ಕೆಲ್ಲು ಗೆಲ್ಲುವುದು ಕಷ್ಟ
ನಮ್ಮ ಹಳ್ಳಿಗಳಲ್ಲಿ ವಾಸಿಸುವರು ಮತ್ತು ಉಗುರಿನ ಫಂಗಸ್ ಸೋಂಕು ಅನ್ಯೋನ್ಯವಾಗಿ ಪ್ರಾಕಿನಿಂದ ಇದ್ದಾರೆ . ಬರಿಗಾಲಿನಲ್ಲಿ ತೋಟಕ್ಕೆ ,ಗುಡ್ಡೆಗೆ ಮತ್ತು ಶಾಲೆಗೆ ನಡೆದು ಹೋಗುವಾಗ ಈ ಶಿಲೀಂದ್ರ (ಫಂಗಸ್ )ಕಾಲಿನ ಉಗುರಿಗೆ ಪ್ರವೇಶಿಸಿ ಖಾಯಂ ನಿವಾಸಿಯಾಗಿ ಕೆಲ ಸಮಯ ನಂತರ ಅಕ್ರಮ ಸಕ್ರಮ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತದೆ . ಅದಕ್ಕೆ ಆಂಗ್ಲ ಭಾಷೆಯಲ್ಲಿ ಓನಿಕೋ (ಉಗುರಿನ )ಮೈಕೋಸಿಸ್ (ಶಿಲೀಂದ್ರ )ಸೋಂಕು ಎಂಬ ದೊಡ್ಡ ಹೆಸರು ಇದೆ .ನಾವು ಇದನ್ನು ಒಂದು ಕಾಯಿಲೆ ಎಂದು ಯಾವತ್ತೂ ಪರಿಗಣಿಸಿದ್ದೇ ಇಲ್ಲ .ನೆಲದಲ್ಲಿ ಕೆಲಸ ಮಾಡುವವರ ಕೈಯ ಉಗುರಿನಲ್ಲಿಯೂ ಇವು ಕಂಡು ಬರುತ್ತವೆ .
.ನೋಡಲು ಸ್ವಲ್ಪ ಚೆನ್ನಾಗಿರದು ಬಿಟ್ಟರೆ ಇದು ಯಾವ ತೊಂದರೆಯನ್ನೂ ಸಾಮಾನ್ಯವಾಗಿ ಕೊಡದು . ಈಗ ಎಲ್ಲರಿಗೂ ಸೌಂದರ್ಯ ಪ್ರಜ್ಞೆ ಬಂದ ಮೇಲೆ ಇದು ದೊಡ್ಡ ಕಾಯಿಲೆಯಾಗಿ ಪರಿಗಣಿಸಲ್ಪಟ್ಟಿದೆ .ಇದರ ಪರಿಹಾರಕ್ಕೆ ಔಷಧಿಗಳು ಬಂದಿದ್ದರೂ ಹಲವು ವಾರಗಳ ಉಪಚಾರ ಬೇಕು ,ಅಲ್ಲದೆ ನೆಲ ಮತ್ತು ಪರಿಸರದಿಂದ ಪುನಃ ಬರುವ ಸಾಧ್ಯತೆ ಕೂಡಾ ಸಾಮಾನ್ಯ .
ದೇಹದ ಪ್ರತಿರೋಧ ಶಕ್ತಿ ಕುಗ್ಗಿದವರಲ್ಲಿ ಅಪರೂಪಕ್ಕೆ ಈ ಶಿಲೀಂಧ್ರಗಳು ತಮ್ಮ ಪ್ರಚ್ಛನ್ನ ರೋಗ ಶಕ್ತಿ ಪ್ರಕಟಿಸ ಬಹುದು . ಹಾನಿ ಗೊಂಡ ಉಗುರಿನ ಸುತ್ತು ಬ್ಯಾಕ್ಟೀರಿಯಾ ಗಳು ಧಾಳಿ ಮಾಡಿ ನೋವು ಇರುವ ಉಗುರು ಸುತ್ತು ಉಂಟು ಮಾಡ ಬಹುದು .
ಬಾಲಂಗೋಚಿ: ಈಗ ಸೌಂದರ್ಯದ ವ್ಯಾಖ್ಯೆಯನ್ನು ಸೌಂದರ್ಯ ವರ್ಧಕ ತಯಾರಿಕಾ ಬಹು ರಾಷ್ಟ್ರೀಯ ಕಂಪನಿ ಗಳು ಮಾಡಿ ತಮ್ಮ ಜಾಹೀರಾತುಗಳ ಮೂಲಕ ಮನೆ ಮನೆಗಳನ್ನು ಹೊಕ್ಕು ಅವು ಹೇಳಿದ್ದೇ ಸತ್ಯ ಆಗಿದೆ . ಒಂದೊಂದು ಅಂಗಕ್ಕೆ ಒಂದೊಂದು ರಾಸಾಯನಿಕ ಲೇಪ . ಅದೇ ರೀತಿ ಉಡುಗೆ ತೊಡುಗೆ ಕೂಡಾ . ನಾನು ಹಿಂದೆ ಬರೆದಂತೆ , ಮಳೆಗೆ ಒದ್ದೆಯಾದ ನಮ್ಮ ತಲೆಯನ್ನು ಸೆರಗಿನಿಂದ ಒರಸುವ ಅಮ್ಮನ ಮೈ ಯಿಂದ ಅಕ್ಕಿ ಹಿಟ್ಟು ,ಬೆವರು ,ಹಟ್ಟಿಯಿಂದ ಬಂದ ಗಂಜಳ ಮತ್ತು ಮುಡಿದ ಹೂವುಗಳ ಮಿಶ್ರಿತ ಪರಿಮಳ ನಮಗೆ ಅಪ್ಯಾಯ ಮಾನವಾಗಿತ್ತು . ಮೈ ಮುರಿದು ದುಡಿಯುವವರ ಕೈಗಳು ದಪ್ಪ (ದಡ್ಡು)ವಾಗಿರುತ್ತವೆ (vs ಕೋಮಲ ), ಉಗುರುಗಳಲ್ಲಿ ಕೆಲ್ಲು ಇರುತ್ತದೆ ,ಬೆವರ ವಾಸನೆ ಇರುತ್ತದೆ ,ಆದರೆ ಮನಸು ಕೋಮಲ ಇರಬಹುದು . ಸೌಂದರ್ಯ ಕಂಪನಿ ಗಳು ಹೇಳುವ ಈಗಿನ ವ್ಯಾಖ್ಯೆಯನ್ನೇ ಒಪ್ಪಿದರೂ ಒಬ್ಬರ ಸೌಂದರ್ಯ ಕಾಪಾಡಲು ಹಲವರು ಅದನ್ನು ತ್ಯಜಿಸ ಬೇಕಾಗುವುದು ಎಂಬುದನ್ನು ಅರಿಯಬೇಕು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ