ಹಿಂದೆ ಹೊಸತಾಗಿ ಮದುವೆ ಆದ ಹುಡುಗಿ ಗರ್ಭಿಣಿ ಆದಾಗ ಸಂಭ್ರಮ . ಸೀಮಂತ ಆಚರಿಸಿ ತವರು ಮನೆಗೆ ಬಂದ ಆಕೆಗೆ ಅದರ ಪ್ರೀತಿಯ ಉಪಚಾರ . ಶ್ರೀಮಂತರಲ್ಲಿ ದೊಡ್ಡ ಉಪಚಾರ ಇದ್ದರೆ ಹೃದಯ ಶ್ರೀಮಂತಿಕೆ ಇದ್ದ ಉಳಿದವರಲ್ಲಿಯೂ ಶಕ್ತ್ಯಾನುಸಾರ ಅವಳ ಆಸೆಗಳನ್ನು ಪೂರೈಸುತ್ತಿದ್ದರು . ತವರು ಮನೆಯ ಅಕ್ಕ ಪಕ್ಕದ ಸ್ನೇಹಿತೆಯರೂ ಆಗಾಗ ಬಂದು ವಿಚಾರಿಸುವರು . ಸಣ್ಣ ಸಣ್ಣ ಕಾಯಿಲೆ ಬಂದಾಗ ಅನುಭವಿಗಳಾದ ಅಜ್ಜಿಯರು ,ದೊಡ್ಡಮ್ಮ ಚಿಕ್ಕಮ್ಮ ನವರ ಉಪಚಾರ ಸಾಕಾಗುತ್ತಿತ್ತು ,
ಈಗಿನ ಹಾಗೆ ತಿಂಗಳಿಗೆ ಒಮ್ಮೆ ಡಾಕ್ಟ್ರ ಅಪಪೋಯಿಂಟ್ (ಇದೂ ಕಷ್ಟದಲ್ಲಿ ಸಿಗುವುದು ),ಸ್ಕ್ಯಾನ್ ,ಪಿ ಏನ್ ಡಿ ಟಿ ಫಾರಂ ತುಂಬುವುದು ,ಆಧಾರ್ ಕಾರ್ಡ್ ಯಾವುದೂ ಇರಲಿಲ್ಲ . ಆಸ್ಪತ್ರೆಯಲ್ಲಿ ಬಂದು ಕ್ಯೂ ನಿಲ್ಲುವುದೂ ಇಲ್ಲ .
ಬಹಳ ಹಿಂದೆ ಹಳ್ಳಿಯ ಸೂಲಗಿತ್ತಿಯರೇ ಪ್ರಸವ ಶಾಸ್ತ್ರಜ್ಞೆ ಯರು ಆಗಿದ್ದರೆ ,ಆಮೇಲೆ ಸರಕಾರಿ ಮಿಡ್ ವೈಫ್ ನವರು . ಮಿಡ್ ವೈಫ್ ನಮ್ಮಂತಹ ಹಳ್ಳಿಯವರ ಬಾಯಿಯಲ್ಲಿ ಮೆಡ್ ಬಾಯ್ ಆಗಿದ್ದರು .ಅವರು ಒಂದೆರಡು ಬಾರಿ ತಮ್ಮ ಗ್ರಾಮ ಸಂಚಾರದಲ್ಲಿ ಗರ್ಭಿಣಿಯರ ಪರೀಕ್ಷೆ ಮಾಡುವರು .ಹೆರಿಗೆ ನೋವು ಆರಂಭ ಆದಾಗ ಅವರ ವಸತಿ ಗೃಹಕ್ಕೆ ಯಾರಾದರೂ ದೂತರು ಓಡಿ ಅವರ ಪೆಟ್ಟಿಗೆ ಹೊತ್ತು ಗೊಂಡು ಕರೆ ತರುವುದು .ಹಗಲು ರಾತ್ರಿ ಎನ್ನದೆ ಅವರು ಬಂದು ಪ್ರಸವ ಆದ ಮೇಲೆಯೇ ಹೋಗುವರು . ಒಳ್ಳೆಯ ಅನುಭವ ಇದ್ದ ಅವರು ತಮಗೆ ಕಷ್ಟ ಕರ ಎಂದು ತೋರಿದರೆ ಮಾತ್ರ ಆಸ್ಪತ್ರೆಗೆ ಒಯ್ಯಲು ಹೇಳುವರು . ಹಳ್ಳಿಯವರು ಅವರಿಗೆ ಪ್ರೀತಿಯಿಂದ ಶಕ್ತ್ಯಾನುಸಾರ ಕಾಣಿಕೆ ಕೊಡುವರು ;ಆದರೆ ಅದರ ಮುಖ ನೋಡಿ ಅವರು ಕೆಲಸ ಮಾಡರು .
ಹೆರಿಗೆ ಆದ ಕೂಡಲೇ ಗಂಡನ ಮನೆಗೆ ಸಕ್ಕರೆ (ಬೆಲ್ಲ ),ತೆಂಗಿನ ಕಾಯಿ ತೆಗೆದು ಕೊಂಡು ಹೋಗಿ ತಿಳಿಸುವುದು .ಅಲ್ಲಿ ಪಾಯಸ ದ ಊಟ ಮಾಡಿ ಬರುವುದು .ಈಗಿನಂತೆ ಫೋನ್ ಇಲ್ಲವಲ್ಲ . ಮಿಕ್ಕ ಬಂಧುಗಳಿಗೆ ಪೋಸ್ಟ್ ಕಾರ್ಡ್ ಹಾಕಿ ತಿಳಿಸುವುದು ..
ಮಗುವಿನ ಲಾಲನೆ ಪಾಲನೆಗೆ ಮನೆಯಲ್ಲಿ ಎಷ್ಟು ಜನ .ಅಜ್ಜ ಅಜ್ಜಿ ದೊಡ್ಡಮ್ಮ ,ಚಿಕ್ಕಮ್ಮ ,ಮಕ್ಕಳು . ಮಗು ಅತ್ತ ಒಡನೆ ಧಾವಿಸುವರು . ಅಡಿಕೆ ಹಾಳೆಯಲ್ಲಿ ಶಿಶುವಿನ ಶಯನ . ಮಗು ಬಟ್ಟೆ ಒದ್ದೆ ಮಾಡಿದ್ದರೆ ಅದನ್ನು ಕೆಳಕ್ಕೆ ಎಳೆದು ಉಂಡೆ ಮಾಡುವರು ,ಹಾಳೆಯನ್ನು ಕರ ಕರ ಮಾಡಿದರೆ ಮಗು ಅಳುವುದು ನಿಲ್ಲಿಸುವದು . ಈಗಿನಂತೆ ಸಣ್ಣ ಶೀತ ಆದಾಗ ಆಸ್ಪತ್ರೆಗೆ ಓಡುವ ಪದ್ಧತಿ ಇರಲಿಲ್ಲ . ಎಲ್ಲವೂ ಸಹಜ ಸಂಭ್ರಮ ಆಗಿತ್ತು .
ನಾನು ಇಷ್ಟೆಲ್ಲಾ ಬರೆದ ಕಾರಣ ವಿಜ್ಞಾನ ಮತ್ತು ಈಗಿನ ತಪಾಸಣೆ ಗಳಿಂದ ಉಪಯೋಗ ಇಲ್ಲ ಎಂದು ತಿಳಿಯ ಬಾರದು . ಕುಚ್ ಪಾನೇಕೆ ಲಿಯೇ ಕುಚ್ ಖೋನಾ ಹೈ .
ಬಾಲಂಗೋಚಿ : ಮೊದಲು ಫ್ರೀ ಹೋಮ್ ಡೆಲಿ ವರಿ ಇದ್ದದ್ದು ಈಗ ಕ್ಯಾಷ್ ಒನ್ ಡೆಲಿ ವರಿ ಆಗಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ