ಬೆಂಬಲಿಗರು

ಶುಕ್ರವಾರ, ಮೇ 13, 2022

ಹಿರಿಯರ ಮೆಚ್ಚಿಗೆ ರೂಪದ ಆಶೀರ್ವಾದ

                            




 

 ಮೊನ್ನೆ ರಾತ್ರಿ ದೆಹಲಿಯಿಂದ ಶ್ರೀಮತಿ ಕಿರಣ ಎಂಬುವರು ಫೋನ್ ಮಾಡಿ ನನ್ನ ಪುಸ್ತಕ ಓದಿ ತುಂಬಾ ಸಂತೋಷ ಪಟ್ಟುದಾಗಿ ಮತ್ತು ಹಿರಿಯರಾದ ತನ್ನ ಅತ್ತೆಯವರೂ ಅದನ್ನು ಬಹಳ ಇಷ್ಟ ಪಟ್ಟರು ಎಂದು ಹೇಳಿದರು . ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಸಹಜವಾಗಿ ನನಗೆ ಸಂತೋಷ ಆಗಿ ಅವರಿಗೆ ಧನ್ಯವಾದ ಹೇಳಿದೆ . 

ನಿನ್ನೆ ರಾತ್ರಿ ಮತ್ತೊಂದು ಆಶ್ಚರ್ಯ . ಮಂಜೇಶ್ವರದಿಂದ ಹಿರಿಯರಾದ ಡಾ ರಮಾನಂದ ಬನಾರಿ ದೂರವಾಣಿ ಮೂಲಕ ಸುಮಾರು ಹತ್ತು ನಿಮಿಷ ಅದೇ ಕಾರಣ ಮಾತನಾಡಿ ತಮ್ಮ ಸಂತಸ ಹಂಚಿ ಕೊಂಡರು . ರಮಾನಂದ ಬನಾರಿ ವಯೋ ವೃದ್ದರು ಮತ್ತು ಜ್ಞಾನ ವೃದ್ದರು .ಅವರಿಗೆ ಓದುವುದು ಈಗ ಸ್ವಲ್ಪ ತ್ರಾಸ ದಾಯಕ ,ಆದರೂ ತನಗಿಂದ ಕಿರಿಯ ವೈದ್ಯ ಏನೋ ಬರೆದಿದ್ದಾನೆ ಎಂದು ಕಷ್ಟ ಪಟ್ಟು ಓದಿ ,ಸಂತಸ ಪಟ್ಟು ನನ್ನೊಡನೆ ಹಂಚಿಕೊಂಡದ್ದು ಅವರ ದೊಡ್ಡ ಮನಸು . ಅವರ ಮೆಚ್ಚುಗೆ ನುಡಿ ನನಗೆ ಆಶೀರ್ವಾದ . 

 ನೀವು ೨೦ ನೇ ಶತಮಾನದಲ್ಲಿ ಯಕ್ಷಗಾನ ಬೆಳೆದು ಬಂದ ಚರಿತ್ರೆ ಓದಿದರೆ ಅದರಲ್ಲಿ ಬರುವ ಎರಡು ಮೇರು ವ್ಯಕ್ತಿತ್ವ ಗಳು  ಒಂದು ಕುರಿಯ ವಿಠಲ ಶಾಸ್ತ್ರಿಗಳು ಆದರೆ ಇನ್ನೊಂದು ಕೀರಿಕ್ಕಾಡ್ ಮಾಸ್ಟರ್ ವಿಷ್ಣು ಭಟ್ಟರು .೧೯೪೪ ರಲ್ಲಿ ವಿಷ್ಣು ಭಟ್ ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ರೂಪಿಸಿದ ಯಕ್ಷ  ಕಲಾವಿದರೆಷ್ಟು . ಅವರು ಮತ್ತು ವಿಠಲ ಶಾಸ್ತ್ರಿಗಳು  ಈ ಕಲೆಯ  ಎಲ್ಲಾ ಪ್ರಾಕಾರಗಳಲ್ಲಿ  ತರಬೇತು ಕೊಟ್ಟುದಲ್ಲದೇ  ,ತಮ್ಮದೇ ಛಾಪು ಮೂಡಿಸಿ ದಂತ ಕತೆಗಳಾದವರು . 

 ಡಾ ರಮಾನಂದ ಬನಾರಿ ವಿಷ್ಣು ಭಟ್ ಅವರ ಎರಡನೇ ಪುತ್ರ ..ಪ್ರತಿಭಾವಂತ .ಕ್ಯಾಲಿಕಟ್ ಮೆಡಿಕಲ್ ಕಾಲೇಜು ನಿಂದ ಎಂ ಬಿ ಬಿ ಎಸ ಪದವಿ ಗಳಿಸಿ ,ಸ್ವಲ್ಪ ಸಮಯ ಸರಕಾರಿ ಸೇವೆ . ಆಮೇಲೆ ಮಂಜೇಶ್ವರ ದಲ್ಲಿಯೇ ಆಸ್ಪತ್ರೆ ಸ್ಥಾಪಿಸಿ ಹಲವು ದಶಕಗಳ ಸೇವೆ ಸಲ್ಲಿಸಿ  ಜನಾನುರಾಗಿ . ಆದರೂ ರಕ್ತದಲ್ಲಿ ಬಂದ ಕಲಾ ಸಾಹಿತ್ಯ ಅಭಿರುಚಿ ಮತ್ತು ಪ್ರತಿಭೆ ಬಿಡುವುದೇ .ತಾವೂ ಕೂಡಾ ಮೊದಲನೇ ಸಾಲಿನ ಯಕ್ಷಗಾನ ಅರ್ಥದಾರಿ , ಹಲವು ಕೃತಿಗಳ ರಚನೆ . ಅವುಗಳಿಗೆ ವಿದ್ವಜ್ಜನರ ಮನ್ನಣೆ .

ನಾನು ಉಪ್ಪಳ ಕೆ ಎನ್ ಎಚ್ ಆಸ್ಪತ್ರೆಗೆ ಹೋಗುತ್ತಿದ್ದ ಸಮಯ  ನನ್ನ ಸಲಹೆಗಗಾಗಿ  ರೋಗಿಗಳನ್ನು ಕಳುಹಿಸುತ್ತಿದ್ದರು . ಅವರ ರೋಗ ದಾಖಲೆ ಬಹಳ ಸ್ಫುಟ .ಚಿಕಿತ್ಸಾ ವಿಧಾನ  ವೈಜ್ನಾನಿಕ . ಒಂದೆರಡು ಬಾರಿ ಅವರ ಗಣರಾಜ ಕ್ಲಿನಿಕ್ ಗೆ ಕೂಡಾ ಭೇಟಿ ನೀಡಿದ್ದೇನೆ . ಏಕ ವ್ಯಕ್ತಿ ಆಸ್ಪತ್ರೆ ಯಾದರೂ  ಒಳ ರೋಗಿ ಚಿಕಿತ್ಸೆ ,ಪ್ರಸವ ಇತ್ಯಾದಿ ನೆಡೆಸುತ್ತಿದ್ದರು ಎಂದರೆ ಅವರ ವೈದ್ಯಕೀಯ ಕ್ಷಮತೆ ಯ ಅರಿವು ಆದೀತು .  ಮಂಜೇಶ್ವರ ಗೋವಿಂದ ಪೈ ಮನೆ ಇವರ ಮನೆಗೆ ಸಮೀಪ ." ಗಿಳಿವಿಂಡು" ಅಬಿವೃದ್ದಿ ಪಡಿಸುವುದರಲ್ಲಿ  ಇವರ ಪಾತ್ರವೂ ಇದೆ .ಉಪ್ಪಳ ಐ ಎಂ ಎ ಯ ಸ್ಥಾಪಕ ಸದಸ್ಯರು ಮತ್ತು ಕ್ರಿಯಾಶೀಲ ರಾಗಿ ಭಾಗ ವಹಿಸುತ್ತಿದ್ದರು .ಇತ್ತೀಚೆಗೆ ಸಮರ್ಪಿತವಾದ ಡಾ ಪ್ರಭಾಕರ ಹೊಳ್ಳ ಅವರಿಗೆ ಗೌರವ ಗ್ರಂಥ ತಯಾರಿಯ ಮೂಲ ಪ್ರೇರಣೆ ಇವರೇ .

   ಡಾ  ಬನಾರಿ ಅವರು ಆಯುರಾರೋಗ್ಯ ದಿಂದ ಇದ್ದು ನಮ್ಮಂತವರಿಗೆ  ಮಾರ್ಗ ದರ್ಶನ ನೀಡುತ್ತಿರಲಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ