೫೨)ಉಡುಪಿಯಿಂದ ಮದ್ರಾಸ್ ನಗರಕ್ಕೆ ಬಂದು ವೈದ್ಯಕೀಯ ಕಲಿತು ಅಲ್ಲಿಯೇ ವೃತ್ತ್ತಿ ಆರಂಭಿಸಿ ಜನ ಪ್ರಿಯರಾದುದಲ್ಲದೆ , ಸಾಮಾಜಿಕ ,ರಾಜಕೀಯ ಮತ್ತು ಕಲಾ ರಂಗಗಳಲ್ಲಿ ತೊಡಗಿಸಿ ಪ್ರಸಿದ್ದರಾದವರು . ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ಆಯ್ಕೆಯಾಗಿ ಅದರ ಅಧ್ಯಕ್ಷರೂ ಆಗಿದ್ದವರು . ಸಂಗೀತ ಪ್ರಿಯರು ಆಗಿದ್ದ ಇವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪಕ ರಲ್ಲಿ ಒಬ್ಬರು ಮತ್ತು ಅದರ ಅಧ್ಯಕ್ಷರೂ ಆಗಿದ್ದವರು .ಅವರ ಹೆಸರಿನ ಕಲಾ ಸಭಾಭವನ ಚೆನ್ನೈನಲ್ಲಿ ಇದೆ .
ಮದ್ರಾಸ್ ಲತಾಂಗಿ ವೈದ್ಯಕೀಯ ಸಲಹೆಗಾಗಿ ಬಂದು ಮತ್ತು ಹಾಡುಗಾರ್ತಿಯಾಗಿ ರಾಮರಾಯರಿಗೆ ಪರಿಚಿತ.ರಾಮರಾಯರ ಮನೆಗೆ ಪುರಂಧರ ದಾಸರ ಪೀಳಿಗೆಯ ಶ್ರೀ ನರಸಿಂಹ ದಾಸ ಎಂಬುವರು ಬಂದಿದ್ದು ,ಅವರ ಸಂಗ್ರಹದಲ್ಲಿ ಹಲವು ದೇವರ ನಾಮಗಳು ಇವೆಯೆಂದು ಅರಿತ ರಾಮರಾಯರು ಅವನ್ನು ಶಾಸ್ತ್ರೀಯವಾಗಿ ಸಂಗ್ರಹಿಸಲು ಲತಾಂಗಿ ಯವರಿಗೆ ಸೂಚಿಸಲು ತಾಯಿ ಮಗಳು ಸುಮಾರು ಒಂದು ವರ್ಷ ಆಗಾಗ ಅವರನ್ನು ಭೇಟಿ ಮಾಡಿ ಆ ಕಾರ್ಯವನ್ನು ಭಕ್ತಿ ಪೂರ್ವಕ ಮಾಡಿದರು .
ಆದರೆ ಅದನ್ನು ಪ್ರಕಟಿಸ ಬೇಕೆನ್ನುವಾಗ ಎರಡನೇ ಮಹಾ ಯುದ್ಧ ದ ಕಾರಣ ತಮ್ಮ ವರಮಾನ ಕಡಿತವಾಗಿ ಅವರಿಗೆ ಕಷ್ಟವಾಯಿತು . ಆಗ ಶ್ರೀ ರಂಗ ರಾಮಾನುಜ ಅಯ್ಯಂಗಾರ್ ಎಂಬ ಸಂಗೀತಜ್ಞ ಮತ್ತು ಇಂಗ್ಲಿಷ್ ಅಧ್ಯಾಪಕರು ತಮ್ಮ ಅಸ್ತಿ ಸ್ವಲ್ಪ ಮಾರಿ ಈ ಒಳ್ಳೆಯ ಕಾರ್ಯಕ್ಕೆ ಹಣ ಕೂಡಿಸಿ ಕೊಟ್ಟುದಲ್ಲದೆ ಹಿಂದೂ ಪತ್ರಿಕೆಯ ಶ್ರೀ ಕಸ್ತೂರಿ ಶ್ರೀನಿವಾಸನ್ ಅವರಿಗೆ ವಿನಂತಿ ಮಾಡಿ ಪತ್ರಿಕಾ ಕಾಗದ ಸಂಪಾದಿಸಿ ಕೊಟ್ಟು ,"ಪುರಂದರ ದಾಸ ಮಣಿಮಾಲಾ "ಎಂಬ ಅಪೂರ್ವ ಮೌಲಿಕ ಕೃತಿ ಬಿಡುಗಡೆಗೆ ಪೂರಕ ಶಕ್ತಿಯಾಗುತ್ತಾರೆ .
ಎಂ ಎಲ್ ವಸಂತ ಕುಮಾರಿ (ಮದ್ರಾಸ್ ಲತಾಂಗಿ ವಸಂತ ಕುಮಾರಿ )ದಾಸರ ಕೃತಿಗಳನ್ನು ತಮ್ಮ ಕಚೇರಿಗಳಲ್ಲಿ ಹಾಡಿ ಪ್ರಚುರ ಪಡಿಸಿದ್ದಲ್ಲದೆ ,ಗ್ರಾಮೋಫೋನ್ ರೆಕಾರ್ಡ್ ಗಳನ್ನೂ ತಂದರು . ಅವರ ಕನ್ನಡ ಸಾಹಿತ್ಯ ಶುದ್ಧ , ;ತಪ್ಪುಗಳು ಸಿಗವು .. ಅವರಿಗೆ ೧೯೭೬ ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಎಲ್ಲಾ ರೀತಿಯಲ್ಲಿಯೂ ಅವರು ಅರ್ಹರು .
ದಾಸರ ಅನೇಕ ರಚನೆಗಳನ್ನು ಉಗಾಭೋಗ ವಾಗಿ ಹಾಡಿ ಪ್ರಸಿದ್ಧ ಪಡಿಸಿದರು .
ಎಂ ಎಲ್ ವಸಂತಕುಮಾರಿ ಯವರ ಮತ್ತೊಂದು ದೊಡ್ಡ ಸಾಧನೆ ಹಲವು ಶಿಷ್ಯರನ್ನು ತಯಾರು ಮಾಡಿದ್ದು .ಅವರಲ್ಲಿ ಸುಧಾ ರಘುನಾಥನ್ , ಎ ಕನ್ಯಾಕುಮಾರಿ ,ತ್ರಿಚೂರ್ ರಾಮಚಂದ್ರನ್ ಮತ್ತು ಅವರ ಪತ್ನಿ ಚಾರುಮತಿ ಮುಂತಾದ ಘಟಾನುಘಟಿಗಳು ಇದ್ದಾರೆ . ಸ್ವಯಂ ಎಂ ಎಲ್ ವಿ ತನ್ನ ತಾಯಿ ,ತಂದೆ ಮತ್ತು ಪ್ರಖ್ಯಾತ ಗಾಯಕ ಜಿ ಏನ್ ಬಾಲಸುಬ್ರಹ್ಮಣ್ಯಂ ಅವರಲ್ಲಿ ಶಿಷ್ಯತ್ವ ಮಾಡಿದವರು .
ಎಂ ಎಲ್ ವಸಂತಕುಮಾರಿ ,ಎಂ ಎಸ ಸುಬ್ಬಲಕ್ಷ್ಮಿ ಮತ್ತು ಡಿ ಕೆ ಪಟ್ಟಮ್ಮಾಳ್ ಅವರನ್ನು ಮಹಿಳಾ ಸಂಗೀತ ತ್ರಿಮೂರ್ತಿಗಳು ಎಂದು ಕರೆಯುತ್ತಿದ್ದುದರಲ್ಲಿ ಉತ್ಪ್ರೇಕ್ಷೆ ಇಲ್ಲ ..
https://youtu.be/bAaP6y1cwag
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ