ಮೊನ್ನೆ ೨೫ . ೧೨. ೨೦೨೧ ರಂದು ಬ್ರಿಜ್ ವಿ ಲಾಲ್ ಆಸ್ಟ್ರೇಲಿಯಾ ದೇಶದಲ್ಲಿ ತೀರಿ ಕೊಂಡ ವಾರ್ತೆ ಬಂದಿದೆ . ಜಗತ್ತಿನಾದ್ಯಂತ ಭಾರತೀಯರ ವಲಸೆ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ ,ಹಲವು ಮೌಲಿಕ ಗ್ರಂಥಗಳನ್ನು ಕೊಟ್ಟವರು.
ಭಾರತೀಯರ ವಲಸೆ ಚರಿತ್ರೆಯನ್ನು ಅಧ್ಯಯನ ಮಾಡುವುದು ನನಗೆ ಬಹಳ ಇಷ್ಟ . ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಈಗಿನ ವೆಸ್ಟ್ ಇಂಡಿಸ್ ,ಮಾರಿಷಿಯಸ್ ,ಸೂರಿನಾಮೆ ಮತ್ತು ಪೂರ್ವದಲ್ಲಿ ಫಿಜಿ ದೇಶಕ್ಕೆ ಮುಖ್ಯವಾಗಿ ಈಗಿನ ಉತ್ತರ ಪ್ರದೇಶ ಮತ್ತು ದಕ್ಷಿಣದ ತಮಿಳುನಾಡು ರಾಜ್ಯಗಳಿಂದ ಸಾವಿರಾರು ಕಾರ್ಮಿಕರನ್ನು (ಇವರನ್ನು ಗಿರ್ಮಿಟ್ಟಿಯಾ ಎಂದು ಕರೆಯುತ್ತಿದ್ದರು ) ಕರೆದೊಯ್ಯಲಾಗಿತ್ತು . ಮುಂದೆ ಅವರು ಅಲ್ಲಿಯೇ ನೆಲಸಿ ಬದುಕು ಕಟ್ಟಿಕೊಂಡರು . ಇನ್ನು ಮಲೇಷ್ಯಾ ,ಸಿಂಗಾಪುರ್ ,ಆಫ್ರಿಕಾ ದ ದೇಶಗಳಲ್ಲಿ ಕೂಡಾ ಬೇರೆ ಬೇರೆ ಕಾರಣಕ್ಕೆ ಭಾರತೀಯರು ತೆರಳಿ ಅಲ್ಲಿಯೇ ನೆಲೆಸಿರುವರು . ಅವರು ತಮ್ಮೊಡನೆ ನಾಡಿನ ಸಂಸ್ಕೃತಿ ,ಉಡುಗೆ ತೊಡುಗೆ ,ಭಾಷೆ ಇತ್ಯಾದಿಗಳನ್ನೂ ಒಯ್ದು ಕಾಪಾಡಿ ಕೊಂಡು ಬಂದಿರುವರು .
ಬ್ರಿಜ್ ವಿ ಲಾಲ್ ಅವರ ಅಜ್ಜ ಈ ರೀತಿ ಫಿಜಿ ದೇಶಕ್ಕೆ ಬಂದವರು . ಬ್ರಿಜ್ ವಿ ಲಾಲ್ ಅಲ್ಲಿಯೇ ಹುಟ್ಟಿ ಬೆಳೆದು ,ಇತಿಹಾಸದಲ್ಲಿ ಉನ್ನತ ಅಧ್ಯಯನ ಮಾಡಿ ದೇಶದ ರಾಜಕಾರಣದಲ್ಲಿಯೂ ಪಾಲ್ಗೊಂಡವರು . ಫಿಜಿಯ ಮಿಲಿಟರಿ ಕ್ರಾಂತಿ ಯ ಬಳಿಕ ಅವರನ್ನು ಗಡೀಪಾರು ಮಾಡಲಾಗಿ ಆಸ್ಟೇಲಿಯಾ ದೇಶದಲ್ಲಿ ನೆಲಸಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು .ಫಿಜಿ ಭಾರತೀಯ ಜನಜೀವನ ವಸ್ತುವಾಗಿ ಉಳ್ಳ ಕಥಾ ಸಂಕಲಗಳನ್ನು ರಚಿಸಿದ್ದಾರೆ . ಇವರ ಬಹಳ ಮುಖ್ಯ ಕೊಡುಗೆ ಭಾರತೀಯ ವಲಸೆ ಚರಿತ್ರೆಯ ವಿಶ್ವಕೋಶ . ನನ್ನಲ್ಲಿ ಕೂಡಾ ಒಂದು ಪ್ರತಿ ಇದ್ದು ಒಳ್ಳೆಯ ಆಕರ ಗ್ರಂಥ . 'ಮಿಸ್ಟರ್ ತುಳಸಿಸ್ ಸ್ಟೋರ್ .ಎ ಫಿಜಿಯನ್ ಜರ್ನಿ " ಎಂಬ ಆತ್ಮಕಥೆ ಬಹಳ ಜನಪ್ರಿಯ ಕೃತಿ.
ಇವರ ಪ್ರಸಿದ್ಧ ಕಥಾ ಸಂಕಲನ "ಆನ್ ದಿ ಅದರ್ ಸೈಡ್ ಒಫ್ ಮಿಡ್ ನೈಟ್ "ನಮ್ಮ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ್ದು ಲಭ್ಯವಿದೆ . ಲಿಂಕ್ ಕೆಳಗೆ ಕೊಟ್ಟಿದೆ .
https://www.nbtindia.gov.in/books_detail__7__indian-diaspora-studies__2416__on-the-other-side-of-midnight.nbt
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ