ಅರ್ಥ ಶಾಸ್ತ್ರದಲ್ಲಿ ಇನ್ಕ್ಲ್ಯೂಸಿವ್ ಗ್ರೋಥ್ ,ಈಕ್ವಾಲೈಸರ್ ಇತ್ಯಾದಿ ಶಬ್ದಗಳು ಇವೆ . ಸಂದರ್ಭಕ್ಕೆ ಅನುಗುಣವಾಗಿ ಅವುಗಳಿಗೆ ಮಹತ್ವ ಇದೆ . ಅಡಿಗೆಯಲ್ಲಿ ಎಲ್ಲರನ್ನೂ ಒಳ ಗೊಳ್ಳ್ಳುವ ತಿಂಡಿ ಶ್ಯಾವಿಗೆ (ಸೇಮಗೆ ,ಸೇಮೆದ ಅಡ್ಯೆ). ಇನ್ಕ್ಲ್ಯೂಸಿವ್ ಇನ್ ಕುಕಿಂಗ್ . ಯಾಕೆಂದರೆ ಒಬ್ಬರಿಂದ ಇದನ್ನು ಮಾಡುವುದು ಕಷ್ಟ . ಒಬ್ಬರು ಉಂಡೆ ಹಾಕಿ ಶ್ಯಾವಿಗೆ ತೆಗೆದರೆ ಇನ್ನೊಬ್ಬರು ಒತ್ತುವುದು . ಹಿಂದೆ ಇದ್ದ ಕುದುರೆ ಮುಟ್ಟು ಒತ್ತಲು ಎರಡು ಮೂರು ಮಂದಿ ಸೇರುತ್ತಲಿದ್ದರು . ಹಿಂದೆ ನಮ್ಮಲ್ಲಿ ಅಂತಹ ಮರದ ಮುಟ್ಟು (ಮಣೆ )ಇದ್ದು ಅದರ ಮೇಲೆ ಕಬ್ಬಿಣದ ರಾಡ್ ಒಂದು ಕಡೆ ಕಿಟಿಕಿಯ ಅಡ್ಡ (ಅಥವಾ ಸರಳು )ಗೆ ಸಿಕ್ಕಿಸಿ ಕುದುರೆ ಮೇಲಿಂದ ಹಾದ ಇನ್ನೊಂದು ಬದಿಯನ್ನು ನಾವು ಮಕ್ಕಳು ಹಿಡಿದು ನೇಲುತ್ತಿದ್ದೆವು ;ಅಥವಾ ಹಿರಿಯ ಗಂಡಸರು ಒತ್ತುವರು . ಸಾಮೂಹಿಕ ಒಳಗೊಳ್ಳುವಿಕೆ .ಇನ್ನು ಗಂಡು ಹೆಣ್ಣು ಮಕ್ಕಳು ಎಲ್ಲರೂ ಸಮಾನವಾಗಿ ಸೇರಿ ಮಾಡುತ್ತಿದ್ದರಿಂದ ,ಸಮಾನತೆ ಯ ಸಂದೇಶ ಕೂಡಾ ಇರುತ್ತಿತ್ತು . ಬೇರೆ ತಿಂಡಿಗಳ ತಯಾರಿಯತ್ತ ಗಂಡಸರು ಸುಳಿಯುವುದು ಕಡಿಮೆ .
ನಾನು ಅಂದು ಕೊಳ್ಳುತ್ತಿದ್ದೆ ,ಇಷ್ಟು ಕಷ್ಟ ಪಟ್ಟು ಅಕ್ಕಿ ಉಂಡೆಯನ್ನು ಉದುರು ಉದುರು ಮಾಡಿ ತಿನ್ನುವುದು ಯಾಕೆ ?ಹಾಗೇ ತಿನ್ನ ಬಹುದಲ್ಲಾ ಎಂದು . ಏಕತಾನತೆ ತಪ್ಪಿಸುವುದು ಒಂದು ಉದ್ದೇಶ ಆದರೆ ಎಲ್ಲರೂ ಸೇರಿ ಒಂದು ತಿಂಡಿ ಹಬ್ಬ ಮಾಡುವುದು ಕೂಡಾ ಇನ್ನೊಂದು ಇರಬೇಕು .
ಶ್ಯಾವಿಗೆ ಗೆ ಯಾವಾಗಲೂ ಬಾಳೆಹಣ್ಣು ರಸಾಯನ ಇರುತ್ತಿದ್ದು ನಮಗೆ ಆಕರ್ಷಣೆ . ನಮ್ಮಲ್ಲಿ ಕೊಡಗಾಸನ ಹೂವಿನ ಸಾಂಬಾರು ಕೂಡಾ ಅದರೊಡನೆ ಇರುತ್ತಿತ್ತು . ಶ್ಯಾವಿಗೆಗೆ ನೂಕಡ್ಯೆ ಎಂದೂ ಕರೆಯುವರು .ನೆಂಟರು ಬಂದು ಬಹಳ ದಿನ ಠಿಕಾಣಿ ಮಾಡಿದರೆ ಈ ತಿಂಡಿ ಮಾಡಿದರೆ ಅವರು ಹೊರಡ ಬಹುದು ಎಂಬ ಸೂಚನೆ .
ಶ್ಯಾವಿಗೆ ಮಣೆ ಅದರಲ್ಲೂ ಅದರ ಕೊಂಡೆ ತೊಳೆಯುವುದು ಕಿರಿ ಕಿರಿ ಕೆಲಸ .ನನ್ನ ತಮ್ಮ ನಾರಾಯಣ ಸೇಮಿಗೆ ಮಣೆ ಕೊಂಡೆ ಕೂಡಾ ಸರಿಯಾಗಿ ತೊಳೆಯುವ ಡಿಶ್ ವಾಷರ್(ಪಾತ್ರೆ ತೊಳೆಯುವ ಯಂತ್ರ ) ಬಂದರೆ ಮಾತ್ರ ತೆಗೆದು ಕೊಳ್ಳ ಬಹುದು ಎಂದು ಆಗಾಗ ಹೇಳುವುದುಂಟು .
ಇಂದು ಮುಂಜಾನೆ ಸೋಫಾದಲ್ಲಿ ಕುಳಿತು ಯುಕ್ರೈನ್ ,ಶ್ರೀಲಂಕಾ ಮತ್ತು ನಮ್ಮದೇ ಹಿಜಾಬ್ ಪೆಟ್ರೋಲ್ ಧಾರಣೆ ಇತ್ಯಾದಿಗಳ ಪರಿಹಾರ ಬಗ್ಗೆ ಗಹನವಾಗಿ ಆಲೋಚಿಸುತ್ತಿರುವಾಗ ನನ್ನ ಹೆಂಡತಿ ಶಾವಿಗೆ ಒಟ್ಟಲು ಬನ್ನಿರಿ ಎಂದು ನನ್ನನ್ನು ಈ ಯಕಃಶ್ಚಿತ್ ಕಾರ್ಯಕ್ಕೆ ಕರೆದಾಗ ನಿಂತ ನೆಲಕ್ಕೆ ಇಳಿದು ಅಡಿಗೆ ಮನೆಗೆ ಹೋಗ ಬೇಕಾಯಿತು . ಆಗ ಬಂದ ಕೋಪ ತಿಂದು ಪರಿಹಾರ ಆಯಿತು ಅನ್ನಿ .
ಕೊನೆ ಚಿತ್ರದ ಮೂಲಕ್ಕೆ ಆಭಾರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ