ಜನನ 22.01.1934 ನಿಧನ 02.05.2022
ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”
ಎಂಟನೇ ತರಗತಿಯಲ್ಲಿ ಇರಬೇಕು .ಬಿ ಎಂ ಶ್ರೀ ಅವರ ಮೇಲಿನ ಸಾಲುಗಳು ಇರುವ ಕವನ ದ ಅರ್ಥ ವಿಶ್ಲೇಷಣೆ ಮಾಡಲು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದ್ದರು . ನಮಗೆ ಪಾಠಕ್ಕೆ ಇಲ್ಲದ (ಪಠ್ಯ ಪುಸ್ತಕ ದಲ್ಲಿ ಇಲ್ಲದ )ಒಂದು ಕವನ ದ ಬಗ್ಗೆ ಒಂದು ಪ್ರಶ್ನೆ ಎಲ್ಲಾ ಪರೀಕ್ಷೆಯಲ್ಲಿಯೂ ಕೇಳುತ್ತಿದ್ದರು . ನನಗೆ ಆಗ ಇದರ ತಲೆ ಬುಡ ಗೊತ್ತಾಗಲಿಲ್ಲ ಮತ್ತು ಪ್ರಾಮಾಣಿಕವಾಗಿ ನನಗೆ ಅರ್ಥ ಆಗಿಲ್ಲ ಎಂದೇ ಬರೆದೆ .ನಮ್ಮ ಕನ್ನಡ ಮಾಸ್ಟ್ರು ಪ್ರಸಿದ್ಧ ರಾದ ಪಂಜಾಜೆ ಶಂಕರ ಭಟ್ ಅವರು . ನನ್ನ ಉತ್ತರ ಪತ್ರಿಕೆ ಓದಿ ,ಈ ಹೊಸ (ನವೋದಯ )ಕವಿತೆಗಳು ನನಗೂ ಸರಿ ಅರ್ಥ ವಾಗುವುದಿಲ್ಲ ಎಂದರು . ಒಂದರಿಂದ ಪಿ ಯು ಸಿ ವರೆಗೆ ನನ್ನ ಸಹಪಾಠಿ ಮಿತ್ರ ಪಂಜಾಜೆ ನರಸಿಂಹ ಭಟ್ .(ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ )ಅವರ ಚಿಕ್ಕಪ್ಪ ರಾಮ ಭಟ್ . ಅವರ ಮೂಲಕ ಮೇಲಿನ ಪದ್ಯದ ನಿಜ ಭಾವಾರ್ಥ ನನಗೆ ತಿಳಿಯಿತು .
ರಾಮ ಭಟ್ ಮೊದಲು ಶಿರಂಕಲ್ಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಆಮೇಲೆ ಪಂಡಿತ ಪರೀಕ್ಷೆ ಉತ್ತೀರ್ಣರಾಗಿ ಪುತ್ತೂರು ವಿಕ್ಟರ್ಸ್ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು . ಇವರ ವಿಶೇಷ ಎಂದರೆ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅತೀವ ಆಸಕ್ತಿ ಇದ್ದವರು .ಯಾವಾಗಲೂ ಒಳ್ಳೆಯ ಪುಸ್ತಕ ಹಿಡಿದು ಗೋಡೆಗೆ ಒರಗಿ ಕುಳಿತು ಓದಿಕೊಂಡು ಇರುತ್ತಿದ್ದರು ಎಂದು ಮಿತ್ರ ನರಸಿಂಹ ಹೇಳುವರು . ರಾಮ ಭಟ್ ಅವರ ಅಣ್ಣ ಶಂಕರ ಭಟ್ ನರಸಿಂಹನ ತಂದೆ . ನಿವೃತ್ತಿ ನಂತರ ಸುಮಾರು ಏಳು ವರ್ಷ ಬೆಂಗಳೂರಿನಲ್ಲಿ ಅಣ್ಣನ ಜತೆ ಇದ್ದು ಅವರು ತೀರಿ ಕೊಂಡ ಮೇಲೆ ಹರಹರದ ತಮ್ಮ ಮಗನ ಮನೆಗೆ ಹೋಗಿ ಇದ್ದರು . ಇವರ ಶ್ರೀಮತಿಯವರು ಎಳವೆಯಲ್ಲಿಯೇ ತೀರಿಕೊಂಡ ಆಘಾತವನ್ನು ಕೂಡು ಕುಟುಂಬ ಸಹನೀಯ ಮಾಡಿತು ಎನ್ನ ಬಹುದು . ಶಂಕರ ಭಟ್ ಮತ್ತು ರಾಮ ಭಟ್ ರಾಮ ಲಕ್ಷ್ಮಣ ರಂತೆ ಇದ್ದವರು . ಬಹಳ ಸಾರಿ ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ನಾನೂ ರಾಮ ಭಟ್ಟರೂ ಮುಖಾ ಮುಖಿ ಆದದ್ದು ಇದೆ ಎಂದರೆ ಎಷ್ಟು ಪುಸ್ತಕ ಪ್ರಿಯರು ಎಂದು ಊಹಿಸ ಬಹುದು . ಅವರ ಮನೆಗೆ ಕರ್ಮವೀರ ಮತ್ತು ಕಸ್ತೂರಿ ಆ ಕಾಲದಲ್ಲಿಯೇ ನಿಯತವಾಗಿ ಬರುತ್ತಿತ್ತು .
ರಾಮ ಭಟ್ ಅವರದು ಗೌರವ ವರ್ಣ ,ಬಹಳ ಚಂದದ ನಗು ಮುಖ ,ಅಷ್ಟೇ ಆಕರ್ಷಕ ಅವರ ಮಾತು . ಅವರ ತರಗತಿಗಳು ಎಂದರೆ ವಿದ್ಯಾರ್ಥಿಗಳಿಗೆ ಹಬ್ಬಗ ಎಂದು ಅನೇಕರು ನೆನಪಿಸಿ ಕೊಳ್ಳುತ್ತಾರೆ .
ಅಣ್ಣ ಶಂಕರ ಭಟ್ ಮೃದುಭಾಷಿ ,ಸಜ್ಜನ .ಕೃಷಿಯೊಡನೆ ಕನ್ಯಾನದಲ್ಲಿ ಕರೋಪಾಡಿ ಸೊಸೈಟಿಯ ರೇಷನ್ ಅಂಗಡಿ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದು ಆಮೇಲೆ ಅಕ್ಕಿ ಮಿಲ್ ಕೂಡಾ ನಡೆಸುತಿದ್ದರು ಎಂದು ನೆನಪು .ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು
ಬಾಲಂಗೋಚಿ :ಈಗ ವೃತ್ತಿಗಾಗಿ ಕನ್ನಡ ಆರಿಸಿ ಕೊಳ್ಳುವವರು (ಎಂಎ ಪಿ ಎಚ್ ಡಿ ಇತ್ಯಾದಿ ಇದ್ದವರೂ ಸೇರಿ )ಕೆಲಸಕ್ಕೆ ಸೇರಿದ ಮೇಲೆ ಭಾಷೆ ಮತ್ತು ಸಾಹಿತ್ಯದಲ್ಲಿ ತೋರುವ ಅನಾಸ್ಥೆ ಕಂಡಾಗ ಬೇಸರ ಆಗುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ