ನರೇಂದ್ರ ರೈ ದೇರ್ಲ ಅವರ ಅದ್ವಿತೀಯ ಪುಸ್ತಕ ಓದಿ ಮುಗಿಸಿದೆ .ನನಗೆ ನಾಚಿಕೆ ಮತ್ತು ಸಂತೋಷ ಏಕ ಕಾಲಕ್ಕೆ ಆಯಿತು .ಪಕ್ಕದ ಕೆದಿಲ ಮತ್ತು ಪದ್ಮುಂಜದ ಈ ಸಾಧಕರ ಬಗ್ಗೆ ಇದುವರೆಗೆ ತಿಳಿಯದಿದ್ದ ಬಗ್ಗೆ ನಾಚಿಕೆ ,ಸಂತೋಷ ಈಗಲೂ ನಮ್ಮ ನಡುವೆ ಇಂತಹವರು ಇದ್ದಾರಲ್ಲ ಎಂದು . ದೇರ್ಲರು ಇಂತಹ ಅನೇಕ ತೆರೆ ಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯ ಮಾಡುವ ಕೆಲಸ ಮಾಡಿದ್ದಾರೆ .
ಕಡು ಬಡ ತನದಲ್ಲಿ ಹುಟ್ಟಿ ಬೆಳೆದು ,ಧರ್ಮಸ್ಥಳ ರತ್ನ ಮಾನಸದಲ್ಲಿ ಒಂದಾದ ಈ ಜೋಡಿ ಮುಂದೆ ಜತೆ ಜತೆಯಾಗಿಯೇ ಇದ್ದು ನಿಜ ಅರ್ಥದಲ್ಲಿ ತಮ್ಮ ಜೀವನವನ್ನು ಸಮಾಜಕ್ಕೆ ಮುಡಿಪಾಗಿ ಇಟ್ಟವರು . ಕುಗ್ರಾಮ ವೆಂದು ಗುರುತಿಸಲ್ಪಟ್ಟ ದಿಡುಪೆಯಲ್ಲಿ ಇವರ ಅಪ್ಪ್ರೆಂಟಿಸ್ ಶಿಪ್ .ಆಮೇಲೆ ರೋಶಿನಿ ನಿಲಯದಿಂದ ಸಮಾಜ ಸೇವೆಯಲ್ಲಿ ಪದವಿ .ಈ ಸಂಸ್ಥೆಯಲ್ಲಿ ಪದವಿ ಪಡೆದ ನನ್ನ ಪರಿಚಯದ ಹಲವರು ದೇಶದ ಸರಕಾರಿ ಮತ್ತು ಖಾಸಗಿ ಸಂಸ್ಥೆ ಗಳಲ್ಲಿ ಉನ್ನತ ಹುದ್ದೆಗೆ ತಲುಪಿದವರು ಇದ್ದಾರೆ .
ಆದರೆ ಇವರು ಆಯ್ದು ಕೊಂಡದ್ದು ಕೊಳ್ಳೇಗಾಲ ಪರಿಸರದ ಸೋಲಿಗರ ನಡುವಿನ ಬದುಕು . ಹಲ ವರ್ಷ ಅಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮರಳಿ ಮಣ್ಣಿಗೆ . ಇಲ್ಲಿ ಅವರು ಮಾಡದ ಸಮಾಜ ಮುಖಿ ಕೆಲಸಗಳು ಇಲ್ಲ . ವಯಸ್ಕರ ಶಿಕ್ಷಣ ,ಪಂಚಾಯತ್ ರಾಜ್ ಬಲ ವರ್ಧನೆ ,ಸ್ವಚ್ಛತಾ ಅಭಿಯಾನ ,ಮದ್ಯ ವರ್ಜನ ಪ್ರಚಾರ ಒಂದೇ ಎರಡೇ . ಇವರಿಗೆ ಇವರ ಕಾರ್ಯದಲ್ಲಿ ಹಲವು ಪ್ರಾಮಾಣಿಕ ಅಧಿಕಾರಿಗಳ ಸಾಥ್ .
ಇಬ್ಬರೂ ಅವಿವಾಹಿತರಾಗಿಯೇ ಉಳಿದು ,೨೪ x ೭ ಸಾರ್ವಜನಿಕ ಕಾರ್ಯ ಗಳಲ್ಲಿಯೇ ಮಗ್ನ . ಇವರ ಸೇವೆಗೆ ಜಾತಿ ಮತ ಪಂಥಗಳ ಬೇಧ ಇಲ್ಲ .ಯಾರು ಅಶಕ್ತರು ಇದ್ದಾರೆ ಅವರಿಗೆ ಇವರು ಊರುಗೋಲು ಮತ್ತು ಅವರನ್ನು ಮುಂದೆ ತಮ್ಮ ಕಾಲ ಮೇಲೆ ನಿಲ್ಲಿಸುವ ಪ್ರಯತ್ನ .
ನಾವೆಲ್ಲಾ ಜೀವನದಲ್ಲಿ ಒಂದಲ್ಲ ಒಂದು ದಿನ ಇಂತಹ ಕೆಲಸ ಮಾಡ ಬೇಕು ಎಂದು ಕನಸು ಕಂಡಿರುತ್ತೇವೆ .ಆದರೆ ಇವರು ಕನಸಿನಲಿ ಕಂಡುದನ್ನು ಹಾಗೇ ಬಿಡದೆ ಬೆನ್ನು ಹತ್ತಿದವರು . ಇಂತವರ ಸಂಖ್ಯೆ ಸಾವಿರವಾಗಲಿ .
ಇಂತಹ ಕೃತಿಗಳನ್ನು ನಾವು ಕೊಂಡು ಓದಿ ಪ್ರೋತ್ಸಾಹಿಸ ಬೇಕು . ಭಾವನಾತ್ಮಕ ಮತ್ತು ಕಪೋಲ ಕಲ್ಪಿತ ವಿಚಾರಗಳು ಮತ್ತು ಉತ್ಪ್ರೇಕ್ಷೆ ಇಲ್ಲದ ಸರಳ ಗಾಂಧಿ ಮಾರ್ಗದ ಕತೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ