ಬೆಂಬಲಿಗರು

ಶುಕ್ರವಾರ, ಏಪ್ರಿಲ್ 15, 2022

ವೈದ್ಯನ ಸಂವಹನ ಶಕ್ತಿಯ ಇತಿಮಿತಿ

ವಿಜ್ಞಾನ ಮುಂದುವರಿದ ವೇಗದಲ್ಲಿ ನಮ್ಮ ಸಂವಹನ ಸಾಮರ್ಥ್ಯ ಬೆಳೆದಿಲ್ಲ .ಆಳವಾಗಿ ಬೇರೂರಿರುವ ಅವೈಜ್ಞಾನಿಕ ನಂಬಿಕೆಗಳು ಮತ್ತು  ಹಲವರು  ಹಬ್ಬುವ ಆಧಾರ ರಹಿತ ಮತ್ತು ಕಪೋಲ ಕಲ್ಪಿತ ವಿಚಾರಗಳು ನಿಜವನ್ನು  ಜನರಿಂದ ದೂರ ಇಟ್ಟಿವೆ . 

ಕಳೆದ ವಾರ ಒಂದು ದೂರದ ಹಳ್ಳಿಯಿಂದ ಒಬ್ಬ ಯುವಕ ಜಾಂಡಿಸ್ ಎಂದು ಬಂದಿದ್ದ . ಅಲೋಪತಿಯ ಮೂರು ,ಆಯುರ್ವೇದದ ಇಬ್ಬರು ,ಸಾಲದ್ದಕ್ಕೆ ಹಳ್ಳಿ ಮದ್ದು ಇಷ್ಟೆಲ್ಲಾ ಮಾಡಿ ವಾಸಿ ಆಗಿಲ್ಲ ಎಂದು ನನ್ನ ಕೈ ಗುಣ ನೋಡುವಾ ಎಂದು ಬಂದಿದ್ದನು .ಅವನ ಹಿಂದಿನ ರೆಕಾರ್ಡ್ ಎಲ್ಲಾ ಪರಿಶೀಲಿಸಲಾಗಿ , ಶರೀರದಲ್ಲಿ ಕೆಂಪು ರಕ್ತ ಕಣಗಳು ಅವಧಿ ಪೂರ್ವ ನಶಿಸುವ ಲಘು ರೋಗ ಇತ್ತು . ನಾನು ಹಿಂದೆಯೇ ಬರೆದಂತೆ ನಶಿಶಿದ ಕೆಂಪು ರಕ್ತ ಕಣಗಳ ನಿರ್ವಹಣೆಯಲ್ಲಿ ಆಗುವ ಅಡಚಣೆಯಿಂದ ಜಾಂಡಿಸ್ ಬರುವುದು .ವಾಡಿಕೆಯಲ್ಲಿ ಇದು ಲಿವರ್ ನ ವೈರಸ್ ಸೋಂಕಿನಿಂದ ಆಗುವುದಾದರೂ ,ಮಲೇರಿಯ ,ಇಲಿ ಜ್ವರ ,ಪಿತ್ತ ನಾಳದಲ್ಲಿ ಕಲ್ಲು ,ಗಡ್ಡೆ ಇತ್ಯಾದಿಯಿಂದ ಬರ ಬಹುದು . ಕೆಂಪು ರಕ್ತ ಕಣಗಳು ಅಧಿಕ ನಶಿಸುವುದರಿಂದಲೂ ಹಳದಿ ಬರ ಬಹುದು . ನನ್ನ ಬಳಿ ಬಂದವನ ಹಿಮೋಗ್ಲೋಬಿನ್ ಪ್ರಮಾಣ ನಾರ್ಮಲ್ ಇದ್ದು ಕಣ್ಣು ಸ್ವಲ್ಪ ಹಳದಿ ಬಿಟ್ಟರೆ ಅವನಿಗೆ ಹಸಿವು ಕಮ್ಮಿ ,ವಾಕರಿಕೆ ಅಥವಾ ಹೊಟ್ಟೆ ನೋವು ಇತ್ಯಾದಿ ಇರಲಿಲ್ಲ . ಅವನೇ ಅವರಿವರು ಹೇಳಿದರೆಂದು ಕಠಿಣ ಪಥ್ಯ ಮಾಡುತ್ತಿದ್ದನು .ನಾನು ಸಮಾಧಾನ ದಿಂದ ಎಲ್ಲವನ್ನೂ ಅವನಿಗೆ ವಿವರಿಸಿ ,'ಏನೂ ಚಿಂತೆ ಮಾಡುವುದು ಬೇಡ ,ಔಷಧಿ ಅಥವಾ ಪಥ್ಯ ಎಲ್ಲಾ ನಿಲ್ಲಸಿ "ಎಂದು ಹೇಳಿ ಕಳುಹಿಸಿದೆನು .ಅವನಿಗೆ ಎಷ್ಟು ಸಮಾಧಾನ ಆಯಿತೋ ಗೊತ್ತಿಲ್ಲ . ನಾನು ಇಂತಹ ವಿಷಯಗಳನ್ನು ರೋಗಿಗೆ ವಿವರಿಸುವಾಗ ಸಾಧ್ಯವಾದರೆ ಕಂಪ್ಯೂಟರ್ ಸಹಾಯದಿಂದ ಸಚಿತ್ರವಾಗಿ ವಿವರಿಸುವೆನು .ಮತ್ತು ಗಟ್ಟಿಯಾಗಿ ನಮ್ಮ ಸ್ಟಾಫ್ ಕೂಡಾ ಕೇಳುವಂತೆ ಹೇಳುವೆನು .ಜ್ಞಾನ ಎಲ್ಲರಿಂದ ಎಲ್ಲರಿಗೆ ಪ್ರಸಾರ ಆಗಲಿ ಎಂಬ ಉದ್ದೇಶ .ಆದರೆ ಮಿಥ್ಯೆ ಹರಡುವ ವೇಗದಲ್ಲಿ ಸತ್ಯ ಹರಡುವುದಿಲ್ಲ . 

ನಿನ್ನೆ ಉತ್ತರ ಭಾರತದ ಒಬ್ಬ ಯುವಕ ಬಲ ಬದಿಯಲ್ಲಿ ಮೇಲು ಹೊಟ್ಟೆ ಮತ್ತು ಸೊಂಟ ನೋವು ಎಂದು ಬಂದಿದ್ದನು .ಅವನಿಗೆ ಯಾರೋ ಅದು ಮೂತ್ರದ ಕಲ್ಲು ಇರಬೇಕು ,ಸ್ಕ್ಯಾನ್ ಮಾಡಿಸಿಕೊ ಎಂದು ಸಲಹೆ ಮಾಡಿದ್ದರು . ನಾನು ಅವನ ಅಂಗಿ ,ಬನಿಯನ್ ತೆಗೆಸಿ ಬೆಳಕಿನಲ್ಲಿ ನೋಡಲಾಗಿ  ಮೇಲು ಹೊಟ್ಟೆ ಸುತ್ತಲೂ ಬೆನ್ನಿನಿಂದ ಸಣ್ಣ ಸಣ್ಣ ಕೆಂಪು rash ಬೀಳ ತೊಡಗಿದ್ದು ಅದು ವಾಡಿಕೆಯಲ್ಲಿ ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ ಎಂದು ಅರಿವಾಯಿತು .ಅವನ ಜತೆ ಬಂದವನಿಗೆ ಅದನ್ನು ತೋರಿಸಿ ಅದರದ್ದೇ ನೋವು ಎಂದೆನು .ಹಿಂದಿಯಲ್ಲಿ ಅದಕ್ಕೆ ಏನು ಹೇಳುವರು ಎಂದು ನನಗೆ ತಿಳಿದಿಲ್ಲ . ಇನ್ನು ಸರ್ಪ ಸುತ್ತು ಎಂದು ಸಾಂಪ್ ಸಾಂಪ್ ಎಂದರೆ ಅವನು ಹೌ ಹೌಹಾರಿಯಾನು . ಅವನಿಗೆ ನನ್ನ ವಿವರಣೆ ಸಮಾಧಾನ ತರದೇ ಪತ್ತರ್ ಪತ್ತರ್ (ಕಲ್ಲು )ಎಂದು ಪುನಃ ಪುನಃ ಹೇಳುತ್ತಿದ್ದನು .ಕೊನೆಗೆ ಅವನ ಸಮಾಧಾನಕ್ಕೆ ಸ್ಕ್ಯಾನ್ ಮಾಡಿಸಲು ನಾರ್ಮಲ್ ಎಂದು ರಿಪೋರ್ಟ್ ಬಂತು . ಅವನಿಗೆ ನರ ಕೋಟಲೆಗೆ ಇರುವ ಔಷಧಿ ಕೊಟ್ಟು ಕಳುಹಿಸಿದೆನು . ಇಲ್ಲಿ ನಾನು ಅವನ ಬಟ್ಟೆ ತೆಗೆಸಿ ,ಒಳ್ಳೆಯ ಬೆಳಕಿನಲ್ಲಿ ನೋಡಿದ ಕಾರಣ ನಿಜ ಕಾಯಿಲೆ ಸುಲಭದಲ್ಲಿ ಪತ್ತೆಯಾದುದಲ್ಲದೇ ಅನಾವಶ್ಯಕ ಟೆಸ್ಟ್ ಗಳನ್ನು ಮಾಡ ಬೇಕಾಗಿ ಬರಲಿಲ್ಲ .ಮತ್ತು ಹರ್ಪಿಸ್ ಜೊಸ್ಟರ್ (ಸರ್ಪ ಸುತ್ತು ಎಂದು ಕರೆಯಲ್ಪಡುವ ನರ ಕೋಟಲೆ )ಗೆ ಆರಂಭದ ಹಂತದಲ್ಲಿಯೇ  ಔಷಧಿ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ,ಮತ್ತು ನೋವು ಉಳಿಯುವುದು ಕಡಿಮೆ . ನರದ ನೋವಿಗೆ ಕೊಡುವ ವೇದನಾ ಹರ ಔಷಧಿಗಳೂ ಬೇರೆ ಇರುತ್ತವೆ . 

ಈ ಇಬ್ಬರು ರೋಗಿಗಳಿಗೂ ಸರಿಯಾದ ಸಲಹೆ ನಾನು ನೀಡಿದ್ದರೂ ಅವರು ಅದನ್ನು ಪೂರ್ಣ ನಂಬುವಂತೆ ಮಾಡಲು ನಾನು ಪೂರ್ಣ ಶಕ್ತ ನಾದೆನು ಎಂದು ನಂಬುವುದಿಲ್ಲ . ಮೊದಲನೇ ರೋಗಿಗೆ ಹಳೆಯ ರೆಕಾರ್ಡ್ ನೋಡಿ ,ಪರೀಕ್ಷೆ ಮಾಡಿ ಯಾವುದೇ ಔಷಧಿ ನೀಡದೆ ಕಳುಹಿಸಿದ್ದರಿಂದ ನನಗಾಗಲಿ ಆಸ್ಪತ್ರೆಗಾಗಲಿ ಯಾವುದೇ ಲಾಭ ಆಗಲಿಲ್ಲ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ