ನಮ್ಮ ಮನೆಯ ಅಮೂಲ್ಯ ತೂಕದ ಅಸ್ತಿ ಕಡೆಯುವ (ಅರೆಯುವ ,ಕಡೆಪ್ಪಿ )ಕಲ್ಲು . ಇದನ್ನು ನಾವು ಪ್ರಸಿದ್ಧ ವಾದ ಸಂಟ್ಯಾರಿನ ಕಲ್ಲು ಶಿಲ್ಪಿಗಳಿಂದ ೧೯೮೭ ರಲ್ಲಿ ಕೊಂಡೆವು . ಇದು ನಮ್ಮೊಡನೆ ಪುತ್ತೂರು ,ಮಂಗಳೂರು ,ಚೆನ್ನೈ .ಪಾಲಕ್ಕಾಡ್ ,ಕೊಜ್ಹಿಕೋಡ್ ,ಉಪ್ಪಳ ,ಮಂಗಳೂರು ಸಂಚರಿಸಿ ಮರಳಿ ಪುತ್ತೂರಿಗೆ ಬಂದು ಕುಳಿತಿದೆ . ನನ್ನ ಭಾರದ ಲಗೇಜ್ ಗಳಲ್ಲಿ ಪುಸ್ತಕಗಳ ಜತೆ ಇದು .
ಅರೆಯುವ ಕಲ್ಲು ನಮ್ಮ ಹಲ್ಲಿನ ಕೆಲಸ ಹಗುರ ಮಾಡುವುದು , ಉಪ್ಪು ಮಸಾಲೆಗಳ ಸಮ ಮಿಶ್ರಣ ಮಾಡಿ ನಾಲಿಗೆಗೂ ಆಹಾರ ಹಿತಮಾಡುವದು . ಹಿಂದೆ ನಮ್ಮ ಮನೆಯಲ್ಲಿ ಇದರ ಮೂರು ಪಟ್ಟು ದೊಡ್ಡ ಕಲ್ಲು ಇದ್ದು ದಿನವಿಡೀ ಸಕ್ರಿಯವಾಗಿ ಇರುತ್ತಿತ್ತು . ಬೆಳಗಿನ ತಿಂಡಿಗೆ ಚಟ್ನಿ ,ಮಧ್ಯಾಹ್ನ ಸಾಂಬಾರು ಮತ್ತು ಸಾರಿಗೆ ತೆಂಗಿನ ಕಾಯಿ ಮತ್ತು ಮಸಾಲೆ ಅರೆಯುವುದು .ಇದಕ್ಕೆ ಸಾಮಾನ್ಯವಾಗಿ ಏಕ ಪಾತ್ರಾಭಿನಯ .ಸಂಜೆ ಮರುದಿನದ ತಿಂಡಿಗೆ ಸಾಮಾನ್ಯವಾಗಿ ಇಬ್ಬರು ಜತೆಯಾಗಿ ಮಾತನಾಡುತ್ತಾ ಕಡೆಯುವುದು .ನೆಂಟರಿಷ್ಟರು ಬಂದರೆ ಅಕ್ಕಿ ನೀರಿಗೆ ದುಪ್ಪಟ್ಟು ಬಿದ್ದು ಅರೆಯುವ ಸಮಯ ಹಿಗ್ಗುವುದು ;ಆದರೆ ಅತಿಥಿ ಸತ್ಕಾರ ಸಂಭ್ರಮ ದಲ್ಲಿ ಅದು ಬಹಳ ಹಗುರವಾಗುವದು . ಈ ಕೆಲಸದ ನಡುವೆ ಅಮ್ಮ ಹಾಲು ಕರೆಯಲೋ ,ಬೇರೆ ಯಾವುದೊ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಕರೆದು 'ಈಗ ಬರುತ್ತೇನೆ ನಾಕು ಸುತ್ತು ತಿರುಗಿಸು 'ಎಂದು ನಮಗೆ ನಿರ್ದೇಶಿಸುವರು . ಹಾಗೆ ನಮಗೆ ಅರೆಯುವ ಕೆಲಸದಲ್ಲಿಯೂ ಅಪ್ಪ್ರಯ್ನಟಿಸ್ ಶಿಪ್ ಆಗಿದೆ . ಒಂದು ಕೈಯ್ಯಲ್ಲಿ ಕಂಜಿ ತಿರುಗಿಸುವುದು ,ಇನ್ನೊಂದರಲ್ಲಿ ಕೂಡುವುದುದು ;ಹಿಟ್ಟು ಗಟ್ಟಿಯಾದಾಗ ನೀರು ಸೇರಿಸಿಕೊಳ್ಳುವದು ಒಂದು ಕಲೆ .ತಪ್ಪಿದರೆ ಕೈಯಲ್ಲಿ ಕಲೆ ಆದೀತು .
ಈಗ ಮಿಕ್ಸಿ ಗ್ರೈಂಡರ್ ಬಂದು ಇದು ಮೂಲೆಗೆ ಬಿದ್ದಿದೆ .ಇದನ್ನು ಯಾರಿಗಾದರೂ ಕೊಡುವಾ ಎಂದರೆ ನಮ್ಮ ಮನೆಯವರು ಒಪ್ಪುವುದಿಲ್ಲ .ಅದು ಒಂದು ಐಶ್ವರ್ಯ ಎಂದು ಅವರ ನಂಬಿಕೆ . ನಮ್ಮ ಮನೆ ಸಾಮಗ್ರಿಗಳ ನೋನ್ ಪ್ಲೇಯಿಂಗ್ ಕ್ಯಾಪ್ಟನ್ ಆಗಿದೆ .
ಹಿಂದೆ ಬಾವಿಯಿಂದ ನೀರು ಸೇದಿ ,ದಿನಾಲೂ ಭಾರೀ ಕಲ್ಲು ಅರೆದು ನಮ್ಮ ಅಮ್ಮಂದಿರಿಗೆ ಕಷ್ಟ ಇತ್ತಾದರೂ ,ಅವರ ಅರಿವಿಲ್ಲದೇ ಒಳ್ಳೆಯ ಮತ್ತು ನಿಯತ ವ್ಯಾಯಾಮ ದಿಂದ ಅವರ ಆರೋಗ್ಯಕ್ಕೆ ಸಹಾಯಕಾರಿ ಆಗಿತ್ತು ಎಂದು ನನ್ನ ಭಾವನೆ . ಮನಸು ದೊಡ್ಡದಾಗಿದ್ದ ಕಾರಣ ಕೆಲಸ ಹಗುರ ಎನಿಸುತ್ತಿದ್ದಿರ ಬೇಕು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ