ನಾನು ಹಿಂದೆ ಕೆಲಸ ಮಾಡಿದ ಆಸ್ಪತ್ರೆಯಲ್ಲಿ ಆದ ಅನುಭವ . ಆಸ್ಪತ್ರೆಯ ಮ್ಯಾನೇಜರ್ ಬಳಿ ಒಬ್ಬರು ಏನೋ ಗುಸು ಗುಸು ಮಾತನಾಡುತ್ತಿದ್ದರು . ಅವರು ಹೋದ ಮೇಲೆ ಏನು ಕತೆ ? ಎಂದು ಮ್ಯಾನೇಜರ್ ಅವರಲ್ಲಿ ಕೇಳಿದೆ . ಸಾರ್ ಅವರ ಮಗಳಿಗೆ ವರಾನ್ವೇಷಣೆ ಮಾಡುತ್ತಿದ್ದಾರೆ . ಅವರಲ್ಲಿ ಹುಡುಗ ಹುಡುಗಿಯ ಮನೆಗೆ ಬಂದು ನೋಡುವ ಪದ್ದತಿ ಇಲ್ಲ .ಅದಕ್ಕೆ ಆಸ್ಪತ್ರೆಯ ವೈಟಿಂಗ್ ರೂಮ್ ನಲ್ಲಿ ಕೂರಿಸಿ ವರನನ್ನು ಅಲ್ಲಿಗೆ ಕರೆಸ ಬಹುದಾ ಎಂದು ಕೇಳುತ್ತಿದ್ದರು .ಇಲ್ಲಿ ಹಲವು ಮಂದಿ ಹೀಗೆ ಬರುತ್ತಾರೆ ,ನಾವೂ ಒಳ್ಳೆಯ ಕಾರ್ಯ ಎಂದು ಸುಮ್ಮನೆ ಇರುತ್ತೇವೆ ' ಎಂದರು .
ನನ್ನ ಅಜ್ಜ ಆಗಾಗ ಪುತ್ತೂರಿನಲ್ಲಿ ಸುಂದರ ರಾಯರು ಮತ್ತು ಮಂಗಳೂರಿನಲ್ಲಿ ಡಾ ಚಾರಿ ಬಳಿಗೆ ಸುಮ್ಮನೇ ಅನಾರೋಗ್ಯ ಆರೋಪಿಸಿಕೊಂಡು ಹೋಗುತ್ತಿದ್ದರು . ಈ ಹಿರಿಯರೊಂದಿಗೆ ಮಾತನಾಡುವುದೇ ಅಜ್ಜನಿಗೆ ಒಂದು ಟಾನಿಕ್ ಆಗಿತ್ತು . ಹಿಂದೆ ದೊಡ್ಡ ಪಟ್ಟಣಗಳಲ್ಲಿ ರೋಗಿಗಳು ಅಡ್ಮಿಟ್ ಆದರೆ ಬಹಳ ಮಂದಿ ಅವರನ್ನು ನೋಡಿ ಕೊಂಡ ಹಾಗೂ ಆಯಿತು ಪೇಟೆ ನೋಡಿದ ಹಾಗೂ ಆಯಿತು ಎಂದು ಬರುತ್ತಿದ್ದರು . ಈಗ ಅದಕ್ಕೆ ರೋಗಿಯ ಜತೆಗೆ ಇರುವವರ ಸಂಖ್ಯೆ ನಿರ್ಬಂಧಿಸಲು ಪಾಸ್ ವ್ಯವಸ್ಥೆ ಮಾಡಿದ್ದಾರೆ .
ಇನ್ನು ಕೆಲವರು ಕೋರ್ಟ್ ಕೇಸ್ ಹಾಜರಾತಿ ,ಕ್ರಿಮಿನಲ್ ಕೇಸ್ ಇರುವವರು ಬಂಧನ ತಪ್ಪಿಸಲು ಇಲ್ಲದ ಮತ್ತು ಇರುವ ರೋಗಗಳ ನೆಪದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವುದು ನಿಮಗೆ ತಿಳಿದಿದೆ .
ಒಂದು ಊರಿನಲ್ಲಿ ಹೋಟೆಲ್ ರೂಮ್ ಸಿಗಲಿಲ್ಲ ಎಂದು ಆಸ್ಪತ್ರೆಯಲ್ಲಿ ಬಂದು ಅಡ್ಮಿಟ್ ಆದುದನ್ನು ಕಂಡಿದ್ದೇನೆ .ಎದೆ ನೋವು ಇತ್ಯಾದಿ ಹೇಳುವಾಗ ನೂರು ಶತ ಅನಾರೋಗ್ಯ ಇಲ್ಲ ಎಂದು ಹೇಳುವುದು ವೈದ್ಯರಿಗೂ ಕಷ್ಟೆ .
ಹಲವು ಕಂಪನಿಗಳು ಆರೋಗ್ಯ ವಿಮೆ ಮಾಡಿದವರು ಒಳ ರೋಗಿಗಳಾಗಿ ಇದ್ದರೆ ಮಾತ್ರ ಚಿಕಿತ್ಸಾ ತಪಾಸಣಾ ಹಣ ಪಾವತಿ ಮಾಡುವುದು ಎಂಬ ಕಂಡಿಷನ್ ಇರುವ ಕಾರಣ ಅದಕ್ಕೆಂದೇ ಅಡ್ಮಿಟ್ ಆಗುವವರು ಇದ್ದಾರೆ.
ನಾನು ಪೆರಂಬೂರು ರೈಲ್ವೇ ಆಸ್ಪತ್ತ್ರೆಯಲ್ಲಿ ಇದ್ದಾಗ ನಡೆದ ಘಟನೆ .ರೈಲ್ವೇ ಮಂತ್ರಿ ತಮ್ಮ ಹೃದಯ ತಪಾಸಣೆಗೆ ಆಸ್ಪತ್ರೆಗೆ ಬರುವವರು ಇದ್ದರು.ಆಯಕಟ್ಟಿನ ಸ್ಥಾನದಲ್ಲಿ ಇದ್ದು ಸಚಿವರಿಗೆ ಮೊದಲು ಆಪ್ತರಾಗಿದ್ದ ಓರ್ವ ಹಿರಿಯ ಅಧಿಕಾರಿ ನಮ್ಮ ಮುಖ್ಯಸ್ಥರಲ್ಲಿ ಅಂಗಲಾಚಿ ಐ ಸಿ ಯು ನಲ್ಲಿ ದಾಖಲಾತಿ ಪಡೆದರು . ಆಮೇಲೆ ಮಂತ್ರಿಗಳ ಪಿ ಎ ಮೂಲಕ ಅವರಿಗೂ ತಿಳಿಸಿರ ಬೇಕು .ಮಂತ್ರಿಗಳು ತಮ್ಮ ಪರೀಕ್ಷೆ ಎಲ್ಲಾ ಮುಗಿದ ಮೇಲೆ ಐ ಸಿ ಯು ಗೆ ಬಂದು ಇವರನ್ನೂ ವಿಚಾರಿಸಿದರು ಅನ್ನಿ .ಮಂತ್ರಿ ಅತ್ತ ಹೋದೊಡನೆ ಈ ಆಸಾಮಿಯೂ ಡಿಶ್ಚಾರ್ಜ್ ಮಾಡಿಸಿ ಕೊಂಡು ಹೋದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ