ಬೆಂಬಲಿಗರು

ಮಂಗಳವಾರ, ಮೇ 31, 2022

ನಮ್ಮ ನಾಯಿ

 


 ಚಿತ್ರದಲ್ಲಿ ಕಾಣುವುದು ನಮ್ಮ ಬೀದಿ ನಾಯಿ ;ನನ್ನ ಮನೆಯವರು ಅದಕ್ಕೆ ಪ್ಯಾಚಿ ಎಂದು ಕರೆಯುವರು .ಅದರ ಸಂಗಾತಿ ಒಂದು ಇದೆ .ಅದರ ಹೆಸರು ಬೊಳ್ಳಿ. ಬೆಳಿಗ್ಗೆ  ಬ್ರೇಕ್ ಫಾಸ್ಟ್ ಮತ್ತು ಸಂಜೆ ಟಿಫಿನ್  ನಮ್ಮ ಮನೆಯಲ್ಲಿ . ಮಿಕ್ಕವು ಬೀದಿಯ ಬೇರೆ ಮನೆಗಳಲ್ಲಿ . 

ಪುಟಿನ್ ನಂತೆ ಕಂಡ ಕಂಡವರನ್ನೆಲ್ಲಾ  ವಿನಾ ಕಾರಣ ಆಕ್ರಮಿಸದೆ ತಮ್ಮ ಸುದ್ದಿಗೆ ಬಂದವರನ್ನು ಮಾತ್ರ ಉಕ್ರೇನ್ ನವರಂತೆ ಬಿಡುವುದಿಲ್ಲ .  ಪರಕೀಯರು (ಬಿಕ್ಷುಕರು ,ನೆಂಟರು ಇತ್ಯಾದಿ )ಮತ್ತು  ಸ್ವಕೀಯರು ಇಬ್ಬರಿಗೂ ಬಾಲ ಅಲ್ಲಾಡಿಸಿ ಸ್ವಾಗತಿಸುವುದು . ಯಾರೂ "ಯಾನತ್ತ ನಾಯಿ ಈ ದಾಯೆ ಕೊರೆಪ್ಪುನೆ ?"ಎಂದು ಪರಿಚಯ ಹೇಳುವ ಅವಶ್ಯಕತೆ ಇಲ್ಲ .ಹಾಲಿನವರು ,ಮೀನಿನವರು , ಗುಜರಿಯವರು  ಇತ್ಯಾದಿ  ಬರುವಾಗಲೂ ಸ್ವಾಗತಿಸುವ  ಇದು ಮತ್ತು ಇದರ  ಮಿತ್ರರು  ಪೇಪರ್ ನ  ಅಣ್ಣ ಬಂದಾಗ ಮಾತ್ರ ಅವರ ಬೈಕನ್ನು ಅಟ್ಟಿಸಿ ಕೊಂಡು ಹೋಗುವವು .ಅದೇ ಪೇಪರ್ ಅಣ್ಣ  ಮಾಸಾಂತ್ಯ  ಬಿಲ್ ಸಂಗ್ರಹಿಸಲು ಬಂದಾಗ ಸುದ್ದಿ ಇಲ್ಲ .

ಇದು ಯಾಕೆ ಹೀಗೆ ?ಎಂದು ತಲೆ ಕೆರೆದು ಕೊಂಡರೂ ಅರ್ಥವಾಗಿರಲ್ಲ . ಹಿಂದೆ ಒಬ್ಬರಿಗೆ ದಿನಾಲೂ ನಾಯಿ  ನಿದ್ರೆಯಯಲ್ಲಿ ಮೈಮೇಲೆ  ಹಾರಿ ಕಚ್ಚಿದಂತೆ  ಕನಸು  ಬೀಳುವ ಕಾರಣ  ತಿಳಿಯುವುದಕ್ಕಾಗಿ  ಬಲ್ಮೆ ಇಟ್ಟಾಗ  ಸಿಂಡಿಕೇಟ್ ಬ್ಯಾಂಕ್ ನಿಂದ ಕೊಂಡ  ಸಾಲ  ಮರು ಪಾವತಿ ಮಾಡದೇ ಇರುವುದು  ತಿಳಿದು ಬಂತು ಎಂಬ ಕತೆ ಕೇಳಿದ್ದೀರಿ .(ಆ ಬ್ಯಾಂಕ್ ನ ಲೋಗೋ ದಲ್ಲಿ ನಾಯಿ ಚಿತ್ರ ಇತ್ತು ).

ಕೊನೆಗೆ ಅರ್ಥವಾಯಿತು .ಪತ್ರಿಕೆ ಒಳ್ಳೆಯದಿದ್ದರೂ ಇತ್ತೀಚೆಗೆ ದಿನಾಲೂ ಕೆಟ್ಟ ಸುದ್ದಿಗಳೇ ತುಂಬಿರುವ ಕಾರಣ ಅದನ್ನು ಮುಂಜಾನೆ ಓದಿದವರ ತಲೆ ಹಾಳಾಗುವುದು .ಮೂಡ್ ನಷ್ಟವಾಗಿ  ಕೆಲವೊಮ್ಮೆ ನಾಯಿಯ ಮೇಲೆ ವಿನಾ ಕಾರಣ ಮಂದಿ ರೇಗುವರಲ್ಲದೆ ನಾಸ್ಟಾ   ಕೂಡಾ ಕಡಿಮೆ ಹಾಕುವರು .ನಾಯಿ ತುಂಬಾ ಸೂಕ್ಷ್ಮ ಗ್ರಾಹಿ ತಾನೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ