ನಮ್ಮೂರಿಗೆಲ್ಲಾ ವಿಟ್ಲವೇ ದೊಡ್ಡ ಪೇಟೆ ಆಗಿತ್ತು .ಪೆರ್ಲ,ಆನೆಕಲ್ಲು ಮತ್ತು ಈ ಕಡೆ ಬಾಯರು ವರೆಗೆ ಹಳ್ಳಿಯ ಜನ ಈ ಪಟ್ಟಣವನ್ನು ಆಶ್ರಯಿಸಿದ್ದು ,ವಿಟ್ಲ ಜಾತ್ರೆ ಸೀಮೆಯ ದೊಡ್ಡ ಜಾತ್ರೆ . ಸಮಾರಂಭಗಳಿಗೆ ನಾಯ್ಕರ ಅಂಗಡಿ ಜೀನಸು ,ಅಪ್ರಾಯರ ಅಂಗಡಿ ಬಟ್ಟೆ .
ರೋಗ ರುಜಿನ ಬಂದಾಗ ವಿಟ್ಲ ಕ್ಕೆ ಕುಪ್ಪಿ ಹಿಡಿದುಕೊಂಡು ಓಡುವುದು. ಹೈ ಸ್ಕೂಲ್ ರಸ್ತೆಯಲ್ಲಿ ಮೂರ್ತಿ ಡಾಕ್ತ್ರ ಷಾಪ್ .ಇವರು ಒಳ್ಳೆಯ ವೈದ್ಯರು ,ನಿಖರ ಡಯಗ್ನೋಸಿಸ್ ,ಆಗಿನ ಎಲ್ಲಾ ವೈದ್ಯರಂತೆ ಕೈಗೆಟುಕುವ ಫೀಸ್.ಆದರೆ ಅದನ್ನು ವಸೂಲು ಮಾಡುವುದರಲ್ಲಿ ತುಂಬಾ ಕಟ್ಟು ನಿಟ್ಟು . ಬಸ್ ಸ್ಟಾಂಡ್ ಆವರಣದಲ್ಲಿ ಡಾ ಮಂಜುನಾಥ ರೈ ಇದ್ದು ಜನಾನುರಾಗಿ ಆಗಿದ್ದರು .ಮೇಗಿನ ಪೇಟೆಯಲ್ಲಿ ಡಾ ಎಸ್ ಎನ್ ಭಟ್ ಇದ್ದು ತುಂಬಾ ಸಮಾಧಾನ ದವರು ,ಶುದ್ಧ ಆಯುರ್ವೇದ ಪ್ರಾಕ್ಟೀಸ್ . ಇವರೆಲ್ಲಾ ಮಾಡಿದ ಸೇವೆ ನಾವು ನೆನೆಸಿ ಕೊಳ್ಳ ಬೇಕು .ಆಗ ವೈದ್ಯರಲ್ಲಿ ಹೋಗುವಾಗ ಕಿಸೆಯಲ್ಲಿ ಹಣ ಇಲ್ಲದಿದ್ದರೂ ಹೆಚ್ಚಿನ ವೈದ್ಯರು ಸಾಲ ರೂಪದಲ್ಲಿ ಮದ್ದು ಕೊಡುತ್ತಿದ್ದರು .
ವಿಟ್ಲ ಪೇಟೆಯಲ್ಲಿ ಎಂ ಬಿ ಬಿ ಎಸ್ ಮಾಡಿ ಬಂದು ಮೊದಲು ಕ್ಲಿನಿಕ್ ತೆರೆದವರು ಡಾ ರಾಮ ಮೋಹನ್ ಅವರು .ಹೆಸರಿನಂತೆ ಮೋಹಕ ವ್ಯಕ್ತಿತ್ವ . ಉಕ್ಕುಡ ರಸ್ತೆಯಲ್ಲಿ ನಾಯ್ಕರ ಅಂಗಡಿ ಎದುರು ಮಾಳಿಗೆಯಲ್ಲಿ ಅವರ ಷಾಪ್ .ಇವರು ರೋಗಿಗಳ ವೈದ್ಯಕೀಯ ದಾಖಲೆ ಇಡುತ್ತಿದ್ದರು . ಬಹುಬೇಗ ಜನಾನುರಾಗಿ ಆದರು.ಮುಂದೆ ಮಂಗಳೂರು ರಸ್ತೆಗೆ ಮತ್ತು ಆಮೇಲೆ ಈಗ ಇರುವ ಹೈ ಸ್ಕೂಲ್ ರಸ್ತೆಗೆ ಅವರ ಕ್ಲಿನಿಕ್ ಸ್ಥಳಾಂತರ ಆಯಿತು . ಇವರು ತಮ್ಮ ಪದವಿ ಕೆ ಎಂ ಸಿ ಮಣಿಪಾಲ್ ನಲ್ಲಿ ಮಾಡಿ ನಂತರ ದೆಹಲಿ ಸಫ್ಧರ ಜಂಗ್ ಆಸ್ಪತ್ರೆ ಯಲ್ಲಿ ರೆಸಿಡೆನ್ಸಿ ಮಾಡಿ ಅನುಭವ ಪಡೆದಿದ್ದು ಉತ್ಸಾಹಿ ಆಗಿದ್ದರು .ಮೈನರ್ ಸರ್ಜರಿ ಮತ್ತು ಡ್ರಿಪ್ ಹಾಕುವುದು ಇತ್ಯಾದಿ ಕ್ಲಿನಿಕ್ ನಲ್ಲಿ ಆರಂಬಿಸಿದ್ದರು . ತಮ್ಮ ವ್ಯಾಪ್ತಿಗೆ ಮೀರಿದ ಕೇಸ್ ಗಳನ್ನು ಮಂಗಳೂರಿನ ಒಳ್ಳೆಯ ವೈದ್ಯರಲ್ಲಿ ಕಳುಹಿಸುವುದಲ್ಲದೆ ಅದರ ಫಾಲೋ ಅಪ್ ಮಾಡುವರು .ವಿಟ್ಲದ ತಮ್ಮ ಕ್ಲಿನಿಕ್ ಗೆ ಪುತ್ತೂರಿನಿಂದ ತಜ್ನ ವೈದ್ಯರನ್ನು ಕರೆಸಿ ಸೇವೆ ಈ ಭಾಗದ ಜನರಿಗೆ ಅವರ ಅನುಭವದ ಲಾಭ ಸಿಗುವಂತೆ ಮಾಡಿದರು .ಕೆಲ ವರ್ಷಗಳ ಹಿಂದೆ ಅವರು ತೀರಿಕೊಂಡಾಗ ಊರಿಗೆ ಊರೇ ಕಣ್ಣೀರು ಮಿಡಿಯಿತು . .ಅವರ ಕ್ಲಿನಿಕ್ ಸಹೋದರ ಮತ್ತು ಮಗ ಡಾ ಅರವಿಂದ್ ಈಗಲೂ ಮುನ್ನೆಡೆಸಿ ಕೊಂಡು ಬರುತ್ತಿರುವುದು ಸಂತೋಷ .
ಡಾ ರಾಮ ಮೋಹನ್ ಕ್ಲಿನಿಕ್ ಆರಂಬಿಸಿ ಆರು ತಿಂಗಳಲ್ಲಿ (1969ರಲ್ಲಿ ) ಡಾ ಅಲಂಗಾರು ರಾಮ ಭಟ್ ವಿಟ್ಲದಲ್ಲಿ ಪ್ರಾಕ್ಟೀಸ್ ಆರಂಬಿಸಿದರು .ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿ . ಹಳೆಯ ಪೋಸ್ಟ್ ಆಫೀಸು ಬಳಿ ಬಸ್ ಸ್ಟಾಂಡ್ ಪರಿಸರದಲ್ಲಿ ಇವರ ಷಾಪ್ .ಈಗಲೂ ಅಲ್ಲಿಯೇ ಇದೆ . ಅತೀವ ತಾಳ್ಮೆ ,ಶಾಸ್ಟ್ರೀಯ ಪರೀಕ್ಷೆ ಮತ್ತು ಚಿಕಿತ್ಸೆ ಇವರ ಹೆಗ್ಗಳಿಕೆ . ಇವರೂ ಪುತ್ತೂರು ಮಂಗಳೂರಿನ ತಜ್ಜ ವೈದ್ಯರ ಸಂಪರ್ಕ ಇತ್ತು ಕೊಂಡು ಅವರ ಸಲಹೆ ಬೇಕಾದಾಗ ಪಡೆದು ಕೊಳ್ಳುವರು .ಈಗ ಇವರಿಗೆ ಎಂಬತ್ತು ವರ್ಷ ದಾಟಿದೆ .ತಮ್ಮ ವೈದ್ಯಕೀಯ ಸೇವಾ ಹುಮ್ಮಸ್ಸಿಗೆ ಇನ್ನೂ ವಾರ್ಧಕ್ಯ ಬಂದಿಲ್ಲ . ಮಗ ಮತ್ತು ಮಗಳು ಎಂಜಿನಿಯರ್ ಗಳಾಗಿ ವಿದೇಶದಲ್ಲಿ ಇದ್ದರೆ ,ತಾವು ಮತ್ತು ಮಡದಿ ಕೃಷ್ಣವೇಣಿ ಹುಟ್ಟೂರು ಅಲಂಗಾರಿನಲ್ಲಿಯೇ ನೆಲೆಸಿದ್ದಾರೆ . ಆರಂಭದಲ್ಲಿ ರೋಗಿಗಳ ತಪಾಸಣೆ ,ಚುಚ್ಚು ಮದ್ದು ಕೊಡುವುದು ,ಬ್ಯಾಂಡೇಜ್ ಮಾಡುವುದು ಮತ್ತು ಔಷಧಿ ವಿತರಣೆ ತಾವೇ ಮಾಡುತ್ತಿದ್ದು ,ಹಳ್ಳಿಯವರ ಮತ್ತು ಪೇಟೆಯ ಬಡವರ ಕೈಗೆ ಎಟಕುವಂತೆ ಇತ್ತು ಮತ್ತು ಈಗಲೂ ಇದೆ .ಡಾ ರಾಮ ಭಟ್ ಹೀಗೆಯೇ ಆರೋಗ್ಯವಾಗಿದ್ದು ತಮ್ಮ ಸೇವೆಯನ್ನು ಮುಂದು ವರಿಸುತ್ತಿರಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ