ವೈದ್ಯಕೀಯ ಕ್ಷೇತ್ರದಲ್ಲಿ ಒಂದು ವಿಪರ್ಯಾಸ ಇದೆ . ಹಿಂದೆ ಅನೇಕ ಆಧುನಿಕ ಪದ್ದತಿಯ ವೈದ್ಯರು ವ್ಯಾಸಂಗ ಮುಗಿಸಿ ತಮ್ಮ ಊರ ಸುತ್ತ ಮುತ್ತಲಿನ ಜನರ ಸೇವೆ ಸಲ್ಲಿಸಲು ಕಾತರಿಸುತ್ತಿದ್ದರು . ಆದರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುವುದಿಲ್ಲ ಎಂಬ ಆರೋಪ ಇತ್ತು . ಇಂದು ಕೂಡ ಎಷ್ಟೆಲ್ಲಾ ಮೆಡಿಕಲ್ ಕಾಲೇಜು ಗಳು ಬಂದರೂ ಪರಿಸ್ಥಿತಿ ಅಂದಿಗಿಂತಲೂ ಕೆಟ್ಟಿದೆ ಎಂದೇ ಹೇಳ ಬಹುದು .
ಕುರ್ಚಿಪಳ್ಳ ಅಥವಾ ಉಪ್ಪಳ ಒಂದು ಸಣ್ಣ ಪಟ್ಟಣ ವಾಗಿತ್ತು ..ರೈಲು ನಿಲ್ದಾಣ ಇದ್ದ ಕಾರಣ ಅಕ್ಕ ಪಕ್ಕದ ಊರಿನವರು ಮಂಗಳೂರು ರೈಲು ಹಿಡಿಯಲು ಇಲ್ಲಿಗೆ ಬರುತ್ತಿದ್ದು ರೈಲು ನಿಲ್ದಾಣ ರಸ್ತೆಯಲ್ಲಿ ಮಾತ್ರ ಕೆಲವು ಅಂಗಡಿಗಳು ಇದ್ದವು . ಮಂಗಳೂರಿಗೆ ಈಗಿನಂತೆ ಒಳ್ಳೆಯ ರಸ್ತೆ ಮತ್ತು ವಾಹನ ಸೌಲಭ್ಯ ಇರಲಿಲ್ಲ . ಆ ಕಾಲದಲ್ಲಿ ಇಲ್ಲಿ ಪಕ್ಕದ ಕಯ್ಯಾರಿನ ಪ್ರತಿಷ್ಠಿತ ಮನೆತನದ ಡಾ ಕೆ ಪ್ರಭಾಕರ ಹೊಳ್ಳ ,ಎಂ ಬಿ ಬಿ ಎಸ ಆಗಿ ಸರ್ಜರಿ ಯಲ್ಲಿ ಎಂ ಎಸ ಮಾಡಿದ್ದವರು ಐದು ವರ್ಷ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿ ಉಪ್ಪಳದಲ್ಲಿ ತಮ್ಮ ವೈದ್ಯಕೀಯ ಸೇವೆ ಆರಂಭಿಸಿದರು . ಹೆಸರಾಂತ ಶಸ್ತ್ರ ಚಿಕಿತ್ಸಾ ತಜ್ಞ ,ಪ್ರಾಧ್ಯಾಪಕ ಮತ್ತು ಸಮಾಜ ಸೇವಕ ರಾಗಿದ್ದ ಡಾ ಎಂ ಪಿ ಪೈ ೩೦. ೩ . ೧೯೭೨ ರಲ್ಲಿ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದರು . ಆದರೆ ಆಸ್ಪತ್ರೆ ಸುಸಜ್ಜಿತವಾಗಿ ಕಟ್ಟಲು ಹಣ ಬೇಕಲ್ಲಾ ? ಅದಕ್ಕಾಗಿ ಇರಾನ್ ದೇಶಕ್ಕೆ ತೆರಳಿ ಎರಡು ವರ್ಷ ಅಲ್ಲಿ ಸೇವೆ ಸಲ್ಲಸಿ ಸಂಪಾದನೆಯ ಹಣವನ್ನು ಆಸ್ಪತ್ರೆಗೆ ಹಾಕಿದರು .
ಹೀಗೆ ಈ ಹಿಂದುಳಿದ ಪ್ರದೇಶದಲ್ಲಿ ಒಂದು ಆಸ್ಪತ್ರೆ ಆರಂಭವಾಯಿತು . ಅದಕ್ಕೆ ತಮ್ಮ ತಂದೆ ನರಸಿಂಹ ಹೊಳ್ಳರ ಹೆಸರು ಇಟ್ಟರು . ಅವರ ಪತ್ನಿ ಡಾ ಸುಮತಿ ಹೊಳ್ಳರು ಸ್ತ್ರೀ ರೋಗ ತಜ್ಞೆ . ಅರಿವಳಿಕೆ ತಜ್ಞರು ಈಗಿನಂತೆ ಲಭ್ಯವಿರದ ಆ ದಿನಗಳಲ್ಲಿ ಹಲವು ಕಠಿಣ ತಮ ಕೇಸ್ ಗಳನ್ನು ತಾವೇ ನಿಭಾಯಿಸಿದರು .ಇಲ್ಲವಾದರೆ ಮಂಗಳೂರಿಗೆ ಹೋಗ ಬೇಕಿತ್ತು . ಕನ್ಯಾನ ,ಆನೆಕಲ್ಲು ,ಪೈವಳಿಕೆ ಬಾಯಾರು ,ಬೆರಿಪದವು ,ಕುಂಬ್ಳೆ ,ಪೆರ್ಮುದೆ ,ಮಂಜೇಶ್ವರ ,ಉಪ್ಪಳ ಮತ್ತು ಸುತ್ತ ಮುತ್ತಲಿನ ಅನೇಕ ಪ್ರದೇಶಗಳಿಂದ ಹಗಲು ರಾತ್ರಿಯೆನ್ನದೆ ರೋಗಿಗಳು ಬರುತ್ತಿದ್ದರು . ಡಾ ಕೆ ಪಿ ಹೊಳ್ಳ ಶಸ್ತ್ರ ಕ್ರಿಯಾ ತಜ್ಞರಲ್ಲದೆ , ಹಾವಿನ ವಿಷ ಚಿಕಿತ್ಸೆಯಲ್ಲಿ ಕೂಡಾ ವಿಶೇಷ ಪರಿಣತಿ ಸಂಪಾದಿಸಿ ಸಾವಿರಾರು ಪ್ರಾಣಗಳನ್ನು ಉಳಿಸಿದ್ದಾರೆ .ಇವರ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಒಳಗಾದವರು ಹಿಡಿದು ತಂಡ ಉರಗಗಳ ಒಂದು ಸಂಗ್ರಹಾಲಯವೇ ಇದೆ .
ಇವರ ಆಸ್ಪತ್ರೆಯಲ್ಲಿ ದಾದಿಯರ ತರಬೇತಿ ಕೇಂದ್ರ ಇದ್ದು ,ಅಲ್ಲಿ ತರಬೇತಿ ಹೊಂದಿದ ನರ್ಸ್ ಗಳು ತಮ್ಮ ಪರಿಣತಿ ಯಿಂದ ಒಳ್ಳೆಯ ಹೆಸರು ಹೊಂದಿದ್ದರು .
ನಾನು ಕೂಡಾ ಈ ಆಸ್ಪತ್ರೆಗೆ ಸುಮಾರು ಹತ್ತು ವರ್ಷ ಸಂದರ್ಶಕ ತಜ್ಞನಾಗಿ ಹೋಗುತ್ತಿದ್ದು , ಇಲ್ಲಿ ತುರ್ತು ನಿಗಾ ವಿಭಾಗ ಆರಂಭಿಸಿ ಹೃದಯಾಘಾತ ದಂತಹ ಹಲವು ರೋಗಗಳನ್ನು ನಿಭಾಯಿಸಿದ್ದೇವೆ .
ಇವರ ಒಬ್ಬ ಮಗ ಮತ್ತು ಇಬ್ಬರು ಮಗಳಂದಿರು ವೈದ್ಯರು . ಅಸೌಖ್ಯದಿಂದ ಮಗನನ್ನು ಕಳೆದು ಕೊಂಡ ಇವರು ವೃದ್ದಾಪ್ಯದ ಕಾರಣ ಆಸ್ಪತ್ರೆಯಲ್ಲಿ ನಡೆಸಲು ಒಂದು ಟ್ರಸ್ಟ್ ಮಾಡಿ ಅದಕ್ಕೆ ಹಸ್ತಾಂತರಿಸಿರುವರು . ಹುಟ್ಟೂರು ಕಯ್ಯಾರ್ ನಲ್ಲಿ ನೆಲೆಸಿರುವ ಇವರ ವೃತ್ತಿ ಜೀವನ ದ ಬಗ್ಗೆ ಬರೆದ ಕೃತಿ ದಿನಾಂಕ 1.5.2022 ರಂದು ಕಯ್ಯಾರಿನಲ್ಲಿ ಬಿಡುಗಡೆ ಆಗಲಿದೆ .
ಬಾಲಂಗೋಚಿ : ಇವರ ಕಿರಿಯ ಸಹೋದರ ರಾಧಾಕೃಷ್ಣ ಹೊಳ್ಳ ಬಿ ಸಿ ರೋಡ್ ನಲ್ಲಿ ವಕೀಲ ವೃತ್ತಿ ಆರಂಭಿಸಿ ಮುಂದೆ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದರು . ಬಿ ಸಿ ರೋಡ್ ನ ಪ್ರಸಿದ್ಧ ನ್ಯಾಯವಾದಿ ಆಗಿದ್ದ ಶ್ರೀ ಅನಂತ ಸೋಮಯಾಜಿ ಇವರ ಭಾವ .ಡಾ ಹೊಳ್ಳರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತಮ್ಮನ್ನು ತೊಡಗಿಸಿ ಕೊಂಡವರು . ಕೂಟ ಮಹಾ ಜಗತ್ತಿನ ಮುಖ್ಯಸ್ಥರಾಗಿಯೂ ಇದ್ದ ನೆನಪು .ಅವರ ಮುಂದಿನ ದಿನಗಳು ಸುಖ ಶಾಂತಿ ಯಿಂದ ಇರಲಿ ಎಂದು ಹಾರೈಕೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ