ಬೆಂಬಲಿಗರು

ಸೋಮವಾರ, ಜನವರಿ 31, 2022

ಒಂದು ಓದು


 ಎಷ್ಟು ಸಾರಿ ಓದಿದದರೂ ಬೇಸರವಾಗದಿರುವ ಪುಸ್ತಕಗಳಲ್ಲಿ ಒಂದು ಡಿ ವಿ ಜಿ ಯವರ ನೆನಪಿನ ಚಿತ್ರಗಳು(ಜ್ಞಾಪಕ ಚಿತ್ರ ಶಾಲೆ ) . ಮನಸಿಗೆ ಉದಾಸೀನವಾದಾಗ ಮುದ ನೀಡುವ ಓದು .

ವಿಶ್ವೇಶ್ವರಯ್ಯ ನವರ ಬಗ್ಗೆ ಬರೆಯುತ್ತಾ -ಅವರ ಜೀವಿತೋದ್ದೇಶ ದ  ಮೂಲ ಸೂತ್ರವನ್ನು ಈ ರೀತಿ ವಿವರಿಸಬಹುದೆಂದು ನನಗೆ(ಡಿವಿಜಿ ಅವರಿಗೆ) ತೋರುತ್ತದೆ . 

೧.ನಮ್ಮ ದೇಶದಲ್ಲಿ ವೇದಶಾಸ್ತ್ರಪುರಾಣಗಳ ಸ್ಮರಣೆಯೂ ಉದಾಹರಣೆಯೂ ಅಡಿಗಡಿಗೂ ಕಾಣುತ್ತವೆ .ಆದರೆ ನಮ್ಮ ಸಾಮಾನ್ಯ ನಿತ್ಯ ಜೀವನದಲ್ಲಿ ಈ ವಾಕ್ಯಗಳು ಪ್ರತಿಫಲಿಸಲಿಲ್ಲ .ಜೀವನದ ಮಟ್ಟ ತೀರಾ ಹೀನವಾಗಿದೆ . ಉನ್ನತವಾದ ತತ್ವಗಳು ನೀಚವಾದ ಜೀವನಕ್ರಮ -ಇವೆರಡನ್ನೂ ಹೇಗೆ ಹೊಂದಿಸುವುದು ?

೨ಕಿವಿಯಲ್ಲಿ ಸಂತೋಷಕ್ಕಾಗಿ ದೊಡ್ಡ ಮಾತುಗಳನ್ನು ಆಡುತ್ತೇವೆ ;ಜೀವನೋಪಾಯಕ್ಕಾಗಿ ಚಿಲ್ಲರೆ ದಾರಿ ಹಿಡಿಯುತ್ತೇವೆ . 

೩.ನಮ್ಮಲ್ಲಿರುವ ಸಂಪತ್ತಿನ ದಾರಿದ್ರ್ಯ ಮಾತ್ರವಲ್ಲ ,ಪೌರುಷದ ದಾರಿದ್ರ್ಯ ಇನ್ನೂ ಹೆಚ್ಚಾಗಿದೆ . 

೪. ನಮ್ಮ ದೇಶ ಒಳ್ಳೆಯ ಸ್ಥಿತಿಗೆ ಬರ ಬೇಕಾದರೆ ನಮ್ಮ ಜನ ತಾವು ಉತ್ತಮರಾಗ ಬೇಕೆಂದು ಮನಸು ಮಾಡಬೇಕು .ಮೊದಲು ಇಹ ಜೀವನವನ್ನು ವಿಹಿತ ರೀತಿಗೆ ತರಬೇಕು .ಪರರ ವಿಚಾರವನ್ನು ಮಾತನಾಡಿಕೊಳ್ಳ್ಳುತ್ತ ಇಹವನ್ನು ಅಲ್ಲಗೆಳೆದಿದ್ದರ ಫಲ ನಮ್ಮ ಇಂದಿನ ಬಾಳು .. (ಇನ್ನೂ ೪ ವಾಕ್ಯಗಳು ಇವೆ )

ಹೀಗೆ ವಿದ್ಯೆ ,ವಿಜ್ಞಾನ ,ನೀತಿ ಮತ್ತು ಕಾರ್ಯವಂತಿಗೆ ವಿಶ್ವಶ್ವೇರಯ್ಯನವರ ದೃಷ್ಟಿಯಲ್ಲಿ ಅತ್ಯಂತ ಮುಖ್ಯ ಗುಣಗಳಾದವು . 

Bharat Ratna with a British knighthood - Why India celebrates Engineers Day  on the birth anniversary of M. Visvesvaraya | The Economic Times


ಭಾನುವಾರ, ಜನವರಿ 30, 2022

ತೆಂಗಿನ ಗರಿಯ ಕತೆ (ವ್ಯಥೆ )

 

                                               Dry Coconut Leaf Weaving For To Be Roof Stock Photo - Download Image Now -  iStock ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ . ಮರ ಸೇರಿ ಸೇರಿ ಎಲ್ಲಾ ಉತ್ಪತ್ತಿಯೂ ಜನೋಪಯೋಗಿ . ಎಳನೀರು ,ತೆಂಗಿನ ಕಾಯಿ ,ಗೆರಟೆ ,ಸೊಪ್ಪು ,ಮಡಲು ,ಕೊನೆಗೆ ಸತ್ತ ಮರ ಕೂಡಾ . 

ತೆಂಗಿನ ಮಡಲು ಅಥವಾ ಗರಿ ಉತ್ತಮ ಸ್ಟಾರ್ಟರ್  ಉರುವಲು . ಒಲೆಗೆ ಮೊದಲು ಬೆಂಕಿ ಹೆಚ್ಚಿಸಲು ,ಒಂದು ಒಲೆಯಿಂದ ಇನ್ನೊಂದು ಒಲೆಗೆ ಹಬ್ಬಿಸಲು ,ಒಲೆ ಬೆಂಕಿಯಿಂದ ಚಿಮಿಣಿ ದೀಪ  ಹಚ್ಚಲು ಮತ್ತು ವೈಸ್ ವೆರ್ಸಾ ಇದು ಬೇಕೇ ಬೇಕು . ರಾತ್ರಿ ಹೊತ್ತು ಜಾತ್ರೆಗೆ ,ಆಟಕ್ಕೆ ಹೋಗುವಾಗ ಬೆಳಕು ಸೂಟೆಯದ್ದೇ . ಇನ್ನು ತೆಂಗಿನ ಗರಿಯನ್ನು ಚೆನ್ನಾಗಿ ಹೆಣೆದು ,ಚಪ್ಪರ (ತರಕಾರಿ ಚಪ್ಪರ ಸೇರಿ )ಮಾಡಲು ಉಪಯೋಗಿಸುತ್ತಿದ್ದರು.ಕೆಲವು ಮನೆಗಳಿಗೆ ಇದರದೇ ಗೋಡೆ .ಬಜಕ್ಕರೆ ತರಲು ಮೂಡೆ ಕೂಡಾ . ಇದರ ಕಡ್ಡಿಯನ್ನು  ಕಸಬರಿಕೆ ಮಾಡಲು ,ಮತ್ತು  ದೊನ್ನೆ ಕುತ್ತಲು ,ಮಕ್ಕಳಿಗೆ ಪೆಟ್ಟು ಕೊಡಲು ,ತಾತ್ಕಾಲಿಕ ಅಳತೆ ಗೋಲು ಮಾಡಲು ಇತ್ಯಾದಿ ಉಪಯೋಗಿಸುತ್ತಿದ್ದರು . 

ಇನ್ನು ಕೊತ್ತಣಿಕೆ ನಮಗೆ ಕ್ರಿಕೆಟ್ ಆಡಲು ಬ್ಯಾಟ್ ಆಗುತ್ತಿತ್ತು ,ಒಲೆಗೆ ಹಾಕಿದರೆ ಉರುವಲು ,ಅದರ ತುದಿ  V  ಶೇಪ್ ಇರುವುದರಿಂದ ಬೇಲಿ ಇತ್ಯಾದಿ ತಾಂಗಲು  ತೂಣ ವಾಗಿಯೂ ಉಪಯೋಗಕ್ಕೆ ಬರುತ್ತಿತ್ತು 

ಬೇಲಿಯ ಹೊರಗೆ ತೆಂಗಿನ ಮಡಲು ಒಣಗಿ ಬಿದ್ದೊಡನೆ ತಾ ಮುಂದು ತಾ ಮುಂದು ಎಂದು ಬಂದು ಹೆಕ್ಕಿ ಕೊಂಡು ಹೋಗುತ್ತಿದ್ದರು .ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇದರ ಹಕ್ಕು ಸ್ಥಾಪಿಸಲು  ಜಗಳ ಆದದ್ದೂ ನೋಡಿದ್ದೇನೆ . 

 ಆದರೆ ಈಗ  ಎಲ್ಲಾ ವೃದ್ದರಂತೆ ಒಣಗಿದ ತೆಂಗಿನ ಗರಿ ಯಾರಿಗೂ ಬೇಡವಾಗಿದೆ . ಅಡಿಗೆಗೆ ಗ್ಯಾಸ್ ,ಬಿಸಿನೀರಿಗೆ ವಿದ್ಯುತ್,ರೆಡಿ ಮೇಡ್ ಕಸ ಬರಿಕೆ ಇರುವಾಗ  ಇದನ್ನು ಕೇಳುವರಿಲ್ಲ . ಈಗ ಕೆಲ ಹಿರಿಯರು ಮಕ್ಕಳಿಗೆ ತೊಂದರೆ ಯಾಕೆ ಮತ್ತು ಸಮಾಜಕ್ಕೆ ಉಪಕಾರ ಆಗಲಿ ಎಂದು ತಮ್ಮ ಶರೀರ ವೈದ್ಯಕೀಯ ಕಾಲೇಜ್ ಗಳಿಗೆ ದಾನ ಮಾಡಿದಂತೆ ಇವುಗಳಿಗೆ ಅವಕಾಶ ಇದ್ದರೆ ಕೃಷಿ ಕಾಲೇಜು ಗೆ ತೆಂಗಿನ ಮರ ದಾನ ಪತ್ರ ಬರೆಯುತಿತ್ತೊ ಏನೋ ?

ಬಾಲಂಗೋಚಿ :ತೆಂಗಿನ ಗರಿಯ ಸೂಟೆ ಸ್ತ್ರೀಲಿಂಗ .ಬಜಾರಿ ಹುಡುಗಿಯರನ್ನು ಮತ್ತು ಹೆಂಗಸರನ್ನು ಸೂಟೆ ಎಂದು ಕರೆಯುತ್ತಿದ್ದರು .

ಬುಧವಾರ, ಜನವರಿ 26, 2022

ಉಪದ್ರವಿಸುವ ಎರಡು ಗಂಭೀರವಲ್ಲದ ನೋವುಗಳು

 ಕೊಷ್ಟೋ  ಕೊಂಡ್ರಾಯಿಟಿಸ್ 

 Costochondritis - Symptoms and causes - Mayo Clinic

ಕೊಷ್ಟೋ ಎಂದರೆ ಪಕ್ಕೆಲುಬು . ನಮ್ಮ ಪಕ್ಕೆಲುಬು ಎದೆಗೂಡಿನ ಮುಖ್ಯ ಎಲುಬಿಗೆ ಸೇರುವ ಮುನ್ನ ಮೆದು ಎಲುಬು ಅಥವಾ ಮೃದ್ವಸ್ಥಿ (cartilage )ಇದೆ . ಈ ಮೃದ್ವಸ್ಥಿ ಕೆಲವೊಮ್ಮೆ ಏನಾದರೂ ಕೆಲಸ ಮಾಡುವಾಗ ಎಳೆದಂತೆ ಆಗಿ ಉರಿಯೂತದಿಂದ ನೋವು ಉಂಟಾಗುವದು . ಕೆಮ್ಮುವಾಗ ಮತ್ತು  ಕೈಗಳಿಂದ ಏನಾದರೂಏನಾದರೂ ಮಾಡುವಾಗ ನೋವು ಅಧಿಕ ಆಗುವದು . ನೋವು ಪಕ್ಕೆಲುಬು ಮುಖ್ಯ ಎಲುಬಿಗೆ ಸೇರುವ  ಜಾಗದಲ್ಲಿ ಇದ್ದು ಅಲ್ಲಿ ಮುಟ್ಟುವಾಗ  ನೋವು ಆಗುವುದು . ಎದೆ ನೋವು ಇರುವ ಕಾರಣ ಬಹಳ ಮಂದಿ ಹೆದರಿ ಬರುವದು ಸಹಜ . ಇದಕ್ಕೆ ಸಾಮಾನ್ಯ ನೋವಿನ ಮಾತ್ರೆ ಕೊಡುವೆವು . ಆದರೂ ಶರೀರದಲ್ಲಿ  ಅನವರತ ವಿಶ್ರಾಂತಿ ತೆಗೆದು ಕೊಳ್ಳದೆ ಕೆಲಸ ಮಾಡುವ ಸಂಧಿ (joint )ಯಲ್ಲಿ ಇರುವ ಕಾರಣ (ಯಾಕೆಂದರೆ ನಾವು ಬದುಕಿರುವ ವರೆಗೆ ಉಸಿರಾಡುತ್ತಿರಬೇಕಲ್ಲ )ಬಹಳ ಸಮಯ ಕಾಡುತ್ತದೆ . 

ಪ್ರೊಕ್ಟಾಲ್ಜಿಯಾ  ಫ್ಯೂಗಾಕ್ಸ್ 

 What is Proctalgia Fugax|Causes|Symptoms|Treatment|Home  Remedies|Pathophysiology

 ಪ್ರೊಕ್ಟಾಲ್ಜಿಯಾ ಎಂದರೆ ಗುದ ನಾಳದ ನೋವು . ಫ್ಯೂಗಾಕ್ಸ್ ಎಂದರೆ ಬಂದು ಹೋಗುವ (fleeting )ಎಂದು ಅರ್ಥ .ಕೆಲವೊಮ್ಮೆ ರಾತ್ರಿ ಮಲಗಿದ ಮೇಲೆ ,ಅಥವಾ ಹಗಲು ಕೂಡಾ ಇದ್ದಕ್ಕಿದ್ದಂತೆ  ಮಲದ್ವಾರದ ಒಳಗೆ ಸೆಳೆತ ಆರಂಭವಾಗುವದು . ಸೂಕ್ಷ್ಮ ಜಾಗದಲ್ಲಿ ಇರುವ ಕಾರಣ 'ಹೇಳಲಾರೆ ನಾ ತಾಳಲಾರೆ ' ಎಂಬ ಸಂಕಟ .ಮಲ ಶಂಕೆ  ಮಾಡ ಬೇಕೆಂದು ಆಗುವದು . ನೋವು ಕೆಲವು ಸೆಕೆಂಡ್ ಗಳಿಂದ ೨೦ ನಿಮಿಷಗಳ ವರೆಗೆ ಇದ್ದು ತಾನೇ ಮಾಯವಾಗುವುದು . ಸಾಮಾನ್ಯ ನೋವಿನ ಮಾತ್ರೆ ,ಕೆಲವು ಔಷಧಿಯುತ ಮುಲಾಮು ಮತ್ತು ಆಸ್ತಮಾ ಕ್ಕೆ  ಉಪಯೋಗಿಸುವ ಸಾಲ್ಬುಟಮೋಲ್ ಇನ್ಹೇಲರ್ ವೈದ್ಯರು ಸಲಹೆ ಮಾಡುವರು . ದೀರ್ಘ ಕಾಲ ಆಗಾಗ ನೋವು ಬರುತ್ತಿದ್ದರೆ ಬೇರೆ ಕಾರಣಗಳು ಇರ ಬಹುದು . ಅದನ್ನು ವೈದ್ಯಕೀಯ ಪರೀಕ್ಷೆಯಿಂದ ಕಂಡು ಕೊಳ್ಳುವರು

 

ಮಂಗಳವಾರ, ಜನವರಿ 25, 2022

ರಾಜಕುಮಾರ ನಗಿಸಿದ್ದು

ಹಿಂದೆ ನೀವು ಎಂದೂ ನಗದೇ ಇರುವ ರಾಜಕುಮಾರಿಯನ್ನು ನಗಿಸಿದವರಿಗೆ ಅವಳನ್ನು ಮತ್ತು ಅರ್ಧ ರಾಜ್ಯವನ್ನು ಕೊಡಲಾಗುವದು ಎಂದು ಅರಂಭವಾಗುವ ಕತೆ ಕೇಳಿರಬಹುದು . 

ನನ್ನ ಅಮ್ಮ (ಅಬ್ಬೆ )ಯಾವತ್ತೂ ಮನ ಬಿಚ್ಚಿ ನಕ್ಕದ್ದಿಲ್ಲ . ಹೆಚ್ಚೆಂದರೆ ಮುಗುಳು ನಗು . ಅಲ್ಲದೆ ಮಕ್ಕಳು ಕೂಡಾ ಚೆಲ್ಲು ಚೆಲ್ಲಾಗಿ ನಗುತ್ತಿರುವುದು ಕಂಡರೆ ಇಷ್ಟವಾಗುತ್ತಿರಲಿಲ್ಲ . ಸ್ವಲ್ಪ ಗಂಭೀರ ವಾಗಿಯೇ ಇರಬೇಕು .ಇಲ್ಲದಿದ್ದರೆ "ಎಂತ ಹೆದರಿಕೆ ಇಲ್ಲದ ನಗು "ಎಂದು ಕಣ್ಣು ದೊಡ್ಡ ಮಾಡಿ ಎಚ್ಚರಿಸುವರು . 

ಹೀಗಿರಲು ಒಂದು ದಿನ ಅವರ ಇಳಿ  ದಿನಗಳಲ್ಲಿ ಒಂದು ದಿನ ಅವರನ್ನು ಬೆಂಗಳೂರಿಗೆ ಹಗಲು ಹೊತ್ತು   ಕೆಎಸ ಆರ್ ಟಿ ಸಿ  ಐರಾವತದಲ್ಲಿ ಕರೆದು ಕೊಂಡು ಹೋಗುತ್ತಿದ್ದೆ . ಬಸ್ ಖಾಲಿ ಇದ್ದು ಎದುರುಗಡೆ ವಿಡಿಯೋ ಶಬ್ದ ಕಿರಿ ಕಿರಿ ಯಿಂದ ಬೇಸತ್ತು ಅಮ್ಮನನ್ನು ಮುಂದೇ ಬಿಟ್ಟು ನಾನು ಹಿಂದುಗಡೆ ಹೋಗಿ ಕುಳಿತು ನಿದ್ದೆಗೆ ಜಾರಿದೆ . 

ಚೆನ್ನರಾಯ ಪಟ್ಟಣ ಸಮೀಪ ಇರಬೇಕು .ಅಮ್ಮ ನನ್ನನ್ನು ಮಗಾ ಮಗಾ ಎಂದು ಗಟ್ಟಿಯಾಗಿ  ಕರೆಯುತ್ತಿದ್ದಾರೆ .ಕಣ್ಣು ತೆರೆದು ನೋಡಲು ಅಮ್ಮನಿಗೆ ತಡೆಯಾಗದ ನಗು ,ಮನ ಬಿಚ್ಚಿ  ನಗುತ್ತಿದ್ದರು . ಏನಾಯಿತು ಎಂದು ವಿಚಾರಿಸಲು ಬಸ್ ನಲ್ಲಿ ರಾಜಕುಮಾರ್ ಅವರ ಕಾಮನ ಬಿಲ್ಲು  ಚಿತ್ರ ಹಾಕಿದ್ದರು; ,ಅದರಲ್ಲಿ ಅಮ್ಮನಿಲ್ಲದ ವೇಳೆ ಅಳುತ್ತಿರುವ ಮಗುವನ್ನು ಸಂತೈಸಲು ರಾಜಕುಮಾರ್ ಸೀರೆ ಉಟ್ಟುಕೊಂಡು ಸೆರಗಿನ ಒಳಗೆ ಫೀಡಿಂಗ್ ಬಾಟಲಿ ಯಿಂದ ಹಾಲು ಕೊಡುವ ದೃಶ್ಯ ಇತ್ತು . ಅದನ್ನು ನೋಡಿ ರಾಜಕುಮಾರ್ ಮಗುವೂ ಸುಮ್ಮನಾಯಿತು ;ನನ್ನ ಅಮ್ಮನೂ ಮನಸಾರೆ ನಕ್ಕರು


ಬುಧವಾರ, ಜನವರಿ 19, 2022

ಪಿಟ್ಯೂಟರಿ ಗ್ರಂಥಿ

ನಾವು ನಮಗೆಲ್ಲಾ ಮೇಲಿನವ ಒಬ್ಬ ಇದ್ದಾನೆ ,ಅವನೆಲ್ಲಾ ನೋಡಿಕೊಳ್ಳುವನು ಎಂದು ಹೇಳುತ್ತೇವೆ . ನಮ್ಮ ಶರೀರ ಕ್ರಿಯೆಗಳನ್ನು ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪಾದಿಸುವ ಗ್ರಂಥಿಗಳನ್ನು ಬೇಕಾದಾಗ ಪ್ರಚೋದಿಸುವ ಮತ್ತು ಸಾಕೆಂದಾದ ಕುಗ್ಗಿಸುವ ಮೇಲಿನವ ಒಬ್ಬ ಪಿಟ್ಯೂಟರಿ ಗ್ರಂಥಿ . ಇದು ತಲೆ ಬುರುಡೆಯ ಒಳಗೆ ಮೆದುಳಿನ ಕೆಳಭಾಗದಲ್ಲಿ ಇದೆ . ಇದೂ ಕೂಡಾ ಮೆದುಳಿನ ಒಂದು ಮುಖ್ಯ ಭಾಗವಾದ ಹೈಪೋತಲಾಮಸ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು ಅದರ ಪ್ರಭಾವದಲ್ಲಿ  ಕಾರ್ಯ ನಿರ್ವಹಿಸುವುದು .

 


ಪಿಟ್ಯೂಟರಿ ಗ್ರಂಥಿ ಯಲ್ಲಿ ಮುಂದಿನ ಮತ್ತು ಹಿಂದಿನ ಭಾಗ ಎಂದು ಇದೆ .ಮುಂದಿನ ಬೆಳವಣಿಗೆ ಚೋದಕ (Growth hormone) ಎಂಬ ಸ್ವತಂತ್ರ ಹಾರ್ಮೋನ್ ಉತ್ಪತ್ತಿ ಮಾಡುವುದು .ಇದು ನಖ ಶಿಖಾಂತ ಎಲ್ಲಾ ಜೀವ ಕೋಶಗಳ ಬೆಳವಣಿಗೆ ಗೆ ಅತ್ಯಾವಶ್ಯ. ಬಾಲ್ಯದಲ್ಲಿಯೇ ಇದರ ಕೊರತೆ ಇದ್ದರೆ ಕುಬ್ಜ ರಾಗುವರು.ಇನ್ನು ಸ್ತ್ರೀಯರಲ್ಲಿ ಮೊಲೆಹಾಲು ಅಭಿವೃದ್ದಿ ಪಡಿಸುವ ಪ್ರೊ ಲ್ಯಾಕ್ಟಿನ್ ಕೂಡಾ ಇಲ್ಲಿಯೇ ತಯಾರಾಗುವುದು  .ಇದಲ್ಲದೆ ಥೈರೋಯಿಡ್ ,ಅಡ್ರೆನಲ್ ಮತ್ತು ಅಂಡಾಶಯ ,ವೃಷಣಗಳ ಹಾರ್ಮೋನ್ ಉತ್ಪಾದನೆಗೂ ಸಂದೇಶ ವಾಹಕ ಹಾರ್ಮೋನ್ ಕೂಡಾ  . ಥೈರೋಯಿಡ್ ಟೆಸ್ಟ್ ನಲ್ಲಿ   ಟಿ ಎಸ್ ಎಚ್ ಎಂದು ಇದೆ .ಎಂದರೆ ಥೈರೋಯಿಡ್ ಸ್ಟಿಮ್ಯುಲೆಟಿಂಗ್ ಹಾರ್ಮೋನ್ .ಇದು ಪಿಟ್ಯೂಟರಿ ಗ್ರಂಥಿ ಉತ್ಪಾದಿಸುವ ವಸ್ತು .ಇದು ಬಡಿದೆಬ್ಬಿಸಿದರೆ ಮಾತ್ರ ಥೈರೋಯಿಡ್ ಗ್ರಂಥಿ ಕೆಲಸ ಮಾಡುವುದು .ಥೈರೋಯಿಡ್ ಗ್ರಂಥಿಯ ಕಾಯಿಲೆಯಿಂದ ಕಾರ್ಯ ವಿಮುಖವಾದರೆ ಟಿ ಎಸ್ ಎಚ್ ಅಧಿಕ ಆಗುವುದು . ಕೆಲವೊಮ್ಮೆ ಅಪರೂಪಕ್ಕೆ ಪಿಟ್ಯೂಟರಿ ಯಲ್ಲಿಯೇ  ಕಾಯಿಲೆ ಇದ್ದರೆ ಟಿ ಎಸ್ ಎಚ್ ಕಡಿಮೆ ಇರುವುದು ,ಜತೆಗೆ ಟಿ 3 ಮತ್ತು ಟಿ 4 ಎಂಬ ಥೈರೋಯಿಡ್ ಹಾರ್ಮೋನ್ ಗಳೂ . ಪಿಟ್ಯೂಟರಿ ಕಾರ್ಯ ವಿಮುಖವಾದರೆ  ಅಡ್ರಿನಲ್ ಮತ್ತು  ವೃಷಣ ,ಅಂಡಾಶಯ ಗಳಲ್ಲಿ ಇರುವ ಗ್ರಂಥಿ ಗಳೂ ಕೆಲಸ ಮಾಡವು .

ಹಿಂದಿನ ಪಿಟ್ಯೂಟರಿ ಯಿಂದ  ಒಕ್ಸಿಟೋಸಿನ್ ಮತ್ತು ವಾಸೋಪ್ರೆಸೀನ್ ಎಂಬ ಎರಡು ಮುಖ್ಯ ಹಾರ್ಮೋನ್ ಗಳು ಉತ್ಪತ್ತಿ ಆಗುತ್ತವೆ . ಮೊದಲನೆಯದು ಹೆರಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ,ಅಲ್ಲದೆ ಮೋಹ ,ಬಾಂಧವ್ಯ ಇತ್ಯಾದಿ ತನ್ಮೂಲಕ ಸಂತತಿ ಬೆಳೆಸಿ ಕಾಪಿಡುವಂತೆ ಮಾಡಿದರೆ ,ಎರಡನೆಯದು ರಕ್ತದಲ್ಲಿ ನೀರು ಮತ್ತು ಉಪ್ಪಿನ ಸಮತೋಲ ಕಾಪಾಡುವುದು .

ಉಳಿದ ಗ್ರಂಥಿಗಳ ಕಾರ್ಯ ವೈಫಲ್ಯಕ್ಕೆ ಅವು ಉತ್ಪಾದಿಸುವ ಹಾರ್ಮೋನ್ ಗಳನ್ನು ಹೊರಗಿನಿಂದ ಕೊಟ್ಟರೆ ಸಾಕು .ಆದರೆ ಮುಖ್ಯಸ್ಥನಾದ ಪಿಟ್ಯುಟರಿ ಶಕ್ತಿ  ಹೀನ ನಾದರೆ  ಅವನ ಕೃಪಾ ಕಟಾಕ್ಷದಲ್ಲಿ ಇರುವ ಥೈರಾಯಿಡ್ ,ಅಡ್ರಿನಲ್ ,ಲೈಂಗಿಕ ಚೋದಕಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೊಡ ಬೇಕಾಗುವುದು .

ರಕ್ತದ ಸಕ್ಕರೆ ಪ್ರಮಾಣ ನಿಯಮಿತ ಗೊಳಿಸುವ ಇನ್ಸುಲಿನ್(ಮೇದೋಜೀರಕ ಗ್ರಂಥಿ )ಮತ್ತು ಅಡ್ರಿನಲ್ ಗ್ರಂಥಿ ಯಿಂದ ಉತ್ಪತ್ತಿ ಆಗುವ ಲವಣ ನಿಯಂತ್ರಕ ದಂತಹ ಕೆಲವು ಪಿಟ್ಯುಟರಿ ಯ ನಿಯಂತ್ರಣದಲ್ಲಿ ಇಲ್ಲ .