ಬೆಂಬಲಿಗರು

ಶುಕ್ರವಾರ, ಏಪ್ರಿಲ್ 8, 2022

ನಂದರ ಬೆಟ್ಟು ದಾಸರ ನೆನಪು

 ನಂದರ ಬೆಟ್ಟು ದಾಸರ ನೆನಪು 

 

ಅಂಗ್ರಿ (ನನ್ನ ಹುಟ್ಟೂರು )ಗೆ ನೈಋತ್ಯ  ದಿಕ್ಕಿನಲ್ಲಿ ನಂದರ ಬೆಟ್ಟು  ಬೈಲು ಇದೆ . ಇಲ್ಲಿ ದಾಸ ಕುಟುಂಬಗಳು ಇದ್ದವು . ಇವರಲ್ಲಿ ಹಿರಿಯರು ಹಳ್ಳಿಯ  ಮನೆ ಮನೆ ಅಂಗಳಕ್ಕೆ' ಗೋವಿಂದಾ ಗೋವಿಂದಾ ' ಎಂದು   ಶಂಖ ಜಾಗಟೆ ಯೊಡನೆ ಬರುವರು . ಹಣೆಯಲ್ಲಿ ದೊಡ್ಡ ನಾಮ . ಒಂದು ಕೈಯಲ್ಲಿ ಜಾಗಟೆ ಮತ್ತು ಅದನ್ನು ಬಡಿಯುವ ಕೋಲು ,ಇನ್ನೊಂದು ಕೈಯ್ಯಲ್ಲಿ ಶಂಖ . ಒಂದೇ ಕೈಯಲ್ಲಿ ಜಾಗಟೆ ಮತ್ತು ಕೋಲು ಹಿಡಿದು ಲಯ ಬದ್ಧ ವಾಗಿ ಬಾರಿಸುವದು ಕಷ್ಟದ ಕೆಲಸ . ಮನೆಗಳಲ್ಲಿ ಅವರಿಗೆ ಬಾಯಾರಿಕೆ ಕೊಟ್ಟು , ಸೇರು ಭತ್ತ ಅಥವಾ ಅಕ್ಕಿ ಹಾಕುವರು . 

ಇವರ ಮನೆಯ ಇತರರು ಹಳ್ಳಿಯ ಮೊಬೈಲ್ ಫ್ಯಾನ್ಸಿ ಸ್ಟೋರ್ ಆಗಿದ್ದು ,ಪೆಟ್ಟಿಗೆಯಲ್ಲಿ ಬಳೆ ಮಣಿಸರಕು ಹೇರಿಕೊಂಡು ಮನೆ ಮನೆಗೆ ಬರುವರು . ಮನೆಯ ಹೆಂಗಸರು ಮಕ್ಕಳು ( ಮುಖ್ಯವಾಗಿ ಹುಡುಗಿಯರು )ಅವರ ಸುತ್ತ  ಸೇರುವರು . ಬಣ್ಣ ಬಣ್ಣದ ಬಳೆಗಳು ತಮಗೆ ಇಷ್ಟ ಪಟ್ಟದ್ದು ಹಾಕಿ ನೋಡುವರು .ಆಗೆಲ್ಲಾ ಗಾಜಿನ ಬಳೆಗಳೇ ಜಾಸ್ತಿ . ಎಳೆಯ ಶಿಶುಗಳಿಗೆ ಕರಿಮಣಿ ಬಳೆ 

ಇನ್ನು ಒಂದು ಮುಖ್ಯ ಐಟಂ ಪಟ್ಟೆ ನೂಲು . ಇದು ಬಹು ಉಪಯೋಗಿ ಸಾಧನ. ಮುಖ್ಯವಾಗಿ ಉಡಿದಾರಕ್ಕೆ(ದಪ್ಪಡ ಪತ್ತೆ ನೂಲು ) . ಉಳ್ಳವರು ಬೆಳ್ಳಿ ಬಂಗಾರದ ಉಡಿದಾರ  ಧರಿಸಿದರೆ ನಮಗೆಲ್ಲಾ ಇದುವೇ ಆಧಾರ (. ಉಡಿದಾರಕ್ಕೆ ಕೌಪೀನ . ). ಇನ್ನು ವಿವಾಹಿತ ಮಹಿಳೆಯರು ತಾಳಿ ಧಾರಣೆಗೆ ಇದನ್ನೇ ಉಪಯೋಗಿಸುತ್ತಿದ್ದರು . ಮದುವೆ ಮಂಗಳ ಕಾರ್ಯದಲ್ಲಿ ಕಂಕಣ ಕಟ್ಟಲು ,ಮಂತ್ರವಾದಿಗಳಿಗೆ ಮಂತ್ರಿಸಿ ಕೊಡಲು ಇದುವೇ ಬೇಕು .ಮೊನ್ನೆ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಡ್ರಿಪ್ ಹಾಕಲು ಮೊಣಕೈಯಿಂದ ಮಂತರಿಸಿದ  ನೂಲು ತೆಗೆಯಲು ಸುತಾರಂ ಒಪ್ಪಲಿಲ್ಲ . 

ಇವರ ಪೆಟ್ಟಿಗೆಯ ಇನ್ನೊಂದು ಅಮೂಲ್ಯ ವಸ್ತು ಕುಂಕುಮ .ಆಗೆಲ್ಲಾ ಈಗಿನಂತೆ ಬಿಂದಿ ಸ್ಟಿಕ್ಕರ್ ಅಂಟಿಸುವ ಪದ್ಧತಿ ಇರಲಿಲ್ಲ . ಹಣೆಗೆ ಜೇನು ಮಯಣ  ದ  ಪ್ರೈಮರ್ ಹಚ್ಚಿ ಅದರ ಮೇಲೆ  ಕುಂಕುಮದ ಬೊಟ್ಟು.ಉರುಟು ಬೊಟ್ಟು ಇಡಲು ಕೆಲವರು ಒಟ್ಟೆಮುಕ್ಕಾಲು ಉಪಯೋಗಿಸುತ್ತಿದ್ದರು .ನಮ್ಮ ಅಜ್ಜಿ ಹಣೆ ತುಂಬಾ ಕುಂಕುಮದ ಅಡ್ಡ ಪಟ್ಟಿ ಬೊಟ್ಟು ಇಡುತ್ತಿದ್ದರು .ಈಗ ನಮ್ಮಲ್ಲಿ  ಇಂತಹ ಸಿಂಧೂರ ತಿಲಕ ಇಲ್ಲ .  ಮಕ್ಕಳಿಗೆ ಲಾಲ್ ಗಂಧಾ ಎಂಬ ಕೆಂಪು ದ್ರವ ರೂಪದ ಬಣ್ಣ ಬರಲು ಆರಂಭವಾಗಿತ್ತು . 

ಹುಡುಗಿಯರ ಜಡೆಗೆ ಬಣ್ಣ ಬಣ್ಣದ ರಿಬ್ಬನ್ (ಇದನ್ನು ಟೇಪು ಎನ್ನುತ್ತಿದ್ದರು ),ಕ್ಲಿಪ್ ,ಬಾಚಣಿಕೆ ಎಲ್ಲಾ ಇವರ ಪೆಟ್ಟಿಗೆಯಲ್ಲಿ ಲಭ್ಯ . 

ನಾನು ಹಿಂದೆ ಬರೆದಿದ್ದ ಹಾಗೆ' ಲವ್ ಇನ್ ಟೋಕಿಯೋ 'ಎಂಬ ಹಿಂದಿ ಚಿತ್ರದಲ್ಲಿ ನಾಯಕಿ ತನ್ನ ಜಡೆಗೆ ಮೂರು ಬಣ್ಣದ ಪ್ಲಾಸ್ಟಿಕ್ ಗೋಲಿಗಳಿಗೆ ಎಲಾಸ್ಟಿಕ್ ದಾರ  ಕಟ್ಟಿ ಅದನ್ನು ಜಡೆ ಕೂದಲು ಬಂಧಿಸಿದ್ದು ,ಅದಕ್ಕೆ ಲವ್ ಇನ್ ಟೋಕಿಯೋ ಎಂದೇ ಹೆಸರು ಆಯಿತು .ನಮ್ಮ ಹಳ್ಳಿಯ ಹುಡುಗಿಯರು ಅದನ್ನು ಲವಿನ್ ಟಕಿ ಎಂದು ಕರೆಯುತ್ತಿದ್ದು ಬಳೆಗಾರನಲ್ಲಿ ಅದು ಇಲ್ಲವೇ ಎಂದು ವಿಚಾರಿಸುತ್ತಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ