ಆತ್ಮೀಯ ಅವಿಸ್ಮರಣೀಯ
ನಿನ್ನೆ ಕಯ್ಯಾರಿನ ಡಾ ಕೆ ಪಿ ಹೊಳ್ಳರ ಮೂಲ ಮನೆಯಲ್ಲಿ ಸಂಭ್ರಮ ದ ವಾತಾವರಣ . ಶ್ರದ್ಧಾ ಭಟ್ ನಾಯರ್ಪಳ್ಳ ಸಂಪಾದಿಸಿದ "ವೈದ್ಯಯೋಗಿ ಪ್ರಭಾಕರ ಹೊಳ್ಳ " ಕೃತಿ ಬಿಡುಗಡೆ . ಡಾ ಹೊಳ್ಳರ ಒಡನಾಡಿಗಳು ಬಂಧುಗಳು ಮತ್ತು ಸಹೋದ್ಯೋಗಿಗಳು ತುಂಬಿದ್ದು ಹಬ್ಬದ ವಾತಾವರಣ .
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಪ್ರಸಿದ್ಧ ವೈದ್ಯರೂ ಕೂಟ ಮಹಾ ಜಗತ್ತಿನ ಅಧ್ಯಕ್ಷರೂ ಆದ ಡಾ ಕೆ ಎಸ ಕಾರಂತರು ಡಾ ಕೆ ಪಿ ಹೊಳ್ಳರ ವೈದ್ಯಕೀಯ ಹೋರಾಟದ ಸಂಘಟನಾ ಚತುರತೆ ಮತ್ತು ನಾಯಕತ್ವ ವನ್ನು ಉದಾಹರಣೆ ಸಹಿತ ತಿಳಿಸಿದರು .
ಕಾಸರಗೋಡಿನ ಹಿರಿಯ ತಜ್ಞ ವೈದ್ಯ ಡಾ ಬಿ ಎಸ ರಾವ್ ತಮ್ಮ ವಿದ್ಯಾರ್ಥಿ ಜೀವನ ಮತ್ತು ತದನಂತರ ಡಾ ಹೊಳ್ಳರು ತಮಗೆ ನೀಡಿದ ಮಾರ್ಗದರ್ಶನ ಮತ್ತು ಮಾಡಿದ ಸಹಾಯ ಬಗ್ಗೆ ವಿವರಿಸಿ ,ಹೊಳ್ಳರ ಸಹಾಯ ಇಲ್ಲದಿದ್ದರೆ ತಾನು ಎಂ ಡಿ ಅಧ್ಯಯನ ಅರ್ಧಕ್ಕೆ ನಿಲ್ಲಿಸ ಬೇಕಾಗುತ್ತಿತ್ತು ಎಂದರು .ಹೊಳ್ಳರ ಸಹೋದರ ನಿವೃತ್ತ ನ್ಯಾಯಾಧೀಶ ಶ್ರೀ ರಾಧಾಕೃಷ್ಣ ಕಾರಂತ ಅವರು ಅಣ್ಣ ತನ್ನ ವೃತ್ತಿ ಜೀವನ ರೂಪಿಸುವುದರಲ್ಲಿ ಅಣ್ಣನ ಪಾತ್ರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಯಿಂದ ವಿವರಿಸಿದರು . ಉತ್ತರಾಖಂಡ ದಲ್ಲಿ ಸೇವೆ ಸಲ್ಲಿಸುತ್ತಿರುವ ಮಗಳು ಡಾ ಸಂಧ್ಯಾ ಅಪ್ಪನ ಶಿಸ್ತು ,ಪ್ರೋತ್ಸಾಹ ಮತ್ತು ಧನಾತ್ಮಕ ಚಿಂತನೆಗಳ ಬಗ್ಗೆ ತಿಳಿಸಿದರು .
ಅಧ್ಯಕ್ಷ ಸ್ಥಾನ ವಹಿಸಿದ್ದ ಈ ಕೃತಿ ರಚನೆಯ ಪ್ರೇರಕ ಹಿರಿಯ ವೈದ್ಯ ,ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಡಾ ರಮಾನಂದ ಬನಾರಿ ,ಹೇಗೆ ಡಾ ಹೊಳ್ಳರು ಒಬ್ಬ ವೈದ್ಯ ಯೋಗಿ ಮತ್ತು ಕರ್ಮ ಯೋಗಿ ಎಂದು ತಿಳಿಸಿದರು . ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಸ್ಥಾಪಿಸಿ ನಡೆಸಿದ ಸಾಹಸ ,ಕಾಸರಗೋಡು ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ . ವೈದ್ಯಕೀಯ ಸಂಘಟನೆ ,ಲಯನ್ಸ್ ಕ್ಲಬ್ ,ಕೂಟ ಮಹಾ ಜಗತ್ತಿನ ಕಾರ್ಯಗಳು ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯ ಇವರ ಸಾಧನೆ . ತನಗೆ ಒಬ್ಬ ಅಣ್ಣನಿದ್ದಂತೆ ಎಂದು ಮನತುಂಬಿ ಹೇಳಿದರು .
ಕೊನೆಗೆ ಡಾ ಹೊಳ್ಳರು ತಮ್ಮ ಸಾಧನೆಯಲ್ಲಿ ತಮ್ಮ ಪತ್ನಿ ಡಾ ಸುಮತಿ ಹೊಳ್ಳ ,ಮಾತಾ ಪಿತರು ,ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಬೆಂಬಲ ವನ್ನು ಸಮಯೋಚಿತವಾಗಿ ನೆನೆದರು
ನಾನು ಉಪ್ಪಳ ಬಿಟ್ಟು ಹಲ ವರ್ಷಗಳು ಆದರೂ ಬಂದವರೆಲ್ಲಾ ಆತ್ಮೀಯತೆಯಿಂದ ಗುರುತಿಸಿ ಪ್ರೀತಿಯಿಂದ ಮಾತನಾಡಿಸಿದಾಗ ಸಣ್ಣ ಊರುಗಳಲ್ಲಿ ಹೃದಯ ಮತ್ತು ಮನಸು ದೊಡ್ಡದು ಇರುತ್ತದೆ ಎಂದು ಖಾತರಿ ಆಯಿತು ..ಉಪ್ಪಳ ಕೆ ಏನ್ ಎಚ್ ಆಸ್ಪತ್ರೆಗೆ ಸಂದರ್ಶನಕ್ಕೆ ಬರುತಿದ್ದ ಕಣ್ಣಿನ ವೈದ್ಯ ಡಾ ಮಯ್ಯ ,ಹೊಸಂಗಡಿ ಯ ಡಾ ಶಿವರಾಂ ಇವರು ವರ್ಷಗಳ ಬಳಿಕ ಅದೇ ಪ್ರೀತಿಯಿಂದ ಕಂಡರು .ಎಲ್ಲಕಿಂತ ಹೆಚ್ಚು ಕೆ ಏನ್ ಎಚ್ ಆಸ್ಪತ್ರೆಯ ಶ್ರೀಮತಿ ಸುಮತಿ ಮತ್ತು ಕಸ್ತೂರಿ ಯವರ ಭೇಟಿ ನನಗೆ ನನ್ನ ಉಪ್ಪಳದ ಸೇವೆ ದಿನಗಳ ಸವಿ ನೆನಪುಗಳನ್ನು ತಂದಿತು .
ಬಾಲಂಗೋಚಿ : ಕರ್ನಾಟಕ ಗಡಿ ದಾಟಿ ಕೇರಳ ಪ್ರವೇಶಿಸಿದ ಒಡನೇ ಎಷ್ಟು ಸುಂದರ ಅಗಲ ರಸ್ತೆಗಳು ಮತ್ತು ಚಂದದ ದೊಡ್ಡದಾದ ನಾಮ ಫಲಕಗಳು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ