ಬೆಂಬಲಿಗರು

ಗುರುವಾರ, ಮೇ 5, 2022

ವಿವಾಹ ಒಂದು ಚಿಂತನೆ

 ಕೆಲ  ತಿಂಗಳ ಹಿಂದೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ  ಯುವ ವೈದ್ಯೆ ಕಾಣ ಸಿಕ್ಕಿದರು .ವರ್ಷ ಹಿಂದೆ ಅವರ ಮದುವೆಗೆ ಹೋಗಿದ್ದೆ .ಈ ಬಾರಿ ಸಿಕ್ಕಿದಾಗ ಲೋಕಾಭಿರಾಮವಾಗಿ ಹೇಗಿದೆ ವೈವಾಹಿಕ ಜೀವನ ?ಎಂದು ವಿಚಾರಿಸಲು ನಮ್ಮದು ದೈವೋರ್ಸ್ ಆಯಿತು ಎಂದರು .ಯಾಕಾದರೂ ಕೇಳಿದೆನೋ ಎಂದು ವಿಷಯ ಬದಲಿಸಿ ಕೆಲ ಹೊತ್ತು ಮಾತನಾಡಿದೆ . ಇದು ನನ್ನ ಮೊದಲನೇ ಅನುಭವ ಅಲ್ಲ . ಗಂಡ ಹೆಂಡತಿ ಬೇರೆ ಆಗುವ ಹಲವು ನಿದರ್ಶನ ಇತ್ತೀಚೆಗೆ ಕಂಡಿದ್ದೇನೆ . ಕೆಲವು ಮಕ್ಕಳಾದ ನಂತರ ,ಹಲವು ಅದಕ್ಕಿಂತ ಮೊದಲೇ . ಇನ್ನು ಕೆಲವು ಸಂಬಂಧಗಳು  ನಿಶ್ಚಿತಾರ್ಥ ಆದ ಮೇಲೆ ಮುರಿದಿವೆ .ಇದು ಆದರೂ ಸ್ವಲ್ಪ ಪರವಾಗಿಲ್ಲ ಎನ್ನ ಬಹುದು .

ನೀವು ಗಮನಿಸಿರುವಂತೆ ನಿಶ್ಚಿತಾರ್ಥ ,ಮದುವೆ (ಮದರಂಗಿ ಶಾಸ್ತ್ರ ಇತ್ಯಾದಿ ಸೇರಿ )ಸಮಾರಂಭಗಳು ಇತ್ತೀಚೆಗೆ ಬಹಳ ವೈಭವೇತ ವಾಗಿ ಗೌಜಿ ಗದ್ದಲಗಳಿಂದ ನಡೆಯುತ್ತವೆ .ಹೆಚ್ಚು ಕಡಿಮೆ ನಾವು ವಿದೇಶ . ಉತ್ತರ ಭಾರತ ಮತ್ತು ಹಿಂದಿ ಸಿನೆಮಾ ದಿಂದ ಬಹಳ ಸ್ಪೂರ್ತಿ ಪಡೆದಂತೆ ಕಾಣುತ್ತದೆ . ವಿವಾಹೋತ್ತರ ಸಂಬಂಧ ಹೊಂದಾಣಿಕೆ ಇಲ್ಲದೆ ಶಿಥಿಲ ವಾಗುತ್ತಿದೆ . ಜತೆಗೆ ಕಾವಲು ನಾಯಿ (ವಾಚ್ ಡಾಗ್ )ಗಳಾಗಿ ಹಿರಿಯರೂ ಮಕ್ಕಳ ಜತೆ ಇರುವುದಿಲ್ಲ . ಗಂಡು ಹೆಣ್ಣು ಇಬ್ಬರೂ ಆರ್ಥಿಕವಾಗಿ ಸ್ವಾವಲಂಬಿ ಆಗಿದ್ದು  ಒಬ್ಬರ ಹಂಗಿನಲ್ಲಿ (ಹಾಗೆ ತಿಳಿದರೆ )ಇನ್ನೊಬ್ಬರು ಇರಬೇಕಾಗಿಲ್ಲ .

 ನಮ್ಮಂತಹ ಹಳೆಯ ತಲೆಮಾರಿನವರಿಗೆ ಇದೊಂದು ಸಮಸ್ಯೆ ಎಂದು ತೋರಿದರೆ ಇಂದಿನ ಜನಾಂಗಕ್ಕೆ ಇದುವೇ ಸರಿ ಎನಿಸ ಬಹುದು .ಮೂರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಪ್ರಸಿದ್ದ ಕತೆಗಾರ ಸಾಹಿತಿ ಯವರೊಡನೆ  ಸಂವಾದ ಕಾರ್ಯಕ್ರಮದಲ್ಲಿ  ನಿವೃತ್ತ ಪ್ರಾಧ್ಯಾಪಿಕೆ ಒಬ್ಬರು ಈ ಗಂಭೀರ ಸಮಸ್ಯೆ ಬಗ್ಗೆ  ಅವರ ಅಭಿಪ್ರಾಯ ಕೇಳಲು "ಇದು ಒಳ್ಳೆಯ ಬೆಳವಣಿಗೆ ,ಪರಸ್ಪರ ಹೊಂದಾಣಿಕೆಯಿಲ್ಲದೆ ಜೀವನ ಪರ್ಯಂತ ಕೊರಗುತ್ತ ಬದುಕುವುದಕ್ಕಿಂತ ಬೇರೆ ಬೇರೆ ಆಗುವುದೇ ಲೇಸು ಅಲ್ಲವೇ ?" ಎಂದು ಉತ್ತರಿಸಿದರು .ಪ್ರಶ್ನೆ ಕೇಳಿದವರು ನಿರೀಕ್ಷಿಸಿದ್ದ ಉತ್ತರ ಅದಲ್ಲ .

ಹಿಂದೆ ಗಂಡ ಹೆಂಡಿರು ಪರಸ್ಪರ ಋಣಾತ್ಮಕ ವಿಚಾರಗಳನ್ನು ಸರಿ ತೂಗಿಸಿ ,ಆದಷ್ಟು ಹೊರಗೆ ಪ್ರಕಟ ಪಡಿಸದೆ ದಾಂಪತ್ಯ ಜೀವನ ನಡೆಸುತ್ತಿದ್ದರು .ನನ್ನ ಬಂಧು ಓರ್ವ ಹಿರಿಯ ಮಹಿಳೆಯ ಗಂಡ ಶೀಘ್ರ ಕೋಪಿ ;ಈಕೆಯಾದರೋ ಅವರಿಗೆ ಹೊಂದಿ ಕೊಂಡು ಹೋಗುವರು .ನೆಂಟರು ಇಷ್ಟರೊಡನೆ ತಮ್ಮ ಗಂಡನ ಕೋಪವನ್ನೇ ಒಂದು ಸದ್ಗುಣ ಎಂದು ಹೇಳಿಕೊಳ್ಳುವರು .(ಎಂತ ಕೋಪ ಇವರಿಗೆ ,ಸಿಟ್ಟು ಬಂದರೆ ದೂರ್ವಾಸರೇ ಇತ್ಯಾದಿ ).ಜೀವನವಿಡೀ ತಗ್ಗಿ ಬಗ್ಗಿ ನಡೆದು ಇಳಿ ವಯಸ್ಸಿನಲ್ಲಿ ಅಮೆರಿಕಾ ದಲ್ಲಿ ಇರುವ ಮಗನ ಮನೆಗೆ ಹೋಗಿ ಇದ್ದು ಬಂದರು .ಅಲ್ಲಿ ಮಗ ಹೆಂಡತಿಗೆ ಕೊಡುವ ಗೌರವ ,ಮಾಡುವ ಸಹಾಯ ,ಮತ್ತು ಹೊರಗಡೆ ಮಹಿಳೆಯ ಸ್ಥಾನ ಮಾನ ಕಂಡು ಜ್ನಾನೋದಯ ಆದಂತಾಗಿ ತಿರುಗಿ ಬಂದವರು ಸಂಪೂರ್ಣ ಬದಲಾದರು.ಹಿಂದಿನ ಬಾಕಿ ತೀರಿಸಲೋ ಎಂಬಂತೆ ಗಂಡ ಮಾಡದಿದ್ದರೂ ತಪ್ಪು ಕಂಡು ಹುಡುಕಿ ಜಗಳ ಮಾಡ ತೊಡಗಿದರು . ಇವರ ಯಜಮಾನರು ದುಷ್ಟ ರೇನೂ ಅಲ್ಲ .ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಂಡು ,ತಮ್ಮ ಮನೆಯನ್ನು ಮತ್ತು ತಮಗಿಂತಲೂ ಕಷ್ಟದಲ್ಲಿ ಇದ್ದ ಸಮೀಪದ ಬಂಧುಗಳ ಜೀವನ ವನ್ನು (ಅಗೆಲ್ಲಾ ಬಂಧು ಮಿತ್ರರಿಗೆ ಸಂಕಷ್ಟದಲ್ಲಿ ಸಹಾಯ ಮಾಡುವುದು ಧರ್ಮ ಆಗಿತ್ತು )ಒಂದು ನೆಲೆಗೆ ತರುವ ಜವಾಬ್ದಾರಿ ಹೊತ್ತಿದ್ದರು .

ಬದಲಾವಣೆ ಗಂಡತಿ ಸಂಬಂಧಕ್ಕೆ ಸೀಮಿತವಾಗಿ ಇಲ್ಲದೆ ಹೆತ್ತವರು -ಮಕ್ಕಳು ,ಗುರು- ಶಿಷ್ಯರು ,ವೈದ್ಯ- ರೋಗಿ ಮತ್ತು ವ್ಯಾಪಾರಿ ಗಿರಾಕಿಗಳ ಸಂಬಂಧದಲ್ಲಿ ಕೂಡಾ ಬಹಳ ಆಗಿದೆ .ತಮ್ಮ  ತಮ್ಮ ಧರ್ಮದ ವ್ಯಾಖ್ಯೆ ಯಿಂದ ಪರಾಂಬಿಸಿದರೆ ಇವು ಅಧಾರ್ಮಿಕ ಎಂದು ಕಾಣುತ್ತವೆಯಾದರೂ . ಧರ್ಮದ ಅಂತಃಸತ್ವದ ಆಚರಣೆಗಿಂತಲೂ ಧಾರ್ಮಿಕತೆಯ ಪ್ರದರ್ಶನ ವೇ ಮುಖ್ಯವಾಗಿ ರುವ  ಮತ್ತು   ಮರೆತು ಪರಸ್ಪರ ಕಾದಾಡಿ ಸಂಬಂದಗಳನ್ನು ಮುರಿಯಲು ಧರ್ಮಕ್ಕೆ ಸಿಗುವ ಆಯುಧ ವಾಗಿರುವಾಗ ಇವುಗಳ ಬಗ್ಗೆ ಯೋಚಿಸಲು ಸಮಯ ವ್ಯವಧಾನ ಎಲ್ಲಿ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ