ನಮ್ಮ ರಕ್ತದಲ್ಲಿ ಬಿಳಿ ರಕ್ತ ಕಣಗಳು ಎಂದು ಇವೆಯಷ್ಟೇ .ಅವುಗಳಲ್ಲಿ ಕೆಲವನ್ನು ಇಯೋಸಿನೋಫಿಲ್ ಎಂದು ಕರೆಯುತ್ತಾರೆ . ಬಿಳಿ ರಕ್ತ ಕಣಗಳ ೧ ರಿಂದ ೪ ಶತ ಇವುಗಳ ಸಂಖ್ಯೆ ಇರುತ್ತವೆ .
ಇವುಗಳು ನಿಗದಿದ ಪ್ರಮಾಣಕ್ಕಿಂತ ಅಧಿಕ ಇದ್ದರೆ ಇಯೋಸಿನೋಫಿಲಿಯಾ ಎಂದು ಕರೆಯುತ್ತಾರೆ . ಇಯೋಸಿನೋಫಿಲಿಯಾ ಒಂದು ಕಾಯಿಲೆ ಅಲ್ಲ .ಬೇರೆ ಬೇರೆ ಕಾಯಿಲೆಗಳಲ್ಲಿ ಪ್ರಕಟವಾಗುವ ಒಂದು ಲಕ್ಷಣ ಅಷ್ಟೇ .
ಇಯೋಸಿನೋಫಿಲ್ ಕಣಗಳು ಅಲರ್ಜಿ ಅಸ್ತಮಾ ಇರುವವರಲ್ಲಿ ಅಧಿಕ ಇರುತ್ತದೆ . ಇವರಲ್ಲಿ ಅವರ ಅಲರ್ಜಿ ಮತ್ತು ಅಸ್ತಮಾ ಕ್ಕೆ ಚಿಕಿತ್ಸೆ ಮಾಡುತ್ತೇವೆ . ಇಂತಹವರಲ್ಲಿ ಬಹಳ ಮಂದಿ ತಮ್ಮ ರಕ್ತ ಪರೀಕ್ಷೆ ಆಗಾಗ ಮಾಡಿಕೊಂಡು ಇಯೋಸಿನೋಫಿಲ್ ಜಾಸ್ತಿ ಇದೆಯಲ್ಲಾ ಎಂದು ಕೊರಗಿಕೊಂಡು ಅದಕ್ಕಾಗಿ ಆಯುರ್ವೇದ ಹೋಮಿಯೋಪತಿ ಅಲೋಪಥಿ ಎಂದು ಬದಲಾಯಿಸಿ ಬದಲಾಯಿಸಿ ಚಿಕಿತ್ಸೆ ಮಾಡಿಸುತ್ತಿರುತ್ತಾರೆ . ಇದರಿಂದ ಪ್ರಯೋಜನ ಇಲ್ಲ .
ಕರುಳ ಜಂತು ಗಳು ಕೂಡಾ ಈ ಕಣಗಳು ಜಾಸ್ತಿ ಆಗಲು ಕಾರಣ . ಟ್ರೋಪಿಕಲ್ ಇಯೋಸಿನೋಫಿಲಿಯಾ ಎಂಬ ಕಾಯಿಲೆ ಇದೆ .ಫೈಲೇರಿಯಾ ರೋಗಾಣು ಗಳಿಂದ ಉಂಟಾಗುವದು ಎಂದು ಪ್ರತೀತಿ .ಇಲ್ಲಿ ಇಯೋಸಿನೋಫಿಲ್ ೩೦ ಶೇಕಡಾ ಕ್ಕಿಂತಲೂ ಅಧಿಕ ಇರುವದು . ಇದು ಈಗ ಅಷ್ಟು ಸಾಮಾನ್ಯ ವಾಗಿ ಕಾಣಿಸಿ ಕೊಳ್ಳುತ್ತಿಲ್ಲ . ಇಲ್ಲಿ ಫೈಲೇರಿಯಾ ದ ಔಷಧಿ ಕೊಡುವರು .
ಮೊನ್ನೆ ಒಬ್ಬ ಯುವಕ ಬಂದಿದ್ದರು .ಅವರ ಇಯೋಸಿನೋಫಿಲ್ ಪ್ರಮಾಣ ೭ ಶತ ಇದ್ದದ್ದು ಕಡಿಮೆ ಆಗಿಲ್ಲಾ ಎಂದು ಹಲವು ಕಡೆ ಹೋಗಿ ಬಂದಿದ್ದರು .ಅವರಿಗೆ ಯಾವಾಗಲೂ ನೆಗಡಿ ,ಅಕ್ಷಿ ಇತ್ಯಾದಿ ಇರುತ್ತದೆ ಎಂದರು .ನಾನು ಅವರಿಗೆ 'ನಿಮಗೆ ಅಲರ್ಜಿ ಇದೆ .ಅದರಿಂದ ಇಯೋಸಿನೋಫಿಲ್ ಸ್ವಲ್ಪ ಜಾಸ್ತಿ . ಅದಕ್ಕೆ ಅಲರ್ಜಿ ಚಿಕಿತ್ಸೆ ಮಾಡಿದರೆ ಸಾಕು ಎಂದು ಸಮಾಧಾನ ಮಾಡಿದೆ .
ಬಾಲಂಗೋಚಿ : ಆಗಾಗ ಶೀತ ಆಗುವರ ಹೆಸರು ಕೇಳುತ್ತೇನೆ .ಅವರು ಮೀನಾಕ್ಷಿ ,ನಳಿನಾಕ್ಷಿ ಇತ್ಯಾದಿ ನಾಮಧೇಯ ಇದ್ದವರಾದರೆ ನಿಮ್ಮ ಹೆಸರಿನಲ್ಲಿಯೇ ಅಕ್ಷೀ ಇದೆ ಅದಕ್ಕೆ ನಿಮಗೆ ಅಕ್ಷೀ ಬರುವುದು ಎನ್ನುತ್ತೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ